2020ರ ಒಲಿಂಪಿಕ್ಸ್‌ಗೆ ಟೋಕಿಯೊ ಆತಿಥ್ಯ

7
ಜಪಾನ್‌ನಲ್ಲಿ ಸಂಭ್ರಮದ ಹೊನಲು, ಪ್ರಾಥಮಿಕ ಸುತ್ತಿನಲ್ಲೇ ಹೊರಬಿದ್ದ ಮ್ಯಾಡ್ರಿಡ್‌

2020ರ ಒಲಿಂಪಿಕ್ಸ್‌ಗೆ ಟೋಕಿಯೊ ಆತಿಥ್ಯ

Published:
Updated:

ಬ್ಯೂನಸ್ ಐರಿಸ್ (ಐಎಎನ್‌ಎಸ್‌/ಎಎಫ್‌ಪಿ): 2020ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ರಾಷ್ಟ್ರ ಯಾವುದು ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಸ್ಪರ್ಧಾ ಕಣದಲ್ಲಿದ್ದ ಇಸ್ತಾನ್‌ಬುಲ್‌ ಮತ್ತು ಮ್ಯಾಡ್ರಿಡ್‌ ನಗರಗಳನ್ನು ಹಿಂದಿಕ್ಕಿದ ಟೋಕಿಯೊ ವಿಶ್ವದ ಶ್ರೇಷ್ಠ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುವ ಅವಕಾಶ ಎರಡನೇ ಬಾರಿ ತನ್ನದಾಗಿಸಿಕೊಂಡಿದೆ.ಇಲ್ಲಿ ಆರಂಭವಾದ ಅಂತರರಾಷ್ಟ್ರೀಯ ಒಲಿಂಪಿಕ್ಸ್‌ ಸಮಿತಿಯ 125ನೇ ಮಹಾ ಸಮ್ಮೇಳನದಲ್ಲಿ ಮತದಾನದ ಬಳಿಕ ಟೋಕಿಯೊ ನಗರವನ್ನು ಆಯ್ಕೆ ಮಾಡಲಾಯಿತು. ಶನಿವಾರ ನಡೆದ ಚುನಾವಣೆಯ ಅಂತಿಮ ಸುತ್ತಿನಲ್ಲಿ ಟೋಕಿಯೊ ಒಟ್ಟು 60 ಮತಗಳನ್ನು ಪಡೆದರೆ, ಟರ್ಕಿಯ ಇಸ್ತಾನ್‌ಬುಲ್‌ 36 ಮತಗಳನ್ನು ಪಡೆಯಿತು. ಸ್ಪೇನ್‌ನ ಮ್ಯಾಡ್ರಿಡ್ ಮೊದಲ ಸುತ್ತಿನಲ್ಲಿಯೇ ಸ್ಪರ್ಧೆಯಿಂದ ಹೊರ ಬಿದ್ದ ಕಾರಣ ಟೋಕಿಯ ಹಾದಿ ಸುಗಮವಾಯಿತು.ಜಪಾನ್‌ ರಾಷ್ಟ್ರದ ರಾಜಧಾನಿ ಟೋಕಿಯೊ ಒಲಿಂಪಿಕ್‌ ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುತ್ತಿರುವುದು ಇದು ಎರಡನೇ ಸಲ. 1964ರಲ್ಲಿ ಮೊದಲ ಸಲ ಇಲ್ಲಿ ಒಲಿಂಪಿಕ್ಸ್‌ ನಡೆದಿತ್ತು. ಈ ಮೂಲಕ ಮಹತ್ವದ ಕ್ರೀಡಾಕೂಟಕ್ಕೆ ಎರಡನೇ ಬಾರಿ ಆತಿಥ್ಯ ವಹಿಸಿದ ಏಷ್ಯಾದ ಮೊದಲ ರಾಷ್ಟ್ರ ಎನ್ನುವ ಕೀರ್ತಿಯನ್ನೂ ಜಪಾನ್‌ ತನ್ನದಾಗಿಸಿಕೊಳ್ಳಲಿದೆ. 2016ರ ಒಲಿಂಪಿಕ್ಸ್‌ಗೂ ಜಪಾನ್‌ ಬಿಡ್‌ ಸಲ್ಲಿಸಿತ್ತು. ಆದರೆ, ಈ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ಅವಕಾಶ ಬ್ರೆಜಿಲ್‌ನ ರಿಯೊ ಡಿ ಜನೈರೊ ಪಾಲಾಗಿತ್ತು.ಪ್ರಾಥಮಿಕ ಸುತ್ತಿನಲ್ಲಿ ಮೂರು ನಗರಗಳ ನಡುವೆ ಪ್ರಬಲ ಪೈಪೋಟಿ ಏರ್ಪಟ್ಟಿತ್ತು. ಈ ಹಂತದಲ್ಲಿ ಟೋಕಿಯೊ 42 ಮತ ಪಡೆದು ಅಂತಿಮ ಹಂತಕ್ಕೆ ಆಯ್ಕೆಯಾಯಿತು. ಇಸ್ತಾನ್‌ಬುಲ್‌ ಮತ್ತು ಮ್ಯಾಡ್ರಿಡ್  ತಲಾ 26 ಮತಗಳನ್ನು ಪಡೆದಿದ್ದವು. ಆದರೆ ಟೈ ಬ್ರೇಕರ್‌ನಲ್ಲಿ ಇಸ್ತಾನ್‌ಬುಲ್‌ 49–45 ಮತಗಳಿಂದ ಗೆಲುವು ಸಾಧಿಸಿ ಫೈನಲ್ ಸುತ್ತು ತಲುಪಿತಾದರೂ, ಟೋಕಿಯೊ ಎದುರು ನಿರಾಸೆ ಕಂಡಿತು.‘ಟೋಕಿಯೊ ತಾಂತ್ರಿಕವಾಗಿ ಸಾಕಷ್ಟು ಅಭಿವೃದ್ಧಿ ಸಾಧಿಸಿ ಮುಂಚೂಣಿಯಲ್ಲಿದೆ. ಸ್ಪರ್ಧೆಯಲ್ಲಿದ್ದ ಮೂರೂ ನಗರಗಳು ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲು ಸಮರ್ಥವಾಗಿದ್ದವು. ಆದರೆ, ಒಂದು ನಗರವನ್ನು ಮಾತ್ರ ಈ ಕ್ರೀಡಾಕೂಟಕ್ಕೆ ಆಯ್ಕೆ ಮಾಡಲು ನಮಗೆ ಅವಕಾಶವಿತ್ತು. ಯಾವುದೇ ಗೊಂದಲಕ್ಕೆ ಅವಕಾಶ ನೀಡದೇ ಸುರಕ್ಷಿತವಾಗಿ ಮಹತ್ವದ ಕ್ರೀಡಾಕೂಟವನ್ನು ಟೋಕಿಯೊ ನಡೆಸಲಿ. ಈ ಅವಕಾಶ ಪಡೆದ ಜಪಾನ್‌ಗೆ ಅಭಿನಂದನೆಗಳು’ ಎಂದು ಐಒಸಿ ಅಧ್ಯಕ್ಷ ಜಾಕಸ್‌ ರೋಗ್‌ ಹೇಳಿದರು.2020ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸುವ ಅವಕಾಶ ಗಿಟ್ಟಿಸಿದ ಸಂಭ್ರಮದಲ್ಲಿ ಜಪಾನ್‌ ಒಲಿಂಪಿಕ್ಸ್‌ ಸಮಿತಿ ಅಧ್ಯಕ್ಷ ಸುನೇಕಜಾ ತಕೇದಾ ಮಾತನಾಡಿ ‘ಒಲಿಂಪಿಕ್‌ ಕ್ರೀಡಾಕೂಟ ನಡೆಸುವ ಅವಕಾಶ ಲಭಿಸಿದ್ದು ಖುಷಿ ನೀಡಿದೆ. ಇದೊಂದು ವಿಶಿಷ್ಟ ಗೌರವ’ ಎಂದರು.ಟೋಕಿಯೊದಲ್ಲಿ ಸಂಭ್ರಮ: ಈ ವಿಷಯ ಗೊತ್ತಾಗುತ್ತಿದ್ದಂತೆ ಟೋಕಿಯೊ ನಗರದಲ್ಲಿ ಎಲ್ಲೆಲ್ಲೂ ಸಂಭ್ರಮವೋ ಸಂಭ್ರಮ. ಐಒಸಿ ಮಹಾ ಸಮ್ಮೇಳನದ ಸಭೆಯಲ್ಲಿ ನಡೆಯುತ್ತಿದ್ದ ಚರ್ಚೆಯನ್ನು ನಗರದ ಅಲ್ಲಲ್ಲಿ ದೊಡ್ಡ ಪರದೆಯ ಮೇಲೆ ತೋರಿಸಲಾಗುತ್ತಿತ್ತು. ಐಒಸಿ ಅಧ್ಯಕ್ಷ ರೋಗ್‌ ಟೋಕಿಯೊ ಹೆಸರನ್ನು ಬಹಿರಂಗ ಮಾಡುತ್ತಿದ್ದಂತೆ ಕ್ರೀಡಾಪ್ರೇಮಿಗಳು ಕುಣಿದು ಕುಪ್ಪಳಿಸಿದರು.

ಒಲಿಂಪಿಕ್ಸ್‌: ಕುಸ್ತಿ ಸ್ಥಾನ ಗಟ್ಟಿ

ಭಾರತದ ಕುಸ್ತಿ ಪ್ರೇಮಿಗಳ ಮನಸ್ಸು ನಿರಾಳವಾಗಿದೆ. ಸಾಕಷ್ಟು ತಳಮಳ ಮತ್ತು ಆತಂಕಕ್ಕೆ ಒಳಗಾಗಿದ್ದ ‘ಪೈಲ್ವಾನ’ರ ಮೊಗದಲ್ಲಿ ನಗೆ ಅರಳಿದೆ. ಇದಕ್ಕೆಲ್ಲಾ ಕಾರಣ 2020ರ ಒಲಿಂಪಿಕ್ಸ್‌ನಲ್ಲೂ ಕುಸ್ತಿ ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಂಡಿದ್ದು. ಸ್ಪರ್ಧಾ ಕಣದಲ್ಲಿದ್ದ ಸ್ಕ್ವಾಷ್‌, ಬೇಸ್‌ಬಾಲ್‌/ಸಾಫ್ಟ್‌ ಬಾಲ್‌ ಕ್ರೀಡೆಯನ್ನು ಸೋಲಿಸಿ ಕುಸ್ತಿ ಒಲಿಂಪಿಕ್ಸ್‌ನಲ್ಲಿ ಉಳಿದುಕೊಂಡಿತು.ಪ್ರಾಥಮಿಕ ಸುತ್ತಿನಲ್ಲಿ ಒಟ್ಟು 95 ಮತಗಳಲ್ಲಿ ಕುಸ್ತಿ 49 ಮತಗಳನ್ನು ಬಾಚಿಕೊಂಡಿತು. ಬೇಸ್‌ಬಾಲ್‌/ಸಾಫ್ಟ್‌ ಬಾಲ್‌ 24 ಮತ್ತು ಸ್ಕ್ವಾಷ್‌ 22 ಮತಗಳನ್ನು ಪಡೆದು ನಂತರದ ಸ್ಥಾನಕ್ಕೆ ತೃಪ್ತಿಪಟ್ಟವು. ಐಒಸಿ ಮಹಾ ಸಮ್ಮೇಳನದಲ್ಲಿ ನಡೆದ ಚುನಾವಣೆಯಲ್ಲಿ ಇದರ ಆಯ್ಕೆ ನಡೆಯಿತು.

ಜಾಗತಿಕ ಮಟ್ಟದಲ್ಲಿ ಭಾರತದ ಸಾಮರ್ಥ್ಯ ಇರುವುದೇ ಕುಸ್ತಿಯಲ್ಲಿ. ಹೋದ ವರ್ಷದ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಭಾರತ ಜಯಿಸಿದ್ದ ಆರು ಪದಕಗಳಲ್ಲಿ ಎರಡು ಪದಕ ಬಂದಿದ್ದು ಕುಸ್ತಿಯಲ್ಲಿಯೇ ಎನ್ನುವುದು ಇದಕ್ಕೆ ಸಾಕ್ಷಿ.ಟೋಕಿಯೊ ಒಲಿಂಪಿಕ್ಸ್‌ನಲ್ಲೂ ಕುಸ್ತಿ ಸ್ಥಾನ ಉಳಿಸಿಕೊಂಡಿದ್ದು ‘ಪೈಲ್ವಾನ’ರಾದ ಸುಶೀಲ್‌ ಕುಮಾರ್‌ ಮತ್ತು ಯೋಗೇಶ್ವರ್‌ ದತ್‌ ಸೇರಿದಂತೆ ಇತರ ಕುಸ್ತಿ ಪಟುಗಳು  ಸಂತಸಕ್ಕೆ ಕಾರಣವಾಗಿದೆ. ‘ಯುವ ಕುಸ್ತಿಪಟು­ಗಳು ಇನ್ನಷ್ಟು ಸಾಧನೆ ಮಾಡಲು ಇದು ಪ್ರೇರಣೆಯಾಗಿದೆ’ ಎಂದು ಸುಶೀಲ್‌ ಸಂತಸ ವ್ಯಕ್ತಪಡಿಸಿದ್ದಾರೆ.‘ಜಪಾನ್‌ಗೆ 2020ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲು ಅವಕಾಶ ಸಿಕ್ಕಾಗಲೇ ಕುಸ್ತಿ ಕೂಡಾ ಸ್ಥಾನ ಉಳಿಸಿಕೊಳ್ಳುತ್ತದೆ ಎನ್ನುವ ವಿಶ್ವಾಸ ನನಗಿತ್ತು. ನನ್ನ ನಿರೀಕ್ಷೆ ನಿಜವಾಗಿದೆ’ ಎಂದು ಭಾರತ ಕುಸ್ತಿ ಫೆಡರೇಷನ್‌ ಅಧ್ಯಕ್ಷ ರಾಜ್‌ ಸಿಂಗ್‌ ಹೇಳಿದ್ದಾರೆ. ಕುಸ್ತಿ ‘ಮರುಜೀವ’ ಪಡೆದ ಕಾರಣ ಅಮಾನತುಗೊಂಡಿರುವ ಭಾರತ ಒಲಿಂಪಿಕ್ಸ್‌ ಸಂಸ್ಥೆ ಕೂಡಾ ನಿಟ್ಟುಸಿರು ಬಿಟ್ಟಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry