2030ಕ್ಕೆ ತಾಪಮಾನ ಹೆಚ್ಚಳ ನಿರೀಕ್ಷೆ

7

2030ಕ್ಕೆ ತಾಪಮಾನ ಹೆಚ್ಚಳ ನಿರೀಕ್ಷೆ

Published:
Updated:
2030ಕ್ಕೆ ತಾಪಮಾನ ಹೆಚ್ಚಳ ನಿರೀಕ್ಷೆ

ಬೆಂಗಳೂರು: `ಈಗಿರುವ ಬಿಸಿಲಿಗೇ ಸುಸ್ತಾಗಬೇಡಿ... 2030ರ ವೇಳೆಗೆ ಮತ್ತಷ್ಟು ಬಿಸಿ ಏರಲಿದೆ. ಆ ವೇಳೆಗೆ ರಾಜ್ಯದ ತಾಪಮಾನ ವಾಡಿಕೆಗಿಂತ 1 ರಿಂದ 3 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾಗಲಿದೆ...!'ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಿದ್ಧಪಡಿಸಿರುವ `ಕರ್ನಾಟಕದ ಹವಾಮಾನ ಬದಲಾವಣೆಯ ಮುನ್ನೋಟ' ಅಧ್ಯಯನ ವರದಿಯಲ್ಲಿ ಈ ಸಂಗತಿ ಉಲ್ಲೇಖಿಸಲಾಗಿದೆ.`ಬೆಂಗಳೂರು ಕ್ಲೈಮೇಟ್ ಚೇಂಜ್ ಇನೀಷಿಯೇಟಿವ್- ಕರ್ನಾಟಕ' (ಬಿಸಿಸಿಐ-ಕೆ) ಸಂಸ್ಥೆಯ ಸಲಹೆ ಪ್ರಕಾರ, ಭಾರತೀಯ ವಿಜ್ಞಾನ ಸಂಸ್ಥೆ ಸಿದ್ಧಪಡಿಸಿದ ಈ ವರದಿಯನ್ನು ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್.ಶಂಕರಮೂರ್ತಿ ಶನಿವಾರ ವಿಧಾನಸೌಧದಲ್ಲಿ ಬಿಡುಗಡೆ ಮಾಡಿದರು.ಕೈಗಾರಿಕೀಕರಣದ ಪೂರ್ವಕ್ಕೆ (1880) ಹೋಲಿಸಿ `ಐಐಎಸ್‌ಸಿ' ಈ ಅಧ್ಯಯನ ನಡೆಸಿದ್ದು, ಈ ಶತಮಾನದ ಅಂತ್ಯಕ್ಕೆ ತಾಪಮಾನದ ಪ್ರಮಾಣ 5 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಾದರೂ ಆಶ್ಚರ್ಯ ಇಲ್ಲ ಎಂದು ತಿಳಿಸಿದೆ.ಮಾಲಿನ್ಯದ ಪ್ರಮಾಣ ಸಾಧಾರಣ ಇದ್ದರೂ 2030ರ ವೇಳೆಗೆ ತಾಪಮಾನದ ಏರಿಕೆ ಸಾಮಾನ್ಯಕ್ಕಿಂತ 1.7 ಡಿಗ್ರಿ ಸೆಲ್ಸಿಯಸ್ ಆಗಬಹುದು. ಚಿತ್ರದುರ್ಗ, ತುಮಕೂರು, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ ತಾಪಮಾನ ಅತಿ ಹೆಚ್ಚು ಅಂದರೆ 2 ಡಿಗ್ರಿ ಸೆಲ್ಸಿಯಸ್ ಏರಿಕೆ ಆಗುವ ಸಾಧ್ಯತೆ ಇದೆ. 2080ರ ವೇಳೆಗೆ ಕರಾವಳಿ ಭಾಗದಲ್ಲಿ ತಾಪಮಾನ 4 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ ಎಂದೂ ವರದಿಯಲ್ಲಿ ಹೇಳಲಾಗಿದೆ.ಬೆಂಗಳೂರು ನಗರ ಮತ್ತು ಬೀದರ್ ಜಿಲ್ಲೆಗಳಲ್ಲಿನ ಪ್ರತಿ ತಿಂಗಳ ಹವಾಮಾನ ಬದಲಾವಣೆ ಬಗ್ಗೆ ಪ್ರತ್ಯೇಕವಾಗಿ ಅಧ್ಯಯನ ನಡೆಸಲಾಗಿದೆ. ಈ ಎರಡೂ ನಗರಗಳಲ್ಲಿ 2030 ಮತ್ತು 2080ರ ವೇಳೆಗೆ ಹವಾಮಾನ ಮತ್ತು ಮಳೆಯಲ್ಲಿ ಆಗುವ ಬದಲಾವಣೆಗಳ ಬಗ್ಗೆಯೂ ವರದಿ ಬೆಳಕು ಚೆಲ್ಲಿದೆ.ಪರಿಣಾಮಗಳು: ಜಾಗತಿಕ ಮಟ್ಟದಲ್ಲಿ ಅಂದಾಜು ಮಾಡಿರುವಂತೆ ರಾಜ್ಯದ ತಾಪಮಾನ 2030ರ ವೇಳೆಗೆ ಗರಿಷ್ಠ ಮಟ್ಟ ತಲುಪಲಿದ್ದು, ಇದು ಆಹಾರ ಉತ್ಪಾದನೆ ಮೇಲೆ ಪರಿಣಾಮ ಬೀರಲಿದೆ. ಈ ಗಂಡಾಂತರದಿಂದ ಪಾರಾಗುವ ಸಲುವಾಗಿ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವ ಕೆಲಸ ಈಗಿನಿಂದಲೇ ಆಗಬೇಕು ಎನ್ನುವ ಸಲಹೆಯನ್ನೂ ವರದಿಯಲ್ಲಿ ನೀಡಲಾಗಿದೆ.ಮಳೆ ತುಸು ಏರಿಕೆ: ಮಾಲಿನ್ಯದ ಪ್ರಮಾಣ ಸಾಧಾರಣವಾಗಿ ಹೆಚ್ಚಾದರೂ 2030ರ ವೇಳೆಗೆ ಮಳೆ ಪ್ರಮಾಣ ತುಸು ಜಾಸ್ತಿಯಾಗಲಿದೆ (ಶೇ 4ರಿಂದ 8ರಷ್ಟು) ಎಂದೂ ವರದಿಯಲ್ಲಿ ವಿವರಿಸಲಾಗಿದೆ. ಬೀದರ್, ವಿಜಾಪುರ, ಗುಲ್ಬರ್ಗ, ಯಾದಗಿರಿ, ಕೋಲಾರ, ಬಾಗಲಕೋಟೆ, ಬಳ್ಳಾರಿ, ಧಾರವಾಡ, ಗದಗ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಹೆಚ್ಚಾಗಲಿದೆ. 2080ರ ವೇಳೆಗೆ ಈ ಜಿಲ್ಲೆಗಳಲ್ಲಿ ಶೇ 8ರಿಂದ 16ರಷ್ಟು ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದೂ ವರದಿಯಲ್ಲಿ ಉಲ್ಲೇಖಿಸಲಾಗಿದೆ.ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್‌ನ ಗ್ರ್ಯಾಂಟಮ್ ಸಂಶೋಧನಾ ಸಂಸ್ಥೆಯ ಅಧ್ಯಕ್ಷ ಲಾರ್ಡ್ ನಿಕೋಲಸ್ ಸ್ಟೆರ್ನ್ ಮಾತನಾಡಿ, `ಹವಾಮಾನದಲ್ಲಿ ತ್ವರಿತ ಬದಲಾವಣೆಗಳು ಆಗುತ್ತಿದ್ದು, ಅದನ್ನು ನಿಯಂತ್ರಿಸಲು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ದೇಶಗಳು ಕೈಜೋಡಿಸಬೇಕು. ನನಗೆ ಸಂಬಂಧ ಇಲ್ಲ ಎಂದು ಅಭಿವೃದ್ಧಿ ಹೊಂದಿದ ದೇಶಗಳು ದೂರ ಸರಿಯಬಾರದು. ಹಾಗೆಯೇ ಅಭಿವೃದ್ಧಿಶೀಲ ದೇಶಗಳು ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಳ್ಳುವ ಮೂಲಕ ಪರಿಸರದ ಮೇಲೆ ಆಗುತ್ತಿರುವ ಹಾನಿ ತಡೆಗಟ್ಟಬೇಕು' ಎಂದು ಹೇಳಿದರು.ಲಂಡನ್ ಸ್ಕೂಲ್ ಆಫ್ ಇಕನಾಮಿಕ್ಸ್‌ನ ನಿರ್ದೇಶಕ ಪ್ರೊ. ಕ್ರೇಗ್ ಕಲ್ಹೋನ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್, ಬಿಸಿಸಿಐ-ಕೆ ಅಧ್ಯಕ್ಷರೂ ಆದ ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್ ಈ ಸಂದರ್ಭದಲ್ಲಿ ಮಾತನಾಡಿದರು.ವರದಿಯಲ್ಲಿ ಏನಿದೆ?

* ಕೆಲ ಜಿಲ್ಲೆಗಳಲ್ಲಿ ವಾಡಿಕೆಗಿಂತ 2 ಡಿಗ್ರಿ ಸೆಲ್ಸಿಯಸ್ ಏರಿಕೆ

* ಉಷ್ಣತೆ ಹೆಚ್ಚಳದಿಂದ ಕೃಷಿ ಇಳುವರಿಗೆ ಹೊಡೆತ

* ಮಳೆ ಪ್ರಮಾಣದಲ್ಲೂ ಹೆಚ್ಚಳ`ಸಂಚಾರ ದಟ್ಟಣೆ....'

`ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ವಿಪರೀತ ಹೆಚ್ಚಾಗಿದೆ. 1981-82ರಲ್ಲಿ ಏಳು ತಿಂಗಳ ಕಾಲ ನಾನು ನನ್ನ ಕುಟುಂಬದ ಜತೆ ಇಲ್ಲಿ ಇದ್ದೆ. ಆಗಿನ ಟ್ರಾಫಿಕ್‌ಗೂ, ಈಗಿನ ಟ್ರಾಫಿಕ್‌ಗೂ ಹೋಲಿಕೆ ಮಾಡಲು ಸಾಧ್ಯವಾಗುತ್ತಿಲ್ಲ...'

ಹೀಗೆ ಹೇಳಿದ್ದು, ಲಂಡನ್‌ನ ಲಾರ್ಡ್ ನಿಕೋಲಸ್ ಸ್ಟೆರ್ನ್.`ಸಂಚಾರ ದಟ್ಟಣೆಯಿಂದ ಇಂಧನ, ಸಮಯ ಎಲ್ಲವೂ ವ್ಯರ್ಥ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಅಗತ್ಯ ಇದೆ. ಈಗಲೇ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವುದು ಸೂಕ್ತ' ಎಂದು ಅವರು ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry