ಬುಧವಾರ, ಡಿಸೆಂಬರ್ 11, 2019
21 °C

23 ಮಕ್ಕಳಿಗೆ ಶೌರ್ಯ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

23 ಮಕ್ಕಳಿಗೆ ಶೌರ್ಯ ಪ್ರಶಸ್ತಿ

ನವದೆಹಲಿ (ಪಿಟಿಐ): ರಾಜಸ್ತಾನದ ಏಳು ವರ್ಷದ ಶ್ರವಣ್‌ಕುಮಾರ್ ಮತ್ತು ಅರುಣಾಚಲಪ್ರದೇಶದ 16 ವರ್ಷದ ಇಪಿ ಬಸಾರ್ ಈ ಇಬ್ಬರೂ ಭೌಗೋಳಿಕವಾಗಿ ಸಾವಿರಾರು ಮೈಲಿಗಳ ದೂರದಲ್ಲಿದ್ದರೂ ಒಂದು ವಿಷಯದಲ್ಲಿ ಇಬ್ಬರೂ ಸಮಾನ ಆಸಕ್ತರು- ಇಬ್ಬರೂ ಧೈರ್ಯಶಾಲಿಗಳು.

ಇಬ್ಬರು ಮಕ್ಕಳು ಮತ್ತು ಪಾರ್ಶ್ವವಾಯು ಪೀಡಿತ ಮಹಿಳೆ ಬೆಂಕಿಯಲ್ಲಿ ಬೆಂದು ಕರಕಲಾಗುವುದನ್ನು ಇವರಿಬ್ಬರು ತಪ್ಪಿಸಿದ್ದಾರೆ. ಜೀವ ಉಳಿಸಿದ ಈ ಕಾರ್ಯಕ್ಕಾಗಿ ಇತರ 21 ಮಂದಿಯೊಂದಿಗೆ ಇವರು ಪ್ರಶಸ್ತಿಗೆ  ಆಯ್ಕೆಯಾಗಿದ್ದಾರೆ.

ಪಶ್ಚಿಮಬಂಗಾಳದ ಸುನಿತಾ ಮುರ್ಮು (16) ಅವರೂ ಶೌರ್ಯ ಪ್ರಶಸ್ತಿ ಗಳಿಸಿದ್ದಾರೆ. ಬೇರೆ ಪಂಗಡದ ಹುಡುಗನ ಜತೆ ಸಂಬಂಧ ಹೊಂದಿದ್ದಕ್ಕಾಗಿ ತನ್ನನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ತನ್ನದೇ ಬುಡಕಟ್ಟಿನ ಆರೋಪಿಗಳನ್ನು ಪತ್ತೆ ಹಚ್ಚಲು ಈಕೆ ಜೀವ ಬೆದರಿಕೆ ಇದ್ದಾಗಲೂ ಪೊಲೀಸರಿಗೆ ನೆರವಾಗಿದ್ದರು.

ರಾಜಸ್ತಾನದ ಗ್ರಾಮವೊಂದರಲ್ಲಿ ಶ್ರವಣ್‌ಕುಮಾರ್ ತನ್ನ ಗೆಳೆಯರೊಂದಿಗೆ ಆಡುತ್ತಿದ್ದಾಗ ನೆರೆಯಲ್ಲಿದ್ದ ಗುಡಿಸಲು ಅಗ್ನಿಗೆ ಆಹುತಿಯಾಗಿ ಇಬ್ಬರು ಮಕ್ಕಳು ಅಳುತ್ತಿದ್ದುದನ್ನು ಕಂಡ. ಆತ ಹಿಂಜರಿಯಲಿಲ್ಲ. ಗುಡಿಸಲೊಳಗೆ ನುಗ್ಗಿ ಒಂದು ವರ್ಷದ ಹೆಣ್ಣು ಮಗುವನ್ನು ಎತ್ತಿಕೊಂಡು ಮತ್ತು ಆಕೆಯ ಸೋದರಿ ಎರಡು ವರ್ಷದ ಮಗುವನ್ನು ಕೈಹಿಡಿದು ಹೊರಗೆ ಕರೆತಂದು ರಕ್ಷಿಸಿದ. 23 ಜನ ಪ್ರಶಸ್ತಿ ಪುರಸ್ಕೃತರದಲ್ಲಿ ಈತ ಅತ್ಯಂತ ಕಿರಿಯ.

ಕೇರಳದ ನಾಲ್ವರಿಗೆ, ಅಸ್ಸಾಂ, ಮೇಘಾಲಯ, ಉತ್ತರಾಖಂಡ ಮತ್ತು ಛತ್ತೀಸ್‌ಗಡದ ತಲಾ ಇಬ್ಬರಿಗೆ,  ರಾಜಸ್ತಾನದ ಮೂವರಿಗೆ, ಉತ್ತರ ಪ್ರದೇಶ, ಸಿಕ್ಕಿಂ, ಮಣಿಪುರ, ಅರುಣಾಚಲ, ಮಹಾರಾಷ್ಟ್ರ, ಮಧ್ಯಪ್ರದೇಶ, ಮಿಜೋರಂ ಮತ್ತು ಪಶ್ಚಿಮಬಂಗಾಳದಲ್ಲಿ ತಲಾ ಒಬ್ಬರಿಗೆ  ಈ ಪ್ರಶಸ್ತಿ ಲಭಿಸಿದೆ ಎಂದು ಐಸಿಸಿಡಬ್ಲ್ಯುದ ಅಧ್ಯಕ್ಷೆ ಗೀತಾ ಸಿದ್ದಾರ್ಥ ಹೇಳಿದರು.

ಪಂಜಾಬ್‌ನ 11 ವರ್ಷದ ಗುರುಜೀವನ್ ಸಿಂಗ್  ಇಬ್ಬರು ಸಶಸ್ತ್ರಧಾರಿಗಳ ಮೇಲೆ ಇಟ್ಟಿಗೆಯಿಂದ  ದಾಳಿ ನಡೆಸಿ ಅವರನ್ನು ಹಿಡಿದುಕೊಟ್ಟಿದ್ದಾನೆ ಮತ್ತು ಬ್ಯಾಂಕ್ ದರೋಡೆಯನ್ನು ತಡೆದಿದ್ದಾನೆ.

‘ನಾನು ಅವರ ಜತೆ ಹೋರಾಟಕ್ಕೆ ಇಳಿದೆ. ಅವರು ನನ್ನತ್ತ ಗುಂಡು ಹಾರಿಸಿದರು. ಆದರೆ ನಾನು ತಪ್ಪಿಸಿಕೊಂಡೆ. ಅವರತ್ತ ಇಟ್ಟಿಗೆ ಎಸೆದು ದಾಳಿ ನಡೆಸಿದೆ. ಪಿಸ್ತೂಲು ಅವರ ಕೈಯಿಂದ ಕೆಳಗೆ ಬಿತ್ತು. ಇತರರು ಅವರನ್ನು ಹಿಡಿಯಲು ಸಫಲರಾದರು’ ಎಂದು ಗುರುಜೀವನ್ ಹೇಳುತ್ತಾನೆ.

ಭೋಪಾಲ್‌ನ 9ನೇ ತರಗತಿ ವಿದ್ಯಾರ್ಥಿ ಮೂನಿಸ್ ಖಾನ್ ರೈಲ್ವೆ ಹಳಿ ಮೇಲೆ ಕುಳಿತು ಅಲ್ಲಿಂದ ಚಲಿಸಲಾರದೆ ಇದ್ದ 55 ವರ್ಷದ ವ್ಯಕ್ತಿಯ ಜೀವ ಉಳಿಸಿದ್ದರೆ, ಉತ್ತರಾಖಂಡದ 10 ವರ್ಷದ ಪ್ರಿಯಾಂಶು ಜೋಶಿ ತನ್ನ ಸ್ಕೂಲ್ ಬ್ಯಾಗಿನಿಂದ ಚಿರತೆ ವಿರುದ್ಧ ಹೋರಾಡಿ  ತಂಗಿಯನ್ನು ರಕ್ಷಿಸಿದ. ಮಹಿಳೆ ಮತ್ತು ಆಕೆಯ ಮಗ ನೀರಿನಲ್ಲಿ ಮುಳುಗುವುದನ್ನು ಕೇರಳದ ಜಿಸ್ಮಿ ತಪ್ಪಿಸಿದ್ದಾರೆ.

ಪ್ರತಿಕ್ರಿಯಿಸಿ (+)