24ಕ್ಕೆ ಬಾತಿಯಲ್ಲಿ ತಾಲ್ಲೂಕು ‘ಕನ್ನಡ ಜಾತ್ರೆ’

7
ಸಮ್ಮೇಳನಾಧ್ಯಕ್ಷರಾಗಿ ಪ್ರೊ.ಬಾತಿ ಬಸವರಾಜ್‌ ಆಯ್ಕೆ

24ಕ್ಕೆ ಬಾತಿಯಲ್ಲಿ ತಾಲ್ಲೂಕು ‘ಕನ್ನಡ ಜಾತ್ರೆ’

Published:
Updated:

ದಾವಣಗೆರೆ: ಸಮೀಪದ ದೊಡ್ಡಬಾತಿ ಗ್ರಾಮದಲ್ಲಿ ಡಿ.24ರಂದು 5ನೇ ದಾವಣಗೆರೆ ತಾಲ್ಲೂಕು ಸಾಹಿತ್ಯ ಸಮ್ಮೇಳನ ನಡೆಯಲಿದ್ದು, ಅದೇ ಗ್ರಾಮದ ಪ್ರೊ.ಬಾತಿ ಬಸವರಾಜ್‌ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ತಾಲ್ಲೂಕಿನ ಐತಿಹಾಸಿಕ ಗ್ರಾಮದಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬಾತಿ ಗ್ರಾಮವನ್ನು ಆಯ್ಕೆ ಮಾಡಿಕೊಂಡಿದ್ದು, ಅರ್ಥಪೂರ್ಣವಾಗಿ ಸಮ್ಮೇಳನ ನಡೆಸಲಾಗುವುದು ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ.ಎಚ್‌.ಎಸ್‌.ಮಂಜುನಾಥ್‌ ಕುರ್ಕಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ತಿಳಿಸಿದರು.ಅಂದು ಬೆಳಿಗ್ಗೆ 7.30ಕ್ಕೆ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಬಳಿಕ ಉದ್ಘಾಟನೆ, ಗೋಷ್ಠಿಗಳು ನಡೆಯಲಿವೆ. ಶನಿವಾರ ಬೆಳಿಗ್ಗೆ ಸಮ್ಮೇಳನದ ಅಧ್ಯಕ್ಷರಿಗೂ ಆಹ್ವಾನ ನೀಡಲಾಗಿದ್ದು, ಒಪ್ಪಿಕೊಂಡಿದ್ದಾರೆ. ಪ್ರಚಾರ ಸಮಿತಿ, ಮೆರವಣಿಗೆ, ಸ್ವಾಗತ, ಆಹಾರ, ವೇದಿಕೆ ಸೇರಿದಂತೆ 10 ಸಮಿತಿ ರಚಿಸಲಾಗಿದೆ. ಅತ್ಯಂತ ಅರ್ಥಪೂರ್ಣವಾಗಿ ಸಮ್ಮೇಳನ ನಡೆಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.ಬಾತಿಯಲ್ಲಿ 6 ಬಾರಿ ಪೂರ್ವಭಾವಿ ಸಭೆ ನಡೆಸಲಾಗಿದೆ. ಗ್ರಾಮಸ್ಥರಿಂದ ಹಾಗೂ ಸಾಹಿತ್ಯಾಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಸಮ್ಮೇಳನದಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲು ಉದ್ದೇಶಿಸ ಲಾಗಿದೆ. ನಾಣ್ಯ ಪ್ರದರ್ಶನ, ವಸ್ತು ಪ್ರದರ್ಶನ, ಪುಸ್ತಕ ಮಳಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಎ.ಆರ್‌.ಉಜ್ಜನಪ್ಪ, ಉಮೇಶ್‌, ಎಂ.ಪಿ.ಚಂದ್ರಪ್ಪ, ಶಿವಕುಮಾರ್‌, ರಾಜಶೇಖರ್‌, ಹೆದ್ನಿ ರಾಜೇಂದ್ರ,  ನಾಗಭೂಷಣ್‌ ತೌಡೂರು ಮೊದಲಾದವರು ಹಾಜರಿದ್ದರು.ಸರ್ವಾಧ್ಯಕ್ಷರ ಪರಿಚಯ

ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿರುವ ಪ್ರೊ.ಬಾತಿ ಬಸವರಾಜ್‌ ನಗರದ ದವನ್‌ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿವಿಧ ಪತ್ರಿಕೆಗಳಿಗೆ ಬಿಡಿ ಲೇಖನ, ಬಿಡಿ ಕವನ ಬರೆದಿರುವ ಅವರು ಜಾನಪದ ಸಾಹಿತ್ಯದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಾರೆ.ಡಾ.ಚಿದಾನಂದ ಮೂರ್ತಿ ಅವರ ನೇತೃತ್ವದಲ್ಲಿ ಹಂಪಿ ಉತ್ಖನನಕಾರ್ಯ, ಮಲೇಶಿಯಾದ ರಾಜಧಾನಿ ಕೌಲಾಲಂಪುರದ ತೆಂಗ ವಿವಿಗೆ ಭೇಟಿ, ಉತ್ತರ ಅಮೆರಿಕಾದ ನ್ಯೂ ಹೆವನ್‌ನ ಯೇಲ್ ವಿವಿಯಲ್ಲಿ ಉಪನ್ಯಾಸ ಸಹ ನೀಡಿದ್ದಾರೆ. ಜತೆಗೆ, ಸಾಹಿತ್ಯ ಕ್ಷೇತ್ರದಲ್ಲಿ ಅಗಾಧ ಸೇವೆ ಸಲ್ಲಿಸಿರುವ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು ಎಂದು ಮಂಜುನಾಥ್‌ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry