21ರಿಂದ ಎಸ್‌ಬಿಐ ಉತ್ಸವ

7

21ರಿಂದ ಎಸ್‌ಬಿಐ ಉತ್ಸವ

Published:
Updated:

ಬೆಂಗಳೂರು: ಗೃಹ ಸಾಲ ಒದಗಿಸುವಲ್ಲಿ ಮುಂಚೂಣಿಯಲ್ಲಿ ಇರುವ ದೇಶದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್, ಇದೇ 21ರಿಂದ ಬೆಂಗಳೂರಿನಲ್ಲಿ ಗೃಹ ಮತ್ತು ಕಾರು ಖರೀದಿ ಸಾಲ ಒದಗಿಸುವ ಮೂರು ದಿನಗಳ ‘ಎಸ್‌ಬಿಐ ಉತ್ಸವ’ ಆಯೋಜಿಸಿದೆ.

ನಗರದ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿ ಇರುವ ಪ್ರಧಾನ ಕಚೇರಿ ಆವರಣದಲ್ಲಿ 21ರಂದು ಸಂಜೆ 4 ಗಂಟೆಗೆ ಈ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಭಾನುವಾರದವರೆಗೆ (ಜ. 23) ಬೆಳಿಗ್ಗೆ 11ರಿಂದ ಸಂಜೆ  7 ಗಂಟೆಯವರೆಗೆ ನಡೆಯಲಿರುವ ಉತ್ಸವದಲ್ಲಿ  ಬೆಂಗಳೂರಿನ ಪ್ರಮುಖ ಕಟ್ಟಡ ನಿರ್ಮಾಣ ಸಂಸ್ಥೆಗಳು ಮತ್ತು ಕಾರು ಮಾರಾಟ ಸಂಸ್ಥೆಗಳು  ಭಾಗಿಯಾಗಲಿವೆ.

ಸೌಂದರಾ ಕುಮಾರ್

45ಕ್ಕೂ ಹೆಚ್ಚು ಕಟ್ಟಡ ನಿರ್ಮಾಣ ಸಂಸ್ಥೆಗಳು 40 ಸಾವಿರಕ್ಕೂ ಹೆಚ್ಚು ಅಪಾರ್ಟ್‌ಮೆಂಟ್‌ಗಳ ಮಾಹಿತಿಯು ಇಲ್ಲಿ ಲಭ್ಯವಾಗಲಿದೆ. 15ಕ್ಕೂ ಹೆಚ್ಚು ಕಾರು ವಿತರಕರು ವಿವಿಧ ಕಾರು ತಯಾರಿಕಾ ಸಂಸ್ಥೆಗಳ ಕೊಡುಗೆಗಳ ಬಗ್ಗೆ ಮಾಹಿತಿ ಒದಗಿಸಲಿದ್ದಾರೆ. ಇಲ್ಲಿ ಖರೀದಿಸಲಿರುವ ಅಪಾರ್ಟ್‌ಮೆಂಟ್ ಮತ್ತು ಕಾರುಗಳಿಗೆ ಸ್ಥಳದಲ್ಲಿಯೇ ಸಾಲ ಮಂಜೂರಾತಿ ನೀಡಲಾಗುವುದು. ಬ್ಯಾಂಕ್ ಹಲವಾರು ಬಗೆಯ ಗೃಹ ಸಾಲ ಯೋಜನೆಗಳನ್ನು ಹೊಂದಿದ್ದು, ಅವುಗಳು ಮನೆ, ಅಪಾರ್ಟ್‌ಮೆಂಟ್ ಖರೀದಿದಾರರ ಅಗತ್ಯಗಳನ್ನೆಲ್ಲ ಒದಗಿಸಲಿವೆ. ಹೊಸ ಮನೆ , ಕಾರು ಖರೀದಿದಾರರಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ  ಎಂದು ‘ಎಸ್‌ಬಿಐ’ನ ಚೀಫ್ ಜನರಲ್ ಮ್ಯಾನೇಜರ್ ಸೌಂದರಾ ಕುಮಾರ್ ಮಂಗಳವಾರ ಇಲ್ಲಿ ಅಭಿಪ್ರಾಯಪಟ್ಟರು.

ಕಳೆದ ವರ್ಷ ನಡೆದ ಇಂತಹ ಉತ್ಸವಕ್ಕೆ ಗ್ರಾಹಕರಿಂದ ದೊರೆತ ಉತ್ತಮ ಪ್ರತಿಕ್ರಿಯೆಯಿಂದ ಉತ್ತೇಜನೆಗೊಂಡು ಈ ಬಾರಿಯೂ ಇಂತಹ ಸಾಲ ಮೇಳ ಆಯೋಜಿಸಲಾಗುತ್ತಿದೆ. ಕಳೆದ ವರ್ಷ ` 552 ಕೋಟಿಗಳಷ್ಟು ಗೃಹ ಸಾಲ ಮತ್ತು ` 8.73 ಕೋಟಿಗಳಷ್ಟು ಕಾರು ಖರೀದಿ ಸಾಲ ಮಂಜೂರು ಮಾಡಲಾಗಿತ್ತು ಎಂದರು. ಈ ಬಾರಿಯೂ ಯುವ ತಲೆಮಾರಿನವರನ್ನು ಗುರಿಯಾಗಿರಿಸಿಕೊಂಡು ಈ ಉತ್ಸವ ಏರ್ಪಡಿಲಾಗಿದೆ. ಬೆಂಗಳೂರು ನಗರ ಮತ್ತು ನಗರ ಹೊರ ವಲಯದಲ್ಲಿ ಹಲವಾರು ಹೊಸ ಗೃಹ ನಿರ್ಮಾಣ ಯೋಜನೆಗಳು ಪ್ರಗತಿಯಲ್ಲಿ ಇವೆ. ಇವುಗಳ ಪೈಕಿ ಹಲವಾರು ಯೋಜನೆಗಳಲ್ಲಿ ಅಪಾರ್ಟ್‌ಮೆಂಟ್‌ಗಳು ಕೈಗೆಟುಕುವ ಬೆಲೆಗೆ (` 20ರಿಂದ ` 30 ಲಕ್ಷ) ದೊರೆಯಲಿವೆ ಎಂದರು.

ಗರಿಷ್ಠ ` 30 ಲಕ್ಷ ಸಾಲದ- ಎಸ್‌ಬಿಐ ಈಸಿ ಹೋಮ್ ಲೋನ್  ಮತ್ತು ಎಸ್‌ಬಿಐ ಅಡ್ವಾಂಟೇಜ್ ಹೋಮ್ ಲೋನ್‌ಗಳಿಗೆ  (` 30 ಲಕ್ಷಕ್ಕಿಂತ ಹೆಚ್ಚು ` 75 ಲಕ್ಷಕ್ಕಿಂತ ಕಡಿಮೆ) ಮೊದಲ ವರ್ಷ ಬ್ಯಾಂಕ್‌ನ ಮೂಲ ದರಕ್ಕಿಂತ (ಶೇ 8) ಶೇ 0.50ರಷ್ಟು  ಹೆಚ್ಚು ಅಂದರೆ ಶೇ 8.50ರಷ್ಟು ಬಡ್ಡಿ ವಿಧಿಸಲಾಗುವುದು. ಎಸ್‌ಬಿಐ ಪ್ರೀಮಿಯಂ ಹೋಮ್ ಲೋನ್ ಯೋಜನೆಯಡಿ  ` 75 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಗೃಹ ಸಾಲಗಳಿಗೆ ಶೇ 9.75ರಷ್ಟು ಬಡ್ಡಿ ದರ ನಿಗದಿಪಡಿಸಲಾಗಿದೆ. ಎರಡು ಮತ್ತು ನಾಲ್ಕನೇ ವರ್ಷಗಳಲ್ಲಿ ಈ ಬಡ್ಡಿ ದರಗಳು ಬದಲಾಗುತ್ತವೆ.

ಈ ಉತ್ಸವದ ಸಂದರ್ಭದಲ್ಲಿ ಮಂಜೂರಾಗುವ ಗೃಹ ಸಾಲಗಳಿಗೆ ಬಡ್ಡಿ ದರಗಳಲ್ಲಿ ಶೇ 0.25ರಷ್ಟು ರಿಯಾಯ್ತಿ ದೊರೆಯಲಿದೆ ಎಂದರು. 5 ಲಕ್ಷ ಮತ್ತು 5 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಕಾರು ಖರೀದಿ ಸಾಲಕ್ಕೆ ಮೊದಲ ವರ್ಷ ಶೇ 9ರಷ್ಟು (ಮೂಲದರಕ್ಕಿಂತ ಶೇ 1ರಷ್ಟು ಹೆಚ್ಚು) ಬಡ್ಡಿ ವಿಧಿಸಲಾಗುವುದು.  ಬ್ಯಾಂಕ್‌ನ ‘ಮೂಲ ದರ’ ಏರಿಳಿತ ಆಧರಿಸಿಯೂ ಸಾಲಗಳ ಮೇಲಿನ ಬಡ್ಡಿ ದರಗಳು ಬದಲಾಗುತ್ತವೆ ಎಂದೂ ಸೌಂದರಾ ಕುಮಾರ್ ನುಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry