ಬುಧವಾರ, ಮೇ 12, 2021
18 °C
ತಿಂಗಳಾಂತ್ಯಕ್ಕೆ ಘೋಷಣೆ- ಬಿಬಿಎಂಪಿ ಆಯುಕ್ತ

`22 ವಾರ್ಡ್ ಕಸಮುಕ್ತ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`22 ವಾರ್ಡ್ ಕಸಮುಕ್ತ'

ಬೆಂಗಳೂರು: `ಬಿಬಿಎಂಪಿಯ ಉಳಿದ 38 ಪ್ಯಾಕೇಜ್‌ಗಳಿಗೆ ಹೊಸ ಗುತ್ತಿಗೆದಾರರನ್ನು ನೇಮಿಸಿ ನಗರದ 198 ವಾರ್ಡ್‌ಗಳ ಕಸ ವಿಲೇವಾರಿಯನ್ನು ವೈಜ್ಞಾನಿಕವಾಗಿ ನಿರ್ವಹಿಸಲು ಒಂದು ವಾರದೊಳಗೆ ಟೆಂಡರ್ ಕರೆಯಬೇಕು' ಎಂದು ಪಾಲಿಕೆಯ ಆಯುಕ್ತ ಎಂ. ಲಕ್ಷ್ಮಿನಾರಾಯಣ ಅವರು ವಲಯ ಅಧಿಕಾರಿಗಳಿಗೆ ಆದೇಶ ನೀಡಿದರು.ಕಸ ವಿಲೇವಾರಿಗೆ ಸಂಬಂಧಿಸಿದಂತೆ ಬಿಬಿಎಂಪಿ ಪ್ರಧಾನ ಕಚೇರಿಯಲ್ಲಿ ಶುಕ್ರವಾರ ನಡೆದ ವಲಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿ, `ಈಗಾಗಲೇ 22 ವಾರ್ಡ್‌ಗಳಲ್ಲಿ ಒಣ ತ್ಯಾಜ್ಯ ವಿಂಗಡಣೆ ಘಟಕಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಈ ತಿಂಗಳಲ್ಲಿ ಕೊನೆಯಲ್ಲಿ ಈ ವಾರ್ಡ್‌ಗಳನ್ನು `ಕಸಮುಕ್ತ ಪ್ರದೇಶ'ಗಳನ್ನಾಗಿ ಘೋಷಿಸಿ, ಕಸ ವಿಂಗಡಣೆ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಈ ವಾರ್ಡ್‌ಗಳನ್ನು ಮಾದರಿ ವಾರ್ಡ್‌ಗಳನ್ನಾಗಿ ಮಾಡಲಾಗುವುದು' ಎಂದರು.`ಹಸಿ ಕಸವನ್ನು ಪ್ರತಿದಿನ ಸಂಗ್ರಹಿಸಿ, ಅದನ್ನು ಕಾಂಪೋಸ್ಟ್ ತಯಾರಿಸಲು ಕೆಸಿಡಿಸಿ ಘಟಕಕ್ಕೆ ಕಳುಹಿಸಲಾಗುವುದು. ವಾರಕ್ಕೆ ಎರಡು ದಿನ ಒಣಕಸ ಸಂಗ್ರಹಿಸಿ, ವಿಂಗಡಣಾ ಘಟಕಕ್ಕೆ ಸಾಗಿಸಿ, ಅದನ್ನು ಮರುಬಳಕೆಗೆ ಕಳುಹಿಸಿ ವಿಲೇವಾರಿ ಮಾಡಲಾಗುವುದು.ಗುತ್ತಿಗೆದಾರರು ಮತ್ತು ಅಧಿಕಾರಿಗಳು ಅವಶ್ಯಕ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು' ಎಂದು ಅವರು ಸೂಚಿಸಿದರು. ಗುತ್ತಿಗೆದಾರರು ಕಸ ವಿಂಗಡಣೆ ಮತ್ತು ವಿಲೇವಾರಿ ಕಾರ್ಯವನ್ನು ಸರಿಯಾಗಿ ನಿರ್ವಹಿಸದಿದ್ದರೆ ನಿರ್ದಾಕ್ಷಿಣ್ಯವಾಗಿ ನೋಟಿಸ್ ಜಾರಿ ಮಾಡಲು ಸೂಚಿಸಿದರು.`ಕಸ ವಿಲೇವಾರಿ ಮತ್ತು ನಗರ ಸ್ವಚ್ಛತೆಗೆ ಪ್ರತಿಯೊಬ್ಬ ನಾಗರಿಕರು, ಅಧಿಕಾರಿಗಳು, ಗುತ್ತಿಗೆದಾರರು ಮತ್ತು ಎಲ್ಲ ಚುನಾಯಿತ ಪ್ರತಿನಿಧಿಗಳ ಸಹಕಾರ ಅಗತ್ಯ. ಎಲ್ಲರೂ `ಇದು ನಮ್ಮ ನಗರ' ಎಂಬ ಭಾವನೆಯಿಂದ ಕೆಲಸ ಮಾಡಬೇಕಾಗಿದೆ. ಕಸ ಸಂಬಂಧ ನಗರಕ್ಕೆ ಬಂದ ಕಳಂಕವನ್ನು ಹೋಗಲಾಡಿಸಬೇಕು. ವಾರ್ಡ್ ಮಟ್ಟದಲ್ಲಿ ಕಸ ವಿಲೇವಾರಿಗೆ ಸಂಬಂಧಪಟ್ಟ ಸಮಸ್ಯೆಗಳಿಗೆ ಸ್ಪಂದಿಸಲು ಒಬ್ಬ ಅಧಿಕಾರಿಯನ್ನು ನೇಮಿಸಿ, ಜವಾಬ್ದಾರಿಯನ್ನು ವಹಿಸಿಕೊಡಲಾಗುವುದು' ಎಂದರು.`ಕಿರಿಯ ಆರೋಗ್ಯ ಪರಿವೀಕ್ಷಕರು ಮಾತ್ರ ಕಸ ವಿಲೇವಾರಿಯನ್ನು ನೋಡಿಕೊಳ್ಳುತ್ತಿದ್ದು, ಅವರಿಗೆ 2 ರಿಂದ 3 ವಾರ್ಡ್‌ಗಳ ಜವಾಬ್ದಾರಿಯನ್ನು ವಹಿಸಲಾಗಿದೆ. ಇದರಿಂದ ಪ್ರತಿಯೊಂದು ವಾರ್ಡ್‌ನ ಸ್ವಚ್ಛತೆ ಅಷ್ಟೊಂದು ಸಮರ್ಪಕವಾಗಿ ನೋಡಿಕೊಳ್ಳಲು ತೊಂದರೆಯಾಗುತ್ತಿದೆ' ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು.

`ಅವಶ್ಯಕತೆ ಇರುವ ಕಡೆ ಹಿರಿಯ ಆರೋಗ್ಯ ಪರಿವೀಕ್ಷಕರಿಗೂ ಕಸ ವಿಲೇವಾರಿ ಜವಾಬ್ದಾರಿ ವಹಿಸಿಕೊಡಲಾಗುವುದು' ಎಂದು  ಆಯುಕ್ತರು ಭರವಸೆ ನೀಡಿದರು.`ಪ್ರತಿ ವಾರ್ಡ್‌ನಲ್ಲಿ ಇರುವ 10 ಬ್ಲಾಕ್ ಸ್ಪಾಟ್‌ಗಳನ್ನು ಟ್ರಾನ್ಸಿಟ್ ಪಾಯಿಂಟ್‌ಗಳನ್ನಾಗಿ ಪರಿವರ್ತಿಸಿ, ಆ ಸ್ಥಳಗಳಿಂದ ಪ್ರತಿ ನಿತ್ಯ ಕಸ ಸಂಗ್ರಹಣೆ ಮತ್ತು ಅವುಗಳ ಸುತ್ತಲು ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು' ಎಂದರು.`ಸ್ವಯಂಸೇವಾ ಸಂಸ್ಥೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಮತ್ತು ಇತರೆ ಸಂಸ್ಥೆಗಳು ಕೆಲವು ರಸ್ತೆಗಳು, ಉದ್ಯಾನ ಮತ್ತು ಒಣ ತ್ಯಾಜ್ಯ ವಿಂಗಡಣೆ ಘಟಕಗಳ ನಿರ್ವಹಣೆಯ ಜವಾಬ್ದಾರಿ ನೀಡುವಂತೆ ಮನವಿ ಸಲ್ಲಿಸುತ್ತಿವೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಾರ್ವಜನಿಕರ ಸಹಭಾಗಿತ್ವಕ್ಕೆ ಸಹಕರಿಸಬೇಕು' ಎಂದು ಅವರು ಕಿವಿಮಾತು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.