ಜೆರುಸಲೇಂ ಇಸ್ರೇಲ್‌ ರಾಜಧಾನಿ: ಟ್ರಂಪ್ ಘೋಷಣೆ

7

ಜೆರುಸಲೇಂ ಇಸ್ರೇಲ್‌ ರಾಜಧಾನಿ: ಟ್ರಂಪ್ ಘೋಷಣೆ

Published:
Updated:
ಜೆರುಸಲೇಂ ಇಸ್ರೇಲ್‌ ರಾಜಧಾನಿ: ಟ್ರಂಪ್ ಘೋಷಣೆ

ವಾಷಿಂಗ್ಟನ್: ತೀವ್ರ ವಿರೋಧದ ನಡುವೆಯೂ ಜೆರುಸಲೇಂ ಇಸ್ರೇಲ್‌ ರಾಜಧಾನಿ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.

ಜೆರುಸಲೇಂ ಅನ್ನು ಇಸ್ರೇಲ್‌ನ ರಾಜಧಾನಿಯನ್ನಾಗಿ ಮಾನ್ಯ ಮಾಡಿ, ಅಮೆರಿಕದ ರಾಯಭಾರ ಕಚೇರಿಯನ್ನು ಟೆಲ್‍ಅವಿವ್‍ನಿಂದ ಜೆರುಸಲೆಂಗೆ ಸ್ಥಳಾಂತರಿಸಲು ಇಸ್ರೇಲ್‌ ಪರ ಒಲವಿರುವ ಅಮೆರಿಕದ ರಾಜಕಾರಣಿಗಳು ಟ್ರಂಪ್‌ ಮೇಲೆ ತೀವ್ರ ಒತ್ತಡ ತಂದಿದ್ದರು.

ಜೆರುಸಲೇಂ ಅನ್ನು ಇಸ್ರೇಲ್‌ ರಾಜಧಾನಿ ಎಂದು ಮಾನ್ಯ ಮಾಡುವುದಾಗಿ ಅಧ್ಯಕ್ಷೀಯ ಚುನಾವಣೆ ವೇಳೆ ಟ್ರಂಪ್‌ ಭರವಸೆಯನ್ನೂ ನೀಡಿದ್ದರು.

ಪ್ರಾಚೀನ ಕಾಲದಿಂದಲೂ ಜೆರುಸಲೇಂ ಯಹೂದಿಯರ ರಾಜಧಾನಿಯಾಗಿದೆ. ಅಲ್ಲದೇ ಈಗಲೂ ಅಲ್ಲಿ ಸರ್ಕಾರದ ಕೇಂದ್ರ ಕಚೇರಿ, ಪ್ರಮುಖ ಸಚಿವಾಲಯಗಳು ಮತ್ತು ಸುಪ್ರೀಂಕೋರ್ಟ್ ಇದೆ. ಹೀಗಾಗಿ ಟ್ರಂಪ್ ಟೆಲ್‍ಅವಿವ್ ಬದಲು ಜೆರುಸಲೇಂ ಅನ್ನೇ ಇಸ್ರೇಲ್‌ನ ರಾಜಧಾನಿಯಾಗಿ ಪರಿಗಣಿಸಿದ್ದಾರೆ ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ.

ಟ್ರಂಪ್‍ ಅವರ ಈ ನಡೆಯಿಂದ ಇಸ್ರೇಲ್‌ನಲ್ಲಿ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಇಸ್ರೇಲ್‌ನಲ್ಲಿರುವ ಮುಸ್ಲಿಮರು, ಯಹೂದಿಗಳು ಮತ್ತು ಕ್ರೈಸ್ತರ ನಡುವೆ ಭಿನ್ನಾಭಿಪ್ರಾಯಗಳಿಗೂ ಕಾರಣವಾಗಬಹುದು ಎನ್ನಲಾಗಿದೆ.

ಕಳವಳ, ವಿರೋಧ
ಈ ಬೆಳವಣಿಗೆಗೆ ಪ್ರತಿಕ್ರಿಯಿಸಿರುವ ಪೋಪ್‌ ಫ್ರಾನ್ಸಿಸ್‌, ‘ನಾನು ಈಗ ಸುಮ್ಮನಿರಲು ಸಾಧ್ಯವಿಲ್ಲ’ ಎಂದಿದ್ದಾರೆ. ‘ಟ್ರಂಪ್‌ ನಡೆಯು ಪವಿತ್ರ ನಗರದಲ್ಲಿ ಹೊಸ ಸಂಘರ್ಷಕ್ಕೆ ಎಡೆ ಮಾಡಿಕೊಡಲಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೊನಿಯೊ ಗುಟೆರಸ್‌, ‘ಇಸ್ರೇಲ್‌ ಮತ್ತು ಪ್ಯಾಲೆಸ್ಟಿನ್‌ ಎರಡೂ ಕಡೆಯ ಅಭಿಪ್ರಾಯ ಪಡೆದು ಸೂಕ್ತ ವೇದಿಕೆಯಲ್ಲಿ ಶಾಂತಿಯುತವಾಗಿ ಈ ಸಮಸ್ಯೆಯನ್ನು ಬಗೆಹರಿಸಬೇಕಿತ್ತು’ ಎಂದಿದ್ದಾರೆ.

ಐರೋಪ್ಯ ಒಕ್ಕೂಟ ಹಾಗೂ ಅಮೆರಿಕದ ಮಿತ್ರ ರಾಷ್ಟ್ರಗಳಾದ ಫ್ರಾನ್ಸ್, ಜರ್ಮನಿ, ಇಟಲಿ ಟ್ರಂಟ್‌ ನಡೆಯನ್ನು, ‘ಇದೊಂದು ತಪ್ಪು ತೀರ್ಮಾನ’ ಎಂದು ಹೇಳಿವೆ.

ಟ್ರಂಪ್‌ ನಡೆಯನ್ನು ವಿರೋಧಿಸಿ ಇಸ್ರೇಲ್‌ ಹಾಗೂ ಪ್ಯಾಲೆಸ್ಟಿನ್‌ನ ಹಲವು ಕಡೆ ಪ್ರತಿಭಟನೆ ನಡೆದಿದೆ. ಅಮೆರಿಕದ ರಾಯಭಾರ ಕಚೇರಿಗಳ ಮುಂದೆ ಜಮಾಯಿಸಿದ್ದ ಪ್ರತಿಭಟನಾಕಾರರು ಟ್ರಂಪ್‌ ತೀರ್ಮಾನದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry