ಮಂಗಳವಾರ, ನವೆಂಬರ್ 12, 2019
28 °C

22 ಪ್ರಕರಣ, 29 ಮಂದಿ ಬಂಧನ: ಎಸ್‌ಪಿ

Published:
Updated:

ಗದಗ: ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಸಲು ವಿವಿಧ ಸಮಿತಿ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಯೂ ಆದ ಪಾಂಡುರಂಗ ನಾಯಕ ತಿಳಿಸಿದರು.ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜಕೀಯ ಪಕ್ಷ ಮತ್ತು ಅಭ್ಯರ್ಥಿಗಳು ಮಾಧ್ಯಮದ ಮೂಲಕ ಕೈಗೊಳ್ಳುವ ಪ್ರಚಾರ ಪರಿಶೀಲಿಸಲು ಹಾಗೂ ನಿಯಂತ್ರಿಸಲು ಜಿಲ್ಲಾ ಮಟ್ಟದಲ್ಲಿ ಮೀಡಿಯಾ ಸರ್ಟಿಫಿಕೇಶನ್ ಅಂಡ್ ಮಾನಿಟರಿಂಗ್ ಕಮಿಟಿ (ಎಂಸಿಎಂಸಿ) ರಚಿಸಲಾಗಿದೆ. ಪ್ರಚಾರದ ರೂಪದಲ್ಲಿ ಸುದ್ದಿ ಪ್ರಕಟಸಿದರೆ ಅದನ್ನು ಈ ಸಮಿತಿ ಪರಿಶೀಲನೆ ನಡೆಸಲಿದೆ. ಮಾದರಿ ನೀತಿ ಸಂಹಿತೆ ಅನುಷ್ಠಾನ ಸಮಿತಿ, ಸಂಚಾರಿ ದಳ, ಅಭ್ಯರ್ಥಿಗಳು ಸಲ್ಲಿಸುವ ಚುನಾವಣಾ ಲೆಕ್ಕ ಪರಿಶೀಲನಾ ತಂಡ ಸೇರಿದಂತೆ ವಿವಿಧ ಸಮಿತಿ ರಚಿಸಲಾಗಿದೆ ಎಂದು ವಿವರಿಸಿದರು.ಒಟ್ಟು 865 ಮತಗಟ್ಟೆಗಳ ಪೈಕಿ ಅತಿ ಸೂಕ್ಷ್ಮ 232, ಸೂಕ್ಷ್ಮ 215 ಮತ್ತು 418 ಸಾಮಾನ್ಯ ಮತಗಟ್ಟೆಗಳು. ಅತಿಸೂಕ್ಷ್ಮ ಮತಗಟ್ಟೆಗಳಿಗೆ ಬಿಗಿಬಂದೋಬಸ್ತ್ ಹಾಗೂ ವಿಡೀಯೋ ಚಿತ್ರೀಕರಣ ಮಾಡಲಾಗುವುದು. 7,10,987 ಲಕ್ಷ ಮತದಾರರ ಪೈಕಿ  3,64,698 ಪುರುಷರು, 3,46,289 ಮಹಿಳೆಯರು ಇದ್ದಾರೆ. ಈ ಹಿಂದಿನ ಚುನಾವಣೆಯಲ್ಲಿ ಶೇ. 75ರಷ್ಟು ಮತದಾನ ನಡೆದ ಕೇಂದ್ರ, ಮತ ಪಡೆದ ಅಭ್ಯರ್ಥಿ ಮತ್ತು ಒಬ್ಬರೇ ಏಜೆಂಟ್ ಇರುವ ಕಡೆ ಹೆಚ್ಚು ಗಮನ ಹರಿಸಲಾಗುವುದು ಎಂದರು.ಹೆಲಿಕಾಪ್ಟರ್ ಇಳಿಯಲು ಮತ್ತು ತೆರಳಲು ಜಿಲ್ಲಾಧಿಕಾರಿ ಅನುಮತಿ ಕಡ್ಡಾಯ. ಹೆಲಿಕಾಫ್ಟರ್ ಬಳಕೆ ವೆಚ್ಚವೂ ಪಕ್ಷ ಅಥವಾ ಅಭ್ಯರ್ಥಿ ಲೆಕ್ಕಕ್ಕೆ ಸೇರಲಿದೆ. ಈ ಬಗ್ಗೆ ಕಂದಾಯ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಾತನಾಡಿ, ಅಕ್ರಮ ತಡೆಗಟ್ಟಲು ಜಿಲ್ಲೆಯಲ್ಲಿ ಈಗಾಗಲೇ 15 ಕಡೆ ಚೆಕ್‌ಪೋಸ್ಟ್‌ಗಳನ್ನು ಹಾಕಲಾಗಿದೆ. ನಾಮಪತ್ರ ಸಲ್ಲಿಕೆಯಾದ ಬಳಿಕ ಅಭ್ಯರ್ಥಿಗಳ ಸಂಖ್ಯೆ ಆಧರಿಸಿ ಮತ್ತಷ್ಟು ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗುವುದು. ನೀತಿ ಸಂಹಿತೆ ಜಾರಿಯಾದಾಗಿನಿಂದ ಒಟ್ಟು 22 ಪ್ರಕರಣ ದಾಖಲಿಸಿಕೊಂಡು 29 ಮಂದಿಯನ್ನು ಬಂಧಿಸಲಾಗಿದೆ. 520 ಲೀಟರ್ ಮದ್ಯ ಹಾಗೂ ಎರಡು ಟಂಟಂ, ಮಾರುತಿ ವ್ಯಾನ್ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.ರೌಡಿಗಳು ಮತ್ತು ಸಮಾಜಘಾತುಕ ಶಕ್ತಿಗಳ ವಿರುದ್ಧ ನಿಗಾ ಇಡಲಾಗಿದೆ. ಪರವಾನಗಿ ಹೊಂದಿರುವ ಶೇ. 97ರಷ್ಟು ಬಂದೂಕುಗಳು ಠಾಣೆಗಳಲ್ಲಿ ಜಮಾ ಆಗಿವೆ ಎಂದರು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿ.ಜಿ.ತುರಮರಿ ಮಾತನಾಡಿ, ಪ್ರತಿಯೊಂದು ಗ್ರಾಮಗಳಲ್ಲೂ ಜನರಿಗೆ ಮತದಾನದ ಜಾಗೃತಿ ಮೂಡಿಸಲಾಗುತ್ತಿದೆ. ಸಂಗೀತ, ಬೀದಿ ನಾಟಕ, ರ‌್ಯಾಲಿ, ರಶಪ್ರಶ್ನೆ, ಜಾಹೀರಾತು, ಗುಂಪು ಚರ್ಚೆ ಮತ್ತು, ಆರೋಗ್ಯ ಸಿಬ್ಬಂದಿ ಬಳಸಿಕೊಂಡು ಜಾಗೃತಿಗೊಳಿಸಲಾಗುತ್ತಿದೆ ಎಂದರು.

ಪ್ರತಿಕ್ರಿಯಿಸಿ (+)