ಶುಕ್ರವಾರ, ಮೇ 7, 2021
19 °C

23ಕ್ಕೆ ಪೆಟ್ರೋಲ್ ಬಂಕ್ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: `ಡೀಲರ್‌ಗಳ ಕಮಿಷನ್ ಹೆಚ್ಚಿಸಬೇಕು, ಅನಗತ್ಯವಾಗಿ ಪೆಟ್ರೋಲ್ ಬಂಕ್‌ಗಳನ್ನು ಸ್ಥಾಪಿಸುವುದನ್ನು ನಿಲ್ಲಿಸಬೇಕು ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಅಖಿಲ ಭಾರತ ಮಟ್ಟದಲ್ಲಿ ನಡೆಯಲಿರುವ ಮುಷ್ಕ ರದ ಅಂಗವಾಗಿ ಕರ್ನಾಟಕದಲ್ಲೂ ಇದೇ 23ರಂದು ಪೆಟ್ರೋಲ್ ಬಂಕ್‌ಗಳನ್ನು ಬಂದ್ ಮಾಡಲಾಗುವುದು~ ಎಂದು ಕರ್ನಾಟಕ ಪೆಟ್ರೋಲಿಯಂ ವಿತರಕರ ಸಂಘದ ಅಧ್ಯಕ್ಷ ಪ್ರಕಾಶ ಮಿರ್ಜಾನಕರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`22ರ ಮಧ್ಯರಾತ್ರಿಯಿಂದ 23ರ ಮಧ್ಯರಾತ್ರಿ ವರೆಗೆ ಪೆಟ್ರೋಲ್ ಬಂಕ್‌ಗಳನ್ನು ಬಂದ್ ಮಾಡಲಾಗುವುದು. ಆದರೆ ಅಗತ್ಯ ಸೇವೆಗಳಿಗೆ ಹಾಗೂ ಸರ್ಕಾರಿ ವಾಹನಗಳಿಗೆ ಪೆಟ್ರೋಲ್ ನೀಡಲಾಗುವುದು~ ಎಂದು ಅವರು ತಿಳಿಸಿದರು.ಪೆಟ್ರೋಲ್ ಡೀಲರ್‌ಗಳ ಸಮಸ್ಯೆಗಳನ್ನು ಅಧ್ಯಯನ ಮಾಡಲು ಎರಡು ವರ್ಷಗಳ ಹಿಂದೆ ರಚಿಸಲಾದ ಅಪೂರ್ವ ಚಂದ್ರ (ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ) ಸಮಿತಿ ವರದಿಯನ್ನು ಜಾರಿಗೆ ತರಲು ಹಾಗೂ ಮಾರುಕಟ್ಟೆ ಶಿಸ್ತಿಗೆ ಸಂಬಂಧಿಸಿದ ನಿಯಮಾವಳಿಗಳನ್ನು ತೆಗೆದು ಹಾಕಲು  ಸಂಬಂಧಪಟ್ಟವರು ಮುಂದಾಗಲಿಲ್ಲ ಎಂದು ಅವರು ದೂರಿದರು.`ಕಳೆದ 2007ರ ಮೇಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 50.58 ರೂಪಾಯಿ ಇದ್ದಾಗ ಡೀಲರ್‌ಗಳ ಕಮಿಷನ್ 1.02 ರೂಪಾಯಿ ಇತ್ತು. ಆದರೆ 2011ರಲ್ಲಿ ಪೆಟ್ರೋಲ್ ದರ 73.25 ರೂಪಾಯಿ ಆದಾಗ ಕಮಿಷನ್ ಕೇವಲ 1.49 ರೂಪಾಯಿ ಆಗಿ ಉಳಿದಿದೆ. ಶೇಕಡಾವಾರು ಲೆಕ್ಕದಲ್ಲಿ ಡೀಲರ್‌ಗಳ ಕಮಿಷನ್ ನಿರ್ಧಾರ ಮಾಡಿದರೆ ಇಂಥ ತಾರತಮ್ಯ ಉಂಟಾಗುವುದಿಲ್ಲ~ ಎಂದು ಅವರು ಹೇಳಿದರು.ಸಂಘವು ಧಾರವಾಡ, ಬೆಳಗಾವಿ, ವಿಜಾಪುರ, ಬೀದರ್, ಬಳ್ಳಾರಿ, ರಾಯಚೂರು, ಬಾಗಲಕೋಟೆ, ಗದಗ, ಕೊಪ್ಪಳ, ಹಾವೇರಿ, ಉತ್ತರ ಕನ್ನಡ ಹಾಗೂ ಯಾದಗಿರಿ ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿದೆ. ಈ ಜಿಲ್ಲೆಗಳಲ್ಲಿ ಪಟ್ರೋಲ್ ಬಂಕ್‌ಗಳ ಬಂದ್‌ನಿಂದಾಗಿ 23ರಂದು ಮೂರು ಪೆಟ್ರೋಲಿಯಂ ಕಂಪನಿಗಳು ಸುಮಾರು 10 ಕೋಟಿ ರೂಪಾಯಿ ನಷ್ಟ ಅನುಭವಿಸಲಿವೆ ಎಂದು ಅಂದಾಜಿಸಲಾಗಿದೆ ಎಂದು ಅವರು ತಿಳಿಸಿದರು.

ಸಂಘದ ಕೋಶಾಧಿಕಾರಿ ಪ್ರಫುಲ್ ಸಿಂಘಾಲ, ಮುಖಂಡರಾದ ನರೇಂದ್ರ ಸಿಂಗ್, ರಘುನಾಥ ಜೋಶಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.