7

ಹಸಿರು ಕಯ್ಯೂರಿನಲ್ಲಿ ಕ್ರಾಂತಿಯ ಕೆಂಪು

Published:
Updated:
ಹಸಿರು ಕಯ್ಯೂರಿನಲ್ಲಿ ಕ್ರಾಂತಿಯ ಕೆಂಪು

ಸೋಷಿಯಲ್ ಮೀಡಿಯಾದಲ್ಲಿ ಸುಮಾರು ಒಂದು ತಿಂಗಳಿನಿಂದ ‘ಚಿರಸ್ಮರಣೆ ಓದೋಣ, ಕಯ್ಯೂರಿಗೆ ಹೋಗೋಣ’ ಸಂಚಲನ ಮೂಡಿಸಿದೆ. ನಿರಂಜನ ಅವರು ಬರೆದ ‘ಚಿರಸ್ಮರಣೆ’ ಕಾದಂಬರಿಯನ್ನು ಓದಿರಬೇಕು ಎಂಬ ಏಕಮಾತ್ರ ಷರತ್ತನ್ನು ಪೂರ್ಣಗೊಳಿಸಿದವರು ಮಾತ್ರ ಕಯ್ಯೂರು ಪ್ರಯಾಣಕ್ಕೆ ಸಜ್ಜಾಗಬೇಕಿತ್ತು.

‘ಚಿರಸ್ಮರಣೆ’ಯ ಹುಡುಕಾಟ ಜೋರಾಯಿತು. ಹೆಚ್ಚುತ್ತಿದ್ದ ಬೇಡಿಕೆಯ ಕಾರಣ, ಪುಸ್ತಕ ಮಳಿಗೆಯವರಿಗೆ ತಲೆಬಿಸಿಯಾಗಿ ಪುಸ್ತಕವನ್ನು ಬಹುಬೇಗನೇ ಓದುಗರ ಕೈಗೆ ತಲುಪಿಸಿದರು. ಅಕ್ಷರಗಳ ಪಯಣ ಶುರುವಾಯಿತು. ಕಾದಂಬರಿಯಲ್ಲಿ ಬರುವ ಕಯ್ಯೂರಿನ ವಿವರಣೆ ಕಣ್ಣಿಗೆ ಕಟ್ಟುವಂತಿದೆ. ಓದುವಾಗ ನಾವು ಕತೆಯ ಭಾಗವಾದೆವು. ಪಾತ್ರಗಳ ಜೊತೆಜೊತೆಯಾಗಿ ಅಲ್ಲಿನ ನೆಲದಲ್ಲಿ ಓಡಾಡಿದಂತೆ ಭಾಸವಾಯಿತು. ಸುತ್ತಲೂ ಎತ್ತರಕ್ಕೆ ಬೆಳೆದ ಬಾಳೆ, ತೆಂಗು, ಅಡಿಕೆ ಮರಗಳು. ಮೈ ಬಳುಕಿಸುತ್ತ ಜೀವನದಿಯಾಗಿ ಹರಿಯುವ ತೇಜಸ್ವಿನಿ. ಅಲ್ಲೊಂದು ಇಲ್ಲೊಂದು ಮನೆಗಳು. ರೈತರ ಬೆವರು ಬಿದ್ದ ಹೊಲಗದ್ದೆಗಳು. ಅಪ್ಪು, ಚಿರುಕಂಡ ಆಗಾಗ ಸಿಗುತ್ತಿದ್ದ ಬೆಟ್ಟದ ತುದಿಯಲ್ಲಿನ ಗೋಡಂಬಿ ಮರ. ಮಾಸ್ತರು ನಡೆಸುತ್ತಿದ್ದ ಶಾಲೆ. ಶಾಲೆಯ ಅಂಗಳದಲ್ಲಿ ಆಗತಾನೆ ಚಿಗುರುತ್ತಿದ್ದ ಮಾವಿನ ಗಿಡಗಳು...

ಪುಟಗಳು ಸಾಗುತ್ತಿದ್ದಂತೆ ಅಲ್ಲಲ್ಲಿ ಬರುವ ಪರಿಸರದ ವರ್ಣನೆಗೆ ಮನಸೋತು, ಓದುತ್ತಿರುವ ಪುಸ್ತಕ ಬೇಗನೇ ಮುಗಿಸಿ ಬಸ್ಸೋ ರೈಲೋ ಹತ್ತಿಕೊಂಡು ಕಯ್ಯೂರಿಗೆ ಹೋಗಿಯೇ ಬಿಡಬೇಕು ಎಂದು ಅನಿಸುತ್ತದೆ. ಹೀಗಿರುವಾಗ, ಕಯ್ಯೂರನ್ನು ಕಣ್ಣಾರೆ ನೋಡುವ ದಿನಕ್ಕಾಗಿ ಚಾತಕ ಪಕ್ಷಿಯಂತೆ ಕಾದೆವು. ಮಂಗಳೂರಿನಿಂದ ಕಾಸರಗೋಡು ಜಿಲ್ಲೆಯ ನೀಲೇಶ್ವರದ ತನಕ ರೈಲು ಪ್ರಯಾಣ, ಅಲ್ಲಿಂದ ಕಯ್ಯೂರಿಗೆ ಬಸ್ಸು. ಕಯ್ಯೂರಿನಲ್ಲಿ ಕಾಲ್ನಡಿಗೆ. ಮುಂಚೆಯೇ ಸಿದ್ಧಗೊಂಡಿದ್ದ ನೀಲನಕ್ಷೆ. ನಮ್ಮ ಕೆಲಸಗಳನ್ನು ಬದಿಗಿಟ್ಟು ಆ ಒಂದು ದಿನಕ್ಕೆ ಹೊರಡಲು ನಡೆಸಿದ ಸಿದ್ಧತೆಗಳು ಒಂದೇ ಎರಡೇ.

1940ರ ಆಸುಪಾಸು. ಕೇರಳದ ಕುಗ್ರಾಮ ಕಯ್ಯೂರಿನಲ್ಲಿ ರೈತರು ಜಮೀನ್ದಾರಿ ಪದ್ಧತಿಯ ವಿರುದ್ಧ ಭುಗಿಲೆದ್ದರು. ಹೋರಾಟಕ್ಕೆ ಸಂಬಂಧಪಟ್ಟ 60 ಜನರನ್ನು ಸರ್ಕಾರ ಬಂಧಿಸಿ ಮಂಗಳೂರು ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಿತು. ಓರ್ವ ಪತ್ರಕರ್ತರಾಗಿ ನಿರಂಜನ ಅದಕ್ಕೆ ಸಾಕ್ಷಿಯಾದರು. ವಿಚಾರಣೆ ಕೊನೆಗೊಳ್ಳುವರೆಗೂ ಸೆರೆಮನೆಯಲ್ಲಿ ಕೈದಿಗಳನ್ನು ಭೇಟಿಯಾಗುತ್ತಿದ್ದರು. ಅವರನ್ನು ಹತ್ತಿರದಿಂದ ಕಂಡರು. ನಾಲ್ವರಿಗೆ ಮರಣದಂಡನೆ, ಉಳಿದವರಿಗೆ ಕಾರಾಗೃಹ ವಾಸ, ಕಠಿಣ ಶಿಕ್ಷೆ, ಕೆಲವರ ಬಿಡುಗಡೆ. ಈ ಘಟನೆ ಹಲವಾರು ವರ್ಷಗಳ ನಂತರ ಕೇವಲ ಹದಿನೆಂಟು ದಿನಗಳಲ್ಲಿ ‘ಚಿರಸ್ಮರಣೆ’ ಎಂಬ ಕಾದಂಬರಿಯ ರೂಪದಲ್ಲಿ ಹೊರಬಂತು. ಮುನ್ನುಡಿಯಲ್ಲಿ ಲೇಖಕರು ಒಂದು ಕಡೆ ಹೀಗೆ ಹೇಳುತ್ತಾರೆ: ‘ಚಿರಸ್ಮರಣೆ ಒಂದು ಕಾದಂಬರಿ. ಚರಿತ್ರೆಯಲ್ಲ. ಈ ಕೃತಿಯಲ್ಲಿ ನಾನು ಮಾಡಿರುವುದು, ಕಯ್ಯೂರಿನ ಹೋರಾಟದ ಅಂತಃಸ್ಸತ್ವವನ್ನು- ಆ ಕಾಲಾವಧಿಯ ಚೇತನವನ್ನು- ಕಲೆಯನ್ನು ಸೆರೆಹಿಡಿಯುವ ಯತ್ನ.’

ಮೊದಲ ಪುಟದಿಂದಲೇ ಓದುಗರನ್ನು ಹಿಡಿದಿಟ್ಟುಕೊಳ್ಳುವ ‘ಚಿರಸ್ಮರಣೆ’ ಅತ್ಯಂತ ಆಪ್ತಭಾಷೆಯಲ್ಲಿದೆ. ಈಗಲೂ ವರ್ಷಕ್ಕೊಮ್ಮೆ ನಡೆಯುವ ‘ಕಯ್ಯೂರು ವೀರಗಾಥಾ’ ಕಾರ್ಯಕ್ರಮದ ಮೂಲಕ ಕಾದಂಬರಿ ಚರಿತ್ರೆಯ ಪುಟಗಳನ್ನು ಬಿಚ್ಚಿಡುತ್ತದೆ. ಬಾಲ್ಯದ ಹುಡುಗಾಟವನ್ನು ಹಿಂದಕ್ಕೆ ಹಾಕಿ ತಮ್ಮ ಮಾಸ್ತರ್ ತೋರಿಸಿದ ಹಾದಿಯಲ್ಲಿ ನಡೆಯುವ ಅಪ್ಪು, ಚಿರುಕಂಡ ತಮ್ಮ ಹೊಲಗಳಲ್ಲಿ ಹಿರಿಯರಿಗೆ ನೆರವಾಗಲೆಂದು ಅರ್ಧಕ್ಕೇ ಶಾಲೆ ಬಿಟ್ಟರು. ಗುಟ್ಟಾಗಿ ಆಗಾಗ ಭೇಟಿಯಾಗುತ್ತಿದ್ದ, ‘ಸಮಾಜದ ಕಾಯಿಲೆ’ಗೆ ಔಷಧಿ ಕೊಡುವ ಪಂಡಿತರು, ಪ್ರಭು, ದಾಂಡಿಗ, ಮಾಸ್ತರು ಈ ಹುಡುಗರನ್ನೂ ತಮ್ಮ ಜೊತೆ ಸೇರಿಸಿಕೊಳ್ಳುತ್ತಿದ್ದರು. ಪಂಡಿತರು ಹೇಳುತ್ತಿದ್ದ ಲೋಕ ಸೃಷ್ಟಿಯಾದ ಕತೆ, ಮನುಷ್ಯ ಮನುಷ್ಯನನ್ನು ಗುಲಾಮನನ್ನಾಗಿ ಮಾಡಿಕೊಂಡ ಬಗೆ, ಮಾನವ ಜ್ಞಾನ ಸಂಪಾದಿಸಿದ್ದು, ವೈಜ್ಞಾನಿಕ ಆವಿಷ್ಕಾರಗಳು, ಯಂತ್ರಗಳ ರಚನೆ, ಪರಿಣಾಮವಾಗಿ ಘಟಿಸಿದ ವರ್ಗ ಸಂಘರ್ಷ, ಮಣ್ಣಿಗಾಗಿ ಹೋರಾಟ, ದೂರದ ರಷ್ಯಾದಲ್ಲಿ ದುಡಿಯುವ ಕಾರ್ಮಿಕ ಆಳುವವನಾಗಿದ್ದು, ಜನರ ಹೋರಾಟ, ಕ್ರಾಂತಿಯ ಕಿಡಿಯ ಮಾತುಗಳು ಅಷ್ಟಾಗಿ ಇವರಿಬ್ಬರಿಗೆ ತಿಳಿಯದಿದ್ದರೂ ಪರಕೀಯರ ಗುಲಾಮಗಿರಿಯಿಂದ ಮುಕ್ತರಾಗಬೇಕೆಂದು ಬೇಗನೇ ಅರಿವಾಯಿತು.

ಅಕ್ಷರ ಅಭ್ಯಾಸ, ಓದಿನ ಪ್ರಾಮುಖ್ಯವನ್ನು ಮನಗಾಣಿಸಲು ಮಾಸ್ತರ್ ಪಕ್ಕದ ಚರ್ವತ್ತೂರಿನಿಂದ ಪತ್ರಿಕೆಯನ್ನು ತರಿಸಿಕೊಂಡು ಬಿಡುವಾಗಿ ಎಲೆಅಡಿಕೆ ಜಗಿಯುತ್ತ ಕುಳಿತ ರೈತರಿಗೆ ಓದಿ ಹೇಳುತ್ತಿದ್ದರು. ಕರಾರು ಪತ್ರಕ್ಕೆ ಸಹಿ ಹಾಕಲು ರೈತರಿಗೆ ಬಂದರೆ ಸಾಕೆಂದು ಅಧಿಕಾರದಿಂದ ಬೀಗುವ ಊರಿನ ಪ್ರಮುಖ ಜಮೀನ್ದಾರರಿಬ್ಬರು; ನಂಬೂದಿರಿ ಹಾಗೂ ನಂಬಿಯಾರ್. ದಾಸ್ಯದ ಬೇಡಿ ಕಳಚಬೇಕೆಂದರೆ ಮೊದಲು ರೈತ ಸಂಘ ಸ್ಥಾಪನೆಯಾಗಬೇಕು. ಗ್ರಾಮ ಪಂಚಾಯಿತಿ ಬರಬೇಕು. ಅದಕ್ಕಾಗಿ ರೈತರೆಲ್ಲ ಸಂಘಟಿರಾಗಬೇಕು ಎಂದು ಮಾಸ್ತರ್ ಕರೆಕೊಟ್ಟಾಗ ಒಬ್ಬೊಬ್ಬರಾಗಿ ಸೇರಿಕೊಳ್ಳುತ್ತಾರೆ. ಗ್ರಾಮದ ಹೆಂಗಸರೂ ಪಾಲ್ಗೊಳ್ಳುತ್ತಾರೆ. ಕತ್ತಲು ಆವರಿಸಿದಾಗ ನಡೆಯುವ ತುರ್ತು ಕಾರ್ಯಗಳ ಗುಪ್ತ ಚರ್ಚೆಗಳು. ಅಂತೂ ಒಂದು ದಿನ ರೈತ ಸಂಘದ ತಾತ್ಕಾಲಿಕ ಕಚೇರಿಯಾಗಿ ಅಪ್ಪುವಿನ ಮನೆಯಲ್ಲಿ ಕೆಂಪು ಬಾವುಟ ನೆಲೆ ನಿಲ್ಲುತ್ತದೆ.

ತದನಂತರದ ಹೋರಾಟಕ್ಕೆ ಭಾಗಿಯಾಗುವ ಅಬೂಬಕರ್ ಹಾಗೂ ಕುಞಂಬು. ರೈತ ಶಕ್ತಿ ಗಟ್ಟಿಯಾದಂತೆ ಲಾಠಿಗಳ ಸದ್ದೂ ಆಗೊಮ್ಮೆ ಈಗೊಮ್ಮೆ ಕೇಳಿಸುತ್ತಿತ್ತು. ಕಯ್ಯೂರಿನಲ್ಲಿ ನಡೆಯಬೇಕಾಗಿದ್ದ ತಾಲ್ಲೂಕಿನ ಮಹತ್ವದ ರೈತ ಸಮ್ಮೇಳನದ ವೇಳೆಯಲ್ಲಿ ಪೊಲೀಸ್ ಸುಬ್ಬಯ್ಯ ಹಾಗೂ ಅಬೂಬಕರ್ ನೇತೃತ್ವದ ಸ್ವಯಂಸೇವಕರ ಮಧ್ಯೆ ಜರುಗುವ ಜಟಾಪಟಿಯಿಂದ ಸಾಯುವ ಸುಬ್ಬಯ್ಯ. ಇಲ್ಲಿಂದ ಪರಿಸ್ಥಿತಿ ಕೈ ಮೀರುತ್ತದೆ. ಕಯ್ಯೂರು ಪೊಲೀಸರ ತಾಂಡವಕ್ಕೆ ಸಾಕ್ಷಿಯಾಗುತ್ತದೆ. ಕೊನೆಗೆ ಪ್ರಕರಣದಲ್ಲಿ ಭಾಗಿಯಾದವರಿಗೆ ಶಿಕ್ಷೆ.

ಕಾದಂಬರಿಯ ಕತೆ ಇಲ್ಲಿಗೆ ಮುಗಿದಿದೆಯೇ ಹೊರತು ವಾಸ್ತವದಲ್ಲಿ ಇನ್ನೂ ಮುಂದುವರೆಯುತ್ತಲೇ ಇದೆ. ಕಯ್ಯೂರಿನ ಜನ ತಮಗಾಗಿ ಪ್ರಾಣತೆತ್ತ ಜೀವಗಳನ್ನು ಮರೆತಿಲ್ಲ. ಓದು ಹೆಚ್ಚಾದಂತೆ ಜ್ಞಾನವೂ ಹೆಚ್ಚಾಗಿ ಒಳಿತು ಕೆಡಕಿನ ಬಗ್ಗೆ ಉಂಟಾಗುವ ಅರಿವು, ಅಗತ್ಯ ಬಂದಾಗ ಎಂತಹ ಹೋರಾಟಕ್ಕೂ ಸಿದ್ಧರಾಗಬೇಕೆಂಬ ಛಲವನ್ನು ಇಡೀ ಪುಸ್ತಕ ಬಿತ್ತರಿಸಿದೆ. ಹಲವಾರು ಜನರಿಗೆ ಚಿರಸ್ಮರಣೆ ತಮ್ಮ ಮೊದಲ ಓದು. ಅದರಿಂದ ಪ್ರೇರಣೆಗೊಂಡು ತಮ್ಮ ಇಡೀ ಬದುಕನ್ನು ಜೀವಪರ ಹೋರಾಟಗಳಿಗೆ ಮೀಸಲಿಟ್ಟಿದ್ದಾರೆ. ಅಂಥದರಲ್ಲಿ ‘ಚಿರಸ್ಮರಣೆ ಓದೋಣ, ಕಯ್ಯೂರಿಗೆ ಹೋಗೋಣ’ ಎಂಬ ಕೂಗು ಕೊಟ್ಟವರು ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಮುನೀರ್ ಕಾಟಿಪಳ್ಳ. ಹೌದು, ಇದೊಂದು ಉತ್ತಮ ಯೋಜನೆ. ನಮ್ಮೆಲ್ಲರಿಗೆ ಸ್ಫೂರ್ತಿದಾಯಕವಾಗಬಹುದಾದ ಚಿರಸ್ಮರಣೆಯನ್ನು ಕೈಗೆತ್ತಿಕೊಳ್ಳೋಣ ಎಂದು ಸಮಾನ ಮನಸ್ಕ ಸಂಗಾತಿಗಳೆಲ್ಲರೂ ಈ ಅಭಿಯಾನಕ್ಕೆ ಕೈ ಜೋಡಿಸಿದೆವು.

ಅಂತೂ ಹೋಗುವ ದಿನ ಬಂತು. ಮಂಗಳೂರಿನ ಬೆಳಿಗ್ಗೆಯ ಚುಮುಚುಮು ಚಳಿ. ಕಡಲಿನ ಕಡೆಯಿಂದ ಬೀಸುತ್ತಿದ್ದ ಸೆಕೆ ತರಿಸುವಂತಹ ಗಾಳಿ. ಕಯ್ಯೂರಿನತ್ತ ಕೊಂಡೊಯ್ಯುವ ರೈಲು ಹತ್ತಲು ಕರ್ನಾಟಕದ ಬೇರೆ ಬೇರೆ ಊರುಗಳಿಂದ ಬಂದಿದ್ದ ಸಂಗಾತಿಗಳ ಕಣ್ಣಲ್ಲಿ ಏನೋ ಒಂದು ತರಹದ ಉತ್ಸಾಹ, ಖುಷಿ. ಇಷ್ಟು ದಿನ ಕೇವಲ ತಮ್ಮದೇ ಆದ ಕಲ್ಪನೆಗಳಲ್ಲಿ ಕಂಡಿದ್ದ ನೆಲವನ್ನು ಕಾಣುವ ಸಮಯ ಸಮೀಪಿಸುತ್ತಿತ್ತು. ನಮ್ಮ ಕ್ರಾಂತಿ ಗೀತೆಗಳು ಚಲಿಸುತ್ತಿದ್ದ ರೈಲಿನ ಸದ್ದನ್ನು ಕೇಳಿಸದಂತೆ ಅಡಗಿಸಿದ್ದವು. ಷರತ್ತನ್ನು ಪೂರ್ಣಗೊಳಿಸದವರು ‘ಚಿರಸ್ಮರಣೆ’ಯ ಕೊನೆಯ ಪುಟಗಳಲ್ಲಿ ಕಳೆದುಹೋಗಿದ್ದರು. ಇನ್ನೂ ಕೆಲವರು ಓದಿದ್ದು ಮರೆತುಬಿಟ್ಟೆವೆಂಬ ಭಯದಲ್ಲಿ ಪುಟಗಳನ್ನು ತಿರುವಿಹಾಕುತ್ತಿದ್ದರು. ಆಗಾಗ ಕಿಟಕಿಯಾಚೆ ಇಣುಕಿದರೆ ನದಿಯು ಸಮುದ್ರದೊಂದಿಗೆ ಒಂದಾಗುವ ದೃಶ್ಯ. ನೆಟ್ಟಗೆ ಸಾಲುಗಳಲ್ಲಿ ನಿಂತ ತೆಂಗಿನ ತೋಟಗಳ ರಾಶಿ.

(ಕಯ್ಯೂರಿನ ಹುತಾತ್ಮರ ಸ್ಮಾರಕ...)

ಬರಬರುತ್ತ ಕನ್ನಡ ಅಕ್ಷರಗಳು ಮಾಯವಾಗತೊಡಗಿ, ಮಲಯಾಳಂ ಭಾಷೆ ಕೆಂಪು ಬಾವುಟದೊಂದಿಗೆ ನಮ್ಮನ್ನು ಸ್ವಾಗತಿಸುವಂತಿತ್ತು. ಕ್ರಾಂತಿಯ ಪ್ರತೀಕವಾದ ಧ್ವಜಗಳು ಎಲ್ಲೆಲ್ಲೂ ರಾರಾಜಿಸುತ್ತಿದ್ದವು. ನೀಲೇಶ್ವರದಲ್ಲಿ ರೈಲಿನ ಜೊತೆ ನಂಟನ್ನು ಬಿಡಿಸಿಕೊಂಡು ಕೇರಳದ ಗರಿಗರಿ ದೋಸೆ - ಬಿಸಿಬಿಸಿ ಚಹಾ ಹೊಟ್ಟೆಗಿಳಿಸಿ, ಅಪ್ಪು, ಚಿರುಕಂಡ, ಅಬೂಬಕ್ಕರ್, ಕುಞಂಬು ಅವರ ಊರಿಗೆ ಕರೆದೊಯ್ಯಲು ನಮಗಾಗಿ ಕಾಯುತ್ತಿದ್ದ ಬಸ್ ಏರಿದೆವು. ಸಣ್ಣಪುಟ್ಟ ಬೆಟ್ಟಗಳನ್ನು ಹತ್ತಿ ಇಳಿದು ಬಸ್ಸು ಕೊನೆಗೆ ಕನಸಿನ ಊರಿಗೆ ತಲುಪಿಸಿತು. ಎಲ್ಲೆಲ್ಲೂ ಹಸಿರು. ನಡೆದುಹೋದ ಗೆಲುವಿನ ಕ್ರಾಂತಿಯ ಪತಾಕೆ ಹಾರಾಡುತ್ತಿತ್ತು. ನಮ್ಮ ಬರುವಿಕೆಯ ಸುದ್ದಿ ಇಡೀ ಊರಿನಲ್ಲಿ ಹಬ್ಬಿಹೋಗಿತ್ತು. ಸ್ಥಳೀಯ ನಾಯಕರು ಪ್ರೀತಿಯಿಂದ ಸ್ವಾಗತಿಸಿದರು. ಇರುವೆ ಗೂಡು ಬಿಟ್ಟು ಸಾಲಾಗಿ ಹೊರಬಂದಂತೆ ಬಸ್ಸಿನಿಂದ ಇಳಿಯುತ್ತಿದ್ದ ಸರಿಸುಮಾರು ಅರವತ್ತು ಜನರ ನಮ್ಮ ತಂಡವನ್ನು ಚಿಕ್ಕಚಿಕ್ಕ ಮಕ್ಕಳು ಪಿಳಿಪಿಳಿ ಕಣ್ಣು ಬಿಡುತ್ತ ನೋಡುತ್ತಾ ನಿಂತಿದ್ದವು. ಚಿರಸ್ಮರಣೆಯ ನೆನಪಿನಲ್ಲಿ ಅಪ್ಪು, ಚಿರುಕಂಡ, ಅಬೂಬಕ್ಕರ್, ಕುಞಂಬುರನ್ನು ಹುಡುಕುತ್ತ ಬಂದ ನಮ್ಮ ಹಾಗೆ ಎಷ್ಟು ಜನರನ್ನು ಕಂಡಿಲ್ಲ ಈ ಊರಿನವರು?

ಸೂರ್ಯನ ಕಿರಣಗಳು ನೆಲಕ್ಕೆ ತಾಗದಂತೆ ಆವರಿಸಿಕೊಂಡಿದ್ದ ತೆಂಗು. ಬೆವರಿನ ಮೈಗೆ ಸೋಕಿ ತಂಪೆನಿಸುವ ಹವಾ. ಕಯ್ಯೂರಿನ ನೀರವತೆಯನ್ನು ಸೀಳಿಕೊಂಡು ಮೊಳಗುತ್ತಿದ್ದ ನಮ್ಮ ಬಂಡಾಯ ಹಾಡುಗಳು. ಆಧುನಿಕತೆಯ ಕುರುಹಿಗಿದ್ದ ಸಿಮೆಂಟಿನ ಹೊಸ ಮನೆಗಳು. ಗತಕಾಲವನ್ನು ಸಾರುವ ಮಂಗಳೂರು ಇಟ್ಟಿಗೆಯ ಮನೆಗಳು. ಆಗಿನ ಕಲ್ಲುಮುಳ್ಳಿನ ಹಾದಿಯಲ್ಲಿ ಇಲ್ಲೆ ಎಲ್ಲೊ ಅಪ್ಪು, ಚಿರುಕಂಡರ ಕಾಲುಗಳು ಓಡಾಡಿರಬೇಕು. ನಾವೂ ಇದೇ ಹಾದಿಯಲ್ಲಿ ಇದ್ದೇವೆ; ಆದರೆ ಹೋರಾಡುವ ಪರಿಸ್ಥಿತಿ ಮಾತ್ರ ಬದಲಾಗಿಲ್ಲ.

ಕುಟ್ಟಿಕೃಷ್ಟ ಅಪ್ರಾಯಸ್ಥ ಎಂದು ಅವರಿಗೆ ಮರಣದಂಡನೆಯಾಗಲಿಲ್ಲ. ಕೈದಿಗಳ ಶಿಕ್ಷಣ ಶಾಲೆಯನ್ನು ಮುಗಿಸಿ ಅವರು ಊರಿಗೆ ವಾಪಸಾಗುತ್ತಾರೆ. 2001ರಲ್ಲಿ ಅವರು ತೀರಿಕೊಂಡರು. ಅವರ ಸಮಾಧಿಯ ಸಣ್ಣದೊಂದು ಸ್ಮಾರಕ ಸಿಗುತ್ತದೆ. ಅವರ ಮಗ ಇನ್ನೂ ಕಯ್ಯೂರಿನಲ್ಲಿ ನೆಲೆಸಿದ್ದಾರೆ. ಹಾಗೆಯೇ ಮುಂದೆ ಸಾಗುತ್ತ ತೇಜಸ್ವಿನಿಯ ತಟದಲ್ಲಿ ಸಿಗುವುದು ನಾಲ್ವರು ಹುತಾತ್ಮರ ಸ್ಮೃತಿಯಲ್ಲಿ ನಿರ್ಮಿಸಿರುವ ತ್ರಿಕೋನಾಕಾರದ ಸ್ತೂಪ. ಅಲ್ಲಿ ಈಗ ಒಂದು ಕಚೇರಿಯಿದೆ. ರೈತ ಕ್ರಾಂತಿಗೆ ಸಂಬಂಧಿಸಿದ ದಾಖಲಾತಿಗಳು, ಹೋರಾಟದಲ್ಲಿ ಭಾಗವಹಿಸಿದವರ ಭಾವಚಿತ್ರಗಳನ್ನು ಇಟ್ಟಿದ್ದಾರೆ. ಅವು ಮಲಯಾಳಂ ಭಾಷೆಯಲ್ಲಿದ್ದ ಕಾರಣ ಓದಲಿಕ್ಕೆ ಆಗಿಲ್ಲ. ಆಗ ನಮ್ಮ ಸಹಾಯಕ್ಕೆ ಬಂದದ್ದು ಪಯ್ಯನೂರು ಕುಂಞರಾಮನ್. ಕನ್ನಡ ಮತ್ತು ಮಲಯಾಳಂ ಬಲ್ಲ ನಿವೃತ್ತ ಶಿಕ್ಷಕರು ಅವರು. ಅನುವಾದಕರೂ ಸಹ. ಐವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಅವರು ಹೇಳುತ್ತಿದ್ದ ದಾಖಲೆಗಳ ವಿವರಗಳನ್ನು ಕೇಳಿ ಮೈಯೆಲ್ಲಾ ಜುಂ ಎಂದಿದ್ದು ನಿಜ. ಪಕ್ಕದಲ್ಲಿ ಶಾಂತವಾಗಿ ಹರಿಯುವ ತೇಜಸ್ವಿನಿ ನೋಡುತ್ತ ಸ್ನೇಹಿತರಾದ ಪುನೀತ್ ‘ಅಪ್ಪು’ ರಚಿಸಿ ಅಕ್ಷರ ರೂಪದಲ್ಲಿದ್ದ ಕಯ್ಯೂರು ಪಯಣದ ಧ್ಯೇಯವನ್ನು ನಾದ ಮಣಿನಾಲ್ಕೂರು ಅವರ ಧ್ವನಿಯಲ್ಲಿ ಕೇಳುತ್ತಾ ಸಮಯ ಹೋಗಿದ್ದು ಅರಿವಾಗಲಿಲ್ಲ. ಸಾಕಾಗುವಷ್ಟು ಫೋಟೋಗಳನ್ನು ಕ್ಲಿಕ್ಕಿಸಿಕೊಂಡು, ಚಿರಸ್ಮರಣೆಯ ಕೊನೆಯ ವಾಕ್ಯಗಳನ್ನು ಓದಿ, ಘೋಷಣೆಗಳನ್ನು ಕೂಗಿ, ಹುತಾತ್ಮರಿಗೆ ನಮನ ಸಲ್ಲಿಸಿದೆವು. ಹೋರಾಡಬೇಕೆಂದು ಅವರಲ್ಲಿದ್ದ ಕಿಚ್ಚು ನಮ್ಮಲ್ಲಿಯೂ ಇರಲಿ ಎಂಬ ಆಕಾಂಕ್ಷೆ ನೆರೆದವರ ಕಣ್ಣಲ್ಲಿ ಕಾಣಬಹುದಿತ್ತು. ಮಡತ್ತಿಲ್ ಅಪ್ಪುವಿನ ಮನೆ ಇನ್ನೂ ಹಾಗೇ ಗಟ್ಟಿಯಾಗಿ ನಿಂತಿದೆ. ಜಮೀನ್ದಾರರ ಮನೆ ಕಾಲದ ಗತಿಗೆ ನೆಲಸಮವಾಗಿವೆ. ಹೊಲಗದ್ದೆಗಳು ಇಡೀ ಊರಿನ ಸ್ವತ್ತಾಗಿವೆ. ಅಬೂಬಕರ್ ಮನೆಯ ಪಕ್ಕದಲ್ಲೊಂದು ದರ್ಗಾವಿದೆ. ಅವರ ಕುಟುಂಬಸ್ಥರಿಗೆ ಸೇರಿದ್ದು. ಬಹಳ ಹಳೆಯದು. ಸದ್ಯಕ್ಕೆ ಅದನ್ನು ನೋಡಿಕೊಳ್ಳುತ್ತಿರುವವರು ಟಿ.ಬಾಲನ್ ಎಂಬುವವರು. ಧರ್ಮ- ಧರ್ಮಗಳ ನಡುವೆ ಉಂಟಾಗುತ್ತಿರುವ ಭಿನ್ನಾಭಿಪ್ರಾಯದ ಹೊತ್ತಲ್ಲಿ ಬಾಲನ್ ಸೌಹಾರ್ದದ ಪ್ರತೀಕವೆನಿಸುತ್ತಾರೆ.

ಗ್ರಾಮದ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗಲು ಮಧ್ಯಾಹ್ನದ ನಂತರ ಕಾಲು ಹಿಂದೇಟು ಹಾಕುತ್ತಿದ್ದವು. ನಮ್ಮ ದಣಿವನ್ನು ತೀರಿಸಿದವರು ಪರಿಚಯವೇ ಇಲ್ಲದ ಕಯ್ಯೂರಿನ ನಿವಾಸಿಗಳು. ದಾರಿಯುದ್ದಕ್ಕೂ ಒಂದಲ್ಲ ಒಂದು ಮನೆಯವರು ತಂಬಿಗೆಯಲ್ಲಿ ನೀರು ಇಟ್ಟುಕೊಂಡು ನಮಗಾಗಿ ಕಾಯುತ್ತಿದ್ದರು. ಒಂದು ಕಡೆ ಹಣ್ಣಿನ ರಸವೂ ದೊರೆಯಿತು. ಬಾಳೆಹಣ್ಣಿನಿಂದ ಸತ್ಕರಿಸಿದರು. ಒಟ್ಟಿನಲ್ಲಿ ಕಯ್ಯೂರಿನ ಊಟದ ಸ್ವಾದ ಹೊಟ್ಟೆ ಹಾಗೂ ಮನಸ್ಸು ಎರಡನ್ನೂ ತುಂಬಿಸಿತು. ಸೂರ್ಯ ಪಡುವಣ ದಿಕ್ಕಲ್ಲಿ ಬಾನೆಲ್ಲಾ ಕೆಂಪಾಗಿಸಿ ತನ್ನ ಕೆಲಸ ಮುಗಿಸಿ ಹೋಗುತ್ತಿದ್ದ. ಇನ್ನೇನು ನಾವೂ ಹಿಂದಿರುಗುವ ಸಮಯ. ಕಯ್ಯೂರು ಬಿಟ್ಟುಹೋಗಲು ಎಲ್ಲರ ಮನಸು ಭಾರವಾಗಿತ್ತು. ಕಲ್ಪಿಸಿದ್ದಕ್ಕಿಂತ ಹೆಚ್ಚಾಗಿಯೇ ಅನುಭವ ಪಡೆದಂತಾಯಿತು. ತೃಪ್ತ ಆತ್ಮಗಳಾಗಿದ್ದೆವು. ಈಗ ಕಯ್ಯೂರನ್ನು ಕಣ್ತುಂಬಿಕೊಂಡಾಗ ಪುನಃ ಚಿರಸ್ಮರಣೆ ಓದಬೇಕೆಂದು ಅನಿಸಿತು.

ಕಯ್ಯೂರಿಗೆ ಹೋದವರೆಲ್ಲಾ ಕಮ್ಯೂನಿಸ್ಟ್ ಪಕ್ಷದವರಲ್ಲ. ಒಂದೇ ವರ್ಗ ಅಥವಾ ಪಂಥಕ್ಕೆ ಸೇರಿದವರೂ ಅಲ್ಲ. ಒಂದು ಪುಸ್ತಕ ಓದಿ, ಅದರಿಂದ ಸ್ಫೂರ್ತಿಗೊಂಡು ಇಷ್ಟು ದಿನ ಕೇವಲ ಊಹಿಸಿಕೊಂಡ ಗ್ರಾಮವನ್ನು ನೋಡುವ ಆಸೆಯಿಂದ ಹೋಗಿದ್ದೆವು. ವಯಸ್ಸಿಗೆ ಮೀರಿ ಪ್ರಬುದ್ಧತೆ ಬೆಳೆಸಿಕೊಂಡ ಅಪ್ಪು, ಚಿರುಕಂಡ, ಅಬೂಬಕ್ಕರ್, ಕುಞಂಬು, ಪ್ರತಿಯೊಂದು ಹೆಜ್ಜೆಯಲ್ಲೂ ಹುರಿದುಂಬಿಸುತ್ತಿದ್ದ ಮಾಸ್ತರ್ ಮತ್ತು ಪಂಡಿತ, ಬಳುವಳಿಯಿಂದ ಬಂದ ಅಧಿಕಾರವನ್ನು ಚಲಾಯಿಸುತ್ತಿದ್ದ ನಂಬೂದಿರಿ ಮತ್ತು ನಾಯರ್, ತಮ್ಮ ಹಕ್ಕಿಗಾಗಿ, ಸ್ವಂತ ತುಂಡು ಭೂಮಿಗಾಗಿ ಸೆಣಸಾಟ ನಡೆಸಿದ ರೈತರು ಕೇವಲ ಪುಸ್ತಕದಲ್ಲಿ ಮಾತ್ರ ಕಾಣಿಸುವುದಿಲ್ಲ. ಇವರೆಲ್ಲ ಈಗಲೂ ಬೇರೆ ಬೇರೆ ರೂಪಗಳಲ್ಲಿ ನಮ್ಮ ಮಧ್ಯೆ ಇದ್ದಾರೆ. ‘ಚಿರಸ್ಮರಣೆ ಓದೋಣ, ಕಯ್ಯೂರಿಗೆ ಹೋಗೋಣ’ ಮೂಲಕ ದೊಡ್ಡ ಸಾಧನೆಯೊಂದನ್ನು ಮಾಡಿದ್ದೇವೆಂದು ಯಾರೂ ಬೀಗುತ್ತಿಲ್ಲ. ರಾಜಕೀಯ ಹಾಗೂ ಸಾಮಾಜಿಕವಾಗಿ ಮುಂಬರುವ ದಿನಗಳು ಹೇಗಿರುತ್ತವೆ ಎನ್ನುವುದು ಗೊತ್ತಿಲ್ಲ. ಕಷ್ಟದ ಪರಿಸ್ಥಿತಿ ಎದುರಿಸಲು ಯುವಜನರನ್ನು ಸಜ್ಜುಗೊಳಿಸಬೇಕಾದಲ್ಲಿ ಒಂದು ಶಕ್ತಿಯ ಅಗತ್ಯವಿದ್ದಾಗ ತಕ್ಷಣಕ್ಕೆ ನಮಗೆ ತೋಚಿದ್ದು ‘ಚಿರಸ್ಮರಣೆ’. ‘ಕಯ್ಯೂರು ನಡೆ’ಯ ಒಂದು ಚಿಕ್ಕ ಪ್ರಯತ್ನ ಸಫಲವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry