ಸೋಮವಾರ, ಮೇ 10, 2021
25 °C

24 ತಾಸುಗಳಲ್ಲಿ ನಾಲ್ಕು ಕಡೆ ಸರಗಳವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜ್ಞಾನಭಾರತಿ ಠಾಣೆ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ದುಷ್ಕರ್ಮಿಗಳು ಮಹಿಳೆಯರ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರಗಳನ್ನು ದೋಚಿದ್ದಾರೆ.ನಾಗರಬಾವಿ ಏಳನೇ ಬ್ಲಾಕ್‌ನಲ್ಲಿ ಸೋಮವಾರ ಸಂಜೆ 5.30ರ ಸುಮಾರಿಗೆ ವಾಯುವಿಹಾರ ಮಾಡುತ್ತಿದ್ದ ಅಶ್ವಿನಿಕುಮಾರಿ ಎಂಬುವರ 40 ಗ್ರಾಂ ತೂಕದ ಸರವನ್ನು ದುಷ್ಕರ್ಮಿಗಳು ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಇದೇ ಬಡಾವಣೆಯ 11ನೇ ಬ್ಲಾಕ್‌ನಲ್ಲಿ ಸಂಜೆ ಆರು ಗಂಟೆ ವೇಳೆಗೆ ನಡೆದ ಮತ್ತೊಂದು ಪ್ರಕರಣದಲ್ಲಿ ಕಿಡಿಗೇಡಿಗಳು ಪರಿಮಳಾ ಎಂಬುವರ 80 ಗ್ರಾಂ ತೂಕದ ಸರವನ್ನು ದೋಚಿದ್ದಾರೆ. ನಾಗರಬಾವಿ ಏಳನೇ ಬ್ಲಾಕ್ ನಿವಾಸಿಯಾದ ಪರಿಮಳಾ ಅವರು ದೇವಸ್ಥಾನಕ್ಕೆ ಹೋಗಿ ಮನೆಗೆ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.ನಾಗರಬಾವಿ 14ನೇ ಬ್ಲಾಕ್‌ನ ಎಂಟನೇ ಮುಖ್ಯರಸ್ತೆಯಲ್ಲಿ ಉಷಾ ಎಂಬುವರ ಸರವನ್ನು ದೋಚಲಾಗಿದೆ. ಮನೆಯ ಸಮೀಪವೇ ಸಂಜೆ 6.30ರ ಸುಮಾರಿಗೆ ವಾಯುವಿಹಾರ ಮಾಡುತ್ತಿದ್ದ ಉಷಾ ಅವರನ್ನು ದುಷ್ಕರ್ಮಿಗಳು ಹಿಂಬಾಲಿಸಿ ಬಂದು 80 ಗ್ರಾಂ ತೂಕದ ಸರ ಕಿತ್ತುಕೊಂಡು ಹೋಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ನಾಗರಬಾವಿ ಸಮೀಪದ ಎನ್‌ಜಿಇಎಫ್ ಲೇಔಟ್‌ನ ಮೂರನೇ ಮುಖ್ಯರಸ್ತೆಯಲ್ಲಿ ದುಷ್ಕರ್ಮಿಗಳು ಮಂಗಳವಾರ ಬೆಳಿಗ್ಗೆ ಲೋಲಾಕ್ಷಿ ಎಂಬ ಮಹಿಳೆಯ ಸರವನ್ನು ದೋಚಿದ್ದಾರೆ. ಲೋಲಾಕ್ಷಿ ಅವರು ಮನೆಯ ಬಳಿಯೇ ವಾಯುವಿಹಾರ ಮಾಡುತ್ತಿದ್ದಾಗ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಸರದ ಮೌಲ್ಯ 1.40 ಲಕ್ಷ ರೂ ಎಂದು ಪೊಲೀಸರು ತಿಳಿಸಿದ್ದಾರೆ.ಈ ಎಲ್ಲಾ ಪ್ರಕರಣಗಳಲ್ಲೂ ದುಷ್ಕರ್ಮಿಗಳು ಕೃತ್ಯಕ್ಕೆ ಬೈಕ್ ಬಳಕೆ ಮಾಡಿದ್ದಾರೆ. ಮೊದಲ ಮೂರು ಪ್ರಕರಣಗಳು ಒಂದು ತಾಸಿನ ಅಂತರದಲ್ಲಿ ನಡೆದಿವೆ. ಒಂದೇ ತಂಡದ ಆರೋಪಿಗಳು ಈ ದುಷ್ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜ್ಞಾನಭಾರತಿ ಠಾಣೆಯಲ್ಲಿ ನಾಲ್ಕೂ ಪ್ರಕರಣಗಳು ದಾಖಲಾಗಿವೆ.

ಹೆಚ್ಚಿದ ಆತಂಕ: ನಾಗರಬಾವಿ ಸುತ್ತಮುತ್ತ ಕೆಲವೇ ತಾಸುಗಳ ಅಂತರದಲ್ಲಿ ನಾಲ್ಕು ಸರಗಳವು ಪ್ರಕರಣಗಳು ನಡೆದಿರುವುದರಿಂದ ಸ್ಥಳೀಯರು ಸಾಕಷ್ಟು ಆತಂಕಗೊಂಡಿದ್ದಾರೆ.`ಪೊಲೀಸರು ಸರಿಯಾಗಿ ಗಸ್ತು ತಿರುಗುವುದಿಲ್ಲ. ಇದರಿಂದಲೇ ಸುತ್ತಮುತ್ತಲ ಬಡಾವಣೆಗಳಲ್ಲಿ ಪದೇ ಪದೇ ಸರಗಳವು ಪ್ರಕರಣಗಳು ನಡೆಯುತ್ತಿವೆ. ಸರಗಳ್ಳರ ಹಾವಳಿಯಿಂದ ಮಹಿಳೆಯರು ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗಿದೆ. ಈ ಸಂಬಂಧ ಜ್ಞಾನಭಾರತಿ ಠಾಣೆಗೆ ಹಲವು ಬಾರಿ ದೂರು ನೀಡಿ ಗಸ್ತು ಹೆಚ್ಚಿಸುವಂತೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ~ ಎಂದು ಸ್ಥಳೀಯರು ದೂರಿದ್ದಾರೆ.ಎಲ್ಲಾ ಬಡಾವಣೆಗಳಲ್ಲೂ ಪೊಲೀಸ್ ಗಸ್ತು ಹೆಚ್ಚಿಸಬೇಕು. ಸರಗಳವು ಪ್ರಕರಣಗಳ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.