ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

236 ಅಂಚೆ ಕಚೇರಿಗಳಲ್ಲಿ ಆಧಾರ್ ನೋಂದಣಿಗೆ ಚಾಲನೆ

Last Updated 24 ಜೂನ್ 2011, 19:05 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಆಯ್ದ 236 ಅಂಚೆ ಕಚೇರಿಗಳ ಮೂಲಕ `ಆಧಾರ್~ ವಿಶಿಷ್ಟ ಗುರುತಿನ ಚೀಟಿ ಸಂಖ್ಯೆ ನೋಂದಣಿ ಪ್ರಕ್ರಿಯೆಗೆ ಶುಕ್ರವಾರ ನಗರದಲ್ಲಿ ಚಾಲನೆ ನೀಡಲಾಯಿತು.

ಪ್ರಾಥಮಿಕ ಹಂತದಲ್ಲಿ ಶನಿವಾರದಿಂದಲೇ ಬೆಂಗಳೂರಿನ 20 ಅಂಚೆ ಕಚೇರಿಗಳಲ್ಲಿ ಈ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಅಂಚೆ ಇಲಾಖೆ ತಿಳಿಸಿದ್ದು, ಜುಲೈನೊಳಗೆ ರಾಜ್ಯದ ಆಯ್ದ 236 ಅಂಚೆ ಕಚೇರಿಗಳಲ್ಲಿ ಹಂತ-ಹಂತವಾಗಿ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ.

ಇದಲ್ಲದೆ, ರಾಜ್ಯ ಸರ್ಕಾರ ಕೂಡ ಬೃಹತ್ ಪ್ರಮಾಣದಲ್ಲಿ `ಆಧಾರ್~ ನೋಂದಣಿ ಪ್ರಕ್ರಿಯೆ ಪ್ರಾರಂಭಿಸುತ್ತಿದ್ದು, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅಂಚೆ ಇಲಾಖೆ ಮೂಲಕವೂ ಈ ಪ್ರಕ್ರಿಯೆ ಆರಂಭಿಸಲಾಗುತ್ತಿದೆ ಎಂದು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಸ್ಪಷ್ಟಪಡಿಸಿದೆ.

ನಗರದ ಪ್ರಧಾನ ಅಂಚೆ ಕಚೇರಿ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ ಉಪ ಮಹಾ ನಿರ್ದೇಶಕ ಅಶೋಕ್ ದಳವಾಯಿ, ಕರ್ನಾಟಕ ಟೆಲಿಕಾಂ ವೃತ್ತದ ಪ್ರಧಾನ ವ್ಯವಸ್ಥಾಪಕ ಪಿ. ರಾಘವನ್, ಪೋಸ್ಟ್ ಮಾಸ್ಟರ್ ಜನರಲ್ ವಸುಮಿತ್ರ ನೋಂದಣಿ ಪ್ರಕ್ರಿಯೆಗೆ ವಿಧ್ಯುಕ್ತ ಚಾಲನೆ ನೀಡಿದರು.

ಮೈಸೂರು ಮತ್ತು ತುಮಕೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ `ಆಧಾರ್~ ನೋಂದಣಿ ಪ್ರಕ್ರಿಯೆಯನ್ನು ಬಹುತೇಕ ಪೂರ್ಣಗೊಳಿಸಿರುವ ಪ್ರಾಧಿಕಾರ, ಈ ತಿಂಗಳಲ್ಲಿಯೇ ಬೆಳಗಾವಿ ಹಾಗೂ ಗುಲ್ಬರ್ಗ ವಿಭಾಗಗಳ ವ್ಯಾಪ್ತಿಯ ಜಿಲ್ಲೆಗಳಲ್ಲಿ ನೋಂದಣಿ ಪ್ರಕ್ರಿಯೆ ಕೈಗೊಳ್ಳುತ್ತಿದೆ. ಮುಂದಿನ ಹಂತದಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ- ಧಾರವಾಡ ವಿಭಾಗಗಳಲ್ಲಿ ನೋಂದಣಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಅಶೋಕ್ ದಳವಾಯಿ ಮಾಹಿತಿ ನೀಡಿದರು.

ದೇಶದ ನೂರು ಕೋಟಿ ಜನರಿಗೂ `ಆಧಾರ್~ ವಿಶಿಷ್ಟ ಗುರುತಿನ ಚೀಟಿ ಸಂಖ್ಯೆ ನೀಡಬೇಕು ಎಂಬುದು ಪ್ರಾಧಿಕಾರದ ಗುರಿಯಾಗಿದೆ. ಈಗಾಗಲೇ ದೇಶದಲ್ಲಿ ಮೂರು ಕೋಟಿ ಜನರ ಗುರುತಿನ ಚೀಟಿ ಸಂಖ್ಯೆ ನೋಂದಣಿ ಪ್ರಕ್ರಿಯೆ ಮುಗಿದ್ದ್ದಿದು, ಒಂದು ಕೋಟಿ ಗುರುತಿನ ಚೀಟಿ ಸಂಖ್ಯೆ ವಿತರಣೆಗೆ ಸಿದ್ಧವಿದೆ.

ಕರ್ನಾಟಕದಲ್ಲಿ ಮೈಸೂರು ಹಾಗೂ ತುಮಕೂರು ಜಿಲ್ಲೆಗಳಲ್ಲಿ 40 ಲಕ್ಷ ಜನರನ್ನು ಈ `ಆಧಾರ್~ ವ್ಯಾಪ್ತಿಗೆ ತರಲಾಗಿದ್ದು, 18 ಲಕ್ಷ ಗುರುತಿನ ಚೀಟಿಗಳು ವಿತರಣೆಗೆ ಸಿದ್ಧವಾಗಿವೆ.  ಅಕ್ಟೋಬರ್‌ನಿಂದ ಪ್ರತಿ ದಿನ 10 ಲಕ್ಷ ಗುರುತಿನ ಚೀಟಿ ಸಂಖ್ಯೆ ನೋಂದಣಿ ಮಾಡುವ ಗುರಿ ಹೊಂದಲಾಗಿದೆ ಎಂದು ಅವರು ವಿವರಿಸಿದರು.

ನೋಂದಣಿ ಹೇಗೆ?: ಬೆಂಗಳೂರು ಸೇರಿದಂತೆ ರಾಜ್ಯದ ಆಯ್ದ ಅಂಚೆ ಕಚೇರಿಗಳಲ್ಲಿ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ. 

ಈ ಸಂದರ್ಭದಲ್ಲಿ ವ್ಯಕ್ತಿಯ ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ ಮತ್ತಿತರ ಸರಳ ಮಾಹಿತಿ ಸಂಗ್ರಹಿಸುವ ಮೂಲಕ ಭಾವಚಿತ್ರ, ಅಕ್ಷಿಪಟಲ, ಹೆಬ್ಬೆಟ್ಟಿನ ಗುರುತು ಪಡೆದು ಬಯೋಮೆಟ್ರಿಕ್ ಪದ್ಧತಿ ಅಳವಡಿಸಿಕೊಳ್ಳಲಾಗುವುದು ಎಂದರು.

ನೋಂದಣಿ ಸಮಯದಲ್ಲಿ  ನಾಗರಿಕರು ಅರ್ಜಿ ನಮೂನೆಯಲ್ಲಿ ನಮೂದಿಸಿದ 29 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆ ನೀಡಿದರೂ ಸಾಕು.

 ಒಂದು ವೇಳೆ ಯಾವುದೇ ದಾಖಲಾತಿ ಪತ್ರಗಳು ಇಲ್ಲದ ಪಕ್ಷದಲ್ಲಿ `ಆಧಾರ್~ ಗುರುತಿನ ಚೀಟಿ ಸಂಖ್ಯೆ ಪಡೆದಂತಹ ಸ್ಥಳೀಯ ಜನಪ್ರತಿನಿಧಿ ಶಿಫಾರಸಿನ ಮೇರೆಗೆ ಗುರುತಿನ ಚೀಟಿ ಸಂಖ್ಯೆ ನೀಡಲಾಗುವುದು ಎಂದರು.

ನಾಗಿರಕರು ದೇಶದ ಯಾವುದೇ ಭಾಗದಲ್ಲಿ ಈ ಗುರುತಿನ ಚೀಟಿ ಸಂಖ್ಯೆ ಪಡೆಯಲು ನೋಂದಣಿ ಮಾಡಿಸಬಹುದು. ಐದು ವರ್ಷದ ಮಕ್ಕಳಿಗೆ 15 ವರ್ಷಗಳ ನಂತರ ಮತ್ತೆ ಭಾವಚಿತ್ರ ತೆಗೆಯುವುದರ ಜತೆಗೆ, ಹೆಬ್ಬೆಟ್ಟಿನ ಗುರುತು ಸಂಗ್ರಹಿಸಲಾಗುವುದು. ಅಲ್ಲದೆ, ಮಧ್ಯೆ ವಿಳಾಸ ಬದಲಿಸಲು ಕೂಡ ಅವಕಾಶ ಕಲ್ಪಿಸಲಾಗುವುದು ಎಂದರು.

ಮುಂದಿನ ಹಂತದಲ್ಲಿ ಬ್ಯಾಂಕ್ ಖಾತೆ, ಪಾನ್ ಕಾರ್ಡ್, ಪಡಿತರ ಚೀಟಿ, ಪಾಸ್‌ಪೋರ್ಟ್, ವಾಹನ ಚಾಲನಾ ಪರವಾನಗಿ, ವಿದ್ಯಾರ್ಥಿವೇತನ, ವೃದ್ಧಾಪ್ಯ ವೇತನ, ಪಿಂಚಣಿ ಸೇರಿದಂತೆ ವಿವಿಧ ಸೌಲಭ್ಯಗಳ ಮಾಹಿತಿಯನ್ನು `ಆಧಾರ್~ ವ್ಯಾಪ್ತಿಗೆ ತರಲಾಗುವುದು. ಇದರಿಂದ ಸವಲತ್ತು ದುರುಪಯೋಗವಾಗುವುದನ್ನು ತಡೆಯುವುದರ ಜತೆಗೆ, ಪಾರದರ್ಶಕತೆ ಕಾಯ್ದುಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಈ ಉದ್ದೇಶಕ್ಕಾಗಿ ಎರಡು ಏಜೆನ್ಸಿಗಳನ್ನು ಅಂಚೆ ಇಲಾಖೆ ಆಯ್ಕೆ ಮಾಡಿಕೊಂಡಿದ್ದು, ಒಂದು ಗುರುತಿನ ಚೀಟಿ ನೋಂದಣಿ ಪ್ರಕ್ರಿಯೆ ನಡೆಸಲು ಕೇಂದ್ರ ಸರ್ಕಾರ ಈ ಏಜೆನ್ಸಿಗಳಿಗೆ 50 ರೂಪಾಯಿ ನೀಡಲಿದೆ ಎಂದರು.

ರಾಜ್ಯದಲ್ಲಿ 9 ಸಾವಿರ ಅಂಚೆ ಕಚೇರಿಗಳಿದ್ದು, ಈ ಪೈಕಿ 1000 ಅಂಚೆ ಕಚೇರಿಗಳು ಗಣಕೀಕರಣಗೊಂಡಿವೆ.
ಅಗತ್ಯ ಬಿದ್ದರೆ ಆಯ್ದ 236 ಅಂಚೆ ಕಚೇರಿಗಳ ಜತೆಗೆ, ಗಣಕೀಕೃತ ಅಂಚೆ ಕಚೇರಿಗಳನ್ನೂ ಈ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುವುದು ಎಂದು ಪೋಸ್ಟ್ ಮಾಸ್ಟರ್ ಜನರಲ್ ವಸುಮಿತ್ರ ತಿಳಿಸಿದರು.

ಮುಖ್ಯಾಂಶಗಳು

ನೋಂದಣಿ ಹೇಗೆ?: ಬೆಂಗಳೂರು ಸೇರಿದಂತೆ ರಾಜ್ಯದ ಆಯ್ದ ಅಂಚೆ ಕಚೇರಿಗಳಲ್ಲಿ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಲಿದೆ. ಈ ಸಂದರ್ಭದಲ್ಲಿ ವ್ಯಕ್ತಿಯ ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ ಮತ್ತಿತರ ಸರಳ ಮಾಹಿತಿ ಸಂಗ್ರಹಿಸುವ ಮೂಲಕ ಭಾವಚಿತ್ರ, ಅಕ್ಷಿಪಟಲ, ಹೆಬ್ಬೆಟ್ಟಿನ ಗುರುತು ಪಡೆದು ಬಯೋಮೆಟ್ರಿಕ್ ಪದ್ಧತಿ ಅಳವಡಿಸಿಕೊಳ್ಳಲಾಗುವುದು ಎಂದರು.ನೋಂದಣಿ ಸಮಯದಲ್ಲಿ  ನಾಗರಿಕರು ಅರ್ಜಿ ನಮೂನೆಯಲ್ಲಿ ನಮೂದಿಸಿದ 29 ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆ ನೀಡಿದರೂ ಸಾಕು.

 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT