ಬುಧವಾರ, ಆಗಸ್ಟ್ 21, 2019
28 °C

2,290 ಮೀಟರ್ ಸಮುದ್ರ ಕೊರೆತ

Published:
Updated:

ಬೆಂಗಳೂರು: ಪ್ರಸಕ್ತ ಮಳೆಗಾಲದಲ್ಲಿ ಉಡುಪಿ ಜಿಲ್ಲೆಯ ಸಮುದ್ರ ತೀರದಲ್ಲಿ 2,290 ಮೀಟರ್ ಉದ್ದದ ಪ್ರದೇಶ ಕೊರೆತಕ್ಕೆ ಒಳಗಾಗಿದ್ದು, ತುರ್ತು ಸಂರಕ್ಷಣಾ ಕಾಮಗಾರಿಗೆ ರೂ 2.27 ಕೋಟಿ ಬಿಡುಗಡೆ ಮಾಡಲಾಗಿದೆ ಎಂದು ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಬಾಬುರಾವ್ ಚಿಂಚನಸೂರ್ ಬುಧವಾರ ವಿಧಾನ ಪರಿಷತ್ತಿಗೆ ತಿಳಿಸಿದರು.ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಶೂನ್ಯ ವೇಳೆಯಲ್ಲಿ ಎತ್ತಿದ ಪ್ರಶ್ನೆಗೆ ಅವರು ಉತ್ತರಿಸಿದರು. `ಕಾಪು, ಕುಂದಾಪುರ ಮತ್ತು ಬೈಂದೂರು ಭಾಗದಲ್ಲಿ ಈ ಕೊರೆತ ಸಂಭವಿಸಿದೆ' ಎಂದು ಹೇಳಿದರು.`ಸಮುದ್ರ ಕೊರೆತದಲ್ಲಿ ತೆಂಕ ಎರ್ಮಾಳ್ ಮೀನುಗಾರಿಕಾ ರಸ್ತೆಯು ಸುಮಾರು 400 ಮೀಟರ್ ಉದ್ದದಷ್ಟು ಮತ್ತು ಮಣೂರು ಪಡುಕರೆ ಜಟ್ಟಿಕೇಶ್ವರ ದೇವಸ್ಥಾನದ ಹಿಂಭಾಗದ ರಸ್ತೆ 150 ಮೀಟರ್ ಉದ್ದದಷ್ಟು ಕೊಚ್ಚಿ ಹೋಗಿದೆ' ಎಂದು ಮಾಹಿತಿ ನೀಡಿದರು.`ಬಲವಾಗಿ ಬೀಸಿದ ಗಾಳಿಗೆ ಗಂಗೊಳ್ಳಿ ಮೀನುಗಾರಿಕಾ ಬಂದರಿನ ಎರಡು ಹರಾಜು ಮಳಿಗೆಗಳ ಛಾವಣಿ ಶೀಟು ಮತ್ತು ಬಾಗಿಲುಗಳಿಗೆ ಹಾನಿಯಾಗಿದ್ದು, ರೂ 12 ಲಕ್ಷ ವೆಚ್ಚದಲ್ಲಿ ಅವುಗಳನ್ನು ದುರಸ್ತಿಗೊಳಿಸಲಾಗುತ್ತಿದೆ' ಎಂದು ಹೇಳಿದರು.ಕಾಂಗ್ರೆಸ್‌ನ ಕೆ. ಪ್ರತಾಪಚಂದ್ರ ಶೆಟ್ಟಿ ಅವರ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, `2011-12ರ ಅವಧಿಯಲ್ಲಿ ಉಡುಪಿ ಜಿಲ್ಲೆಯ ಒಟ್ಟು 25 ಕಡೆ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗಿದೆ' ಎಂದು ತಿಳಿಸಿದರು. ಪಡುವರಿ, ಮರವಂತೆ, ಕೋಡಿ, ಬಡಾ, ತೆಂಕ ಗ್ರಾಮಗಳಲ್ಲಿ ಈ ತಡೆಗೋಡೆ ನಿರ್ಮಿಸಲಾಗಿದೆ ಎಂದು ಹೇಳಿದರು.

Post Comments (+)