2.05 ಕೋಟಿ ಮೌಲ್ಯದ ವಸ್ತುಗಳ ವಶ

ಬುಧವಾರ, ಜೂಲೈ 24, 2019
27 °C

2.05 ಕೋಟಿ ಮೌಲ್ಯದ ವಸ್ತುಗಳ ವಶ

Published:
Updated:

ಬೆಂಗಳೂರು: ದರೋಡೆ, ಸರಗಳ್ಳತನ ಮುಂತಾದ 147 ಅಪರಾಧ ಪ್ರಕರಣಗಳನ್ನು ಪತ್ತೆ ಮಾಡಿರುವ ಉತ್ತರ ವಿಭಾಗದ ಪೊಲೀಸರು 2.05 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.`ಒಂದು ತಿಂಗಳ ಅವಧಿಯಲ್ಲಿ ಸಿಬ್ಬಂದಿ ಪ್ರಕರಣಗಳನ್ನು ಭೇದಿಸಿ 108 ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖವಾಗಿ 72 ವಾಹನ ಕಳವು ಮತ್ತು 11 ಸುಲಿಗೆ ಪ್ರಕರಣಗಳನ್ನು ಪತ್ತೆ ಮಾಡಿದ್ದಾರೆ. ಸುಮಾರು ಒಂದು ಕೋಟಿ ರೂಪಾಯಿ ಮೌಲ್ಯದ ನಾಲ್ಕು ಚಕ್ರದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ~ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ಅಂತರರಾಜ್ಯ ಕಳ್ಳರಾದ ತಮಿಳುನಾಡಿನ ಗೋವಿಂದಸ್ವಾಮಿ ಮತ್ತು ಚಿಕ್ಕಬಳ್ಳಾಪುರದ ಓಬಳೇಶ ಎಂಬುವರನ್ನು ವಿದ್ಯಾರಣ್ಯಪುರ ಪೊಲೀಸರು ಬಂಧಿಸಿದ್ದಾರೆ. ಜಲ್ಲಿ ಮಿಷನ್ ವೃತ್ತದ ಬಳಿ ಲಗೇಜ್ ಆಟೊದಲ್ಲಿ ಹೋಗುತ್ತಿದ್ದ ಮೂರು ಮಂದಿಯನ್ನು ತಡೆದು ತಪಾಸಣೆ ನಡೆಸಿದಾಗ ಕಬ್ಬಿಣದ ಸಲಾಕೆಗಳು ಪತ್ತೆಯಾಗಿವೆ.ಈ ಬಗ್ಗೆ ವಿವರಣೆ ಕೇಳಿದಾಗ ಪರಾರಿಯಾಗಲು ಯತ್ನಿಸಿದ ಅವರನ್ನು ಬೆನ್ನಟ್ಟಿದ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ~ ಎಂದರು.`ಕಾರಿನಲ್ಲಿ ಡ್ರಾಪ್ ನೀಡುವ ನೆಪದಲ್ಲಿ ಒಂಟಿ ಮಹಿಳೆಯರನ್ನು ಕರೆದೊಯ್ದು ದರೋಡೆ ಮಾಡುತ್ತಿದ್ದ ಲಗ್ಗೆರೆಯ ಈಶ್ವರ, ವೇಣುಗೋಪಾಲ ಮತ್ತು ಪೀಣ್ಯದ ಮಹೇಶ ಎಂಬುವರನ್ನು ಬಂಧಿಸಿರುವ ಪೀಣ್ಯ ಪೊಲೀಸರು 11 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ~ ಎಂದು ಮಿರ್ಜಿ ಮಾಹಿತಿ ನೀಡಿದರು.ಬಾಡಿಗೆದಾರರ ಮಾಹಿತಿಗೆ ಮಿರ್ಜಿ ಮನವಿ

`ಮನೆಯ ಮಾಲೀಕರು ಬಾಡಿಗೆದಾರರ ಸಂಪೂರ್ಣ ವಿವರವನ್ನು ಪೊಲೀಸರಿಗೆ ನೀಡಬೇಕು. ಈ ಬಗ್ಗೆ ಕಾನೂನು ರೂಪಿಸಲಾಗುತ್ತದೆ. ಸ್ಥಳೀಯ ಠಾಣೆಗೆ ಬಾಡಿಗೆದಾರರ ಮಾಹಿತಿ ಒದಗಿಸಬೇಕು~ ಎಂದು ಮಿರ್ಜಿ ಹೇಳಿದರು.`ಮನೆಕೆಲಸದವರನ್ನು ನೇಮಿಸಿಕೊಳ್ಳುವ ಮುನ್ನ ಪೊಲೀಸರಿಗೆ ತಿಳಿಸಿ. ಕೆಲಸಗಾರನ ಹಿನ್ನೆಲೆಯನ್ನು ಪರಿಶೀಲಿಸಿ ಆ ನಂತರ ಒಪ್ಪಿಗೆ ನೀಡಲಾಗುತ್ತದೆ. ಹಿನ್ನೆಲೆ ಗೊತ್ತಿಲ್ಲದ ಸೆಕ್ಯುರಿಟಿ ಗಾರ್ಡ್‌ಗಳನ್ನೂ ಕೆಲಸಕ್ಕೆ ಸೇರಿಸಿಕೊಳ್ಳಬೇಡಿ. ಕಿಟಕಿ ಬಳಿ ಆಭರಣ ಮತ್ತು ಬೆಲೆ ಬಾಳುವ ವಸ್ತುಗಳನ್ನು ಇಡಬೇಡಿ. ವಾಹನಗಳಲ್ಲಿ ಹಣ ಅಥವಾ ಒಡವೆ ಇಟ್ಟು ಹೋಗಬೇಡಿ. ಸಾರ್ವಜನಿಕರು ಎಚ್ಚರಿಕೆಯಿಂದ ಇದ್ದರೆ ಎಷ್ಟೋ ಅಪರಾಧ ಪ್ರಕರಣಗಳನ್ನು ತಡೆಯಬಹುದು~ ಎಂದು ಅವರು ಸಲಹೆ ನೀಡಿದರು.ಉತ್ತರ ವಿಭಾಗದ ಡಿಸಿಪಿ ಎಚ್.ಎಸ್.ರೇವಣ್ಣ ಮತ್ತು ಮಲ್ಲೇಶ್ವರ ಉಪವಿಭಾಗದ ಎಸಿಪಿ ಜಿ.ಟಿ.ಅಜ್ಜಪ್ಪ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್‌ಗಳಾದ ಎಂ.ಶ್ರೀನಿವಾಸ್, ಚಂದ್ರು, ಎಂ.ಕೆ.ಗಣಪತಿ, ಮಲ್ಲಿಕಾರ್ಜುನ, ಎಸ್.ಡಿ.ಛಬ್ಬಿ, ಕೆ.ಎಂ.ಸುಬ್ರಹ್ಮಣ್ಯ ಅವರ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನಿಲ್‌ಕುಮಾರ್, ಅಪರಾಧ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಅಲೋಕ್‌ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry