ಗುರುವಾರ , ಅಕ್ಟೋಬರ್ 17, 2019
28 °C

21ರಿಂದ ಗುಣವಂತೆಯಲ್ಲಿ ರಾಷ್ಟ್ರೀಯ ನಾಟ್ಯೋತ್ಸವ

Published:
Updated:

ಬೆಂಗಳೂರು: ಯಕ್ಷಗಾನ ಕಲಾವಿದ ದಿವಂಗತ ಕೆರೆಮನೆ ಶಂಭು ಹೆಗಡೆ ಅವರ ಹೆಸರಿನಲ್ಲಿ ನಡೆಯುವ ರಾಷ್ಟ್ರೀಯ ನಾಟ್ಯೋತ್ಸವ ಇದೇ 21ರಿಂದ 25ರವರೆಗೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಗುಣವಂತೆಯಲ್ಲಿ ಜರುಗಲಿದೆ. ಯಕ್ಷಗಾನ ಕ್ಷೇತ್ರದಲ್ಲಿ 75 ವಸಂತಗಳನ್ನು ಪೂರೈಸಿರುವ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ, ನಾಟ್ಯೋತ್ಸವವನ್ನು ಆಯೋಜಿಸಿದೆ.ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಾಟ್ಯೋತ್ಸವವನ್ನು ಉದ್ಘಾಟಿಸಲಿದ್ದಾರೆ. ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಅವರಿಗೆ 2011ನೇ ಸಾಲಿನ `ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ~ಯನ್ನು ಉದ್ಘಾಟನಾ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿಯ ವೆಬ್‌ಸೈಟ್ ಮತ್ತು `ಸತ್ಯ ಹರಿಶ್ಚಂದ್ರ~ ಯಕ್ಷಗಾನ ಪ್ರಸಂಗದ ಡಿ.ವಿ.ಡಿ. ಲೋಕಾರ್ಪಣೆಯೂ ನಡೆಯಲಿದೆ.ಹೊಸ್ತೋಟ ಮಂಜುನಾಥ ಭಾಗವತರ ನೇತೃತ್ವದಲ್ಲಿ ಯಕ್ಷಗಾನ ಭಾಗವತಿಕೆಯ ವಿವಿಧ ಆಯಾಮಗಳ ಕುರಿತು 22ರಂದು ಗೋಷ್ಠಿ ನಡೆಯಲಿದೆ. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ಅಧ್ಯಕ್ಷ ಪ್ರೊ.ಎಂ.ಎಲ್. ಸಾಮಗ ಅವರು ಗೋಷ್ಠಿಯನ್ನು ಉದ್ಘಾಟಿಸಲಿದ್ದಾರೆ ಎಂದು ಮಂಡಳಿಯ ನಿರ್ದೇಶಕ ಕೆರೆಮನೆ ಶಿವಾನಂದ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.23ರಂದು `ನಿರ್ದೇಶಕನಾಗಿ ಭಾಗವತ~ ಕುರಿತು ಪ್ರಾಯೋಗಿಕ ಪ್ರದರ್ಶನ ನಡೆಯಲಿದೆ. 24ರಂದು ನಡೆಯುವ ಕಾರ್ಯಕ್ರಮದಲ್ಲಿ ನೆಬ್ಬೂರು ನಾರಾಯಣ ಭಾಗವತರು `ಯಕ್ಷಗಾನದ ಸಾಂಪ್ರದಾಯಿಕ ಭಾಗವತಿಕೆ~ ಕುರಿತು ಮಾತನಾಡಲಿದ್ದಾರೆ.22ರಿಂದ 25ರವರೆಗೆ ಪ್ರತಿದಿನ ತಲಾ ಮೂರು ವ್ಯಕ್ತಿ/ಸಂಸ್ಥೆಗಳಿಗೆ `ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಮ್ಮಾನ~ ಪ್ರದಾನ ಮಾಡಲಾಗುವುದು. 2011ನೇ ಸಾಲಿನಲ್ಲಿ ಈ ಪ್ರಶಸ್ತಿಗೆ ಆಯ್ಕೆಯಾಗಿರುವ ವ್ಯಕ್ತಿ ಮತ್ತು ಸಂಸ್ಥೆಗಳ ಹೆಸರು ಇಲ್ಲಿದೆ: ಗುಂಡಬಾಳಾದ ಮುಖ್ಯಪ್ರಾಣ ಪ್ರಸಾದಿತ ಯಕ್ಷಗಾನ ಮಂಡಳಿ, ಯಕ್ಷಗಾನ ಕಲಾವಿದ ಕೆ.ಪಿ. ಹಾಸ್ಯಗಾರ, ಸಾಹಿತಿ ಅಂಬಾತನಯ ಮುದ್ರಾಡಿ.ಉಡುಪಿಯ ಯಕ್ಷಗಾನ ಕಲಾರಂಗ, ಯಕ್ಷಗಾನ ವಿದ್ವಾಂಸ ಡಾ. ಸಿಮಂತೂರು ನಾರಾಯಣ ಶೆಟ್ಟಿ, ತಾಳಮದ್ದಲೆ ಅರ್ಥದಾರಿ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ, ಮಂದರ್ತಿಯ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿ, ಕಲಾವಿದ ನಾಗರಕೋಡಿಗೆ ರಾಮಕೃಷ್ಣಯ್ಯ, ಯಕ್ಷಗಾನ ಪ್ರಸಾದನ ತಯಾರಕ ಮೂರೂರು ರಾಮ ಹೆಗಡೆ, ಕುಂದಾಪುರದ ಹಂಗಾರಕಟ್ಟೆ ಯಕ್ಷಗಾನ ಕೇಂದ್ರ, ಯಲ್ಲಾಪುರದ ಸಂಕಲ್ಪ ಸೇವಾ ಸಂಸ್ಥೆ ಮತ್ತು ಪ್ರಸಾದನ ತಯಾರಕ ತೀರ್ಥಹಳ್ಳಿಯ ಸೀತಾರಾಮ ಆಚಾರಿ. ಪ್ರತಿದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

Post Comments (+)