ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

22 ಬ್ಯಾಂಕುಗಳಿಗೆ ರೂ. 49.5 ಕೋಟಿ ದಂಡ

`ಕೆವೈಸಿ', ಹಣ ಲೇವಾದೇವಿ ತಡೆ ನಿಯಮ ಉಲ್ಲಂಘನೆ ವಿರುದ್ಧ `ಆರ್‌ಬಿಐ' ಕ್ರಮ
Last Updated 15 ಜುಲೈ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ನಿಮ್ಮ ಗ್ರಾಹಕರನ್ನು ತಿಳಿಯಿರಿ (ಕೆವೈಸಿ) ಮತ್ತು ಹಣ ಲೇವಾದೇವಿ ತಡೆ ನಿಯಮ ಉಲ್ಲಂಘನೆಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)  ಖಾಸಗಿ ಮತ್ತು ಸರ್ಕಾರಿ ಸ್ವಾಮ್ಯದ 22 ಬ್ಯಾಂಕುಗಳಿಗೆ ಒಟ್ಟು ರೂ.49.5 ಕೋಟಿ ದಂಡ ವಿಧಿಸಿದೆ.

ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ), ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ   (ಬಿಒಬಿ) ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಫೆಡರಲ್ ಬ್ಯಾಂಕ್ ನಿಯಮ ಉಲ್ಲಂಘಿಸಿದ ಪ್ರಮುಖ ಬ್ಯಾಂಕುಗಳು. ಈ ಬ್ಯಾಂಕುಗಳಿಗೆ `ಆರ್‌ಬಿಐ' ಕ್ರಮವಾಗಿ ರೂ.3 ಕೋಟಿಯಂತೆ ದಂಡ ವಿಧಿಸಿದೆ.

 ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ, ಲಕ್ಷ್ಮೀ ವಿಲಾಸ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ), ಜಮ್ಮು ಅಂಡ್ ಕಾಶ್ಮೀರ ಬ್ಯಾಂಕ್, ಆಂಧ್ರಾ ಬ್ಯಾಂಕುಗಳಿಗೆ ಕ್ರಮವಾಗಿ ರೂ.2.5 ಕೋಟಿಯಂತೆ ದಂಡ ಹೇರಲಾಗಿದೆ. ಎಸ್‌ಬ್ಯಾಂಕ್, ವಿಜಯ ಬ್ಯಾಂಕ್, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮತ್ತು ಧನಲಕ್ಷ್ಮೀ ಬ್ಯಾಂಕುಗಳು ರೂ.2 ಕೋಟಿಯಂತೆ ದಂಡ ಪಾವತಿಸಬೇಕಿವೆ.  ಡಾಯಿಷ್ ಬ್ಯಾಂಕ್, ಡೆವಲಪ್‌ಮೆಂಟ್ ಕ್ರೆಡಿಟ್ ಬ್ಯಾಂಕ್, ಐಎನ್‌ಜಿ ವೈಶ್ಯ  ಬ್ಯಾಂಕ್, ಕೊಟಕ್ ಮಹೀಂದ್ರಾ ಮತ್ತು ರತ್ನಾಕರ ಬ್ಯಾಂಕುಗಳಿಗೆ ಸಹ `ಆರ್‌ಬಿಐ' ದಂಡ ವಿಧಿಸಿದೆ.

22 ಬ್ಯಾಂಕುಗಳಲ್ಲಿ ಡಾಯಿಷ್ ಬ್ಯಾಂಕ್ ಒಂದೇ ವಿದೇಶಿ ಬ್ಯಾಂಕ್. ಈ ಬ್ಯಾಂಕ್‌ಗೆ ರೂ.1 ಕೋಟಿ ದಂಡ ವಿಧಿಸಲಾಗಿದೆ. ರತ್ನಾಕರ ಬ್ಯಾಂಕ್‌ಗೆ ಅತ್ಯಂತ ಕಡಿಮೆ ಅಂದರೆ ರೂ.50 ಲಕ್ಷ ವಿಧಿಸಲಾಗಿದೆ. 

`ಕೆವೈಸಿ' ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸ್ಟ್ಯಾಂಡರ್ಡ್  ಚಾರ್ಟ್‌ರ್ಡ್,ಸಿಟಿಬ್ಯಾಂಕ್, ಬಿಎನ್‌ಪಿ ಪರಿಭಾಸ್, ರಾಯಲ್ ಬ್ಯಾಂಕ್ ಆಫ್ ಸ್ಕಾಟ್‌ಲ್ಯಾಂಡ್, ಬ್ಯಾಂಕ್ ಆಫ್ ಟೊಕಿಯೊ ಮಿತುಬಿಷಿ, ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ ಸೇರಿದಂತೆ 7 ಬ್ಯಾಂಕುಗಳಿಗೆ `ಆರ್‌ಬಿಐ' ಎಚ್ಚರಿಕೆ ನೀಡಿದೆ.

`ಪ್ರತಿಯೊಂದು ಪ್ರಕರಣದ ಸತ್ಯಾಸತ್ಯತೆಯನ್ನು ಪರಿಶೀಲಿಸಿದ ನಂತರ ನಿಯಮ ಉಲ್ಲಂಘನೆ ಆಗಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕೆಲವು ಬ್ಯಾಂಕುಗಳಿಗೆ ನಗದು ದಂಡ ವಿಧಿಸಲಾಗಿದೆ. ಇನ್ನು ಕೆಲವು ಬ್ಯಾಂಕುಗಳಿಗೆ ಎಚ್ಚರಿಕೆ ನೀಡಲಾಗಿದೆ' ಎಂದು `ಆರ್‌ಬಿಐ' ಪ್ರಕಟಣೆಯಲ್ಲಿ ತಿಳಿಸಿದೆ.

ದೇಶದ ಖಾಸಗಿ ವಲಯದ ಮೂರು ಬ್ಯಾಂಕುಗಳು ಕಾನೂನು ಬಾಹಿರ ರೀತಿಯಲ್ಲಿ ಹಣಕಾಸು ಚಟುವಟಿಕೆಯಲ್ಲಿ ನಿರತವಾಗಿವೆ ಎಂದು ಕೋಬ್ರಾ ಪೋಸ್ಟ್ ಅಂತರ್ಜಾಲ ಸುದ್ದಿತಾಣ ಕುಟುಕು ಕಾರ್ಯಾಚರಣೆ ನಡೆಸಿ ಆರೋಪಿಸಿತ್ತು. ಇದನ್ನು ಆಧರಿಸಿ `ಆರ್‌ಬಿಐ'  ಆ್ಯಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕುಗಳಿಗೆ  ಒಟ್ಟು ರೂ.10.5 ಕೋಟಿ ದಂಡ ವಿಧಿಸಿತ್ತು.  ಆದರೆ, ಈ ಕುರಿತು ನಡೆದ ತನಿಖೆಯಲ್ಲಿ ಅಕ್ರಮ ಹಣಕಾಸು ಚಟುವಟಿಕೆ ನಡೆದಿದೆ ಎನ್ನುವುದನ್ನು ದೃಢೀಕರಿಸಲು ಯಾವುದೇ ಖಚಿತ ಪುರಾವೆಗಳು ಲಭಿಸಿರಲಿಲ್ಲ. ಈ  ತನಿಖೆ ಇನ್ನೂ ಮುಂದುವರಿದಿದೆ ಎಂದು `ಆರ್‌ಬಿಐ' ಹೇಳಿದೆ.

`ಕೆವೈಸಿ' ನಿಯಮ ಉಲ್ಲಂಘಿಸಿರುವ 22 ಬ್ಯಾಂಕುಗಳ ಕುರಿತು ಕೂಲಂಕಷ ಪರಿಶೀಲನೆ ನಡೆಸಲಾಗುವುದು. ಆಂತರಿಕ ನಿಯಂತ್ರಣ ಮತ್ತು ಕಾರ್ಯನಿರ್ವಹಣೆ ವ್ಯವಸ್ಥೆ ಕುರಿತು ಮಾಹಿತಿ ಕಲೆ ಹಾಕಲಾಗುವುದು. ಏಪ್ರಿಲ್ ತಿಂಗಳಲ್ಲಿ  ಈ ಬ್ಯಾಂಕುಗಳ ಕಾರ್ಪೊರೇಟ್ ಕಚೇರಿ ಮತ್ತು ಕೆಲವು ಆಯ್ದ ಶಾಖೆಗಳಲ್ಲಿ ನಡೆದ ಹಣಕಾಸು ವಹಿವಾಟಿನ ಕುರಿತು  ಸಮಗ್ರ ಶೋಧನೆ ನಡೆಸಲಾಗುವುದು ಎಂದೂ `ಆರ್‌ಬಿಐ' ಪ್ರಕಟಣೆಯಲ್ಲಿ ತಿಳಿಸಿದೆ.

ನಿಯಮ ಉಲ್ಲಂಘನೆ
`ಆರ್‌ಬಿಐ'ನ ಸ್ಪಷ್ಟ ಸೂಚನೆ ಇದ್ದರೂ ಕೆಲವು ಬ್ಯಾಂಕುಗಳು ನಿಮ್ಮ ಗ್ರಾಹಕರನ್ನು ತಿಳಿಯಿರಿ (ಕೆವೈಸಿ) ನಿಯಮ ಉಲ್ಲಂಘಿಸಿವೆ.  ಚಿನ್ನದ ನಾಣ್ಯ ಮಾರಾಟ ಸೇರಿದಂತೆ ರೂ.50 ಸಾವಿರಕ್ಕಿಂತ ಹೆಚ್ಚಿನ ಮೌಲ್ಯದ ಹಣಕಾಸು ಚಟುವಟಿಕೆಗಳ ವಹಿವಾಟು ವರದಿಯನ್ನು ದಾಖಲಿಸುವಲ್ಲಿ ವಿಫಲವಾಗಿವೆ. ಕೆಲವು ಬ್ಯಾಂಕುಗಳು ಚಿನ್ನದ ಆಮದಿನ ಮೇಲೆ `ಆರ್‌ಬಿಐ' ಹೇರಿದ್ದ ನಿರ್ಬಂಧವನ್ನು ಉಲ್ಲಂಘಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT