ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

23 ಸಾವಿರ ಸೀಟುಗಳು ಖಾಲಿ!

Last Updated 16 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎಂಜಿನಿಯರಿಂಗ್ ಪದವಿ ಕೋರ್ಸ್‌ಗಳಿಗೆ ಸೇರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಈ ವರ್ಷ ಸುಮಾರು 23 ಸಾವಿರ ಎಂಜಿನಿಯರಿಂಗ್ ಸೀಟುಗಳು ಖಾಲಿ ಉಳಿಯಲಿವೆ.
ಪ್ರತಿವರ್ಷ ಎಂಜಿನಿಯರಿಂಗ್‌ನಲ್ಲಿ 6-7 ಸಾವಿರ ಸೀಟುಗಳು ಉಳಿಯುತ್ತಿದ್ದವು. ಆದರೆ ಈ ವರ್ಷ ಅಧಿಕ ಸಂಖ್ಯೆಯ ಸೀಟುಗಳು ಉಳಿದಿವೆ. `ಕಾಮೆಡ್-ಕೆ~ ಕೋಟಾದಲ್ಲಿ ಅರ್ಧದಷ್ಟು ಸೀಟುಗಳು ಭರ್ತಿಯಾಗಿಲ್ಲ. ಈ ಕೋಟಾದಲ್ಲಿ ಇದುವರೆಗೆ 6,161 ಸೀಟುಗಳು ಹಂಚಿಕೆಯಾಗಿದ್ದು, ಇನ್ನೂ 9,442 ಸೀಟುಗಳು ಖಾಲಿ ಇವೆ. ಸಾವಿರಾರು ಸೀಟುಗಳು ಭರ್ತಿಯಾಗದೆ ಉಳಿದಿರುವುದರಿಂದ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಆತಂಕಕ್ಕೆ ಒಳಗಾಗಿವೆ.

ಸೋಮವಾರ (ಸೆ.12) ಕಾಮೆಡ್-ಕೆ ಎರಡನೇ ಸುತ್ತಿನ ಕೌನ್ಸೆಲಿಂಗ್ ಆರಂಭಿಸಿದಾಗ 9,773 ಸೀಟುಗಳು ಹಂಚಿಕೆಗೆ ಲಭ್ಯವಿದ್ದವು. ಶುಕ್ರವಾರ ಸಂಜೆ ಕೌನ್ಸೆಲಿಂಗ್ ಅಂತ್ಯಗೊಂಡ ನಂತರ 9,442 ಸೀಟುಗಳು ಖಾಲಿ ಇದ್ದವು. ಅಂದರೆ ಐದು ದಿನಗಳಲ್ಲಿ ಕೇವಲ 331 ಸೀಟುಗಳು ಮಾತ್ರ ಹಂಚಿಕೆಯಾಗಿವೆ.

ಇದೇ 19ಕ್ಕೆ ಕೌನ್ಸೆಲಿಂಗ್ ಅಂತ್ಯಗೊಳ್ಳಲಿದ್ದು, ಉಳಿದ ಎರಡು ದಿನಗಳಲ್ಲಿ ಹೆಚ್ಚೆಂದರೆ 200 ಸೀಟುಗಳು ಭರ್ತಿಯಾಗಬಹುದು. ಇದನ್ನು ಗಮನಿಸಿದರೆ ಕಾಮೆಡ್-ಕೆ ಕೋಟಾದಲ್ಲಿ ಒಟ್ಟಾರೆ 9 ಸಾವಿರಕ್ಕೂ ಅಧಿಕ ಸೀಟುಗಳು ಉಳಿಯಲಿವೆ.

ಸರ್ಕಾರದೊಂದಿಗೆ ಆರಂಭದಲ್ಲೇ ಸಂಘರ್ಷಕ್ಕೆ ಇಳಿದಿದ್ದ ಕಾಮೆಡ್-ಕೆ ಅಂತಿಮವಾಗಿ ಶೇ 55ರಷ್ಟು ಸೀಟುಗಳು ಮತ್ತು ಹೆಚ್ಚಿನ ಶುಲ್ಕ ಲಭ್ಯವಾಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ ನಿರೀಕ್ಷೆಯಂತೆ ಸೀಟುಗಳು ಹಂಚಿಕೆಯಾಗದೆ ಖಾಲಿ ಉಳಿದಿರುವುದರಿಂದ ಕಾಮೆಡ್-ಕೆಗೆ ತೀವ್ರ ಹಿನ್ನಡೆಯಾಗಿದೆ.

ಈ ವರ್ಷ ಕಾಮೆಡ್-ಕೆಗೆ ಒಟ್ಟು 19,369 ಸೀಟುಗಳು ಲಭ್ಯವಾಗಿದ್ದವು. ಆದರೆ ಪ್ರವೇಶ ಸುತ್ತಿನಲ್ಲಿ 6,847 ಸೀಟುಗಳು ಮಾತ್ರ ಹಂಚಿಕೆಯಾಗಿದ್ದವು. ಇದಾದ ನಂತರ 898 ವಿದ್ಯಾರ್ಥಿಗಳು ಸೀಟುಗಳನ್ನು ಹಿಂತಿರುಗಿಸಿದ್ದಾರೆ. ಹೀಗಾಗಿ ಪ್ರವೇಶ ಸುತ್ತಿನಲ್ಲಿ ಅಂತಿಮವಾಗಿ 5,949 ಸೀಟುಗಳು ಮಾತ್ರ ಹಂಚಿಕೆಯಾದವು.

ಕಾಮೆಡ್-ಕೆ ಸೀಟುಗಳಿಗೆ ಬೇಡಿಕೆ ಇಲ್ಲ ಎಂಬುದನ್ನು ಮೊದಲೇ ಅರಿತಿದ್ದ ಕೆಲವೊಂದು ಕಾಲೇಜುಗಳು ಕೌನ್ಸೆಲಿಂಗ್ ಆರಂಭಕ್ಕೂ ಮೊದಲೇ 3,661 ಸೀಟುಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಬಿಟ್ಟುಕೊಟ್ಟಿದ್ದವು. ಹೇಗಿದ್ದರೂ ಅಧಿಕ ಶುಲ್ಕ ನೀಡಿ ಕಾಮೆಡ್-ಕೆ ಕೋಟಾ ಸೀಟುಗಳಿಗೆ ಪ್ರವೇಶ ಪಡೆಯುವುದಿಲ್ಲ.

ಪ್ರಾಧಿಕಾರಕ್ಕೆ ನೀಡಿದರೆ ಕೊನೆ ಪಕ್ಷ ಸರ್ಕಾರಿ ಕೋಟಾ ಸೀಟುಗಳಿಗೆ ನಿಗದಿಪಡಿಸಿರುವ ಶುಲ್ಕವಾದರೂ ಬರುತ್ತದೆ ಎಂಬುದು ಸೀಟುಗಳನ್ನು ಬಿಟ್ಟುಕೊಟ್ಟ ಕಾಲೇಜುಗಳ ಲೆಕ್ಕಾಚಾರವಾಗಿತ್ತು.

ಸಿಇಟಿ ಕೋಟಾ: ಸರ್ಕಾರಿ ಕೋಟಾದ ಎಂಜಿನಿಯರಿಂಗ್ ಸೀಟುಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಕೌನ್ಸೆಲಿಂಗ್ ಶುಕ್ರವಾರ ಅಂತ್ಯಗೊಂಡಿದ್ದು, 13 ಸಾವಿರಕ್ಕೂ ಅಧಿಕ ಸೀಟುಗಳು ಭರ್ತಿಯಾಗದೆ ಖಾಲಿ ಉಳಿದಿವೆ. ರಾಜಧಾನಿಯ ಪ್ರತಿಷ್ಠಿತ ಕಾಲೇಜುಗಳು ಸೇರಿದಂತೆ ನಗರ ಪ್ರದೇಶಗಳ ಕಾಲೇಜುಗಳಲ್ಲಿ ಬಹುತೇಕ ಎಲ್ಲ ಸೀಟುಗಳು ಭರ್ತಿಯಾಗಿವೆ. ಆದರೆ ಗ್ರಾಮೀಣ ಭಾಗದ ಮತ್ತು ಹೊಸ ಕಾಲೇಜುಗಳಲ್ಲಿ ಸಾಕಷ್ಟು ಸೀಟುಗಳು ಖಾಲಿ ಇವೆ.

ಈ ವರ್ಷ ಕೆಲ ಕಾಲೇಜುಗಳಲ್ಲಿ ಸೀಟುಗಳು ಹೆಚ್ಚಳವಾಗಿದ್ದಲ್ಲದೆ ಹೊಸ ಕಾಲೇಜುಗಳು ಆರಂಭವಾಗಿವೆ. ಹೀಗಾಗಿ ಒಟ್ಟು 83,489 ಸೀಟುಗಳು ಲಭ್ಯವಿದ್ದವು. ಈ ಪೈಕಿ 47,697 ಸೀಟುಗಳು ಸರ್ಕಾರಿ ಕೋಟಾಗೆ ಮೀಸಲಾಗಿದ್ದವು. ರಾಜ್ಯದಲ್ಲಿ ನಾಯಿಕೊಡೆಗಳಂತೆ ಎಂಜಿನಿಯರಿಂಗ್ ಕಾಲೇಜುಗಳು ತಲೆ ಎತ್ತಿದ್ದು, ಪ್ರತಿ ವರ್ಷ ಸೀಟುಗಳ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ಪರಿಸ್ಥಿತಿ ಇದೇ ರೀತಿ ಮುಂದುವರಿದರೆ ಬರುವ ದಿನಗಳಲ್ಲಿ ಕಾಲೇಜುಗಳನ್ನು ಮುಚ್ಚುವ ಸ್ಥಿತಿ ಬರಬಹುದು ಎಂಬ ಆತಂಕ ಕಾಲೇಜುಗಳ ಆಡಳಿತ ಮಂಡಳಿಗಳನ್ನು ಕಾಡುತ್ತಿದೆ.

ಪಿಯುಸಿಯಲ್ಲಿ ವಿಜ್ಞಾನ ವಿಭಾಗಕ್ಕೆ ಸೇರುವವರ ಮತ್ತು ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಿ ಎಂಜಿನಿಯರಿಂಗ್ ಕೋರ್ಸ್‌ಗಳಿಗೆ ಸೇರ್ಪಡೆಯಾಗುವವರ ಸಂಖ್ಯೆಯನ್ನು ಗಮನಕ್ಕೆ ತೆಗೆದುಕೊಳ್ಳದೆ ಮನಬಂದಂತೆ ಎಂಜಿನಿಯರಿಂಗ್ ಕಾಲೇಜುಗಳಿಗೆ ಅನುಮತಿ ನೀಡುತ್ತಿರುವುದೇ ಈ ರೀತಿಯ ಸಮಸ್ಯೆಗೆ ಕಾರಣ ಎಂದು ಕಾಮೆಡ್-ಕೆ ಮುಖ್ಯಕಾರ್ಯನಿರ್ವಾಹಕ ಎ.ಎಸ್.ಶ್ರೀಕಾಂತ್ ಅಭಿಪ್ರಾಯಪಟ್ಟರು.

 ವಿದ್ಯಾರ್ಥಿಗಳು ಪೋಷಕರ ಮನವಿಗೆ ಸ್ಪಂದಿಸಿ  ಎಂಜಿನಿಯರ್ ಪ್ರವೇಶಕ್ಕೆ ಮೊದಲಿನ ಹಾಗೆ  ಪಿಯುಸಿಯಲ್ಲಿ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಶೇ 45ರಷ್ಟು, ಪರಿಶಿಷ್ಟ ಜಾತಿ/ಪಂಗಡ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಶೇ 40ರಷ್ಟು ಅಂಕಗಳನ್ನು ಪಡೆದಿದ್ದರೆ ಪ್ರವೇಶಕ್ಕೆ ಅರ್ಹರು ಎಂದು ಎಐಸಿಟಿಇ ತಿಳಿಸಿತು. ಇಷ್ಟಾದರೂ ಎಂಜಿನಿಯರಿಂಗ್ ಕೋರ್ಸ್‌ಗಳ ಸೀಟುಗಳು ಮಾತ್ರ ಭರ್ತಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT