23 ದಿನಗಳಲ್ಲಿ ನಾಲ್ಕು ಬಾರಿ ಬಂದ್!

7

23 ದಿನಗಳಲ್ಲಿ ನಾಲ್ಕು ಬಾರಿ ಬಂದ್!

Published:
Updated:

ಬೆಂಗಳೂರು: ರಾಜ್ಯದಲ್ಲಿ ಕಳೆದ 23 ದಿನಗಳಲ್ಲಿ ನಾಲ್ಕು ಬಂದ್‌ಗಳು ನಡೆದಿದ್ದು, ನಾಗರೀಕರು ಬಂದ್‌ಗಳ ಜತೆಯೇ ಬದುಕು ನಡೆಸುವಂತಾಗಿದೆ.ಕಾವೇರಿ ನದಿ ನೀರು ಹಂಚಿಕೆ ವಿಷಯಕ್ಕೆ ಸಂಬಂಧಿಸಿದಂತೆ ಶನಿವಾರ ನಡೆದ `ಕರ್ನಾಟಕ ಬಂದ್~ನಿಂದ ಜನ ಜೀವನ ಸಂಪೂರ್ಣ ಸ್ತಬ್ಧಗೊಂಡಿತ್ತು. ಈ ಹಿಂದೆ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆ.14 ಮತ್ತು ಸೆ.15 ರಂದು ರಾಜ್ಯ ರಸ್ತೆ ಸಾರಿಗೆ ನೌಕರರು ರಾಜ್ಯದಾದ್ಯಂತ ಮುಷ್ಕರ ನಡೆಸಿದರು. ಇದರಿಂದ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿತ್ತು.

ಬಸ್‌ಗಳಿಲ್ಲದೇ ಪ್ರಯಾಣಿಕರು ಪರದಾಡುವಂತಾಗಿತ್ತು. ಈ ವೇಳೆ ಜನರು ಸ್ವಂತ ವಾಹನಗಳಲ್ಲಿ ರಸ್ತೆಗಿಳಿದ ಕಾರಣ ಇಡೀ ಬೆಂಗಳೂರಿನ ಸಂಚಾರ ಅಸ್ತವ್ಯಸ್ತಗೊಂಡಿತ್ತು.ಸಾರಿಗೆ ಸಂಸ್ಥೆಯ ನೌಕರರ ಬಂದ್ ಬಿಸಿ ಆರುವ ಮೊದಲೇ, ಕೇಂದ್ರ ಸರ್ಕಾರದ ಪೆಟ್ರೋಲ್ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಎನ್‌ಡಿಎ ಮತ್ತು ಎಡಪಕ್ಷಗಳು ಸೆ.20 ರಂದು ಭಾರತ ಬಂದ್‌ಗೆ ಕರೆ ಕೊಟ್ಟವು.ಅಂಗಡಿ ಮುಂಗಟ್ಟುಗಳೆಲ್ಲಾ ಮುಚ್ಚಿದರಿಂದ ಜನ ಅಗತ್ಯ ವಸ್ತುಗಳಿಗಾಗಿ ಪರಿತಪಿಸಿದರು. ಆಟೊ ಚಾಲಕರ ಸಂಘ, ಟ್ಯಾಕ್ಸಿ ಮತ್ತು ಲಾರಿ ಮಾಲೀಕರ ಸಂಘಗಳೂ ಬಂದ್‌ಗೆ ಬೆಂಬಲಿಸಿದ್ದರಿಂದ ಜನರು ತೀವ್ರ ತೊಂದರೆ ಅನುಭವಿಸಿದ್ದರು. ಪೆಟ್ರೋಲ್ ವಿತರಕರ ಕಮಿಷನ್ ಹೆಚ್ಚಿಸಬೇಕು ಎಂದು ಆಗ್ರಹಿಸಿ ರಾಜ್ಯದಲ್ಲಿ ಅ.1 ಮತ್ತು ಅ.2 ಪೆಟ್ರೋಲ್ ವಿತರಕರ ಸಂಘದ ಸದಸ್ಯರು ಎರಡು ದಿನಗಳ ಕಾಲ ಪೆಟ್ರೋಲ್ ಬಂಕ್ ಬಂದ್ ನಡೆಸಿದರು. ಇದರ ಪರಿಣಾಮ ಪೆಟ್ರೋಲ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ವಾಹನ ಸವಾರರಿಗೆ ಅಲ್ಪ ಪ್ರಮಾಣದ ತೊಂದರೆಯಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry