ಮಂಗಳವಾರ, ಏಪ್ರಿಲ್ 13, 2021
32 °C

24ರಂದು ಲೋಕಾಯುಕ್ತ ನ್ಯಾಯಾಲಯ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಕುಟುಂಬ ವರ್ಗದವರ ವಿರುದ್ಧ ವಕೀಲ ಸಿರಾಜಿನ್ ಬಾಷಾ ದಾಖಲಿಸಿರುವ ದೂರಿಗೆ ಸಂಬಂಧಿಸಿದಂತೆ ನಗರದ ಲೋಕಾಯುಕ್ತ ವಿಶೇಷ ಕೋರ್ಟ್ ಇದೇ 24ರಂದು ಆದೇಶ ಹೊರಡಿಸಲಿದೆ.ಯಡಿಯೂರಪ್ಪ ಸೇರಿದಂತೆ ಅವರ ಮಕ್ಕಳಾದ ವಿಜಯೇಂದ್ರ, ರಾಘವೇಂದ್ರ, ಅಳಿಯ ಸೋಹನ್‌ಕುಮಾರ್, ಮಾಜಿ ಸಚಿವ (ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಹಾಲಿ ಅಧ್ಯಕ್ಷ) ಎಸ್.ಎನ್.ಕೃಷ್ಣಯ್ಯ ಶೆಟ್ಟಿ ವಿರುದ್ಧದ ಅರ್ಜಿ ಇದಾಗಿದೆ. ನಗರದ ರಾಚೇನಹಳ್ಳಿ ಬಳಿಯ ಎರಡು ಹಾಗೂ ವೈಯಾಲಿಕಾವಲ್ ಬಳಿಯ ಒಂದು ಭೂಹಗರಣಕ್ಕೆ ಸಂಬಂಧಿಸಿದಂತೆ ಅಂದು ನ್ಯಾಯಾಧೀಶ ಸಿ.ಬಿ. ಹಿಪ್ಪರಗಿ ಆದೇಶ ಹೊರಡಿಸಲಿದ್ದಾರೆ.ಕೋರ್ಟ್ ಮುಂದಿರುವ ಸಾಧ್ಯತೆಗಳು: ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿ ಪ್ರಕರಣದ ವಿಚಾರಣೆ ಮುಂದುವರಿಸುವುದು, ಅರ್ಜಿಯನ್ನು ವಜಾ ಮಾಡುವುದು ಅಥವಾ ಪ್ರಕರಣವನ್ನು ಮುಂದಿನ ತನಿಖೆಗೆ ಲೋಕಾಯುಕ್ತಕ್ಕೆ ವಹಿಸುವುದು.ಅಶೋಕ್ ವಿರುದ್ಧವೂ ಆದೇಶ: ಡಿನೋಟಿಫೈ ಹಗರಣದಲ್ಲಿ ಸಿಲುಕಿರುವ ಗೃಹ ಸಚಿವ ಆರ್. ಅಶೋಕ ಅವರ ವಿರುದ್ಧ ಇರುವ ದೂರಿಗೆ ಸಂಬಂಧಿಸಿದ ಆದೇಶವನ್ನು ಲೋಕಾಯುಕ್ತ ವಿಶೇಷ ಕೋರ್ಟ್ ಇದೇ 24ರಂದು ಹೊರಡಿಸಲಿದೆ.ವಿಜಯನಗರದ ನಿವಾಸಿ ಎಂ.ಮಂಜುನಾಥ ಎನ್ನುವವರು ದಾಖಲು ಮಾಡಿರುವ ದೂರು ಇದಾಗಿದೆ. ನಗರದ ಆರ್‌ಎಂವಿ ಬಡಾವಣೆಯ ಡಿನೋಟಿಫಿಕೇಷನ್ ವಿವಾದ ಇದು. ಇಲ್ಲಿಯ 23 ಗುಂಟೆ ಜಾಗವನ್ನು 1978ರಲ್ಲಿ ಬಿಡಿಎ ಸ್ವಾಧೀನ ಪಡಿಸಿಕೊಂಡಿತ್ತು. ಆದರೆ ಈ ಜಾಗದ ಪೈಕಿ 14 ಗುಂಟೆಯನ್ನು 2003ರಲ್ಲಿ ಹಾಗೂ ಉಳಿದ 9 ಗುಂಟೆ ಜಾಗವನ್ನು 2007ರಲ್ಲಿ ಅಶೋಕ ಹಾಗೂ ಇತರ 12 ಮಂದಿ ಮೂಲ ಮಾಲೀಕರಿಂದ ಪಡೆದುಕೊಂಡಿರುವ ಆರೋಪ ಎದುರಿಸುತ್ತಿದ್ದಾರೆ. ಒಮ್ಮೆ ಸ್ವಾಧೀನ ಪಡಿಸಿಕೊಳ್ಳಲಾದ ಜಮೀನನ್ನು ಪುನಃ ಖರೀದಿ ಮಾಡುವ ಮೂಲಕ ಇವರು ಕಾಯ್ದೆ ಕಾನೂನುಗಳನ್ನು ಗಾಳಿಗೆ ತೂರಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಇಷ್ಟೇ ಅಲ್ಲದೇ, ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ ಮೇಲೆ 2009ರಲ್ಲಿ ಸಾರಿಗೆ ಸಚಿವರಾಗಿದ್ದ ಅಶೋಕ ಅವರು ಈ ಜಮೀನಿನ ಮೂಲ ಮಾಲೀಕರಿಂದ ಅರ್ಜಿ ಕೊಡಿಸಿ ಸಂಪೂರ್ಣ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಿಸಿಕೊಳ್ಳುವಲ್ಲಿ (ಡಿನೋಟಿಫೈ) ಯಶಸ್ವಿಯಾಗಿದ್ದಾರೆ ಎಂದು ದೂರಲಾಗಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.