ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

20ರಿಂದ ಕಬ್ಬನ್ ರಸ್ತೆಯಲ್ಲಿ ಸಂಚಾರ ಸ್ಥಗಿತ

Last Updated 3 ಮಾರ್ಚ್ 2011, 19:50 IST
ಅಕ್ಷರ ಗಾತ್ರ


ಬೆಂಗಳೂರು: ರಾಜಧಾನಿಯ ಹೃದಯ ಭಾಗದ ಪ್ರಮುಖ ರಸ್ತೆಗಳಲ್ಲಿ ಒಂದಾದ ಕಬ್ಬನ್ ರಸ್ತೆಯಲ್ಲಿ (ಮಿನ್ಸ್ಕ್ ಚೌಕದಿಂದ ಬಿಆರ್‌ವಿ ಜಂಕ್ಷನ್‌ವರೆಗೆ) ಇದೇ 20ರಿಂದ ವಾಹನ ಸಂಚಾರ ಸ್ಥಗಿತಗೊಳ್ಳಲಿದೆ. ಸುಮಾರು ಮೂರು ವರ್ಷ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ ಮುಂದುವರಿಯಲಿದೆ. ಹಾಗೆಯೇ ಡಾ.ಬಿ.ಆರ್. ಅಂಬೇಡ್ಕರ್ ವೀದಿಯಲ್ಲೂ ಮೂರು ವರ್ಷ ಕಾಲ ವಾಹನ ಸಂಚಾರ ಸ್ಥಗಿತವಾಗಲಿದೆ.

ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಮಹಾಸಂಸ್ಥೆಯು (ಎಫ್‌ಕೆಸಿಸಿಐ) ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ತುರ್ತು ಸಂದರ್ಭದಲ್ಲಿ ಸಂಚಾರ ನಿಯಂತ್ರಣ’ ಕುರಿತ ಸಂವಾದದಲ್ಲಿ ಪಾಲ್ಗೊಂಡಿದ್ದ ಹೆಚ್ಚುವರಿ ಪೊಲೀಸ್ ಕಮಿಷನರ್ (ಸಂಚಾರ ಮತ್ತು ಭದ್ರತೆ) ಪ್ರವೀಣ್ ಸೂದ್ ಈ ವಿಷಯ ತಿಳಿಸಿದರು.

‘ನಗರದಲ್ಲಿ ಮೆಟ್ರೊ ರೈಲು ಯೋಜನೆ ಭರದಿಂದ ಸಾಗಿದೆ. ಮಿನ್ಸ್ಕ್ ಚೌಕದಿಂದ ಬಿಆರ್‌ವಿ ಜಂಕ್ಷನ್‌ವರೆಗೆ ಮೆಟ್ರೊ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಇದೇ 20ರಿಂದ ವಾಹನ ಸಂಚಾರ ಸ್ಥಗಿತಗೊಳಿಸಲಾಗುವುದು. ಸುಮಾರು ಮೂರು ವರ್ಷ ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗುವುದು’ ಎಂದು ಹೇಳಿದರು.

‘ಮಣಿಪಾಲ್ ಸೆಂಟರ್ ಕಡೆಯಿಂದ ಬರುವ ವಾಹನಗಳು ಬಿಆರ್‌ವಿ ಜಂಕ್ಷನ್ ಬಳಿ ಎಡ ತಿರುವು ಪಡೆಯಬೇಕು. ಬಿಆರ್‌ವಿ ಜಂಕ್ಷನ್- ಅನಿಲ್ ಕುಂಬ್ಳೆ ವೃತ್ತದ ನಡುವೆ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಅನಿಲ್ ಕುಂಬ್ಳೆ ವೃತ್ತದಲ್ಲಿ ಬಲ ತಿರುವು ಪಡೆದು ಕ್ವೀನ್ಸ್ ವೃತ್ತ ತಲುಪಬಹುದು. ನಂತರ ಕಿಂಗ್ಸ್ ರಸ್ತೆ ಮೂಲಕ ಬೆಂಗಳೂರು ಪ್ರೆಸ್‌ಕ್ಲಬ್ ಮಾರ್ಗವಾಗಿ ಅಂಬೇಡ್ಕರ್ ವೀದಿ ತಲುಪಬಹುದು. ಕೆ.ಆರ್. ವೃತ್ತದ ಕಡೆಗೆ ಹೋಗುವವರು ಬಾಲಭವನ ರಸ್ತೆ ಮೂಲಕ ಸಂಚರಿಸಬಹುದು’ ಎಂದರು.

‘ಚೌಡಯ್ಯ ರಸ್ತೆ ಕಡೆಯಿಂದ ಬರುವ ವಾಹನಗಳು ಇನ್‌ಫೆಂಟ್ರಿ ರಸ್ತೆಯ ಮೂಲಕ ಸಫೀನಾ ಪ್ಲಾಜಾವರೆಗೆ ಸಂಚರಿಸಿ ಬಳಿಕ ಕಬ್ಬನ್ ರಸ್ತೆ ತಲುಪಬಹುದು. ಹಾಗಾಗಿ ಇನ್‌ಫೆಂಟ್ರಿ ರಸ್ತೆ ಹಾಗೂ ಸೆಂಟ್ರಲ್ ಸ್ಟ್ರೀಟ್ ರಸ್ತೆಗಳಲ್ಲಿ ಮೂರು ವರ್ಷ ವಾಹನ ನಿಲುಗಡೆ ನಿಷೇಧಿಸಲಾಗುವುದು. ‘ಈ ಸಂಚಾರ ಬದಲಾವಣೆಯಿಂದ ಜನತೆಗೆ ತೊಂದರೆಯಾಗಬಹುದು. ಆದರೆ ಮೆಟ್ರೊ ಕಾಮಗಾರಿ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಕಬ್ಬನ್ ರಸ್ತೆಯಲ್ಲಿ ಸಂಚಾರ ನಿಷೇಧಿಸಬೇಕಿದೆ. ಅಂಬೇಡ್ಕರ್ ವೀದಿಯಲ್ಲೂ ಮೂರು ವರ್ಷ ಸಂಚಾರ ಸ್ಥಗಿತವಾಗಲಿದೆ’ ಎಂದರು.
 
ಇಡೀ ವರ್ಷ ತೊಂದರೆ!: ‘ಮೈಸೂರು ರಸ್ತೆಯ ನಾಯಂಡನಹಳ್ಳಿ ಜಂಕ್ಷನ್‌ನಲ್ಲಿ ಮೆಟ್ರೊ, ಬಿಡಿಎ ಕಾಮಗಾರಿಗಳು ಏಕಕಾಲಕ್ಕೆ ನಡೆಯುತ್ತಿರುವುದರಿಂದ ಈ ಭಾಗದಲ್ಲಿ ವರ್ಷ ಪೂರ್ತಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಲಿದೆ. ಹಾಗೆಯೇ ಗೊರಗುಂಟೆಪಾಳ್ಯ ಜಂಕ್ಷನ್ ಹಾಗೂ ಕನಕಪುರ ರಸ್ತೆಯಲ್ಲಿ ಮೆಟ್ರೊ ರೈಲು ಕಾಮಗಾರಿ ಪ್ರಗತಿಯಲ್ಲಿದ್ದು, ವಾಹನ ಸವಾರರಿಗೆ ತೊಂದರೆಯಾಗಲಿದೆ’ ಎಂದರು.

ಸಿಗ್ನಲ್ ಮುಕ್ತ ರಸ್ತೆ: ‘ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಗಮ ಸಂಚಾರ ಕಲ್ಪಿಸುವ ಉದ್ದೇಶದಿಂದ ಹೊರ ವರ್ತುಲ ರಸ್ತೆಯಲ್ಲಿ ಸಿಗ್ನಲ್ ಮುಕ್ತ ಸಂಚಾರ ವ್ಯವಸ್ಥೆ ಜಾರಿಗೆ ಬರಲಿದೆ. ಹೊಸೂರು ರಸ್ತೆಯ ಸಿಲ್ಕ್ ಬೋಡ್ ಜಂಕ್ಷನ್‌ನಿಂದ ಹೆಬ್ಬಾಳದವರೆಗೆ ಒಟ್ಟು ಎಂಟು ಮೇಲುಸೇತುವೆಗಳು ನಿರ್ಮಾಣವಾಗಲಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಈ ಮಾರ್ಗದಲ್ಲಿ ಸಿಗ್ನಲ್ ಮುಕ್ತ ಸಂಚಾರ ವ್ಯವಸ್ಥೆ ಜಾರಿಗೆ ಬರಲಿದೆ’ ಎಂದರು.

ಕೆ.ಆರ್. ವೃತ್ತದ ಕಡೆಗೂ ನಿಷೇಧ
ನೆಲದಡಿಯ ಮೆಟ್ರೊ ರೈಲು ನಿಲ್ದಾಣ ಕಾಮಗಾರಿ ಹಿನ್ನೆಲೆಯಲ್ಲಿ ವಿಧಾನಸೌಧ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ವೀದಿಯಲ್ಲಿ ಜಿಪಿಓ ವೃತ್ತದಿಂದ ಕೆ.ಆರ್.ವೃತ್ತದ ಕಡೆಗೆ ಹೋಗುವ ವಾಹನಗಳ ಸಂಚಾರವನ್ನು ಶನಿವಾರದಿಂದ (ಮಾ.5) ನಿರ್ಬಂಧಿಸಲಾಗುತ್ತದೆ ಎಂದು ನಗರ ಪೊಲೀಸ್ ಕಮಿಷನರ್ ಶಂಕರ್ ಬಿದರಿ ತಿಳಿಸಿದ್ದಾರೆ.

ಈ ಮಾರ್ಗದಲ್ಲಿ ಸಂಚರಿಸಬೇಕಾದ ವಾಹನ ಸವಾರರ ಅನುಕೂಲಕ್ಕಾಗಿ ಮಿನ್ಸ್ಕ್ ಚೌಕದಿಂದ ಕಬ್ಬನ್ ಉದ್ಯಾನದೊಳಗಿನ ಪ್ರೆಸ್‌ಕ್ಲಬ್ ಮುಂಭಾಗದಲ್ಲಿ ಹೊಸದಾಗಿ ನಿರ್ಮಿಸಲಾಗಿರುವ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ. ಅಂತೆಯೇ ಕ್ವೀನ್ಸ್ ಜಂಕ್ಷನ್‌ನಿಂದ ಬಾಲಭವನ ಮಾರ್ಗವಾಗಿ ಕೆ.ಆರ್.ವೃತ್ತದವರೆಗೆ ನಿರ್ಮಿಸಲಾಗಿರುವ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಕೆ.ಆರ್.ವೃತ್ತದ ಕಡೆಗೆ ಹೋಗಬೇಕಾದ ವಾಹನ ಸವಾರರು ಈ ರಸ್ತೆಗಳಲ್ಲಿ ಸಂಚರಿಸುವಂತೆ ಬಿದರಿ ಮನವಿ ಮಾಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT