ಸೋಮವಾರ, ಮೇ 17, 2021
28 °C

`2020ಕ್ಕೆ ಸಣ್ಣಕಾರುಗಳದ್ದೇ ಕಾರುಬಾರು'

ಪ್ರಜಾವಾಣಿ ವಾರ್ತೆ/ ಸುಧೀಂದ್ರಪ್ರಸಾದ್ ಇ.ಎಸ್. Updated:

ಅಕ್ಷರ ಗಾತ್ರ : | |

ಪುಣೆ: `ಭಾರತದ ವಾಹನ ಮಾರಾಟ ಕ್ಷೇತ್ರವು ಈಗ ಮತ್ತಷ್ಟು ಸ್ಪರ್ಧಾತ್ಮಕವಾಗಿದೆ. ಈ ನಿಟ್ಟಿನಲ್ಲಿ ವಾಣಿಜ್ಯ ಬಳಕೆಯ ಮಾರಾಟದಲ್ಲಿನ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವುದರ ಜತೆಗೆ ಕಾರುಗಳ ಮಾರಾಟದಲ್ಲಿನ ಪ್ರಗತಿಗೆ ಶಕ್ತಿಮೀರಿ ಕೆಲಸ ಮಾಡಬೇಕಿದೆ' ಎಂದು ಟಾಟಾ ಮೋಟಾರ್ಸ್‌ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಕಾರ್ಲ್ ಸ್ಲಿಮ್ ಅಭಿಪ್ರಾಯಪಟ್ಟರು.ಬುಧವಾರ ನಡೆದ ಹಾರಿಜೋನ್ ನೆಕ್ಸ್ಟ್ ಕಾರ್ಯಕ್ರಮದಲ್ಲಿ ಆಧುನಿಕ ಸೌಲಭ್ಯ ಅಳವಡಿಸಿದ ಐದು ಕಾರುಗಳ ಎಂಟು ಮಾದರಿಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಕಳೆದ ಆರ್ಥಿಕ ವರ್ಷದಲ್ಲಿ ಕಾರುಗಳ ಮಾರಾಟದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿರಲಿಲ್ಲ. ಹೀಗಾಗಿ ಕಳೆದ ಡಿಸೆಂಬರ್‌ನಲ್ಲಿ ಈ ಹೊಸಬಗೆಯ ಕಾರ್ಯಯೋಜನೆಯನ್ನು ಸಿದ್ಧಪಡಿಸಿ ಉತ್ಪನ್ನಗಳ ಮೇಲ್ದರ್ಜೆ, ಗುಣಮಟ್ಟ, ಮಾರಾಟ ಹಾಗೂ ಸೇವೆಯಲ್ಲಿ ಗ್ರಾಹಕರಿಗೆ ಹೊಸಬಗೆಯ ಅನುಭೂತಿ ನೀಡಲು ತೀರ್ಮಾನಿಸಲಾಗಿದೆ. ಇದರ ಮುನ್ನುಡಿ ಎಂಬಂತೆ ಈ ಎಂಟು ಹೊಸ ಮಾದರಿಗಳನ್ನು ಪರಿಚಯಿಸಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.ಬಿಡುಗಡೆಗೊಂಡ ಕಾರುಗಳಲ್ಲಿ ಸಿಆರ್4 ಡೀಸೆಲ್ ಎಂಜಿನ್ ಹಾಗೂ ಫೆದರ್‌ಶಿಫ್ಟ್ ಗೇರ್ ಹಾಗೂ ಸಿಎನ್‌ಜಿ ಮತ್ತು ಪೆಟ್ರೋಲ್ ಎರಡರಲ್ಲೂ ಚಲಿಸಬಲ್ಲ ಇಮ್ಯಾಕ್ಸ್ ಮಾದರಿಯ ಕಾರುಗಳು ಹೆಚ್ಚಿನ ಗಮನ ಸೆಳೆದವು.ಗ್ರಾಹಕರಿಂದ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ನ್ಯಾನೋ ಕಾರುಗಳಲ್ಲಿದ್ದ ದೋಷ ಸರಿಪಡಿಸಿ ಅದನ್ನು ಹೊಸ ಸೌಲಭ್ಯಗಳೊಂದಿಗೆ ಮತ್ತಷ್ಟು ಮೇಲ್ದರ್ಜೆಗೆ ಏರಿಸಲಾಗಿದೆ. ನೂತನವಾಗಿ ಬಿಡುಗಡೆಗೊಂಡ ಕಾರುಗಳಲ್ಲಿ ಹೆಚ್ಚಿನ ಇಂಧನ ಕ್ಷಮತೆಯ ಇಂಡಿಗೊ ಇಸಿಎಸ್, ಇಂಡಿಕಾ, ನ್ಯಾನೋ, ಸುಮೋ ಗೋಲ್ಡ್, ಸಫಾರಿ ಸ್ಟಾರ್ಮ್ ಎಕ್ಸ್‌ಪ್ಲೋರ್ ಅನಾವರಣಗೊಂಡವು.2020ರ ಕಾರ್ಯಯೋಜನೆಯ ರೂಪುರೇಷೆ ಸಿದ್ಧಗೊಳಿಸಿದ್ದು ಅದರಲ್ಲಿ ಸಣ್ಣ ಕಾರುಗಳೇ ಅಗ್ರಸ್ಥಾನ ಪಡೆಯಲಿವೆ. ಜತೆಗೆ ತಯಾರಿಕೆಯಲ್ಲಿ ಗುಣಮಟ್ಟ ಕಾಪಾಡುವುದು ಹಾಗೂ ಮಾರಾಟ ಪ್ರಗತಿಯನ್ನು ವೃದ್ಧಿಗೊಳಿಸಲು ದೇಶದ ನೂರು ನಗರಗಳಲ್ಲಿ 150 ಹೊಸಬಗೆಯ ಡೀಲರ್‌ಶಿಪ್‌ಗಳನ್ನು ತೆರೆಯುವ ಯೋಜನೆಯನ್ನು ಟಾಟಾ ಮೋಟಾರ್ಸ್‌ ಹೊಂದಿದೆ. ಈ ಸಂಬಂಧ ಡೀಲರ್‌ಗಳೊಂದಿಗೆ ಟಾಟಾ ಮೋಟಾರ್ಸ್‌ ಮಾತುಕತೆ ನಡೆಸಿದೆ. ಇದರೊಂದಿಗೆ 11 ಹೊಸ ಸೇವಾ ಕಾರ್ಯಕ್ರಮಗಳನ್ನು ಪರಿಚಯಿಸುತ್ತಿರುವುದಾಗಿ ಟಾಟಾ ಮೋಟಾರ್ಸ್‌ನ ಸಾರ್ವಜನಿಕ ವಾಹನಗಳ ವ್ಯವಹಾರ ವಿಭಾಗದ ಅಧ್ಯಕ್ಷ ರಂಜಿತ್ ಯಾದವ್ ಈ ಸಂದರ್ಭದಲ್ಲಿ ತಿಳಿಸಿದರು.ಗುಜರಾತ್‌ನ ಸಾನಂದ್ ತಯಾರಿಕಾ ಘಟಕ ಕುರಿತು ಪ್ರತಿಕ್ರಿಯಿಸಿದ ಕಾರ್ಲ್ ಸ್ಲಿಮ್, ಈ ಘಟಕವು ಸಣ್ಣ ಕಾರುಗಳ ತಯಾರಿಕೆಗಷ್ಟೇ ಮೀಸಲಿಡಲಾಗಿದೆ. ತಯಾರಿಕೆ ಹಾಗೂ ಮಾರಾಟದ ನಡುವಿನ ವ್ಯತ್ಯಾಸ ಹೆಚ್ಚಿರುವುದರಿಂದ ಇದನ್ನು ಪುನರ್‌ಪರಿಶೀಲಿಸಲಾಗುವುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.