ಉದ್ಯಮಿ ದಯಾನಂದ ಯಶೋಗಾಥೆ

7

ಉದ್ಯಮಿ ದಯಾನಂದ ಯಶೋಗಾಥೆ

Published:
Updated:
ಉದ್ಯಮಿ ದಯಾನಂದ ಯಶೋಗಾಥೆ

ಬೆಂಗಳೂರಿನ ಯಾವುದೇ ಪ್ರಮುಖ ಬಡಾವಣೆಗೆ ಹೋದರೂ ಡಿ.ಎಸ್‌.ಮ್ಯಾಕ್ಸ್‌ನ ಒಂದು ಜಾಹೀರಾತು ಕಣ್ಣಿಗೆ ಬೀಳುತ್ತದೆ. ಡ್ರೈವ್ ಮಾಡುವಾಗ ಈ ಜಾಹೀರಾತಿನತ್ತ ಗಮನಕೊಡಬೇಡಿ ಎಂಬ ಎಚ್ಚರಿಕೆಯನ್ನೂ ಅವರೇ ನೀಡಿರುತ್ತಾರೆ.

ಕೇವಲ ಹದಿನೈದು ವರ್ಷಗಳಲ್ಲಿ ಹೆಮ್ಮರವಾಗಿ ಬೆಳೆದಿರುವ ಈ ಸಂಸ್ಥೆಯ ಹಿಂದಿನ ದುಡಿಯುವ ಕೈ, ಯೋಚಿಸುವ ಮಿದುಳಾಗಿ ಇರುವವರು ಇಬ್ಬರು. ಒಬ್ಬರು ಸತೀಶ್‌, ಇನ್ನೊಬ್ಬರು ದಯಾನಂದ. ದಯಾನಂದ ಅವರ ಮಾತುಗಳಲ್ಲೇ ಕೇಳಿ ಈ ಒಂದೂವರೆ ದಶಕದ ಪಯಣ.

‘ಅದಾಗ ಪದವಿ ಮುಗಿದಿತ್ತು. ವಜ್ಜಲ ನನ್ನ ಗ್ರಾಮ. ನಾನು ಮೂರನೆಯ ಮಗ. ಕೆಲಸದ ಅಗತ್ಯವಿತ್ತು. ಅಪ್ಪ ಕೃಷಿಕ. ಅಮ್ಮ ಗ್ರಾಮದಲ್ಲೊಂದು ಗೂಡಂಗಡಿ ನೋಡಿಕೊಳ್ಳುತ್ತಿದ್ದಳು. ಅಷ್ಟೆ ವ್ಯಾಪಾರ ಗೊತ್ತಿದ್ದಿದ್ದು. ಬೆಂಗಳೂರಿಗೆ ಬಂದರೆ ಉದ್ಯೋಗಾವಕಾಶಗಳು ಸಿಗುತ್ತವೆ. ಒಂದಷ್ಟು ಸಂಬಳ ಬರುತ್ತದೆ ಎಂಬ ಭರವಸೆಯಿಂದ ಬೆಂಗಳೂರು ಬಸ್‌ ಹತ್ತಿದ್ದು.

‘ಬೆಳಗ್ಗೆ ಬಂದಿಳಿದಾಗ ಸಂಬಂಧಿಕರ ವಿಳಾಸ ಬಿಟ್ಟರೆ ಮತ್ತೇನೂ ಗೊತ್ತಿರದ ಊರು. ಕೆಲಸಕ್ಕೆ ಸೇರಬೇಕಿದೆ. ಕೈನಲ್ಲೊಂದು ವಾಚಿಲ್ಲ ಎಂದೆನಿಸಿತು. ರಸ್ತೆ ಬದಿಗೆ ವಾಚ್‌ ಮಾರುತ್ತಿದ್ದರು. ಮೊದಲಸಲ ಬೆಂಗಳೂರಿಗೆ ಬಂದಿದ್ದು ಎನ್ನುವುದು ನನ್ನ ಮುಖದ ಮೇಲೆ ಬರೆದಷ್ಟು ಸ್ಪಷ್ಟವಾಗಿತ್ತು. ವಾಚಿನ ಬೆಲೆ ಕೇಳಿದೆ. 750 ಹೇಳಿದ. ಚೌಕಾಶಿ ಮಾಡಿ, 350ಕ್ಕೆ ಕೊಂಡಿದ್ದಾಯಿತು. ಆದರೆ ಅಂದು ಕೊಂಡಿದ್ದು ಬರೀವಾಚಲ್ಲ.. ಒಳ್ಳೆಯ ಸಮಯವೆಂದೂ ಹಲವಾರು ಸಲ ಅನಿಸಿದೆ.

‘ಮಾಮನ ಮನೆಗೆ ಹೋದೆ. ಪೀಣ್ಯದಲ್ಲಿ ಒಂದಷ್ಟು ಕಂಪನಿಗಳಿಗೆ ಓಡಾಡಿ ಬಂದಿದ್ದಾಯಿತು. ಎಲ್ಲೆಡೆ 2–3 ಸಾವಿರ ಸಂಬಳ ನಿಗದಿ ಪಡಿಸುವುದಾಗಿ ಹೇಳುತ್ತಿದ್ದರು. ಕೆಲಸಗಳಲ್ಲಿಯೂ ಮುಂದುವರಿಯುವ ಯಾವುದೇ ಮಾರ್ಗಗಳಿರಲಿಲ್ಲ. ಒಮ್ಮೆ ಗುಮಾಸ್ತನಾಗಿ ಸೇರಿದರೆ ಕೊನೆಯವರೆಗೂ ಗುಮಾಸ್ತನಾಗಿಯೇ ಇರಬೇಕಾಗಿತ್ತು. ಈ ಪುಡಿಗಾಸಿನ ಸಂಬಳಕ್ಕೆ ಊರು ಬಿಟ್ಟು ಇಷ್ಟು ದೂರ ಬರಬೇಕೆ? ಒಂಟಿಯಾಗಿರುವಾಗ ಇದು ಸಾಕೆನಿಸುತ್ತದೆ. ಆದರೆ ಸಂಸಾರವಂದಿಗನಾದರೆ... ಇವೆಲ್ಲ ಯೋಚನೆಗಳು ಕಾಡುತ್ತಿದ್ದವು. ಆಗಲೇ ಆದದ್ದಾಗಲಿ ಊರಿಗೆ ಮರಳಿದರಾಯಿತು ಎಂದೆನಿಸಿತು. ಮಾವನಿಗೂ ಹಾಗೇ ಎನಿಸಿತು. ಒಂದಷ್ಟು ಗಾಡಿಖರ್ಚು ಕೈಗಿರಿಸಿದರು. ಊರಿಗೆ ಬಸ್‌ ಹತ್ತಲು ಸಜ್ಜಾದೆ.

‘ಒಳಮನಸು ಒಪ್ಪುತ್ತಿಲ್ಲ. ಇಷ್ಟು ದೂರ ಬಂದು ಮಾಡಿದ್ದೇನು? ಓದಿ ಏನುಪಯೋಗವಾಯಿತು? ಅಪ್ಪ ಅಮ್ಮ ಕಷ್ಟ ಪಟ್ಟು ಓದಿಸಿದ್ದು, ಒಬ್ಬನಿಗಾದರೂ ನೌಕರಿ ಸಿಗಲಿ ಎಂದೇ ಅಲ್ಲವೇ.. ಮಿಶ್ರ ಭಾವನೆಗಳು. ದಿನಪತ್ರಿಕೆ ಓದಲು ಕೊಂಡುಕೊಂಡೆ. ಅದರಲ್ಲೊಂದು ಜಾಹೀರಾತು ಕಾಣಿಸಿತು.

‘ಊಟ ವಸತಿ ಉಚಿತ. ತಿಂಗಳಿಗೆ 10ರಿಂದ 12 ಸಾವಿರ ರೂಪಾಯಿ ಸಂಬಳ ಎಂದು ಬರೆದಿತ್ತು. ಅಲ್ಲಿದ್ದ ಸಂಪರ್ಕ ಸಂಖ್ಯೆಗೆ ಫೋನ್‌ ಮಾಡಿ, ವಿಳಾಸ ಕೇಳಿಕೊಂಡೆ. ಕಲ್ಯಾಣ ನಗರದಲ್ಲಿಯ ವಿಳಾಸ ಅದು. ಆಶಾವಾದ ಸಣ್ಣ ಎಳೆಯಾಗಿ ಕಂಡಿತ್ತು ಆ ಸ್ಥಳ. ಅಲ್ಲಿ ಹೋದೆ. ಸಂದರ್ಶನದ ಸಮಯ ಮುಗಿದಿದೆ ಎಂದು ರಿಸೆಪ್ಶನ್‌ನಲ್ಲಿದ್ದ ಬೆಂಗಳೂರು ಸುಂದರಿ ಉಲಿದಾಗ ಮತ್ತೆ ನಿರಾಸೆಯ ಕಾರ್ಮೋಡ.

‘ಹಟ ಬಿಡಲಿಲ್ಲ. ನಾನು ದೂರದ ಊರಿನಿಂದ ಬಂದವನು. ಒಂದು ಅವಕಾಶ ಕೊಡಿ ಎಂದೆ. ವಸತಿ ವ್ಯವಸ್ಥೆ ಇತ್ತಲ್ಲ! ಅಲ್ಲೇ ಉಳಿದುಕೊಳ್ಳಲು ಹೇಳಿದರು. ಒಂದು ದೊಡ್ಡ ಹಾಲ್‌ ಅದರಲ್ಲೇ ಒಂದಷ್ಟು ಜನ ಮಲಗಿಕೊಂಡಿದ್ದರು. ಮರುದಿನ ಎದ್ದ ಕೂಡಲೇ ಸ್ನಾನ ಮಾಡಿ, ಮುಂದಿನ ಕೆಲಸಕ್ಕೆ ತಯಾರಾಗಲು ಆದೇಶ ಬಂದಿತು. ಸ್ನಾನ ಎಲ್ಲಿ? ಅದೂ ಸಾಮೂಹಿಕ ಸ್ನಾನವೇ. ನಾಲ್ಕು ಗೋಡೆಗಳ ನಡುವೆ ಮೈತೊಳೆದು ಅಭ್ಯಾಸವಿದ್ದ ನನಗೆ, ಇಲ್ಲಿ ಎಲ್ಲವೂ ಅಯೋಮಯವೆನಿಸಿತು. ಅದು ನೇರ ಮಾರುಕಟ್ಟೆಯ ವ್ಯವಸ್ಥೆ. ಅಲ್ಲಿ ನನ್ನಂತೆ ಹಲವರಿದ್ದರು. ಮೊದಲ ದಿನವಾಗಿದ್ದರಿಂದ ಒಂದಷ್ಟು ಡಬ್ಬಗಳನ್ನು ನೀಡಿ, ಮಾರಾಟ ಮಾಡಿಕೊಂಡು ಬರಬೇಕು ಎಂದು ಹೇಳಿದರು. ನನ್ನೊಟ್ಟಿಗೆ ಒಂದು ತಂಡವಿತ್ತು. ಆ ತಂಡಕ್ಕೆ ಒಬ್ಬ ನಾಯಕನೂ ಇದ್ದ. ಆಫೀಸಿನಿಂದ ಹೊರಟೆವು. ಮಿಲ್ಟ್ರಿ ಕ್ಯಾಂಪಸ್‌ಗೆ ಮಧ್ಯಾಹ್ನ ತಲುಪಿದೆವು.

‘ಮಧ್ಯಾಹ್ನದ ಸಮಯವಾಗಿದ್ದರಿಂದ ಅಲ್ಲಿಯ ಅಧಿಕಾರಿಗಳು ಜೋರು ಮಾಡಿದರು. ಅಷ್ಟು ಹೊತ್ತು ಇಲ್ಲದ ಸೆಕ್ಯುರಿಟಿ ಆಗ ಪ್ರತ್ಯಕ್ಷನಾಗಿದ್ದ. ನಮ್ಮೆಲ್ಲ ಚೀಲಗಳನ್ನು ಕಸಿದಿರಿಸಿಕೊಂಡಿದ್ದ. ಆ ಕ್ಷಣದ ಅಸಹಾಯಕತನ, ಅಸುರಕ್ಷೆಯ ಭಾವ... ಬೆಂಗಳೂರು ಅದೆಷ್ಟು ಹೊಸದೆನಿಸಿತ್ತು! ಅದೆಷ್ಟು ಅಪರಿಚಿತವೆನಿಸಿತ್ತು. ಸಂಜೆಯವರೆಗೂ ಅಲ್ಲಿಯೇ ಸೆಕ್ಯುರಿಟಿಗೆ ಅಂಗಲಾಚುತ್ತ ಕುಳಿತಿದ್ದೆ. ಸೂರ್ಯ ದಣಿದು ಮನೆಗೆ ಹೋಗುವಾಗ ಗೋಗರೆದು ಬ್ಯಾಗು ಇಸಿದುಕೊಂಡೆ. ಕಚೇರಿಗೆ ವಾಪಸಾಗಿ ಎಲ್ಲವನ್ನೂ ಮರಳಿಸಿ ಊರಿಗೆ ಹೋಗಬೇಕೆಂದು ಸಿದ್ಧನಾದೆ.

‘ಆಗ ಅಲ್ಲಿಯ ಹಿರಿಯರೊಬ್ಬರು ಸಮಾಧಾನ ಮಾಡಿದರು. ‘ಒಂದಷ್ಟು ದಿನ ಕಷ್ಟವೆನಿಸುತ್ತದೆ. ನಾವೆಲ್ಲ ಇದೀಗ 8–10 ಸಾವಿರ ಹಣ ಗಳಿಸುತ್ತಿದ್ದೇವೆ. ಮನೆಗೂ ಒಂದಷ್ಟು ಹಣ ಕಳುಹಿಸುತ್ತಿದ್ದೇವೆ. ಒಂದಷ್ಟು ದಿನ ಪ್ರಯತ್ನಿಸು. ಅದಾಗದಿದ್ದಲ್ಲಿ ಮನೆಗೆ ಯಾವಾಗ ಬೇಕಾದರೂ ವಾಪಸಾಗಬಹುದು’ ಎಂದರು.

‘ಅವರ ಪ್ರೇರಣೆಯ ಮಾತುಗಳು ನನ್ನಲ್ಲಿ ಸೈರಣೆಯನ್ನು ಹುಟ್ಟು ಹಾಕಿತು. ಅದಾದ ಕೆಲವು ದಿನಗಳಲ್ಲಿಯೇ ಸತೀಶ್‌ ಅವರು ಆ ಸಂಸ್ಥೆಯ ಹಿರಿಯ ಉದ್ಯೋಗಿಯಾಗಿದ್ದರು. ಅವರು ಒಮ್ಮೆ ಪರಿಶೀಲನೆಗೆ ಬಂದರು. ನನ್ನನ್ನು ನೋಡಿದವರೇ ನೀನ್ಯಾಕೆ ಮಾರುಕಟ್ಟೆಗೆ ಓಡಾಡ್ತೀಯ.. ಇಲ್ಲಿಯೇ ಕಚೇರಿಯ ಕೆಲಸ ನೋಡಿಕೊ ಎಂದರು. ಅನುಭವ ಮತ್ತು ಬೆಂಗಳೂರಿನ ಬದುಕು ಹಲವಾರು ಪಾಠಗಳನ್ನು ಕಲಿಸಿಕೊಟ್ಟಿತ್ತು. ಸತೀಶ್‌ ಅವರೊಂದಿಗೆ ಗೌರವದೊಂದಿಗೆ ಸ್ನೇಹವೂ ಬೆಳೆಯುತ್ತಿತ್ತು. ದಿನಗಳು ಬದುಕನ್ನು ಮುಂದೆಚಲಿಸುವಂತೆ ಮಾಡುತ್ತಿದ್ದವು. ಕೆಲವೊಮ್ಮೆ ನಾವೂ ನೂಕುತ್ತಿದ್ದೆವು.

‘ಒಮ್ಮೆ ನಮ್ಮ ನೆರೆಯವರು ಬಂದು ಸಹಾಯ ಕೇಳಿದರು. ಅವರ ಸ್ನೇಹಿತರು ಒಂದಷ್ಟು ಬಂಡವಾಳ ಹಾಕಿ ಒಂದು ಅಪಾರ್ಟ್‌ಮೆಂಟ್‌ ನಿರ್ಮಿಸಿದ್ದರು. ಒಂದು ವರ್ಷವಾದರೂ ಯಾವುದೂ ಮಾರಾಟವಾಗಿರಲಿಲ್ಲ. ಬ್ಯಾಂಕಿಗೆ ಬಡ್ಡಿ ಕಟ್ಟುವುದರಲ್ಲಿ ಅವರಿಗೂ ಸಾಕಾಗಿತ್ತು. ಅವರ ಆ ಅಪಾರ್ಟ್‌ಮೆಂಟ್‌ಗಳನ್ನು ಮಾರಾಟ ಮಾಡಲು ಕೇಳಿಕೊಂಡಿದ್ದರು. ಒಂದು ತಿಂಗಳ ಅವಧಿಯಲ್ಲಿ ನಾಟಕೀಯವೆಂಬಂತೆ ಸತೀಷ್‌ ಮತ್ತು ನಾನು ಸೇರಿ ಅವುಗಳನ್ನು ಮಾರಾಟ ಮಾಡಿದ್ದೆವು. ಅದೂ ಒಂದೂವರೆ ಪಟ್ಟು ಹೆಚ್ಚಿನ ದರಕ್ಕೆ. ಆದರೆ ಆ ಮಾಲೀಕರು ನಂತರ ನಮ್ಮ ಪಾಲು ಕೊಡಲು ನಿರಾಕರಿಸಿದರು.

‘ಅಲ್ಲಿಂದಲೇ ರಿಯಲ್‌ ಎಸ್ಟೇಟ್‌ನ ಮೊದಲ ಪಾಠಗಳನ್ನು ಕಲಿತೆವು. ಅವರು ನೀಡಿದ ಲಾಭದ ಪಾಲನ್ನು ಬಳಸಲಿಲ್ಲ. ಕಾವಲ್‌ಬೈರಸಂದ್ರದಲ್ಲಿ ಒಂದು ನಿವೇಶನದ ಒಪ್ಪಂದ ಮಾಡಿಕೊಂಡೆವು. ನಲ್ವತ್ತು ಮನೆಗಳ ಸ್ಪ್ರಿಂಟ್‌ ಪ್ರೊಜೆಕ್ಟ್ ಅದು. ಅದಕ್ಕಾಗಿ ಟೇಬಲ್‌ ವರ್ಕ್‌ ಮಾಡಿಸಿಕೊಳ್ಳಬೇಕಾದಾಗ ಎಲ್ಲ ಒಳಸುಳಿವುಗಳೂ ಗೊತ್ತಾದವು. ವಿದ್ಯುತ್‌ ಸಂಪರ್ಕದಿಂದ ಆರಂಭಿಸಿ, ಕೂಲಿ ಕಾರ್ಮಿಕರವರೆಗೆ ಎಲ್ಲವೂ ಸವಾಲುಗಳೇ ಆಗಿದ್ದವು. ಆಮೇಲೆ ಒಂದೊಂದೇ ಜೋಡಿಸಲಾರಂಭಿಸಿದೆವು.

‘ಗುಣಮಟ್ಟದಲ್ಲಿ ರಾಜಿ ಆಗಬಾರದು ಇದು ನಮ್ಮ ಮೊದಲ ಸೂತ್ರವಾಗಿತ್ತು. ಎರಡನೆಯದು ಹೊರಗುತ್ತಿಗೆ ನೀಡಬಾರದು. ದಾಖಲಾತಿಗಳು ಸಮರ್ಪಕವಾಗಿರಬೇಕು. ಅದಕ್ಕೆ ರಾಷ್ಟ್ರೀಕೃತ ಬ್ಯಾಂಕಿನಿಂದ ಸಾಲ ಸೌಲಭ್ಯ ದೊರೆಯುತ್ತದೆ. ಅವರು ಎಲ್ಲವನ್ನೂ ಪರಿಶೀಲಿಸುತ್ತಾರೆ ಎಂಬ ಖಾತ್ರಿ ಇರುತ್ತದೆ. ಉಳಿದಂತೆ ಎಲ್ಲವೂ ನಮ್ಮ ನಿಗರಾಣಿಯಲ್ಲಿಯೇ ಆಗಬೇಕು. ಇದು ಎರಡನೆಯ ಸೂತ್ರವಾಗಿತ್ತು. ಮೂರನೆಯದು ಬೆಂಗಳೂರಿಗೆ ಬಂದವರಿಗೆಲ್ಲ ಸ್ವಂತ ಸೂರೊಂದು ಇರಬೇಕು. ಬಾಡಿಗೆ ಇಲ್ಲಿ ದುಬಾರಿ. ಬಾಡಿಗೆಯಷ್ಟೇ ಕಂತು ಕಟ್ಟಿದರೆ ಒಂದು ಆಸ್ತಿಯಂತೂ ಇರುತ್ತದೆ. ಮಧ್ಯಮವರ್ಗದವರ ಕನಸು ಒಂದು ಸ್ವಂತ ಸೂರು ಬೇಕೆನ್ನುವುದು. ಅದೇ ನಾಡಿಮಿಡಿತವನ್ನು ಹಿಡಿದು, ಸಣ್ಣ ಪ್ರೊಜೆಕ್ಟ್‌ಗಳನ್ನು ಯೋಜಿಸಿದೆವು. ಬಹುತೇಕ ಯುವಜನಾಂಗವೇ ಇಂದು ಮನೆಗಳ ಮಾಲೀಕರಾಗಿದ್ದಾರೆ. ಒಟ್ಟು 8500 ಮನೆಗಳನ್ನು ಮಾರಾಟ ಮಾಡಿದ್ದೇವೆ. 4500 ಮನೆಗಳು ಮಾರಾಟಕ್ಕೆ ಸಿದ್ಧವಾಗಿವೆ.

‘ನಮಗೆಂದೂ ಕೂಲಿ ಕಾರ್ಮಿಕರ ಕೊರತೆ ಕಂಡು ಬಂದಿಲ್ಲ. ಅವರಿಗಾಗಿ ವಾರಕ್ಕೆ ಒಮ್ಮೆ ವೈದ್ಯಕೀಯ ತಪಾಸಣೆ, ಭೇಟಿ ಇಟ್ಟುಕೊಳ್ಳುತ್ತೇವೆ. ಡಿ.ಎಸ್‌. ಮ್ಯಾಕ್ಸ್‌ ಆರಂಭವಾದಾಗ ನಾನು, ಸತೀಶ್‌ ಮತ್ತು ಆಶಾ ಸತೀಶ್‌ ಮೂವರಿದ್ದೆವು. ಇದೀಗ 5,000 ಜನರು ಉದ್ಯೋಗಿಗಳಾಗಿದ್ದಾರೆ. ನಮ್ಮ ಕುಟುಂಬ ಬೆಳೆದಿದೆ. ಉದ್ಯೋಗಿಗಳಿಗೂ ಸಾಕಷ್ಟು ಸವಲತ್ತುಗಳನ್ನು ನೀಡಿದ್ದೇವೆ. ಎಲ್ಲರೂ ಒಟ್ಟಾಗಿ ರಾಜ್ಯೋತ್ಸವ ಆಚರಿಸುತ್ತೇವೆ. ಕೇವಲ ಮನೆಗಳ ಸಮುಚ್ಚಯವನ್ನು ಮಾರಾಟ ಮಾಡುವ ಡೆವಲಪರ್‌ಗಳು ನಾವಲ್ಲ. ಎಲ್ಲರನ್ನೂ ಒಗ್ಗೂಡಿಸಿ, ಮಹಾಮನೆ ನಿರ್ಮಾಣ ಮಾಡಿದ್ದೇವೆ ಎಂಬ ಹೆಮ್ಮೆ ಇದೆ.

ಜೀವನದಲ್ಲಿ ಏಳು ಬೀಳುಗಳು ಇದ್ದದ್ದೇ. ನನಗೆ ಆಗೆಲ್ಲ ನೆನಪಾಗುವುದು ಅದೇ ಹಾಡು.. ಕೈಲಾಗದು ಎಂದು ಕೈಕಟ್ಟಿ ಕುಳಿತರೆ...’ 

ಮನೆ ಕೊಳ್ಳುವ ಮುನ್ನ

* ಬಾಡಿಗೆ ಮತ್ತು ತಿಂಗಳ ಕಂತಿಗೆ ಹೆಚ್ಚು ವ್ಯತ್ಯಾಸವಿರದಂತೆ ನೋಡಿಕೊಳ್ಳಿ

* ಅಗತ್ಯವಿರಲಿ, ಬಿಡಲಿ ರಾಷ್ಟ್ರೀಕೃತ ಬ್ಯಾಂಕಿನಿಂದ ಸಾಲ ಪಡೆಯಿರಿ

* ಮನೆ ಖರೀದಿಯಾದ ಕೂಡಲೆ ನೋಂದಣಿ ಮಾಡಿಸಿಕೊಳ್ಳಿ

* ಕ್ರಯ ಪತ್ರವನ್ನು ಸಮಗ್ರವಾಗಿ ಓದಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry