ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

22ರಿಂದ ಕನ್ನಡ ನುಡಿ ತೇರು: ಚಂದ್ರು

Last Updated 4 ಫೆಬ್ರುವರಿ 2011, 10:05 IST
ಅಕ್ಷರ ಗಾತ್ರ

ಬೆಳಗಾವಿ: ‘ವಿಶ್ವ ಕನ್ನಡ ಸಮ್ಮೇಳನದ ಪ್ರಚಾರ ಹಾಗೂ ಕನ್ನಡ ಜಾಗೃತಿ ಉದ್ದೇಶದಿಂದ ಫೆ. 22ರಿಂದ 28ರ ವರೆಗೆ ಜಿಲ್ಲೆಯಾದ್ಯಂತ ಕನ್ನಡ ನುಡಿ ತೇರು ಆಯೋಜಿಸಲಾಗುತ್ತಿದೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಗುರುವಾರ ಇಲ್ಲಿ ತಿಳಿಸಿದರು.

ಕನ್ನಡ ಪರ ಸಂಘಟನೆಗಳು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಭಾಷಾ ಸೌಹಾರ್ದತೆಗೆ ಪ್ರಯತ್ನಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಎಲ್ಲ ಭಾಷಿಕರು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಈ ಜಾಥಾದಲ್ಲಿ ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು’ ಎಂದು ಹೇಳಿದರು.

‘ಕನ್ನಡ ನುಡಿ ತೇರಿನಲ್ಲಿ ಕನ್ನಡ ಅಕ್ಷರಮಾಲೆ ಹೊಂದಿರುವ ರಥ, ಜಾನಪದ ತಂಡ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಇರುತ್ತಾರೆ. ಈ ತೇರನ್ನು ವಿಶೇಷವಾಗಿ ಸಜ್ಜುಗೊಳಿಸಲಾಗಿದೆ. ತೇರು ಜಿಲ್ಲೆಯಲ್ಲಿ ಸಂಚರಿಸುವ ಸಂದರ್ಭದಲ್ಲಿ ಸ್ಥಳೀಯ ಕಲಾವಿದರನ್ನು ಬಳಸಿಕೊಳ್ಳಲಾಗುತ್ತದೆ. ಜತೆಗೆ ವಿವಿಧ ಜಾನಪದ ಮೇಳಗಳನ್ನು ಕರೆಸಲಾಗುತ್ತದೆ’ ಎಂದು ತಿಳಿಸಿದರು.
‘ಜಿಲ್ಲೆಯಾದ್ಯಂತ ಸಂಚರಿಸುವ ಕನ್ನಡ ನುಡಿ ತೇರು ಕಾರ್ಯಕ್ರಮದ ಸಮಾರೋಪ ಬೆಳಗಾವಿ ನಗರದಲ್ಲಿ ಫೆ. 28ರಂದು ನಡೆಯಲಿದೆ. ಅಂದು ಕೆಲ ನಿರ್ಣಯಗಳನ್ನು ಅಂಗೀಕರಿಸಿ ವಿಶ್ವ ಕನ್ನಡ ಸಮ್ಮೇಳನದಲ್ಲಿ ಅದರ ಜಾರಿಗೆ ಆಗ್ರಹಿಸಲಾಗುತ್ತದೆ’ ಎಂದೂ ಅವರು ವಿವರಿಸಿದರು.

ಯರು ಪಾಟೀಲ, ಶ್ರೀನಿವಾಸ ತಾಳೂಕರ, ಶೇಖರ ಹಲಸಂಗಿ, ಸುರೇಶ ಕುದಲಗಾವಿ, ಮಹಾಂತೇಶ ರಣಗಟ್ಟಿಮಠ, ಶಂಕರ ಬಾಗೇವಾಡಿ, ಜಯಶ್ರೀ ಮಾಳಗಿ, ಕಸ್ತೂರಿ ಬಾಯಿ ಮತ್ತಿತರರು ವಿವಿಧ ಸಲಹೆ ನೀಡಿದರು. ವೇದಿಕೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸಿದ್ಧನಗೌಡ ಪಾಟೀಲ, ನಾಗರಾಜ, ಸಿ.ಕೆ. ಜೋರಾಪುರ, ಎಂ.ಎಸ್. ಇಂಚಲ, ಶಿವನಗೌಡ ಪಾಟೀಲ, ಉಮಾದೇವಿ ಟೋಪಣ್ಣನವರ ಮತ್ತಿತರರು ಇದ್ದರು.

ಕನ್ನಡ, ಕನ್ನಡಿಗ, ಕರ್ನಾಟಕ ಕುರಿತು ವಿಚಾರಗೋಷ್ಠಿ
ವಿಶ್ವ ಕನ್ನಡ ಸಮ್ಮೇಳನದ ಸಂದರ್ಭದಲ್ಲಿ ಏರ್ಪಡಿಸಲು ಉದ್ದೇಶಿಸಿರುವ ‘ಕನ್ನಡ-ಕನ್ನಡಿಗ ಮತ್ತು ಕರ್ನಾಟಕ’ ವಿಚಾರಗೋಷ್ಠಿಯ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರ ಅಧ್ಯಕ್ಷತೆಯಲ್ಲಿ ಗುರುವಾರ ಸಭೆ ನಡೆಯಿತು.

ಈ ವಿಷಯದ ಅಡಿ ಒಟ್ಟು ಮೂರು ಗೋಷ್ಠಿಗಳನ್ನು ನಡೆಸಲು ತೀರ್ಮಾನಿಸಲಾಯಿತು. ಹೊರನಾಡ ಕನ್ನಡಿಗರು, ಗಡಿನಾಡು ಕನ್ನಡಿಗರು, ಕನ್ನಡ ಭಾಷೆ ಹಾಗೂ ಬಳಕೆ, ಕನ್ನಡ ನಾಡಿನ ನೆಲ-ಜಲ ರಕ್ಷಣೆ, ಶಿಕ್ಷಣ ಮಾಧ್ಯಮ ಸೇರಿದಂತೆ ವಿವಿಧ ವಿಷಯಗಳ ಒಳಗೊಂಡು ಗೋಷ್ಠಿಗಳನ್ನು ಸಂಘಟಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಬೆಳಗಾವಿಯ ಜ್ಯೋತಿ ಹೊಸೂರು, ಡಿ.ಎಸ್. ಚೌಗಲೆ, ಅಶೋಕ ಚಂದರಗಿ ಹಾಗೂ ಸ.ರಾ. ಸುಲಕೂಡೆ, ಗುಲ್ಬರ್ಗದ ಡಾ. ಬಸವರಾಜ ಸಬರದ, ಡಾ. ವಿ.ಎಸ್. ಶಂಕರ, ಭಟ್ಕಳದ ಡಾ. ಸೈಯದ ಜಮೀರ, ಧಾರವಾಡದ ಡಾ. ಸಿದ್ಧಲಿಂಗ ದೇಸಾಯಿ ಹಾಗೂ ಬಾಗಲಕೋಟೆಯ ಡಾ. ಬಾಳಾಸಾಹೇಬ ಲೋಕಾಪೂರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT