7

ಹದಿನೆಂಟು ಕಿರೀಟಗಳ ಸರದಾರ ಪಂಕಜ್‌

Published:
Updated:
ಹದಿನೆಂಟು ಕಿರೀಟಗಳ ಸರದಾರ ಪಂಕಜ್‌

ಅದು 1958ರ ಇಸವಿ. ಬಿಲಿಯರ್ಡ್ಸ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಬಂದ ವರ್ಷ. ವಿಲ್ಸನ್‌ ಜಾನ್ಸ್‌ ಅವರು ಈ ಚೊಚ್ಚಲ ಸಂಭ್ರಮದ ರೂವಾರಿಯಾಗಿದ್ದರು. ಈ ಕ್ರೀಡೆಯಲ್ಲಿ ಭಾರತ ಮತ್ತೊಮ್ಮೆ ಚಿನ್ನದ ಪದಕಕ್ಕೆ ಮುತ್ತಿಡಬೇಕಾದರೆ ಆರು ವರ್ಷ ಕಾಯಬೇಕಾಯಿತು. ಆಗಲೂ ಚಿನ್ನ ಗೆದ್ದವರು ವಿಲ್ಸನ್‌ ಜಾನ್ಸ್‌.

ನಂತರ ಮೈಕೆಲ್ ಪೆರೇರಾ, ಗೀತ್ ಸೇಥಿ, ಮನೋಜ್‌ ಕೊಠಾರಿ ಮತ್ತು ಅಶೋಕ್ ಶಾಂಡಿಲ್ಯ ಅವರು ಆಗೊಮ್ಮೆ, ಈಗೊಮ್ಮೆ ಹೆಸರು ಮಾಡಿದರು. 2003ರಲ್ಲಿ ಪಂಕಜ್‌ ಅಡ್ವಾನಿ ವಿಶ್ವ ಚಾಂಪಿಯನ್‌ಷಿಪ್‌ಗೆ ಪ್ರವೇಶಿಸಿದ ನಂತರ ಚಿತ್ರಣವೇ ಬದಲಾಯಿತು.

ಸ್ನೂಕರ್‌ನಲ್ಲೂ ಇದೇ ಕಥೆ. ಈ ಕ್ರೀಡೆಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಬಂದದ್ದು 1984ರಲ್ಲಿ. ಐರ್ಲೆಂಡ್‌ನ ಡುಬ್ಲಿನ್‌ನಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಓಂ ಪ್ರಕಾಶ್ ಅಗರವಾಲ್‌ ಈ ಸಾಧನೆ ಮಾಡಿದ್ದರು. ಆಗ ಪಂಕಜ್‌ ಅಡ್ವಾನಿ ಜನಿಸಿಯೇ ಇರಲಿಲ್ಲ. 2003ರ ನಂತರ ಸ್ನೂಕರ್‌ನಲ್ಲೂ ಬದಲಾವಣೆಯ ಗಾಳಿ ಸೋಕಿತು. ಇದಕ್ಕೂ ಕಾರಣ ಪಂಕಜ್‌ ಅಡ್ವಾನಿ.

ಅವರು ಈ ಬಾರಿಯೂ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಈ ಮೂಲಕ ಒಟ್ಟು 18 ಬಾರಿ ವಿಶ್ವ ಚಾಂಪಿಯನ್‌ ಪಟ್ಟಕ್ಕೇರಿದ ಅಪರೂಪದ ಸಾಧನೆಯನ್ನು ಮಾಡಿದ ಗರಿಮೆ ಅವರದಾಯಿತು.

ಇಂಗ್ಲಿಷ್‌ ಬಿಲಿಯರ್ಡ್ಸ್‌ನಲ್ಲಿ ಅತ್ಯಮೋಘ ಸಾಧನೆ ಮಾಡಿರುವ ಅವರು ವಿಶ್ವ, ಏಷ್ಯಾ ಮತ್ತು ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಸತತ ಮೂರು ವರ್ಷ ಪ್ರಶಸ್ತಿಗಳನ್ನು ಗೆದ್ದು ‘ಹ್ಯಾಟ್ರಿಕ್‌ಗಳ ಹ್ಯಾಟ್ರಿಕ್’ ಮಾಡಿದರು. ಅವರು ಇಲ್ಲಿಯ ವರೆಗೆ ಗೆದ್ದಿರುವ ಒಟ್ಟು ಪ್ರಶಸ್ತಿಗಳ ಸಂಖ್ಯೆ 58. 2014ರಿಂದ 6–ರೆಡ್ ಸ್ನೂಕರ್‌ನಲ್ಲೂ ಪಾರಮ್ಯ ಮೆರೆದು ಪಾಲ್ಗೊಂಡ ಅವರು ಅಲ್ಲೂ ‘ಚಿನ್ನ’ದ ಸಾಧನೆ ಮಾಡಿದರು.

‘15–ರೆಡ್‌’ ಮತ್ತು ‘6–ರೆಡ್’ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವ ಚಾಂಪಿಯನ್‌ ಆದ ಮೊದಲ ಆಟಗಾರ ಎಂಬ ಖ್ಯಾತಿಯನ್ನೂ ತಮ್ಮದಾಗಿಸಿಕೊಂಡರು ಅಡ್ವಾನಿ. 6–ರೆಡ್ ಸ್ನೂಕರ್‌ನಲ್ಲಿ ವಿಶ್ವ ಚಾಂಪಿಯನ್‌ ಪಟ್ಟ ಅಲಂಕರಿಸಿದ ಭಾರತದ ಮೊದಲ ಸ್ನೂಕರ್ ಪಟು ಕೂಡ ಆಗಿದ್ದಾರೆ ಅವರು. ತಂಡ ವಿಭಾಗದಲ್ಲೂ ಅವರು ಕೈಚಳಕ ತೋರಿಸಿದ್ದಾರೆ. 2014ರಲ್ಲಿ ರೂಪೇಶ್‌ ಷಾ, ದೇವೇಂದ್ರ ಜೋಶಿ ಮತ್ತು ಅಶೋಕ್‌ ಶಾಂಡಿಲ್ಯ ಅವರೊಂದಿಗೆ ಸೇರಿ ವಿಶ್ವ ಚಾಂಪಿಯನ್‌ಷಿಪ್‌ ಗೆದ್ದರು.

ಪುಣೆಯಿಂದ ಬೆಂಗಳೂರು ವರೆಗೆ...

ಪುಣೆಯಲ್ಲಿ ಜನಿಸಿ, ಕುವೈಟ್‌ನಲ್ಲಿ ಬೆಳೆದ ಪಂಕಜ್‌ ಅಡ್ವಾನಿ ಅವರಿಗೆ ಸಾಧನೆಗೆ ವೇದಿಕೆಯಾದದ್ದು ಬೆಂಗಳೂರು. 12ನೇ ವಯಸ್ಸಿನಲ್ಲಿ ಸ್ನೂಕರ್ ಮತ್ತು ಬಿಲಿಯರ್ಡ್ಸ್‌ ಆಡಲು ಆರಂಭಿಸಿದ ಅಡ್ವಾನಿ ಜೂನಿಯರ್‌ ವಿಭಾಗದಲ್ಲಿ ವಿಶಿಷ್ಟ ಸಾಧನೆ ಮಾಡಿದ ನಂತರ ಸೀನಿಯರ್ ವಿಭಾಗದಲ್ಲಿ ಆಡಲು ಆರಂಭಿಸಿದ್ದರು. 2000ನೇ ಇಸವಿಯಲ್ಲಿ ಜೂನಿಯರ್ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗಳಿಸಿದ ಅವರು 2001, 2003ರಲ್ಲೂ ಚಾಂಪಿಯನ್‌ ಆದರು. 2003ರಲ್ಲಿ ಸ್ನೂಕರ್‌ನಲ್ಲೂ ಪ್ರಶಸ್ತಿ ಗೆದ್ದು ಈ ಸಾಧನೆ ಮಾಡಿದ ದೇಶದ ಅತಿ ಕಿರಿಯ ಆಟಗಾರ ಎಂಬ ಖ್ಯಾತಿ ಮುಡಿಗೇರಿಸಿಕೊಂಡರು.

ಅಡ್ವಾನಿ ಅವರನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ್ದು ಕೂಡ ಬೆಂಗಳೂರು. ಇಲ್ಲಿ 2002ರಲ್ಲಿ ನಡೆದ ಏಷ್ಯನ್‌ ಬಿಲಿಯರ್ಡ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಅವರು ಮೊದಲ ಬಾರಿ ಅಂತರರಾಷ್ಟ್ರೀಯ ಮಟ್ಟದ ಟೂರ್ನಿಯ ಫೈನಲ್ ಪ್ರವೇಶಿಸಿದ್ದರು. 2003ರಿಂದ ವಿಶ್ವ ಚಾಂಪಿಯನ್‌ಷಿಪ್‌ಗಳಲ್ಲಿ ಪಾರಮ್ಯ ಮೆರೆಯುವ ಅಭಿಯಾನ ಅರಂಭಿಸಿದರು.

2005ರ ವಿಶ್ವ ಚಾಂಪಿಯನ್‌ಷಿಪ್‌ನ ‘ಟೈಮ್‌’ ಮತ್ತು ‘ಪಾಯಿಂಟ್‌’ ವಿಭಾಗಗಳೆರಡರಲ್ಲೂ ಪ್ರಶಸ್ತಿ ಗೆದ್ದಾಗಲೇ ಅಡ್ವಾನಿ ಅವರ ನಿಜವಾದ ಸಾಮರ್ಥ್ಯ ಜಗತ್ತಿಗೆ ತಿಳಿಯಿತು. 2008ರಲ್ಲಿ ಬೆಂಗಳೂರಿನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲೂ ಇದೇ ರೀತಿಯ ಫಲಿತಾಂಶ ಹೊರ ಹೊಮ್ಮಿತು. ಇದು ಅವರ ಖ್ಯಾತಿಯನ್ನು ಗಗನಕ್ಕೇರಿಸಿತು. ಈ ನಡುವೆ ಹವ್ಯಾಸಿ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಅವರು ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಸರನ್ನೂ ತಮ್ಮದಾಗಿಸಿಕೊಂಡರು.

ಇಂಗ್ಲಿಷ್ ಬಿಲಿಯರ್ಡ್ಸ್‌ನಲ್ಲಿ ಎಂಟು ಬಾರಿ ವಿಶ್ವ ಚಾಂಪಿಯನ್‌, ರಾಷ್ಟ್ರೀಯ, ಪ್ರಾದೇಶಿಕ ಮತ್ತು ವಿಶ್ವ ಮಟ್ಟದಲ್ಲಿ ಐದು ಬಾರಿ ಚಾಂಪಿಯನ್‌ ಮುಂತಾದ ಅಪರೂಪದ ಹೆಗ್ಗಳಿಕೆಯೂ ಅವರದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry