7

ಋಣಾತ್ಮಕ ಯೋಚನೆಯಿಂದ ಬಿಡುಗಡೆ ಹೇಗೆ?

Published:
Updated:
ಋಣಾತ್ಮಕ ಯೋಚನೆಯಿಂದ ಬಿಡುಗಡೆ ಹೇಗೆ?

1. ನನಗೆ ಕೆಲವೊಮ್ಮೆ ಚೆನ್ನಾಗಿ ಓದಬೇಕು. ಓದಿ ಒಳ್ಳೆಯ ಕೆಲಸಕ್ಕೆ ಸೇರಿ ಮನೆ, ಕಾರು, ಸೈಟ್ ಕೊಳ್ಳಬೇಕು ಎನ್ನಿಸುತ್ತದೆ. ಆದರೆ ಅದರ ಬೆನ್ನಲ್ಲೇ ’ಇದೆಲ್ಲಾ ಯಾಕೆ? ಸಾಯುವಾಗ ಇದನ್ನೆಲ್ಲಾ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದಾ?’ ಎಂಬೆಲ್ಲಾ ಋಣಾತ್ಮಕ ಯೋಚನೆಗಳು ಮನಸ್ಸನ್ನು ಮುತ್ತಿಕೊಳ್ಳುತ್ತವೆ. ಹೀಗೆ ಯೋಚನೆ ಮಾಡಿ ಮಾಡಿ ಪರೀಕ್ಷೆಯಲ್ಲಿ ಫೇಲ್ ಆಗುತ್ತಿದ್ದೇನೆ. ನನಗೆ ಈ ಯೋಚನೆಗಳಿಂದ ಹೊರ ಬರಲು ದಾರಿ ತಿಳಿಸಿ.

–ಸಂಗಮೇಶ, ಊರು ಬೇಡ

ನೀವು ಏನು ಓದುತ್ತಿದ್ದೀರಾ ಎಂದು ಇಲ್ಲಿ ತಿಳಿಸಿಲ್ಲ; ಇರಲಿ. ಏನೇ ಆದರೂ ಈಗ ನಿಮ್ಮ ಮೊದಲ ಪ್ರಾಶಸ್ತ್ಯ ಓದೇ ಆಗಿರಲಿ. ಒಂದು ಗುರಿಯನ್ನು ಮುಟ್ಟಲು ದೊಡ್ಡ ದೊಡ್ಡ ಕನಸುಗಳನ್ನು ಕಾಣಬೇಕು ಮತ್ತು ಅದನ್ನು ತಲುಪಲು ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು. ಋಣಾತ್ಮಕ ಯೋಚನೆಗಳು ಕೇವಲ ಕೆಲವೇ ಜನಕ್ಕೆ ಮಾತ್ರ ಎಂದೇನೂ ಇಲ್ಲ. ಪ್ರತಿಯೊಬ್ಬರ ಜೀವನದಲ್ಲಿ ಬೇರೆ ಬೇರೆ ವಿಧದಲ್ಲಿ ಋಣಾತ್ಮಕ ಯೋಚನೆಗಳ ಹಾವಳಿ ಇದ್ದೇ ಇರುತ್ತದೆ. ಈಗ ನಿಮ್ಮ ಮನಸ್ಸಿನಲ್ಲಿ ಬರುವ ಅನೇಕ ಯೋಚನೆಗಳು ಋಣಾತ್ಮಕವಾಗಿದೆ ಎಂಬುದು ನಿಮಗೆ ತಿಳಿದಿದೆ. ಎಲ್ಲ ಯೋಚನೆಗಳು ಬರುವಂತೆ ಅವನ್ನು ಬರಲು ಬಿಡಿ. ಅವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಆದರೆ ಈ ಯೋಚನೆಗಳು ಹೆಚ್ಚು ಹೆಚ್ಚು ಮನಸ್ಸು ತುಂಬುವಂತೆ ಅವುಗಳನ್ನು ಪೋಷಿಸಬೇಡಿ. ಅದರ ಬದಲು ನಿಮ್ಮೊಳಗೆ ನೀವು ಮಾತನಾಡಿಕೊಳ್ಳುವುದನ್ನು ನಿಲ್ಲಿಸಲು ಪ್ರಯತ್ನಿಸಿ. ಮನಸ್ಸಿಗೆ ಬರುವ ಕೆಟ್ಟ ಯೋಚನೆಗಳೆಲ್ಲಾ ಸತ್ಯವಲ್ಲ. ಜೀವನದ ಹಾದಿಯಲ್ಲಿ ಬರುವ ಋಣಾತ್ಮಕ ನಂಬಿಕಗಳೇ ನಿಮ್ಮಲ್ಲಿ ಕೆಟ್ಟ ಯೋಚನೆಗಳು ಹುಟ್ಟಿಕೊಳ್ಳಲು ಕಾರಣ. ಭವಿಷ್ಯ ಹೇಗಿರುತ್ತದೋ ಅದು ಎಷ್ಟರ ಮಟ್ಟಿಗೆ ಉಪಯೋಗವಾಗುತ್ತದೋ ಇಷ್ಟೆಲ್ಲಾ ಯಾಕೆ ಪ್ರಯತ್ನಿಸಬೇಕು ಎಂದೆಲ್ಲಾ ಯೋಚಿಸುವ ಬದಲು, ವರ್ತಮಾನದ ಮೇಲೆ ಹೆಚ್ಚು ಗಮನ ಹರಿಸಿ ಮತ್ತು ನಿಮ್ಮ ಓದಿನ ಮೇಲೆ ಗಮನ ಕೇಂದ್ರಿಕರಿಸಿ. ಉಳಿದವೆಲ್ಲಾ ನಿಜಕ್ಕೂ ದೊಡ್ಡ ಸಂಗತಿಯೇ ಅಲ್ಲ. ಸಮಯ ಹಾಗೂ ಪ್ರೌಢತೆಯೊಂದಿಗೆ ಜೀವನ ಎಂದರೆ ಏನೆಂಬುದು ನಿಮಗೆ ತಿಳಿಯುತ್ತದೆ. ಒಂದು ಒಳ್ಳೆಯ ಸ್ನೇಹಿತರ ಗುಂಪನ್ನು ಸೃಷ್ಟಿಸಿಕೊಳ್ಳಿ. ಅವರೊಂದಿಗೆ ನಿಮ್ಮ ಯೋಚನೆಗಳನ್ನು ಹಂಚಿಕೊಳ್ಳಿ. ಆಗ ಭಿನ್ನವಾದ ನೋಟಗಳು ಗಮನಕ್ಕೆ ಬರಬಹುದು.

2. ನಾನು ಕ್ರಿಶ್ಚಿಯನ್. ನಾನು ಒಬ್ಬ ಮುಸ್ಲಿಂ ಹುಡುಗನನ್ನು ಪ್ರೀತಿಸುತ್ತಿದ್ದೆ. ಈ ವಿಷಯ ಅವನ ಮನೆಯಲ್ಲಿ ತಿಳಿದು ಅವನಿಗೆ ಬೇರೆ ಮದುವೆ ಮಾಡಿಸಿದರು. ಒಂದು ಮಗು ಕೂಡ ಆಗಿದೆ. ಅವನಿಗೆ ನನ್ನನ್ನು ಬಿಡಲು ಇಷ್ಟವಿಲ್ಲ. ‘ಏನೇ ಆದರೂ ನಿನ್ನನ್ನು ಮದುವೆ ಆಗ್ತೇನೆ’ ಎಂದು ಮನೆಯವರಿಂದ ದೂರಾಗಿ ನಮ್ಮ ಜೀವನಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದಾನೆ. ನಾನು ಒಬ್ಬಳೇ ಮಗಳು; ಮನೆಯಲ್ಲಿ ಈಗ ಹೇಗೆ ಒಪ್ಪಿಸಬೇಕೋ ತಿಳಿಯುತ್ತಿಲ್ಲ. ಅವನನ್ನು ಬಿಟ್ಟು ಇರುವುದಕ್ಕೆ ಆಗುತ್ತಿಲ್ಲ.

–ಊರು, ಹೆಸರು ಬೇಡ

ಬೇರೆ ಧರ್ಮದವರ ಜೊತೆ ಮದುವೆಯಾಗುವ ಸಂದರ್ಭವನ್ನು ನಿಭಾಯಿಸುವುದು ನಿಜಕ್ಕೂ ಸುಲಭವಲ್ಲ. ಒಂದು ದೃಢವಾದ ಸಹಕಾರವಿದ್ದರಷ್ಟೇ ಅದು ಸಾಧ್ಯ. ಸಮಾಜದ ಕೇವಲ ಕೆಲವು ಜನರ ಜೀವನಶೈಲಿಯಲ್ಲಿ ಬೇರೆ ಜಾತಿ, ಧರ್ಮದವರನ್ನು ಮದುವೆಯಾಗುವುದು ಒಂದು ವಿಷಯ ಅನ್ನಿಸುವುದಿಲ್ಲ. ಹೆಚ್ಚಿನ ಜನರು ಈ ಸಮಾಜದಲ್ಲಿ ಅಂತರ್‌ ಜಾತಿ ಹಾಗೂ ಧರ್ಮೀಯ ವಿವಾಹವನ್ನು ಇಂದಿಗೂ ಒಪ್ಪಿಕೊಳ್ಳುತ್ತಿಲ್ಲ. ಅದಲ್ಲದೇ ನೀವು ಇಷ್ಟಪಟ್ಟ ಹುಡುಗನಿಗೆ ಈಗಾಗಲೇ ಮದುವೆಯಾಗಿದೆ. ನನಗೆ ತಿಳಿದಂತೆ ನಿಮಗೆ ನಿರ್ಧಾರ ತೆಗೆದುಕೊಳ್ಳಲು ಈ ಒಂದು ಅಂಶ ಸಾಕೆನಿಸುತ್ತದೆ. ಇವೆಲ್ಲವೂ ಕೇವಲ ಕೆಲ ದಿನಗಳು ನಿಮ್ಮ ಅನುಭವಕ್ಕೆ ಬಂದ ಕ್ಷಣಿಕ ಆಸೆಗಳು. ಹಾಗಾಗಿ ನಿಮಗೆ ಈ ವಿಷಯದ ಬಗ್ಗೆ ಸ್ಪಷ್ಟತೆ ಇರಲಿ; ಇದನ್ನು ಮೀರಿ ಮುಂದಿನದನ್ನು ನೀವೇ ಯೋಚಿಸಿ. ಪರಿಸ್ಥಿತಿಯನ್ನು ನಿಮ್ಮಿಂದ ನಿಭಾಯಿಸಲು ಸಾಧ್ಯವೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಿ. ಅವರ ಹೆಂಡತಿಯ ದೃಷ್ಟಿಕೋನದಿಂದಲೂ ಯೋಚಿಸಿ. ಅವರೇನು ತಪ್ಪು ಮಾಡಿದ್ದಾರೆ ಎಂದು ಅವರು ಶಿಕ್ಷೆ ಅನುಭವಿಸಬೇಕು. ಭಾವನಾತ್ಮಕವಾಗಿ ಯಾರನ್ನೂ ನೋಯಿಸದಂತೆ ಪ್ರೌಢತೆಯಿಂದ ಹೆಜ್ಜೆ ಇರಿಸಿ.

3. ನನಗೆ ಕೌಟುಂಬಿಕ ಸಮಸ್ಯೆಯಿಂದ ಜೀವನವೇ ಬೇಡ ಎಂಬತಾಗಿದೆ. ಯಾವುದೇ ಕಾರಣಕ್ಕೂ ಈ ಜಂಜಡದಿಂದ ನನ್ನನ್ನು ಬಿಡಿಸಿಕೊಳ್ಳಲು ಸಾಧ್ಯವಿಲ್ಲ ಎಂತಾಗಿದೆ. ದಯವಿಟ್ಟು ಪರಿಹಾರ ತಿಳಿಸಿ‌.

–ಮನೋಜ್‌, ಬೆಂಗಳೂರು

ಜೀವನದಲ್ಲಿ ದೊಡ್ಡ ಜವಾಬ್ದಾರಿ ಎಂದರೆ ಕುಟಂಬ. ಮತ್ತು ಇದೊಂದು ಹಂತ. ಏಳು-ಬೀಳು ಇವೆಲ್ಲವೂ ಜೀವನದ ಕೆಲವು ಕ್ಷಣಗಳು. ಈ ಏಳು–ಬೀಳುಗಳಲ್ಲಿ ನಿಮ್ಮನ್ನು ತೊಡಗಿಸಿಕೊಂಡರಷ್ಟೇ ಜವಾಬ್ದಾರಿಯನ್ನು ಹೇಗೆ ನಿರ್ವಹಿಸಬಹುದು ಎಂದು ತಿಳಿದುಕೊಳ್ಳಬಹುದು. ನೀವು ಇಲ್ಲಿ ನಿಮ್ಮ ಹಿನ್ನೆಲೆ ಹಾಗೂ ವಿವರಗಳನ್ನು ತಿಳಿಸಿಲ್ಲ. ನಾನು ಹೇಳುವುದೇನೆಂದರೆ ಈಗ ಹೇಗಿದೆಯೋ ಹಾಗೆಯೇ ನಿಮ್ಮ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಿ. ಆಗಷ್ಟೆ ಸಂತೋಷವಾಗಿರಲು ಸಾಧ್ಯ ಮತ್ತು ನೀವು ಸುಖ–ದುಃಖಗಳನ್ನು ಸಮಾನವಾಗಿ ಸ್ವೀಕರಿಸಲು ಸಾಧ್ಯ. ನೀವು ನಿಮ್ಮ ಕುಟುಂಬದವರ ಪ್ರೀತಿ, ಶಾಂತಿ ಮತ್ತು ಎಲ್ಲರ ಏಳಿಗೆಯ ಜವಾಬ್ದಾರಿಯನ್ನು ಸ್ವೀಕರಿಸಲು ಪ್ರಾರಂಭಿಸಿ. ನೀವು ಎಲ್ಲವನ್ನೂ ಚೆನ್ನಾಗಿ ನಿಭಾಯಿಸುತ್ತಿದ್ದೀರಿ ಎಂಬುದು ಒಂದಲ್ಲ ಒಂದು ದಿನ ನಿಮ್ಮ ಅನುಭವಕ್ಕೆ ಬರುತ್ತದೆ. ತಾಳ್ಮೆ ಇರಲಿ. ಸಮಯ ಎಲ್ಲವನ್ನೂ ಸರಿಪಡಿಸುತ್ತದೆ. ಸಂತಸದಿಂದಿರಿ. ಆಗಷ್ಟೇ ನಿಮ್ಮ ಸುತ್ತಲಿನವರು ಸಂತೋಷದಿಂದಿರಲು ಸಾಧ್ಯ.

4. ನನಗೆ ಪದೇ ಪದೇ ಸಾಯುವ ಯೋಚನೆ ಬರುತ್ತದೆ. ಚಿಕ್ಕ ಚಿಕ್ಕ ವಿಷಯಗಳಿಗೂ ಮನಸ್ಸಿಗೆ ನೋವಾಗುತ್ತದೆ. ಅಂಥ ಸಂದರ್ಭದಲ್ಲಿ ‘ನಾನು ಸಾಯಬೇಕು; ಎಲ್ಲರೂ ನನಗೆ ನೋವು ನೀಡುತ್ತಾರೆ’ ಎನ್ನಿಸುತ್ತದೆ. ಪರಿಹಾರ ತಿಳಿಸಿ.

–ಹೆಸರು, ಊರು ಬೇಡ

ಯಾವುದೋ ಸಹಿಸಲಾಗದ ಅಥವಾ ತಾಳಿಕೊಳ್ಳಲಾಗದ ಮಾನಸಿಕ ನೋವು ಕಾಡುತ್ತಿದ್ದಾಗ ಸಾಮಾನ್ಯವಾಗಿ ಮನುಷ್ಯರಿಗೆ ‘ನಾನು ಸಾಯಬೇಕು’ ಎಂಬ ಯೋಚನೆ ಬರುತ್ತದೆ. ಅದರಲ್ಲೂ ನಿಮ್ಮನ್ನು ಅನೇಕ ದಿನದಿಂದ ಕಾಡುವ, ಸಹಿಸಿಕೊಳ್ಳಲಾಗದ ನೋವಾದರೆ ಇನ್ನೂ ಹೆಚ್ಚು. ಅನೇಕರಿಗೆ ಜೀವನದ ಯಾವುದೋ ಒಂದು ಸಂದರ್ಭದಲ್ಲಿ ಸಾವಿನ ಯೋಚನೆ ಬಂದಿರುತ್ತದೆ. ಯಾವಾಗ ಮನುಷ್ಯನಿಗೆ ಅತಿಯಾದ ಆಲೋಚನೆ ಮತ್ತು  ಋಣಾತ್ಮಕ ಯೋಚನೆಗಳು ಮುನ್ನುಗ್ಗುತ್ತವೋ ಆಗ ಈ ಯೋಚನೆ ಮನಸ್ಸನ್ನು ಆವರಿಸುತ್ತದೆ. ಸಾವಿನ ಯೋಚನೆ ಬರುತ್ತದೆ-ಹೋಗುತ್ತದೆ. ಸಧ್ಯ ನಿಮಗೆ ಸಹಿಸಲಾಗದ ನೋವಿದ್ದರೂ, ತಕ್ಷಣವೇ ಅದಕ್ಕೆ ಸ್ಪಂದಿಸಿ ಸಾಯುವ ಯೋಚನೆ ಮಾಡಬೇಡಿ. ನಿಮ್ಮ ಅನುಭವಗಳು ಎಷ್ಟೇ ಕೆಟ್ಟದಾಗಿದ್ದಾರು ಅದನ್ನು ಬೇರೆಯವರೊಂದಿಗೆ ಹಂಚಿಕೊಳ್ಳಿ. ಅವರೊಂದಿಗೆ ಮಾತನಾಡಿ. ನಿಮಗೆ ನಂಬಿಕೆ ಇರುವ ವ್ಯಕ್ತಿಗಳ ಜೊತೆ ಬೆರೆಯಿರಿ. ಅವರು ನಿಮ್ಮ ಕುಟಂಬ ಸದಸ್ಯರಾಗಿರಬಹುದು, ಸ್ನೇಹಿತರಾಗಿರಬಹುದು, ಶಿಕ್ಷಕರಾಗಿರಬಹುದು, ಚಿಕಿತ್ಸಕರಾಗಿರಬಹುದು. ಅವರು ಖಂಡಿತ ನಿಮ್ಮ ಯೋಚನಾಲಹರಿಯನ್ನು ಬದಲಾಯಿಸಲು ಸಹಾಯ ಮಾಡುತ್ತಾರೆ.

ವ್ಯಾಯಾಮ ಮತ್ತು ಆರೋಗ್ಯಕರ ಆಹಾರಸೇವನೆ – ನೀವು ದೈಹಿಕವಾಗಿ ಸದೃಢರಾಗಿರಲು ಸಹಾಯ ಮಾಡುತ್ತದೆ. ಅದರಿಂದ ನೀವು ಉಳಿದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಹಾಯವಾಗುತ್ತದೆ. ಧ್ಯಾನದಿಂದ ನಿಮ್ಮ ಮನಸ್ಸನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ಸಾಧ್ಯ. ಅದಕ್ಕೆಂದೇ ಸ್ವಲ್ಪ ಸಮಯವನ್ನು ನೀಡಿ.

ನೆನಪಿಡಿ, ನಿಮ್ಮ ಬಗ್ಗೆ ನಿಮ್ಮಲ್ಲಿಯೇ ಋಣಾತ್ಮಕ ಯೋಚನೆಗಳಿದ್ದಾಗ ಆತ್ಮಹತ್ಮೆಯ ಯೋಚನೆ ಬರಲು ಸಾಧ್ಯ. ಋಣಾತ್ಮಕ ಯೋಚನೆಗಳಿಗೆ ನೆಲೆ ಇಲ್ಲ ಎಂಬುದನ್ನು ಗುರುತಿಸಿ. ಇಷ್ಟುದಿನ ನಿಮ್ಮೊಳಗಿದ್ದ ಕೆಟ್ಟ ಯೋಚನೆಗಳನ್ನು ನೀವು ಸವಾಲಾಗಿ ಸ್ವೀಕರಿಸಿ. ಅತಿಯಾಗಿ ಯೋಚಿಸಬೇಡಿ. ಸಂದರ್ಭವನ್ನು ಬಂದಂತೆ ಸ್ವೀಕರಿಸಿ. ನಿಮಗೆ ಇಷ್ಟವಾಗದ ವಿಷಯಗಳನ್ನು ನಿರ್ಲಕ್ಷಿಸಿ. ನೀವು ತುಂಬಾ ಇಷ್ಟಪಟ್ಟುಪಡುವ ಕೆಲಸದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಿ. ಏಕಾಂಗಿಯಾಗಿ ಇರಬೇಡಿ. ಧನಾತ್ಮಕವಾಗಿ ಉತ್ಸಾಹದಿಂದ ಇರುವ ಸ್ನೇಹಿತರ ಗುಂಪಿನ ಜೊತೆ ಇರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry