ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

23ರಿಂದ ಪಲ್ಸ್ ಪೋಲಿಯೊ ಅಭಿಯಾನ

Last Updated 14 ಜನವರಿ 2011, 6:45 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮೊದಲನೇ ಸುತ್ತಿನ ಪಲ್ಸ್ ಪೋಲಿಯೊ ಲಸಿಕೆ ಅಭಿಯಾನವನ್ನು ಜ. 23ರಿಂದ 26ರ ವರೆಗೆ ನಡೆಯಲಿದೆ.ಪೂರ್ವ ಸಿದ್ಧತೆ ಹಾಗೂ ಕ್ರಿಯಾಯೋಜನೆ ತಯಾರಿಸುವ ಕುರಿತು ಜ. 17ರಂದು ಜಿಲ್ಲಾಮಟ್ಟದ ಚಾಲನಾ ಸಮಿತಿ ಸಭೆ ಕರೆಯಲಾಗಿದೆ. ಅಭಿಯಾನದ ಯಶಸ್ಸಿಗೆ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳ ಬಗ್ಗೆ ಸಮಗ್ರವಾಗಿ ಚರ್ಚಿಸಲಾಗುವುದು ಎಂದು ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮದ ಅಧ್ಯಕ್ಷರೂ ಆದ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಮೊದಲ ಸುತ್ತಿನ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ 5 ವರ್ಷದೊಳಗಿನ 2,90,446 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದ್ದು, 1,243 ಲಸಿಕಾ ಕೇಂದ್ರಗಳನ್ನು ತೆರೆಯಲಾಗುತ್ತದೆ. ಲಸಿಕೆ ಹಾಕಲು 4,628 ವ್ಯಾಕ್ಸಿನೇಟರ್ಸ್‌ಗಳು ಹಾಗೂ 248 ಮೇಲ್ವಿಚಾರಕರನ್ನು ನೇಮಿಸಲಾಗುತ್ತದೆ ಎಂದರು.

ಜಿಲ್ಲೆಯ 10 ತಾಲ್ಲೂಕುಗಳಲ್ಲಿ ಪಲ್ಸ್ ಪೋಲಿಯೊ ಚಾಲನಾ ಸಮಿತಿ ಸಭೆ ನಡೆಸಿ, ಅಗತ್ಯ ಕ್ರಮಕೈಗೊಳ್ಳಲು, ಕಾರ್ಯಕ್ರಮದ ರೂಪರೇಷೆ ಸಿದ್ಧಪಡಿಸಲು ಆಯಾ ತಾಲ್ಲೂಕು ತಹಶೀಲ್ದಾರ್‌ಗೆ ನಿರ್ದೇಶನ ನೀಡಲಾಗುತ್ತದೆ. ಇದರೊಂದಿಗೆ ವಾಹನಗಳ ಅವಶ್ಯಕತೆ ಇರುವುದರಿಂದ ಇಲಾಖಾ ಮುಖ್ಯಸ್ಥರಿಗೆ ತಮ್ಮ ಇಲಾಖೆ ವಾಹನಗಳನ್ನು ಒದಗಿಸಲು ಸೂಚಿಸಲಾಗುವುದು ಎಂದು ಹೇಳಿದ್ದಾರೆ.

ಜಿಲ್ಲೆಯ ಎಲ್ಲ ಸಾರ್ವಜನಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮೀಣ ಪ್ರದೇಶದ ಮಕ್ಕಳ ತಾಯಂದಿರ ಅನುಕೂಲಕ್ಕಾಗಿ ಆಯಾ ಭಾಗಗಳಲ್ಲಿ ಉಪಕೇಂದ್ರ, ಅಂಗನವಾಡಿ ಕೇಂದ್ರ, ಶಾಲಾ ಕಾಲೇಜುಗಳ ಕಟ್ಟಡ, ರೈಲ್ವೆ, ಬಸ್ ನಿಲ್ದಾಣ, ಜನಸಂದಣಿ ಸ್ಥಳಗಳಲ್ಲಿ ಲಸಿಕಾ ಕೇಂದ್ರ ತೆರೆಯಲಾಗುವುದು.

ನಗರ ಹಾಗೂ ಪಟ್ಟಣ ಪ್ರದೇಶಗಳ ವ್ಯಾಪ್ತಿಯ ಕೊಳಚೆ ಪ್ರದೇಶಗಳಲ್ಲಿ ಯಾವುದೇ ಮಗು ವಂಚಿತವಾಗದಂತೆ ಅರ್ಹ ಮಕ್ಕಳಿಗೆ ಲಸಿಕೆ ಹಾಕಿಸುವ ವ್ಯವಸ್ಥೆ ಮಾಡಲಾಗಿದೆ. ಅಂಗನವಾಡಿ ಕಾರ್ಯಕರ್ತೆ ಯರು, ಸಹಾಯಕರು ತಮ್ಮ ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿ ಒಂದು ದಿನ ಮುಂಚಿತವಾಗಿ ಬ್ಯಾನರ್ ಅಳವಡಿಸಿ ಭಿತ್ತಿಪತ್ರ, ಕರಪತ್ರ ಹಂಚಿ ಸ್ಥಳೀಯ ಸಂಘ ಸಮುದಾಯದ ಮುಖ್ಯಸ್ಥರ ಮೂಲಕ ಪ್ರಚಾರ ಕೈಗೊಳ್ಳಬೇಕು. ತಾಯಂದಿರನ್ನು ಭೇಟಿ ಮಾಡಿ ಮನವೊಲಿಸಿ ಮಕ್ಕಳನ್ನು ಬೂತ್‌ಗಳಿಗೆ ಕರೆತಂದು ಲಸಿಕೆ ಹಾಕಿಸಬೇಕು. ಈ ಬಗ್ಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಸೂಚಿಸಲಾಗುತ್ತದೆ ಎಂದರು.

ಮಕ್ಕಳಿಗೆ ಹಾಕುವ ಲಸಿಕೆಯನ್ನು ಪ್ರಿಜ್‌ನಲ್ಲಿಡ ಬೇಕಾದ ಅಗತ್ಯ ಇರುವುದರಿಂದ ಜ. 13ರಿಂದ 26ರ ವರೆಗೆ ಜಿಲ್ಲೆಯಲ್ಲೆಡೆ ವಿದ್ಯುತ್ ಕಡಿತಗೊಳಿಸದಂತೆ, ನಿರಂತರ ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡಲು ಬೆಸ್ಕಾಂ ಕಾರ್ಯಪಾಲಕ ಎಂಜಿನಿಯರ್‌ಗೆ ನಿರ್ದೇಶನ ನೀಡಲಾಗುತ್ತದೆ ಎಂದು ತಿಳಿಸಿದರು.

5 ವರ್ಷದೊಳಗಿನ ಮಕ್ಕಳಿಗೆ ಈ ಮೊದಲು ಎಷ್ಟೇ ಬಾರಿ ಲಸಿಕೆ ಹಾಕಿಸಿದ್ದರೂ ಸಹ ತಮ್ಮ ಸಮೀಪದ ಪೋಲಿಯೊ ಬೂತ್‌ಗಳಿಗೆ ಕರೆ ತಂದು ಲಸಿಕೆ ಹಾಕಿಸಿ ಪೋಲಿಯೊ ತಡೆಗಟ್ಟಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT