ಶುಕ್ರವಾರ, ನವೆಂಬರ್ 22, 2019
27 °C

`23 ಟಿಎಂಸಿ ಅಡಿ ನೀರು ಚರಂಡಿ ಪಾಲು'

Published:
Updated:
`23 ಟಿಎಂಸಿ ಅಡಿ ನೀರು ಚರಂಡಿ ಪಾಲು'

ಬಾಯಾರಿದೆ ಬೆಂಗಳೂರು

ಬೆಂಗಳೂರು: `ಒಂದು ಅಂಗುಲ ಜಾಗವನ್ನೂ ಬಿಡದಂತೆ ಎಲ್ಲೆಡೆ ನಾವು ಟಾರು ಹಾಕಿದ್ದರಿಂದ ಸಣ್ಣ ಮಳೆಯಾದರೂ ರಸ್ತೆಯಲ್ಲಿ ದೊಡ್ಡ ಪ್ರವಾಹ ಉಂಟಾಗುತ್ತದೆ. ಪ್ರತಿವರ್ಷ 23 ಟಿಎಂಸಿ ಅಡಿಯಷ್ಟು ಪರಿಶುದ್ಧ ನೀರು ವ್ಯರ್ಥವಾಗಿ ಚರಂಡಿ ಪಾಲಾಗುತ್ತದೆ' ಎಂದು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ (ಕೆಎಸ್‌ಸಿಎಸ್‌ಟಿ) ಜಲತಜ್ಞ ಪ್ರೊ.ಎ.ಆರ್. ಶಿವಕುಮಾರ್ ವಿಷಾದ ವ್ಯಕ್ತಪಡಿಸಿದರು.ರಾಜಾಜಿನಗರದ ಬಸವೇಶ್ವರ ಕಾಲೇಜು ಮತ್ತು ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಜಂಟಿಯಾಗಿ ಏರ್ಪಡಿಸಿರುವ `ಪರಿಸರ ಸಮಸ್ಯೆಗಳು ಮತ್ತು ಪರಿಹಾರ' ಕುರಿತ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಜಲ ಸಂರಕ್ಷಣೆ ವಿಷಯವಾಗಿ ಮಾತನಾಡಿದರು.`ವಿದ್ಯುತ್, ಸಾರಿಗೆ, ಆಹಾರ, ಹಾಲು ಉತ್ಪಾದನೆ ಮತ್ತು ಸೌಲಭ್ಯಗಳ ನಿರ್ವಹಣೆಗೆ ಖರ್ಚು ಮಾಡುವ ನೀರನ್ನು ಲೆಕ್ಕಕ್ಕೆ ತೆಗೆದುಕೊಂಡಾಗ ಪ್ರತಿದಿನ ಪ್ರತಿ ವ್ಯಕ್ತಿಗೆ 11,500 ಲೀಟರ್ ನೀರು ಖರ್ಚಾಗುತ್ತದೆ' ಎಂದು ವಿವರಿಸಿದರು.`ಕೆರೆ-ಕಟ್ಟೆ, ನದಿ ನೀರು ಉಳಿತಾಯ ಖಾತೆಯಲ್ಲಿ ಇಟ್ಟ ಹಣದಂತಾದರೆ ಅಂತರ್ಜಲ ಸಂಚಿತ ಠೇವಣಿ. ನಾವೀಗ ಉಳಿತಾಯ ಖಾತೆ ಮತ್ತು ಸಂಚಿತ ಠೇವಣಿ ಎರಡನ್ನೂ ಖಾಲಿ ಮಾಡಿದ್ದೇವೆ. ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದ ಪ್ರಮಾಣದ ಪ್ರಕಾರ  ಪ್ರತಿ ವ್ಯಕ್ತಿಗೆ ನಿತ್ಯ 135 ಲೀಟರ್ ನೀರು ಕೊಡಬೇಕು. ಆದರೆ, ತೀವ್ರವಾದ ನೀರಿನ ಕೊರತೆಯಿಂದ ಅದು ಸಾಧ್ಯವಾಗುತ್ತಿಲ್ಲ' ಎಂದು ವಾಸ್ತವ ಸಂಗತಿಯನ್ನು ತೆರೆದಿಟ್ಟರು.`ಬೆಂಗಳೂರಿನಲ್ಲಿ ಪ್ರತಿವರ್ಷದ 60 ಮಳೆ ದಿನಗಳಲ್ಲಿ ಸರಾಸರಿ ಸಾವಿರ ಮಿಲಿ ಮೀಟರ್ ಮಳೆ ಆಗುತ್ತದೆ. ಅದರ ಶೇ 85ರಷ್ಟು ಪ್ರಮಾಣ ಸಂಜೆ 4ರಿಂದ 7ರ ಅವಧಿಯಲ್ಲಿ ಸುರಿಯುತ್ತದೆ. 60/40 ಅಡಿ ಜಾಗದಲ್ಲಿ 20,6000 ಲೀಟರ್ ಮಳೆ ನೀರನ್ನು ಸಂಗ್ರಹಿಸಲು ಸಾಧ್ಯವಿದೆ. ಇಂತಹ 16 ಲಕ್ಷ ಕಟ್ಟಡಗಳು ನಗರದಲ್ಲಿದ್ದು, ಸ್ವಾವಲಂಬನೆ ಸಾಧಿಸುವಷ್ಟು ಮಳೆ ನೀರು ಸಂಗ್ರಹ ಮಾಡಬಹುದಾಗಿದೆ' ಎಂದು ವಿವರಿಸಿದರು.`ಕಾವೇರಿ ನದಿಯಿಂದ ನಗರಕ್ಕೆ 19 ಟಿಎಂಸಿ ಅಡಿ ನೀರು ತರಲು ನಾವು ಪರದಾಡುತ್ತೇವೆ. ಆದರೆ, ಮಳೆ ನೀರು ಸಂಗ್ರಹಿಸಿದರೆ 23 ಟಿಎಂಸಿ ಅಡಿಯಷ್ಟು ನೀರು ನಮ್ಮಲ್ಲಿಯೇ ಲಭ್ಯವಾಗಲಿದೆ. ಮಳೆ ನೀರು ಸಂಗ್ರಹಕ್ಕೆ ಸುಲಭದ ತಂತ್ರಜ್ಞಾನಗಳು ಇದ್ದು, ಹೆಚ್ಚಿನ ಖರ್ಚು ಮಾಡಬೇಕಿಲ್ಲ' ಎಂದು ಹೇಳಿದರು. ವಿಧಾನಸೌಧ, ಬಿಬಿಎಂಪಿ ಕಟ್ಟಡವೂ ಸೇರಿದಂತೆ ಹಲವೆಡೆ ಮಳೆ ನೀರು ಸಂಗ್ರಹದ ವ್ಯವಸ್ಥೆ ಮಾಡಿರುವ ಯಶಸ್ಸಿನ ಕಥೆಗಳನ್ನು ಅವರು ಹಂಚಿಕೊಂಡರು.ಕಾರ್ಯಾಗಾರ ಉದ್ಘಾಟಿಸಿದ ಗುಲ್ಬರ್ಗಾ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಎಸ್. ಮೂರ್ತಿ, `ಪರಿಸರದ ಸಂರಕ್ಷಣೆಯಲ್ಲಿ ಇಂಧನ, ನೀರು, ತ್ಯಾಜ್ಯ ಮತ್ತು ಸಾರಿಗೆ ವ್ಯವಸ್ಥೆ ನಿರ್ವಹಣೆ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ' ಎಂದು ಅಭಿಪ್ರಾಯಪಟ್ಟರು. `ಕಲ್ಲಿದ್ದಲು ಸುಟ್ಟು ನಾವು ವಿದ್ಯುತ್ ಉತ್ಪಾದನೆ ಮಾಡುತ್ತೇವೆ. ಅಂತಹ ವಿದ್ಯುತ್‌ನಿಂದ ಗೀಸರ್ ಮೂಲಕ ನೀರು ಕಾಯಿಸುತ್ತೇವೆ. ಇದರಿಂದ ಶಕ್ತಿಯ ಅಪವ್ಯಯ ಆಗುತ್ತದೆ' ಎಂದು ವಿಶ್ಲೇಷಿಸಿದರು.`ಅಕ್ಕ-ಪಕ್ಕದ ಹಳ್ಳಿಗಳ ಗುಂಪು ರಚನೆ ಮಾಡಿ, ಅಲ್ಲಿಗೆ ಅಗತ್ಯವಾದ ಇಂಧನ ತಂತ್ರಜ್ಞಾನವನ್ನು ಸ್ಥಳೀಯವಾಗಿ ಒದಗಿಸಿಕೊಡಬೇಕು. ಆದರೆ, ಇಂತಹ ವಿಷಯಗಳಲ್ಲಿ ಏನೂ ಗೊತ್ತಿರದ ರಾಜಕಾರಣಿಗಳು ಮತ್ತು ಅಧಿಕಾರಿಗಳು ನಿರ್ಧಾರ ತೆಗೆದುಕೊಳ್ಳುವರೇ ಹೊರತು ವಿಜ್ಞಾನಿಗಳಿಗೆ ಯಾವುದೇ ಪಾತ್ರ ಇಲ್ಲ' ಎಂದು ವಿಷಾದಿಸಿದರು.`ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರೈಲ್ವೆ ಮಾರ್ಗ ನಿರ್ಮಾಣ ಮಾಡುವುದು ಅತ್ಯಂತ ಸುಲಭವಾಗಿದ್ದು, ಚಿಕ್ಕಬಳ್ಳಾಪುರ ಕಡೆಗಿನ ಮಾರ್ಗವನ್ನು ತುಸು ವಿಸ್ತರಣೆ ಮಾಡಿದರೂ ಸಾಕು. ಜೋಡಿಮಾರ್ಗವಾದರೆ ವಿಮಾನ ನಿಲ್ದಾಣಕ್ಕೆ ಜನರನ್ನು ಕರೆದೊಯ್ಯಲು ಬಸ್ಸು-ಕಾರುಗಳು ಬೇಕಾಗಿಯೇ ಇಲ್ಲ ಎನ್ನುವ ಸಲಹೆ ನೀಡಿದ್ದೆ. ಅದಾಗಿದ್ದರೆ ಎಕ್ಸ್‌ಪ್ರೆಸ್ ಹೆದ್ದಾರಿ, ಮೆಟ್ರೊ ಸಂಪರ್ಕ ಎಂದೆಲ್ಲ ಖರ್ಚು ಮಾಡುವ ಅಗತ್ಯವೇ ಇರಲಿಲ್ಲ' ಎಂದು ಹೇಳಿದರು.ಪ್ರಧಾನ ಭಾಷಣ ಮಾಡಿದ ಪರಿಸರವಾದಿ ಸುರೇಶ್ ಹೆಬ್ಳೀಕರ್, `ಅಭಿವೃದ್ಧಿ ಹೆಸರಿನಲ್ಲಿ ಜನರ ಜೀವನ ವ್ಯವಸ್ಥೆಯನ್ನೇ ಹಾಳು ಮಾಡಿದ್ದೇವೆ. ಅದರ ದುಷ್ಪರಿಣಾಮ ಪರಿಸರದ ಮೇಲೂ ಬೀರಿದೆ. ಬೆಂಗಳೂರು ನಗರ ಪಾಲಿಕೆಗೆ ನೂರಕ್ಕೂ ಅಧಿಕ ಹಳ್ಳಿಗಳನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ಕೃಷಿ ಚಟುವಟಿಕೆಯೇ ಸ್ಥಗಿತಗೊಳ್ಳುವಂತೆ ಮಾಡಲಾಗಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು. `ಅಭಿವೃದ್ಧಿ ಹೆಸರಿನಲ್ಲಿ ಎಲ್ಲವನ್ನೂ ನಾಶ ಮಾಡಲಾಗುತ್ತಿದೆ' ಎಂದು ಸಿಟ್ಟಿನಿಂದ ಹೇಳಿದರು. ಬಸವೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಸ್.ಎಸ್. ದೊಡ್ಡಣ್ಣವರ ಅಧ್ಯಕ್ಷತೆ ವಹಿಸಿದ್ದರು.

ಪ್ರತಿಕ್ರಿಯಿಸಿ (+)