ಬುಧವಾರ, ಜೂಲೈ 8, 2020
28 °C

22 ವರ್ಷ ಪೂರೈಸಿದ ರಂಗಾಯಣ

ಸುದೇಶ ದೊಡ್ಡಪಾಳ್ಯ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ರಾಜ್ಯದ ಹೆಸರಾಂತ ರೆಪರ್ಟರಿ ಕಂಪೆನಿ ‘ಕರ್ನಾಟಕ ನಾಟಕ ರಂಗಾಯಣ’ಯು ಸಂಕ್ರಾಂತಿಯ ಮುನ್ನಾ ದಿನವಾದ ಜ.14 ಕ್ಕೆ 22 ವರ್ಷಗಳನ್ನು ಪೂರೈಸಲಿದೆ.ಕಳೆದ 22 ವರ್ಷಗಳಿಂದ ನೂರಾರು ರಂಗ ಚಟುವಟಿಕೆಗಳ ಮೂಲಕ ರಾಜ್ಯ ಮತ್ತು ದೇಶದಲ್ಲಿ ಹೆಸರು ಗಳಿಸಿ ರುವ ರಂಗಾಯಣವು ರಂಗಭೂಮಿಗೆ ಮಾದರಿಯಂತಿದೆ. ಹೊಸ ಹೊಸ ಪ್ರಯೋಗಗಳ ಮೂಲಕ ಇನ್ನಿತರ ತಂಡಗಳ ಮೇಲೆ ಗಾಢವಾದ ಪ್ರಭಾವವನ್ನು ಬೀರಿದೆ. ರಂಗಾಯಣವು 22 ವರ್ಷಗಳ ಕಾಲದಲ್ಲಿ ರಂಗ ಪ್ರೇಮಿಗಳು ಹೆಮ್ಮೆಪಡುವಷ್ಟ ಬೆಳೆದಿದೆ, ಬೆಳೆಯುತ್ತಲೇ ಇದೆ.ರಂಗಾಯಣವೂ ಸಂಪೂರ್ಣ ವೃತ್ತಿನಿರತ ಆಧುನಿಕ ನಾಟಕ ರೆಪರ್ಟರಿಯಾಗಿದ್ದು, ಜನವರಿ 14, 1989 ರಂದು ಹೆಸರಾಂತ ಸಾಹಿತಿ ಡಾ.ಚದುರಂಗ ಅವರಿಂದ ಉದ್ಘಾಟನೆಗೊಂಡಿತು. ರಂಗಾಯಣ ದಿವಂಗತ ಬಿ.ವಿ.ಕಾರಂತರ ಕನಸಿನ ಕೂಸು. ಅವರ ಕಲ್ಪನೆ, ದೂರದೃಷ್ಟಿ, ಜಾಣ್ಮೆ, ಕನಸು, ಕಲಾವಿದರ, ತಂತ್ರಜ್ಞರ ಹಾಗೂ ಸಿಬ್ಬಂದಿ ವರ್ಗದ ಪರಿ ಶ್ರಮದಿಂದ ಮೈದಳೆದು ನಿಂತಿದೆ. ರಂಗಾಯಣವೂ ಸುಂದರ ಪರಿಸರದಲ್ಲಿ ಎಲ್ಲ ರೀತಿಯ ರಂಗಾಸಕ್ತರನ್ನು ಆಕರ್ಷಿಸುತ್ತಲೇ ಇದೆ.ಮೊದಲ ಹೆಜ್ಜೆ:ಬಿ.ವಿ.ಕಾರಂತರ ನೇತೃತ್ವದಲ್ಲಿ 24 ಯುವ ಕಲಾವಿದರು ತೀವ್ರತರ ತರಬೇತಿಯನ್ನು ಆರಂಭಿಸಿದರು. ಕೊಠಡಿಯಲ್ಲಿನ ಪಾಠಕ್ಕಿಂತ ಪ್ರಯೋಗಕ್ಕೆ ಹೆಚ್ಚು ಒತ್ತುಕೊಡಲಾಗುತ್ತಿತ್ತು. ಬೆಳಿಗ್ಗೆ 6.30 ರಿಂದ ರಾತ್ರಿ 9.30 ರ ವರೆಗೂ ಬಗೆ ಬಗೆಯ ಅಭ್ಯಾಸಗಳು ನಡೆಯುತ್ತಿದ್ದವು. ರಂಗಾಯಣವು ಕಿಂದರಿಜೋಗಿ, ಗೋವಿನಹಾಡು, ತಿರುಕನ ಕನಸುಗಳನ್ನು ಪ್ರದರ್ಶಿಸಿತು. ರಂಗಾಯಣಕ್ಕೆ ಕಿಂದರಿಜೋಗಿ ದೊಡ್ಡ ಹೆಸರು ತಂದುಕೊಟ್ಟಿತು. ಬಳಿಕ ‘ಪ್ರಯೋಗ ರಂಗ’ದ ಮುಖಾಂತರ ಇಲ್ಲಿನ ಕಲಾವಿದರು ಬೇರೆ ಊರುಗಳಲ್ಲಿ ನಾಟಕಗಳನ್ನು ಪ್ರದರ್ಶಿಸಿದರು. 1992 ರಲ್ಲಿ ‘ಹಿಪೋಲಿಟಸ್’ ನಾಟಕವನ್ನು ಅಮೆರಿಕಾದಲ್ಲಿ ಪ್ರದರ್ಶಿಸಿ ಸೈ ಎನಿಸಿಕೊಂಡಿತು.ಕುಸುಮಬಾಲೆ, ಗಾಂಧಿ ವರ್ಸಸ್ ಗಾಂಧಿ, ತಲೆದಂಡ, ಭೂಮಿಗೀತ, ಎತ್ತ ಹಾರಿದೆ ಹಂಸ, ಶೂದ್ರ ತಪಸ್ವಿಗಳಂತಹ ವಿಭಿನ್ನ ನಾಟಕಗಳನ್ನು ಇಲ್ಲಿನ ಕಲಾವಿದರು ಪ್ರದರ್ಶಿಸುವ  ಮೂಲಕ ಹೊಸ ಪ್ರೇಕ್ಷಕರನ್ನು ರಂಗಾಯಣದತ್ತ ಸೆಳೆದುಕೊಂಡರು.ಇನ್ನಷ್ಟು, ಮತ್ತಷ್ಟು:ರಂಗಾಯಣ ಹುಟ್ಟುವ ಮುನ್ನವೇ ಬಿ.ವಿ.ಕಾರಂತರು ಈಗಿನ ‘ವನರಂಗ’ ಇರುವ ಪ್ರದೇಶದಲ್ಲಿ ‘ಕಿಂಗ್‌ಲಿಯರ್’ ನಾಟಕವನ್ನು ಪ್ರದರ್ಶಿಸಿದ್ದರು. ಮುಂದಿನ ದಿನಗಳಲ್ಲಿ ಇದೇ ವನರಂಗವಾಯಿತು. ಗೋಪಾಲಕೃಷ್ಣ ಅಡಿಗರ ಭೂಮಿಗೀತ ದೃಶ್ಯಕಾವ್ಯ ರೂಪುಗೊಂಡು ಪ್ರದರ್ಶನಗೊಂಡ ಸ್ಥಳ ಬಳಿಕ ‘ಭೂಮಿಗೀತ’ವಾಯಿತು. ‘ಶ್ರೀರಂಗ’ ಸಭಾಂಗಣ ಇದೊಂದು ಸ್ಟುಡಿಯೋ ಥಿಯೇಟರ್.ಪ್ರಸನ್ನ ಅವರ ಅವಧಿಯಲ್ಲಿ ‘ಭೂಮಿಗೀತ’ ರಂಗಮಂದಿರ ರೂಪುಗೊಂಡಿತು. ನವರಂಗ ರಂಗೇರಿತು. ಲಂಕೇಶ್ ಆರ್ಟ್ ಗ್ಯಾಲರಿ, ಶ್ರೀರಂಗ ಸ್ಟುಡಿಯೋ, ವಾರಾಂತ್ಯ ನಾಟಕಗಳು, ಗ್ರೀಷ್ಮ ರಂಗೋತ್ಸವ, ಭಾರತೀಯ ರಂಗಶಿಕ್ಷಣ ಕೇಂದ್ರ ಶುರುವಾಯಿತು. ರಾಷ್ಟ್ರೀಯ ನಾಟಕೋತ್ಸವವಾದ ಬಹುರೂಪಿವನ್ನು ಇವರೇ ಆರಂಭಿಸಿದರು.

ಸದಾ ಸೃಜನಶೀಲವಾಗಿ ಯೋಚಿಸುತ್ತಾ, ಇರುವುದನ್ನು ಮುರಿದು ಕಟ್ಟವುದಕ್ಕೆ ಹೆಸರಾಗಿರುವ ಸಿ.ಬಸವಲಿಂಗಯ್ಯ ಅವರ ಕಾಲದಲ್ಲಿ ‘ಚಿಣ್ಣರಮೇಳ’ ಆರಂಭಗೊಂಡಿತು. ಚಿದಂಬರರಾವ್ ಜಂಬೆ ಚಿಣ್ಣರಮೇಳವನ್ನು ಬೇರೆ ಕಡೆಗೂ ವಿಸ್ತರಿಸಿದರು. ನವರಾತ್ರಿ ರಂಗೋತ್ಸವ, ಬಿ.ವಿ.ಕಾರಂತ ಯುವರಂಗ ಸಂಸ್ಕೃತಿ ಅಲ್ಪಾವಧಿ ಕೋರ್ಸ್, ನಾಡಸಿರಿ ಜಾನಪದ ಪ್ರದರ್ಶನ ಜಂಬೆ ಆರಂಭಿಸಿದರು.ರಂಗಾಯಣ ಶ್ರೀರಂಗ ರಂಗಮಾಹಿತಿ ಮತ್ತು ಸಂಶೋಧನಾ ಕೇಂದ್ರವನ್ನು ಹೊಂದಿದೆ. ಕಳೆದ ವರ್ಷದಿಂದ  ಒಂದು ವರ್ಷದ ರಂಗ ಶಿಕ್ಷಣ ಡಿಪ್ಲೊಮಾ ಸರ್ಟಿಫಿಕೇಟ್ ಕೋರ್ಸ್ ಆರಂಭವಾಗಿದೆ. ಧಾರವಾಡದಲ್ಲಿ ರಂಗಾಯ ಣದ ಶಾಖೆ ಕೆಲಸ ಮಾಡುತ್ತಿದೆ.ಕಾಯಂ ಕಲಾವಿದರು:1999 ರಲ್ಲಿ ಇಲ್ಲಿನ ಕಲಾವಿದರನ್ನು ಸರ್ಕಾರ ಕಾಯಂಗೊಳಿಸಿತು. ಇದಕ್ಕಾಗಿ ನಗರದ ಪ್ರಗತಿಪರರು ಕಲಾವಿದರ ಪರವಾಗಿ ನಿಂತರು. ಈ ವಿಷಯವಾಗಿ ಇಂದಿಗೂ ಪರ- ವಿರೋಧ ಮಾತು ಕೇಳಿಬರುತ್ತಲೇ ಇದೆ. ‘ಕಲಾವಿದರು ಜೀವನ ಭದ್ರತೆ ಕೇಳುವುದು ತಪ್ಪೇ’ ಎನ್ನುವುದು ಕಲಾವಿದರ ಪ್ರಶ್ನೆ. ರಂಗಾಯಣ ವಿವಾದದಿಂದ ದೂರವೇನೂ ಉಳಿದಿಲ್ಲ. ಸಮಯ, ಸಂದರ್ಭಗಳಲ್ಲಿ ಸೃಜನಶೀಲತೆಯನ್ನು ಹೊರತು ಪಡಿಸಿಯೂ ದೊಡ್ಡ ಸುದ್ದಿಯನ್ನು ಮಾಡಿದೆ. ಬಿ.ಜಯಶ್ರೀ ನಿರ್ದೇಶಕಿಯಾದ ನಂತರ ರಂಗಾಯಣ ‘ರಗಳೆ’ಯ ತಾಣವಾಗಿತ್ತು.ಪ್ರೊ.ಲಿಂಗದೇವರು ಹಳೆಮನೆ ನಿರ್ದೇಶಕರಾಗುವ ಸಂದರ್ಭದಲ್ಲಿಯೂ ವಿವಾದ ಉಂಟಾಯಿತು. ಈಗ ಎಲ್ಲವೂ ಮುಗಿದಿದ್ದು ರಂಗಾಯಣ ‘ಮಲೆಗಳಲ್ಲಿ ಮದುಮಗಳು’ ದಾಖಲೆಯ ನಾಟಕವನ್ನು ಪ್ರದರ್ಶಿಸಿದೆ. ವೃತ್ತರಂಗಭೂಮಿಯಲ್ಲಿ ಹೆಸರು ಮಾಡಿದ ‘ಸದಾರಮಾ’ ನಾಟಕವನ್ನು ಯಶಸ್ವಿಯಾಗಿ ಪ್ರದರ್ಶಿಸುತ್ತಿದೆ.‘ನಾವು ಕಲಾವಿದರು ರಂಗಾಯಣದೊಂದಿಗೆ ಬೆಳೆದಿದ್ದೇವೆ. ಬೆಳೆಯುತ್ತಲೇ ಇದ್ದೇವೆ’  ಎನ್ನುತ್ತಾರೆ ಕಲಾವಿದ  ಮಂಜುನಾಥ ಬೆಳೆಕೆರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.