ಶನಿವಾರ, ಮೇ 21, 2022
28 °C

2030ಕ್ಕೆ ಇಂಧನ ಸ್ವಾವಲಂಬನೆ: ವೀರಪ್ಪ ಮೊಯಿಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಭಾರತ 2030ರ ವೇಳೆಗೆ ಇಂಧನ ಸ್ವಾವಲಂಬನೆ ಸಾಧಿಸಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಎಂ.ವೀರಪ್ಪ ಮೊಯಿಲಿ ಶನಿವಾರ ಹೇಳಿದರು.ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮತ್ತು ಗೇಲ್ (ಇಂಡಿಯಾ) ಕಂಪೆನಿ ವತಿಯಿಂದ ಬೆಳಗುಂಬದಲ್ಲಿ ನಿರ್ಮಿಸಿರುವ ಶ್ರವಣದೋಷವುಳ್ಳ ಮಕ್ಕಳ ಹಾಸ್ಟೆಲ್ ಕಟ್ಟಡ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಶೇ 80ರಷ್ಟು ಇಂಧನವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ 160 ಬಿಲಿಯನ್ ಡಾಲರ್ ವಿದೇಶಿ ವಿನಿಮಯ ವೆಚ್ಚವಾಗುತ್ತಿದೆ. 2020ರ ವೇಳೆಗೆ ಶೇ 50ರಷ್ಟು ಮತ್ತು 2025ರ ವೇಳೆಗೆ ಶೇ 75ರಷ್ಟು ಇಂಧನ ಸ್ವಾವಲಂಬನೆ ಸಾಧಿಸಲಾಗುವುದು ಎಂದು ತಿಳಿಸಿದರು.ದಾಬೋಲ್- ಬೆಂಗಳೂರು ಸಿಎನ್‌ಜಿ ಗ್ಯಾಸ್ ಪೈಪ್‌ಲೈನ್ ರೂ.4994 ಕೋಟಿ ವೆಚ್ಚದ ಯೋಜನೆಯನ್ನು 14 ತಿಂಗಳಲ್ಲಿ ಮುಕ್ತಾಯ ಮಾಡಲಾಯಿತು. ರಾಜ್ಯದ 10 ಜಿಲ್ಲೆಗಳಿಗೆ ಪ್ರಯೋಜನವಾಗಲಿದೆ. ಈ ಜಿಲ್ಲೆಯ ವ್ಯಾಪ್ತಿಯ ನಗರಗಳಿಗೆ ಗ್ಯಾಸ್ ವಿತರಣೆ ಮಾಡಲು ಅನುಕೂಲವಾಗುವಂತೆ ಸಿಎನ್‌ಜಿ ವಿತರಣಾ ಸ್ಟೇಷನ್ ಆರಂಭಿಸುವ ಬಗ್ಗೆ ಜುಲೈ 26ರಂದು ಮುಖ್ಯಮಂತ್ರಿಯೊಂದಿಗೆ ಮಾತುಕತೆ ನಡೆಸಲು ಸಭೆ ಕರೆದಿರುವುದಾಗಿ ಅವರು ತಿಳಿಸಿದರು.ಗೇಲ್ ಕಂಪೆನಿ ಈಗಾಗಲೇ 15 ಸಾವಿರ ಕಿ.ಮೀ. ಗ್ಯಾಸ್ ಪೈಪ್‌ಲೈನ್ ಅಳವಡಿಸಿದೆ. ಮುಂದಿನ 10 ವರ್ಷದಲ್ಲಿ ಇನ್ನೂ 16 ಸಾವಿರ ಕಿ.ಮೀ. ಗ್ಯಾಸ್ ಪೈಪ್‌ಲೈನ್ ಅಳವಡಿಸಲಾಗುವುದು. ಚಿತ್ರದುರ್ಗದಿಂದ ಮಂಗಳೂರು ಮಾರ್ಗದ 375 ಕಿ.ಮೀ. ಸರ್ವೆ ಕಾರ್ಯ ಮಳೆಯಿಂದ ಕುಂಠಿತವಾಗಿದೆ. ಅಕ್ಟೋಬರ್ ಒಳಗಾಗಿ ಯೋಜನೆ ಕೈಗೆತ್ತಿಕೊಳ್ಳಲಾಗುವುದು. ಬೆಂಗಳೂರು- ಮಂಗಳೂರು ಮಾರ್ಗವನ್ನು ವಾಣಿಜ್ಯ ಕಾರಿಡಾರ್ ಎಂದು ಘೋಷಿಸಲಾಗಿದ್ದು, ಗ್ಯಾಸ್ ಆಧಾರಿತ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.ಮುಂಬೈನಲ್ಲಿ ಸಿಎನ್‌ಜಿ ಗ್ಯಾಸ್ ಬಳಕೆ ಮಾಡುವ ಆಟೊ ಮತ್ತಿತರ ವಾಹನ ಚಾಲಕರಿಗೆ ಉಚಿತವಾಗಿ ವಿಮೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಈ ಯೋಜನೆ ಜಾರಿಗೆ ನಿರ್ಧರಿಸಲಾಗಿದೆ. ರಾಜ್ಯ ಗ್ಯಾಸ್ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪಿಸಿದರೆ ಕೇಂದ್ರ ಸಹಕಾರ ನೀಡಲಿದೆ. ಈಗಾಗಲೇ ಬಿಡದಿಯಲ್ಲಿ ಗ್ಯಾಸ್ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪಿಸಲಾಗುತ್ತಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ ರೂ. 800 ಕೋಟಿ ಉಳಿತಾಯವಾಗಲಿದೆ ಎಂದರು.ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ಶಿರಾದಲ್ಲಿ ಗ್ಯಾಸ್ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪನೆ ಮಾಡಿದರೆ ಅಭಿವೃದ್ಧಿಗೆ ಪೂರಕವಾಗಲಿದೆ. ಈ ಬಗ್ಗೆ ಸಿಎಂ ಜತೆ ಚರ್ಚಿಸಲಾಗುವುದು ಎಂದರು.ಸಂಸದ ಜಿ.ಎಸ್.ಬಸವರಾಜು, ಶಾಸಕರಾದ ಡಾ.ರಫಿಕ್‌ಅಹ್ಮದ್, ಎಂ.ಆರ್.ಹುಲಿನಾಯ್ಕರ್, ಗ್ರಾ.ಪಂ. ಅಧ್ಯಕ್ಷೆ ಪುಟ್ಟಲಕ್ಷಮ್ಮ , ಗೇಲ್ ಇಂಡಿಯಾ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ತ್ರಿಪಾಠಿ, ಕೆಎಸ್‌ಐಡಿಸಿ ವ್ಯವಸ್ಥಾಪಕ ನಿರ್ದೇಶಕ ಡಾ.ಸಿ.ಸೋಮಶೇಖರ್, ಜಿಲ್ಲಾಧಿಕಾರಿ ಕೆ.ಎಸ್.ಸತ್ಯಮೂರ್ತಿ, ಸಿಇಒ ಗೋವಿಂದರಾಜು ಹಾಜರಿದ್ದರು.ಆಧಾರ್; ಸಮಯ ವಿಸ್ತರಣೆ

ಪ್ರಜಾವಾಣಿ ವಾರ್ತೆ

ತುಮಕೂರು: ಅಡುಗೆ ಅನಿಲ ಸಹಾಯಧನ ನೇರ ವರ್ಗಾವಣೆ ಯೋಜನೆಗೆ ಆಧಾರ್ ಕಾರ್ಡ್ ಸಂಖ್ಯೆ ನೀಡುವಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಗಳು ತಮ್ಮ ಗಮನಕ್ಕೆ ಬಂದಿವೆ. ಮತ್ತಷ್ಟು ಸಮಯ ವಿಸ್ತರಣೆ ಬಗ್ಗೆ ಅಧಿಕಾರಿಗಳ ಸಭೆ ಕರೆದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಎಂ.ವೀರಪ್ಪಮೊಯಿಲಿ ಹೇಳಿದರು.ದೇಶದ 20 ಜಿಲ್ಲೆಗಳಲ್ಲಿ ಯೋಜನೆ ಜಾರಿ ಮಾಡಲಾಗಿದೆ. ಆಧಾರ್ ಕಾರ್ಡ್ ವಿತರಣೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲಾಗುವುದು ಎಂದು ಶನಿವಾರ ಪತ್ರಕರ್ತರೊಂದಿಗೆ ಮಾತನಾಡುತ್ತಾ ತಿಳಿಸಿದರು.ರಾಜ್ಯ ಬಜೆಟ್ ಉತ್ತಮವಾಗಿದೆ. ಸಂಪನ್ಮೂಲ ಕೊರತೆ ಸರಿದೂಗಿಸಲಾಗುತ್ತದೆ. ಕೇಂದ್ರದಲ್ಲಿ ಯುಪಿಎ ಬಲಯುತವಾಗಿದೆ. ಆದರೆ ಎನ್‌ಡಿಎ ಒಡೆದು ಛಿದ್ರವಾಗುತ್ತಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಒಂದೂವರೆ ಗಂಟೆ ತಡ

ಪ್ರಜಾವಾಣಿ ವಾರ್ತೆ

ತುಮಕೂರು: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಮತ್ತು ಗೇಲ್ (ಇಂಡಿಯಾ) ಕಂಪೆನಿ ನಗರದ ಹೊರವಲಯದ ಬೆಳಗುಂಬದಲ್ಲಿ ನಿರ್ಮಿಸಿರುವ ಶ್ರವಣದೋಷವುಳ್ಳ ಮಕ್ಕಳ ಹಾಸ್ಟೆಲ್ ಕಟ್ಟಡ ಉದ್ಘಾಟನೆ ಕಾರ್ಯಕ್ರಮ ಒಂದುವರೆ ಗಂಟೆ ತಡವಾಗಿ ಆರಂಭವಾಯಿತು. ಅಲ್ಲದೆ ಪ್ರೋಟೋಕಾಲ್ ಉಲ್ಲಂಘನೆ ಸಹ ನಡೆಯಿತು.ರೆಡ್‌ಕ್ರಾಸ್ ಸಂಸ್ಥೆ ಪದಾಧಿಕಾರಿಗಳು ಪರಸ್ಪರ ಒಬ್ಬರನ್ನೊಬ್ಬರು ಹೊಗಳಲು ಕಾರ್ಯಕ್ರಮ ಬಳಸಿಕೊಂಡರು. ಕೇಂದ್ರ ಸಚಿವರು ಕೊನೆಗೆ ಮಾತನಾಡುವಂತಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.