22ರಿಂದ ನೆಮ್ಮದಿ ಕೇಂದ್ರ ಸಿಬ್ಬಂದಿ ಮುಷ್ಕರ

7

22ರಿಂದ ನೆಮ್ಮದಿ ಕೇಂದ್ರ ಸಿಬ್ಬಂದಿ ಮುಷ್ಕರ

Published:
Updated:

ಹುಬ್ಬಳ್ಳಿ: ನೆಮ್ಮದಿ ಕೇಂದ್ರಗಳ ಜೊತೆಗೆ ಸಿಬ್ಬಂದಿಯನ್ನೂ ಕಂದಾಯ ಇಲಾಖೆಯಲ್ಲಿ ವಿಲೀನಗೊಳಿಸುವಂತೆ ಒತ್ತಾಯಿಸಿ ಇದೇ 22ರಿಂದ ರಾಜ್ಯದಾದ್ಯಂತ ಅನಿರ್ದಿಷ್ಟ ಕಾಲ ನೆಮ್ಮದಿ ಕೇಂದ್ರಗಳ ಸಿಬ್ಬಂದಿ ಕೆಲಸ ನಿಲ್ಲಿಸಿ ಪ್ರತಿಭಟನೆ ನಡೆಸಲಿದ್ದಾರೆ.ನಗರದಲ್ಲಿ ಭಾನುವಾರ ರಾಜ್ಯ ದಿನಗೂಲಿ ನೌಕರರ ಮಹಾಮಂಡಳದ ಅಧ್ಯಕ್ಷ ಡಾ.ಕೆ.ಎಸ್.ಶರ್ಮಾ ಅವರ ನೇತೃತ್ವದಲ್ಲಿ ನಡೆದ ನೆಮ್ಮದಿ ಕೇಂದ್ರಗಳ ನೌಕರರ ಸಂಘದ ಸಭೆಯಲ್ಲಿ ಈ ತೀರ್ಮಾನವನ್ನು  ಕೈಗೊಳ್ಳಲಾಯಿತು. ನೆಮ್ಮದಿ ಕೇಂದ್ರ ಹಾಗೂ ಅಲ್ಲಿನ ಪರಿಕರಗಳನ್ನು ಈಗಾಗಲೇ ಸರ್ಕಾರ ತನ್ನ ಸುಪರ್ದಿಗೆ ಪಡೆದಿದೆ. ಆದರೆ, ಅಲ್ಲಿ ಕೆಲಸ ಮಾಡುತ್ತಿರುವ 1600ಕ್ಕೂ ಹೆಚ್ಚು ನೌಕರರ ಭವಿಷ್ಯ ಅತಂತ್ರವಾಗಿದೆ.

ಕೂಡಲೇ ನೌಕರರನ್ನು ಕಂದಾಯ ಇಲಾಖೆಗೆ ವಿಲೀನಗೊಳಿಸಿಕೊಂಡು ಅವರಿಗೆ ಕಂಪ್ಯೂಟರ್ ಆಪರೇಟರ್ ತತ್ಸಮಾನ ಸ್ಥಾನಮಾನ ಹಾಗೂ ವೇತನ ನೀಡುವಂತೆ ಸಭೆಯಲ್ಲಿ ಒತ್ತಾಯಿಸಲಾಯಿತು.ಯಾವುದೇ ಭದ್ರತೆ ಇಲ್ಲದೆ ನೆಮ್ಮದಿ ಕೇಂದ್ರಗಳ ನೌಕರರು ಕಳೆದ 6 ವರ್ಷಗಳಿಂದ ಕನಿಷ್ಠ ವೇತನಕ್ಕೆ ಕೆಲಸ ನಿರ್ವಹಿಸಿದ್ದಾರೆ. ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ವಯೋಮಾನ ಮೀರಿದೆ. ಇದರಿಂದ ಮಾನವೀಯತೆಯ ನೆಲೆಯಲ್ಲಿ ನೆಮ್ಮದಿ ಕೇಂದ್ರದ ಸಿಬ್ಬಂದಿಯನ್ನು ಸರ್ಕಾರದಲ್ಲಿ ವಿಲೀನಗೊಳಿಸಬೇಕು. ತಪ್ಪಿದಲ್ಲಿ ಬೇಡಿಕೆ ಈಡೇರುವವರೆಗೂ ಕೆಲಸ ನಿಲ್ಲಿಸಿ ಪ್ರತಿಭಟನೆ ಮಾಡಲು ನಿರ್ಧರಿಸಲಾಯಿತು.ಸಭೆಯಲ್ಲಿ ರಾಜ್ಯ ನೆಮ್ಮದಿ ಕೇಂದ್ರಗಳ ನೌಕರರ ಸಂಘದ ಅಧ್ಯಕ್ಷ ಬಿ.ಎನ್.ಮಹಮ್ಮದ್ ಹಫೀಜ್, ಪ್ರಧಾನ ಕಾರ್ಯದರ್ಶಿ ಎಂ.ಆರ್. ಮಣಿಕಂಠ, ಕುಮಾರಸ್ವಾಮಿ, ಶಿವಾನಂದ ಮತ್ತಿತರರು ಪಾಲ್ಗೊಂಡಿದ್ದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry