ಮಂಗಳವಾರ, ಮೇ 24, 2022
27 °C

22ರಿಂದ ಇಂಡೋ-ಜರ್ಮನ್ ಅರ್ಬನ್ ಮೇಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಭಾರತ- ಜರ್ಮನಿಯ 60 ವರ್ಷಗಳ ದ್ವಿಪಕ್ಷೀಯ ಸಂಬಂಧದ ಸವಿನೆನಪಿಗಾಗಿ `ಇಂಡೋ-ಜರ್ಮನ್ ಅರ್ಬನ್ ಮೇಳ~ ಇದೇ ತಿಂಗಳ 22ರಿಂದ ಜುಲೈ 1 ರವರೆಗೆ ನಗರದ ಅರಮನೆ ಮೈದಾನದಲ್ಲಿ ನಡೆಯಲಿದೆ.

ಎರಡು ತಿಂಗಳ ಹಿಂದೆ ಮುಂಬೈನಲ್ಲಿ ಪ್ರಾರಂಭವಾದ ಈ ಮೇಳ ಇದೀಗ ಬೆಂಗಳೂರಿಗೆ ಪದಾರ್ಪಣೆ ಮಾಡುತ್ತಿದ್ದು, ಆನಂತರ ಚೆನ್ನೈ, ಪುಣೆ ಹಾಗೂ ನವದೆಹಲಿಯಲ್ಲಿ ನಡೆಯಲಿದೆ.`ವೇಗವಾಗುತ್ತಿರುವ ಬೆಳೆಯುತ್ತಿರುವ ನಗರೀಕರಣದಿಂದ ಉಭಯ ರಾಷ್ಟ್ರಗಳಲ್ಲಿನ ನಗರ ಪ್ರದೇಶಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಈ ಮೇಳ ನಡೆಯಲಿದ್ದು, ಮುಖ್ಯವಾಗಿ ವಾಣಿಜ್ಯ, ಇಂಧನ, ಸುಸ್ಥಿರ ನಗರ ಅಭಿವೃದ್ಧಿ, ಆರೋಗ್ಯ, ಸಾಂಸ್ಕೃತಿಕ, ಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಸೇರಿದಂತೆ ಹಲವಾರು ಕ್ಷೇತ್ರಗಳ ಬಗ್ಗೆ ಮೇಳದಲ್ಲಿ ಚರ್ಚೆ- ಸಂವಾದಗಳು ನಡೆಯಲಿವೆ~ ಎಂದು ಜರ್ಮನಿಯ ಡೆಪ್ಯುಟಿ ಕಾನ್ಸುಲ್ ಜನರಲ್ ಹ್ಯಾನ್ಸ್-ಗುಂಟರ್-ಲಾಫ್ಲರ್ `ಪ್ರಜಾವಾಣಿ~ಗೆ ಮಾಹಿತಿ ನೀಡಿದರು.`ಭಾರತ ಮತ್ತು ಜರ್ಮನಿಯ ಪ್ರಮುಖ ಕಂಪೆನಿಗಳು ಕೂಡ ಮೇಳದಲ್ಲಿ ಭಾಗವಹಿಸುತ್ತಿದ್ದು, ಆಯಾ ಕ್ಷೇತ್ರಗಳ ಸಾಧನೆಗಳ ಬಗ್ಗೆ ಬೆಳಕು ಚೆಲ್ಲಲು ಮೇಳ ವೇದಿಕೆಯಾಗಲಿದೆ. ನಗರ ಪ್ರದೇಶಗಳಲ್ಲಿನ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಹೇಗೆ ನಾಗರಿಕರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಬಹುದು ಎಂಬುದರ ಬಗ್ಗೆ ವಿಚಾರ ಸಂಕಿರಣ, ಸಂವಾದದ ಜತೆಗೆ ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ~ ಎಂದು ಹೇಳಿದರು.ಸಾರಿಗೆ ಸಮಸ್ಯೆ, ಕುಡಿಯುವ ನೀರಿನ ನಿರ್ವಹಣೆ, ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಕುರಿತು ಗುಂಪು ಚರ್ಚೆಗಳು ಕೂಡ ನಡೆಯಲಿವೆ. ಸೀಮೆನ್ಸ್, ಬಜಾಜ್ ಅಲಯನ್ಸ್, ಡ್ಯೂಷೆ ಬ್ಯಾಂಕ್, ಬಿಎಎಸ್‌ಎಫ್, ಬಾಷ್, ಲ್ಯಾಪ್ ಇಂಡಿಯಾ ಸೇರಿದಂತೆ ಅನೇಕ ಕಂಪೆನಿಗಳು ಮೇಳದಲ್ಲಿ ಪಾಲ್ಗೊಳ್ಳಲಿವೆ. ಫೆಡರಲ್‌ನ ಶಿಕ್ಷಣ ಮತ್ತು ಸಂಶೋಧನಾ ಸಚಿವಾಲಯವು ಭಾರತ ಮತ್ತು ಜರ್ಮನಿಯ ಸಹಭಾಗಿತ್ವದಲ್ಲಿ ವಿಜ್ಞಾನ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಅಭಿವೃದ್ಧಿಪಡಿಸಿರುವ ಉತ್ಪನ್ನಗಳನ್ನು ಮೇಳದಲ್ಲಿ ಪ್ರದರ್ಶಿಸಲಾಗುತ್ತದೆ. ಅಲ್ಲದೆ, ಮೇಳಕ್ಕೆ ಭೇಟಿ ನೀಡಲಿರುವ ವಿದ್ಯಾರ್ಥಿಗಳಿಗೆ ಜರ್ಮನಿಯಲ್ಲಿ ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿರುವ ಅವಕಾಶಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.

 

ಜರ್ಮನಿಯ ಖ್ಯಾತ ಕಲಾವಿದ ಮಾರ್ಕಸ್ ಹೇನ್ಸ್‌ಡಾರ್ಫ್ ಪರಿಕಲ್ಪನೆ ಹಾಗೂ ವಿನ್ಯಾಸದಲ್ಲಿ ರೂಪಿಸಿರುವ ಪ್ರತ್ಯೇಕವಾದ ಪೆವಿಲಿಯನ್‌ಗಳಲ್ಲಿ ಮೇಳ ನಡೆಯಲಿದೆ. ಜರ್ಮನಿ ಸಂಸ್ಕೃತಿಯ ಅನಾವರಣ ಹಾಗೂ ವಿಶೇಷ ಭಕ್ಷ್ಯಗಳ ರುಚಿ ಸವಿಯಲು ಬೆಂಗಳೂರಿಗರಿಗೆ ಇದೊಂದು ಸದಾವಕಾಶ ಎಂದು ಲಾಫ್ಲರ್ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.