ಬುಧವಾರ, ಅಕ್ಟೋಬರ್ 16, 2019
21 °C

2030: ಶಿಕ್ಷಣ ಭವಿಷ್ಯದ ಪಕ್ಷಿ ನೋಟ

Published:
Updated:

ಇತ್ತೀಚೆಗೆ, ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿರುವ ಒಂದು ಶಾಲೆಗೆ ಅತಿಥಿ ಶಿಕ್ಷಕನಾಗಿ ಹೋಗಿದ್ದೆ. ಅಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳನ್ನು ಪರಿಚಯ ಮಾಡಿಕೊಳ್ಳುತ್ತಿದ್ದಾಗ ಅವರ ಹೆಸರು ಮತ್ತು ಮುಂದಿನ ಗುರಿ ಏನು ಎಂದು ಕೇಳಿದೆ.ವಿದ್ಯಾರ್ಥಿಗಳು ಒಬ್ಬೊಬ್ಬರಾಗಿ ಎದ್ದು ನಿಂತು ತಮ್ಮ ಪರಿಚಯ ಮಾಡಿಕೊಂಡರು. ಎಲ್ಲೆಡೆ ಇರುವ ಹಾಗೆ ಹೆಚ್ಚಿನ ವಿದ್ಯಾರ್ಥಿಗಳು ತಮ್ಮ ಗುರಿ ಎಂಜಿನಿಯರ್, ಡಾಕ್ಟರ್ ಆಗಬೇಕೆಂದು ಹೇಳಿದರು. ಆದರೆ, ಅವರಲ್ಲಿ ಒಬ್ಬ ವಿದ್ಯಾರ್ಥಿ ಕೊಟ್ಟ ಉತ್ತರ ನನ್ನನ್ನು ನಿಬ್ಬೆರಗುಗೊಳಿಸಿತು.

 

ಆ ವಿದ್ಯಾರ್ಥಿ, `2030ರ ವೇಳೆಗೆ ಭಾರತದಲ್ಲಿ, ಅಮೆರಿಕಾದ ಹಾರ್ವರ್ಡ್, ಸ್ಟಾನ್‌ಫರ್ಡ್, ಎಂಐಟಿ ವಿಶ್ವವಿದ್ಯಾಲಯಗಳ ಸಾಲಿನಲ್ಲಿ ನಿಲ್ಲುವಂತಹ ವಿಶ್ವವಿದ್ಯಾಲಯವನ್ನು ಸ್ಥಾಪಿಸಬೇಕೆಂದಿದ್ದೇನೆ~ ಎಂದು ಹೇಳಿದ. `ಇಂದು ಭಾರತದ ವಿದ್ಯಾರ್ಥಿಗಳು ಹೇಗೆ ಅಮೇರಿಕಾ, ಬ್ರಿಟನ್, ಆಸ್ಟ್ರೇಲಿಯಾ, ಸಿಂಗಪೂರ್ ದೇಶಗಳಿಗೆ ಮುಗಿಬಿದ್ದು ಉನ್ನತ ವ್ಯಾಸಂಗಕ್ಕೆ ಹೋಗುತ್ತಿದ್ದಾರೋ ಹಾಗೆ 2030ರ ವೇಳೆಗೆ ಆ ದೇಶಗಳಲ್ಲಿನ ವಿದ್ಯಾರ್ಥಿಗಳು ಭಾರತದ ವಿಶ್ವವಿದ್ಯಾಲಯಗಳಿಗೆ ಸೇರಲು ಪೈಪೋಟಿ ನಡೆಸಬೇಕು~ ಎಂದ. ಅವನ ಉತ್ತರ ಕೇಳಿ ಒಂದು ಕ್ಷಣ ಏನು ಹೇಳಬೇಕೆಂದು ತೋಚಲಿಲ್ಲ. ನಂತರ ಅವನಿಗೆ `ನಿನ್ನ ಕನಸು ನನಸಾಗಲೆಂದು  ಆಶಿಸುತ್ತೇನೆ~ ಎಂದು ಹೇಳಿ ಕೂಡಿಸಿದೆ. ನಂತರ ಇದರ ಬಗ್ಗೆ ಸುದೀರ್ಘವಾಗಿ ಯೋಚಿಸತೊಡಗಿದೆ. ಇಂದಿಗೆ ಸುಮಾರು ಒಂದು ದಶಕದ ಕೆಳಗೆ ಡಾ. ಅಬ್ದುಲ್ ಕಲಾಮ್‌ರವರು ಭಾರತದ ರಾಷ್ಟ್ರಪತಿ ಆದಾಗ, ಅವರು `ಇಂಡಿಯಾ - 2020~ ಎಂಬ ಒಂದು ಅದ್ಭುತ ಕಲ್ಪನೆಯನ್ನು ಕೊಟ್ಟಿದ್ದರು. ಅವರ ಕನಸನ್ನು ನನಸಾಗಿಸಲು ಹಲವು ಪ್ರಯತ್ನಗಳು ನಡೆದಿವೆ ಮತ್ತು ನಡೆಯುತ್ತಿವೆ. ಇನ್ನೊಂದು ರೀತಿಯಲ್ಲಿ ಯೋಚಿಸಿದಾಗ ನಾವು ಇನ್ನೂ 2020 ಎಂಬ ತೆಪ್ಪದಲ್ಲಿ ತೇಲುತ್ತಿದ್ದೇವೆ. ಆದರೆ ಆ 15-16 ವರುಷದ ವಿದ್ಯಾರ್ಥಿ ಆಗಲೇ 2030 ಎಂಬ ರಾಕೆಟ್‌ನಲ್ಲಿ ಸಂಚರಿಸುತ್ತಿದ್ದಾನೆ ಎಂದು ಅನಿಸುತ್ತದೆ. ಇನ್ನು ಈ ನಿಟ್ಟಿನಲ್ಲಿ 2030ರ ವೇಳೆಗೆ ನಮ್ಮ ಶಿಕ್ಷಣ ಹೇಗಿರಬಹುದೆಂದು ಊಹಿಸಿದಾಗ ನನಗೆ ಕಂಡ ಒಂದು ಚಿತ್ರ ಇದು.ಬದಲಾವಣೆಯ ಹಾದಿಯಲ್ಲಿ ಶಾಲೆಗಳು

ಕಳೆದ ಕೆಲವು ವರುಷಗಳ ಶಾಲಾ ಸುಧಾರಣೆಯಲ್ಲಿ ಬೆಳವಣಿಗೆಯ ಅಲೆಗಳು ಕಂಡಿವೆ. ಇಂದಿನ ಶಾಲೆಗಳನ್ನು 21ನೇ ಶತಮಾನದ ಮಾದರಿಯಲ್ಲಿ ರೂಪಿಸಲು ಹಲವು ಪ್ರಯತ್ನಗಳು ನಡೆದಿವೆ. ಈ ಶಾಲೆಗಳಿಗೆ, ಆಧುನಿಕ ಸೌಲಭ್ಯಗಳನ್ನು ನೀಡಲಾಗಿವೆ. ನಾವು ಇದರಿಂದ ಸ್ವಲ್ಪ ಹೊರಗೆ ನಿಂತು ಯೋಚಿಸಿದಾಗ ಆ ಕಲ್ಪನೆಯು ನಮಗೆ ಕೈಗೆಟಕುವ ಅಂತರದಲ್ಲೇ ಇರುವುದು ತಿಳಿಯುತ್ತದೆ. 2030ರ ವೇಳೆಗೆ ಒಂದು ಸಮರ್ಥ, ಪರಿಣಾಮಕಾರಿ ಮತ್ತು ಸವಾಲುಗಳ ಆಧಾರಿತ ಪ್ರಭಾವಿ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ಏನು ಬೇಕು ಎಂದು ಬೇರೆ ಬೇರೆ ರೀತಿಯಲ್ಲಿ ಯೋಚಿಸಿ ನೋಡಿದಾಗ ಅದರ ಒಂದು ಪಕ್ಷಿ ನೋಟ ನಮಗೆ ಸಿಗುತ್ತದೆ. 2030ರ ವೇಳೆಗೆ ಶಾಲಾ ವಿನ್ಯಾಸ ಮತ್ತು ಅಲ್ಲಿನ ವಾತಾವರಣ ಹೇಗಿರಬೇಕೆಂದು ಊಹಿಸಿ ಅದಕ್ಕೆ ಸರಿಯಾದ ಸೂಚನೆ ನೀಡಬಹುದು.ಕಲಿಕೆಯು ಹಲವು ರೂಪಗಳಲ್ಲಿ ಬರಬಹುದು. ಸ್ವಂತ ಪ್ರಯತ್ನ ಅಥವಾ ವಿದ್ಯಾರ್ಥಿಗಳ ಸಣ್ಣ ಗುಂಪಿನಲ್ಲಿ ನಡೆಯುವ ಕಲಿಕೆಯ ಆಳ ಮತ್ತು ಮನವರಿಕೆ ಹೆಚ್ಚಾಗಿರುತ್ತದೆ ಮತ್ತು ಅದು ಹೆಚ್ಚು ಕಾಲ ಜೀವಂತವಾಗಿರುತ್ತದೆ. ವಿದ್ಯಾರ್ಥಿಗಳು ಕಲಿಸಲೂಬಹುದು ಮತ್ತು ಕಲಿಯಲೂಬಹುದು. ಆ ಕಲಿಕೆ ಮತ್ತು ಕಲಿಸುವಿಕೆ ಸ್ನೇಹಿತರ ಜೊತೆ, ಅಣ್ಣ - ತಮ್ಮಂದಿರ ಜೊತೆ, ಪೋಷಕರ ಮತ್ತು ಮಕ್ಕಳ ಜೊತೆ ಹೀಗೆ ಅನೇಕ ರೀತಿಯಲ್ಲಿ ಇರಬಹುದು. ಇಂತಹ ಕಲಿಕೆಯು ತರಗತಿಯ ಕಲಿಕೆಗಿಂತ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.ಕಲಿಕೆಯಲ್ಲಿ ಆಸಕ್ತಿ ಮತ್ತು ಸ್ಫೂರ್ತಿ ಇದ್ದಾಗ, ವಿದ್ಯಾರ್ಥಿಗಳ `ಗುಂಪು ಕಲಿಕೆ~ಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮಕ್ಕಳ ಪ್ರಚಂಡ ಚುರುಕುತನ ಮತ್ತು ಸಾಮರ್ಥ್ಯವನ್ನು ಗಮನಿಸಿ, ಈ ಲಕ್ಷಣಗಳನ್ನು ಅವರ ಚಿಕ್ಕ ವಯಸ್ಸಿನಲ್ಲೇ ಕಲಿಸಬಹುದು.ಭವಿಷ್ಯದ ಶಾಲೆಗಳು

ಇಂತಹ ಕಲ್ಪನೆಗಳ ಆಧಾರದ ಮೇಲೆ ಭವಿಷ್ಯದ ಶಾಲೆಗಳು ಹೇಗಿರಬಹುದೆಂದು ಊಹಿಸಿಕೊಳ್ಳಬಹುದು. ಭವಿಷ್ಯದ ಅತ್ಯುತ್ತಮ ಶಾಲೆಗಳು ಪುರಾತನ ಶಾಲೆಗಳ ಕೆಲವು ಅಂಶಗಳನ್ನು ಅಳವಡಿಸಿಕೊಳ್ಳಬಹುದು. ಈ ಶಾಲೆಗಳಲ್ಲಿ ಅರ್ಹ ಶಿಕ್ಷಕರ ಮಾರ್ಗದರ್ಶನದಲ್ಲಿ ಹಳೆಯ ವಿದ್ಯಾರ್ಥಿಗಳೇ ಬೋಧಕರಾಗಿ ಕೆಲಸ ಮಾಡಬಹುದು.ಇದರಿಂದ, ಪುರಾತನ ಶಾಲಾ ವ್ಯವಸ್ಥೆಗೆ ಆಧುನಿಕ ಯುಗದ ಹೊಸ ಜೀವಂತಿಕೆ ಕೊಟ್ಟಂತಿರುತ್ತದೆ. ಇದರ ಜೊತೆಯಲ್ಲಿ ತಂತ್ರಜ್ಞಾನದ ಸಹಾಯ ಪಡೆದಾಗ ಕಲಿಕೆಯು ತುಂಬಾ ಚೆನ್ನಾಗಿರುತ್ತದೆ. ಒಂದನೇ ತರಗತಿಯಲ್ಲಿ ವಿದ್ಯಾರ್ಥಿಯು ಸ್ವಂತ ಕಲಿಕೆಯಲ್ಲಿ ದಿನದ ಒಂದು ಗಂಟೆ ಕಳೆದರೆ, ಮೂರನೇ ತರಗತಿಯಲ್ಲಿ ಎರಡು ಗಂಟೆ, ಆರನೇ ತರಗತಿಯಲ್ಲಿ ಅರ್ಧ ದಿನ, ಮತ್ತು ಪ್ರೌಢಶಾಲೆಯಲ್ಲಿ ದಿನದ ಶೇಕಡಾ ಮೂರನೇ ಒಂದು ಭಾಗದಷ್ಟು ಸಮಯ ಸ್ವಂತ ಕಲಿಕೆಯಲ್ಲಿ ನಿರತನಾಗಿರುತ್ತಾನೆ. ಸ್ವಂತ ಅಥವಾ ವೈಯಕ್ತಿಕ ಕಲಿಕೆ ಎಂದಾಗ ಅರ್ಹ ಶಿಕ್ಷಕರ ಮೇಲ್ವಿಚಾರಣೆಯಲ್ಲಿ ನಡೆಯುತ್ತವೆ. ಕಲಿಕೆಯು ತರಗತಿಯ ಹೊರಗೆ ಅಥವಾ ಒಳಗೆ ಎಲ್ಲೇ ಆದರೂ ಅದು ಶಾಲೆಯ ಆವರಣದಲ್ಲೇ ನಡೆಯುತ್ತದೆ.ಬೆಳವಣಿಗೆಯ ಸಮಯದಲ್ಲಿ ಮಕ್ಕಳನ್ನು ಮಕ್ಕಳನ್ನಾಗಿರಲು ಬಿಟ್ಟು ಅವರ ಆಟ - ಪಾಠಗಳನ್ನು ಸೂಕ್ಷ್ಮವಾಗಿ ಗಮನಿಸಬಹುದು. ಮಕ್ಕಳಿಗೆ ಹೆಚ್ಚು ಕಟ್ಟುಪಾಡುಗಳನ್ನು ಹಾಕಿ ದೊಡ್ಡವರಂತೆ ನಡೆಯಲು ಬಲವಂತ ಮಾಡಿದರೆ ಅವರಿಗೆ ಬಾಲ್ಯದ ಮೋಜು ತಪ್ಪಿಸಿದಂತೆ ಆಗುತ್ತದೆ. ಇಂತಹ ಕಲಿಕಾ ವಿಧಾನದಿಂದ ವಿದ್ಯಾರ್ಥಿಯು ವಿಷಯ ಜ್ಞಾನದಲ್ಲಿ ನಿಪುಣನಾಗುತ್ತಾನೆ. ಸೃಜನಾತ್ಮಕವಾಗಿ ಸಮಸ್ಯೆಗಳನ್ನು ಬಗೆಹರಿಸಲು ಕಲಿಯುತ್ತಾನೆ; ಅಗಾಧ ಜ್ಞಾನವನ್ನು ಪಡೆಯುವ ಮೊದಲು ಅದನ್ನು ಪರೀಕ್ಷೆ ಮಾಡಿ ಸರಿ ಎನಿಸಿದ್ದನ್ನು ಆರಿಸಿಕೊಳ್ಳುವ ಶಕ್ತಿ ಬೆಳೆಸಿಕೊಳ್ಳುತ್ತಾನೆ. ಇದರಿಂದ, ವಿದ್ಯಾರ್ಥಿಗಳಲ್ಲಿ ಸಾಧನೆಯ ಅಂತರ ಮತ್ತು ಸಾಂಪ್ರದಾಯಿಕ ವಿಧಾನಗಳ ಅನುಸರಣೆ ಕಡಿಮೆಯಾಗುತ್ತದೆ. ಇದರ ಜೊತೆಯಲ್ಲಿ ಕಡಿಮೆ ಪಠ್ಯಕ್ರಮ ಮತ್ತು ಶಾಲಾ ಸುಧಾರಣೆಯಿಂದ ಯಾವ ವಿದ್ಯಾರ್ಥಿಯೂ ಹಿಂದುಳಿದಂತೆ ಆಗುವುದಿಲ್ಲ. ಶಿಕ್ಷಣದ ಗುಣಮಟ್ಟದ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಿ, ಆ ಕಾಲಕ್ಕೆ ಲಭ್ಯವಿರುವ ತಂತ್ರಜ್ಞಾನದ ಆಧಾರದ ಮೇಲೆ ನಿರ್ಮಿಸುವ ಉಪಕರಣಗಳನ್ನು ಬಳಸಿ ಅದರ ಸಹಾಯದಿಂದ ಮಾರ್ಗದರ್ಶನ ನೀಡುವಂತಾಗಬಹುದು.ಕ್ಷಣ ಶಾಸ್ತ್ರಜ್ಞ

2030ರ ವೇಳೆಗೆ ನಮ್ಮ ವಿದ್ಯಾರ್ಥಿಗಳಿಗೆ ಬೇಕಾದ ಮೂಲಭೂತ ಶಿಕ್ಷಣವೇನು ಎಂದು ಯೋಚಿಸಿದಾಗ ಕಣ್ಮುಂದೆ ಬರುವುದು ನಾಲ್ಕು ಮುಖ್ಯ ಗುಣಗಳು: ಸಂವಹನ ಕಲೆ, ಹೊಂದಾಣಿಕೆ, ವಿಭಿನ್ನ ಆಲೋಚನೆ ಮತ್ತು ಸೃಜನಶೀಲ ಬೆಳವಣಿಗೆ.ಇವೆಲ್ಲವನ್ನೂ ಪರಿಣಾಮಕಾರಿ ಶಿಕ್ಷಕರು ಮಾತ್ರವೇ ನೀಡಲು ಸಾಧ್ಯ. ಈ ರೀತಿಯ ಕಲಿಕೆಯಲ್ಲಿ ವಿವಿಧ ವಿದ್ಯಾರ್ಥಿಗಳೊಂದಿಗೆ ಕೂಡಿ ಕೆಲಸ ಮಾಡುವುದು, ಸರಿಯಾದ ಮಾಹಿತಿಯ ಸಂಗ್ರಹಣೆ, ಸಮುದಾಯದ ಅಗತ್ಯಕ್ಕೆ ತಕ್ಕಂತೆ ಬೋಧನೆ ಮತ್ತು ವಿದ್ಯಾರ್ಥಿಗಳಿಗೆ ತಮ್ಮ ಕಲಿಕೆಯನ್ನು ತಾವೇ ವಿಚಾರಣೆ ಮಾಡಿಕೊಳ್ಳುವಂತಹ ಸಾಮರ್ಥ್ಯಗಳನ್ನು ಬೆಳೆಸಬೇಕು. ಇದೆಲ್ಲವನ್ನೂ ನಿರ್ವಹಿಸುತ್ತಾ ವಾಣಿಜ್ಯೋದ್ಯಮಿ ಮತ್ತು ಬೋಧಕ ಎರಡೂ ಆಗುವ ಶಿಕ್ಷಕರಿಗೆ “ಶಿಕ್ಷಣಶಾಸ್ತ್ರಜ್ಞ” ಎಂಬ ಹೆಸರು ಸಮಂಜಸವೆನಿಸುತ್ತದೆ. ಶಿಕ್ಷಣಶಾಸ್ತ್ರಜ್ಞರು ಉತ್ತಮ ಶಿಕ್ಷಕರು ಮತ್ತು ದೂರದೃಷ್ಟಿ ಹೊಂದಿರಬೇಕು. ಇವರು ಸದಾ ವಿದ್ಯಾರ್ಥಿ ಅಥವಾ ವಿದ್ಯಾರ್ಥಿ ಬಳಗದ ಸಕ್ರಿಯ ಬೋಧನೆಯಲ್ಲಿ ತೊಡಗಿರಬೇಕು; ಶಾಲೆಗಳಲ್ಲಿ ಭಾವನಾತ್ಮಕ ಸಂಬಂಧವನ್ನು ಸೃಷ್ಟಿಸಬೇಕು; ಅನುಭವದ ಅಲೆಗಳನ್ನು ಹರಡಬೇಕು; ಇವರು ಕಲಿಕೆಯ ಅದ್ಭುತ ವಾಸ್ತುಶಿಲ್ಪಿಗಳು ಮತ್ತು ನಾಯಕರು; ಉತ್ತಮ ಮಾಹಿತಿ ತಜ್ಞರು ಮತ್ತು ಸಮುದಾಯದ ಬೆಳವಣಿಗೆಗೆ ಆಧಾರಸ್ತಂಭಗಳು; ಉತ್ತಮ ಸಂಶೋಧಕರು; ಮತ್ತು ಕೆಲಸದ ನಡುವೆ ಬರುವ ತೊಂದರೆಗಳನ್ನು ಚೆನ್ನಾಗಿ ನಿರ್ವಹಿಸಿಕೊಂಡು ಹೋಗುವವರಾಗಿರಬೇಕು. ಶಿಕ್ಷಣಶಾಸ್ತ್ರಜ್ಞರಿಗೆ ತರಬೇತಿ ನೀಡುವಾಗ, ಯಾವ ಶೈಕ್ಷಣಿಕ ಸಂಪತ್ತುಗಳ ಮೇಲೆ ಅವಲಂಬಿತರಾಗಬೇಕು ಎಂಬುದನ್ನು ನಿರ್ಧರಿಸಬೇಕು. ಇವರು ತಮ್ಮ ಬುದ್ಧಿವಂತಿಕೆಯಿಂದ ಜಿಲ್ಲೆಗಳ, ವಿಶ್ವವಿದ್ಯಾಲಯಗಳ, ಸಮುದಾಯ ಆಧರಿತ ಸಂಸ್ಥೆಗಳ, ಮತ್ತು ಸಾಮಾಜಿಕ ಮತ್ತು ಆರೋಗ್ಯ ಸಂಸ್ಥೆಗಳ ನಡುವಣ ಉತ್ತಮ ಸಂಬಂಧ ಕಲ್ಪಿಸಬೇಕು. ನಂತರ, ಇವರು ಎಂದು, ಎಲ್ಲಿ, ಏನನ್ನು, ಯಾರು ಬೋಧಿಸಬೇಕೆಂದು ತಿಳಿದು ಅದಕ್ಕೆ ಉತ್ತಮ ಸಿದ್ಧತೆ ನಡೆಸಿಕೊಳ್ಳಬೇಕು. ಇದರ ಜೊತೆಯಲ್ಲಿ ಯಾರು, ಹೇಗೆ, ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ ಮತ್ತು ಇದನ್ನು ಮುಂದುವರಿಸಲು ಏನು ಮಾಡಬೇಕು ಎಂಬ ಆಲೋಚನೆಯನ್ನು ಮಾಡಬೇಕಾಗುತ್ತದೆ. ಶಿಕ್ಷಕರು ಒಂದು ತಂಡದಲ್ಲಿ ಪರಿಣಾಮಕಾರಿಯಾಗಿ ಬೋಧಿಸುತ್ತಾರೆಯೇ ಎಂದು ತಿಳಿದುಕೊಳ್ಳಬೇಕು. ಸ್ಥಳೀಯ ಮತ್ತು ಜಾಗತಿಕ ಮಟ್ಟದಲ್ಲಿ ಶಿಕ್ಷಕರ ಸಂಬಂಧವನ್ನು ಉತ್ತಮಗೊಳಿಸಲು ವಿಶಿಷ್ಟ ಕೌಶಲ್ಯವನ್ನು ಹೊಂದಿರಬೇಕು. ಈ ನಿಟ್ಟಿನಲ್ಲಿ ಎಲ್ಲರಿಗೂ ಒಂದು ಪಾತ್ರವಿರುತ್ತದೆ. 2030 ರಲ್ಲಿ ಬೋಧನೆಯ ಉದ್ದೇಶವು ದುರ್ಬಲ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ಕೇವಲ ಮೇಲೆತ್ತುವ ಪ್ರಯತ್ನವಾಗಿರದೆ, ಅದರ ಜೊತೆಯಲ್ಲಿ ಶಿಕ್ಷಕರನ್ನು ಮೀರಿಸಿ ಬೆಳೆಯುವ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವಂಥದ್ದಾಗಿರಬೇಕು. 21ನೇ ಶತಮಾನದ ವಿದ್ಯಾರ್ಥಿಗಳನ್ನು ಬೋಧನೆಗೆ ತಯಾರು ಮಾಡಲು ಶಾಲೆಗಳಲ್ಲಿ ಪಾಠ ಮಾಡುವವರಿಗೂ ಮತ್ತು ಅವರನ್ನು ಮುನ್ನಡೆಸುವವರಿಗೂ ಇರುವ ಅಂತರವನ್ನು ಅಳಿಸಿಹಾಕಬೇಕು. ಆಗ 2030ರ ಶ್ರೇಷ್ಠ ಶಿಕ್ಷಕರನ್ನು ಹಲವು ತೊಡಕುಗಳ ನಡುವೆಯೂ ನಿಜವಾದ ಸಾರ್ವಜನಿಕ ಶಿಕ್ಷಣಕ್ಕೆ ಅಣಿ ಮಾಡಿಕೊಟ್ಟ ಮತ್ತು ಬೊಧನಾ ವೃತ್ತಿಯ ಬಗ್ಗೆ ಸಂಪೂರ್ಣ ಅರಿವು ಮೂಡಿಸಿದವರೆಂದು ಮುಂದಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಇಂದು ವೃತ್ತಿಯನ್ನು ಪ್ರವೇಶಿಸುತ್ತಿರುವ ಶಿಕ್ಷಕರು 2030ರ ವೇಳೆಗೆ ತಮ್ಮ ವೃತ್ತಿ ಜೀವನದ ಅರ್ಧದಾರಿ ಪ್ರಯಾಣಿಸಿ ಅದರಲ್ಲಿ ಪರಿಣಿತರಾಗಿರುತ್ತಾರೆ. ಇಂದಿನ ಪ್ರೌಢಶಾಲಾ ವಿದ್ಯಾರ್ಥಿಗಳು 2030 ರಲ್ಲಿ ವೇಳೆಗೆ ಮಾಧ್ಯಮಿಕ ಅಥವಾ ಪ್ರೌಢಶಾಲೆಗಳಲ್ಲಿ ಪೋಷಕ-ಶಿಕ್ಷಕ ಸಮಾವೇಶಗಳಲ್ಲಿ ಭಾಗವಹಿಸುತ್ತಿರುತ್ತಾರೆ. ಈ ಬದಲಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇತಿಹಾಸ ಮರುಕಳಿಸುವ ನಂಬಿಕೆ ಬಲವಾಗುತ್ತದೆ. ಪುರಾತನ ಶಿಕ್ಷಣ ವ್ಯವಸ್ಥೆಯು ಈ ಎಲ್ಲಾ ಗುಣಗಳನ್ನು ತನ್ನ ಬೋಧನೆಯಲ್ಲಿ ಅಳವಡಿಸಿಕೊಂಡಿತ್ತು. ಶತಮಾನಗಳು ಕಳೆದಂತೆ ಬದಲಾವಣೆಗಳು ಆಗುತ್ತಾ ಆ ಕಾಲದ ವ್ಯವಸ್ಥೆಗೆ ಮರುಕಳಿಸುತ್ತಿದ್ದೇವೆ ಎಂದು ಅನಿಸುತ್ತದೆ. ಈ ಎಲ್ಲಾ ಕನಸುಗಳನ್ನು ನನಸು ಮಾಡುವ ಉಜ್ವಲ, ಕಾಂತಿಯುತ ಭವಿಷ್ಯವನ್ನು ಉತ್ಸಾಹದಿಂದ ಕಾದು ನೋಡೋಣ.

(ಲೇಖಕರು  ಹಿರಿಯ ಬೋಧಕರು, ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್,

ಬೆಂಗಳೂರು)

Post Comments (+)