ಭಾನುವಾರ, ಜೂನ್ 13, 2021
25 °C

239 ಜನರಿದ್ದ ಮಲೇಷಿಯಾ ವಿಮಾನ ಸಮುದ್ರಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ವಾಲಾಲಂಪುರ (ಪಿಟಿಐ): ಚೀನಾದ ಬೀಜಿಂಗ್ ಗೆ ಹೋಗುವ ಮಾರ್ಗದಲ್ಲಿ ಶನಿವಾರ ಕಣ್ಮರೆಯಾಗಿದ್ದ ಮಲೇಷಿಯಾ ಬೋಯಿಂಗ್ 777 ವಿಮಾನವು ವಿಯೆಟ್ನಾಂ ಕರಾವಳಿ ಸಮೀಪ ಸಮುದ್ರಕ್ಕೆ ಅಪ್ಪಳಿಸಿದೆ. ವಿಮಾನದಲ್ಲಿ ಐವರು ಭಾರತೀಯರ ಸಹಿತ 239 ಮಂದಿ ಇದ್ದರು.ಸ್ಥಳೀಯ ಕಾಲಮಾನ ಮಧ್ಯರಾತ್ರಿ12.41 ಗಂಟೆಗೆ ಕ್ವಾಲಾಲಂಪುರದಿಂದ ಹೊರಟ ವಿಮಾನವು ನಸುಕಿನ 2.40 ಗಂಟೆಗೆ ಸಂಪರ್ಕ ಕಡಿದುಕೊಂಡಿತ್ತು ಎಂದು ಸುಬಾಂಗ್  ವಿಮಾನ ಸಂಚಾರ ನಿಯಂತ್ರಣ ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನದ ಪತ್ತೆಗಾಗಿ ಚುರುಕಿನ ಕಾರ್ಯಾಚರಣೆ ಆರಂಭವಾಗಿದೆ. ವಿಮಾನವು ದಕ್ಷಿಣ ಚೀನಾದ ಸಮುದ್ರಕ್ಕೆ ಅಪ್ಪಳಿಸಿದ್ದು, ವಿಮಾನದಲ್ಲಿರುವ ಪ್ರಯಾಣಿಕರು ಜಲಸಮಾಧಿಯಾಗಿರಬಹುದೆಂಬ ಶಂಕೆಯನ್ನು ಮಲೇಷಿಯಾ ಏರ್ ಲೈನ್ಸ್ ಸಂಸ್ಥೆ ವ್ಯಕ್ತಪಡಿಸಿದೆ.ವಿಮಾನದಲ್ಲಿ ಪ್ರಯಾಣಿಸುತ್ತಿದ್ದ  ಪ್ರಯಾಣಿಕರ ವಿವರಗಳನ್ನು ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತಿದೆ.ಸಂಸ್ಥೆ ಪ್ರಕಟಿಸಿರುವ ಪ್ರಯಾಣಿಕರ ಪಟ್ಟಿ ಪ್ರಕಾರ ವಿಮಾನದಲ್ಲಿ 14 ರಾಷ್ಟ್ರಗಳ ಪ್ರಯಾಣಿಕರಿದ್ದರು. ಅವರ ಪೈಕಿ ಐವರು ಭಾರತೀಯರು. ದುರಂತ ವೇಳೆಯಲ್ಲಿ ವಿಮಾನ 36,000 ಅಡಿ ಎತ್ತರದಲ್ಲಿ ಹಾರುತ್ತಿತ್ತು ಎಂದು ವರದಿಗಳು ತಿಳಿಸಿವೆ.

ಕಣ್ಮರೆಯಾಗಿರುವ ವಿಮಾನದ ಚಾಲಕನನ್ನು ಕ್ಯಾಪ್ಟನ್ ಝಹಾರಿ ಅಹಮದ್ ಷಾ ಎಂಬುದಾಗಿ ಗುರುತಿಲಾಗಿದೆ. 1981ರಲ್ಲಿ ಏರ್ ಲೈನ್ಸ್ ಸೇರಿದ್ದ ಇವರು 18,365 ಗಂಟೆಗಳ ಕಾಲ ವಿಮಾನ ಚಲಾಯಿಸಿದ ಅನುಭವ ಹೊಂದಿದ್ದರು.

ವಿಮಾನ ಪ್ರಯಾಣಿಕರ ಪೈಕಿ ಹೆಚ್ಚಿನವರು (152 ಮಂದಿ) ಚೀನಾದವರು ಎನ್ನಲಾಗಿದೆ. ಇತರರಲ್ಲಿ 38 ಮಲೇಷಿಯನ್ನರು, 7 ಇಂಡೋನೇಷಿಯನ್ನರು, 6 ಆಸ್ಟ್ರೇಲಿಯನ್ನರು, ಮೂವರು ಫ್ರೆಂಚರು, ಒಂದು ಮಗು ಸೇರಿದಂತೆ 4 ಮಂದಿ ಅಮೆರಿಕದವರು, ತಲಾ ಇಬ್ಬರು ನ್ಯೂಜಿಲ್ಯಾಂಡ್, ಉಕ್ರೇನ್ ಮತ್ತು ಕೆನಡಾದವರು ಹಾಗೂ ತಲಾ ಒಬ್ಬರು ರಷ್ಯಾ, ಇಟಲಿ, ತೈವಾನ್, ನೆದರ್ ಲ್ಯಾಂಡ್ಸ್ ಮತ್ತು ಆಸ್ಟ್ರಿಯಾದವರು ಇದ್ದರು. ವಿಮಾನದಲ್ಲಿ 12 ಮಂದಿ ಸಿಬ್ಬಂದಿ ಇದ್ದರು.

ವಿಮಾನ ದುರಂತದ ಸುದ್ದಿ ಬರುತ್ತಿದ್ದಂತೆಯೇ ಚೀನೀ ಪ್ರಯಾಣಿಕರು ಬಂಧುಗಳು ಭಾರಿ ಸಂಖ್ಯೆಯಲ್ಲಿ ಬೀಜಿಂಗ್ ವಿಮಾನ ನಿಲ್ದಾಣಕ್ಕೆ ಧಾವಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.