24 x 7 ನೀರು ಪೂರೈಕೆ ಯೋಜನೆಗೆ ವಿರೋಧ

7

24 x 7 ನೀರು ಪೂರೈಕೆ ಯೋಜನೆಗೆ ವಿರೋಧ

Published:
Updated:

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ 24 x 7 ಕುಡಿಯುವ ನೀರು ಪೂರೈಕೆ ಯೋಜನೆಯ ಅನುಷ್ಠಾನಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಇದರ ಹಿಂದೆ ಖಾಸಗಿ ಕಂಪೆನಿಗಳ ಷಡ್ಯಂತ್ರ ಅಡಗಿದೆ ಎಂದು ನೀರಿನ ಹಕ್ಕಿಗಾಗಿ ಜನಾಂದೋಲನ ಸಂಘಟನೆ ಹಾಗೂ ಪ್ರಗತಿಪರ ಸಂಘಟನೆಗಳ ಜಿಲ್ಲಾ ಒಕ್ಕೂಟ ದೂರಿದೆ.`ಜಿಲ್ಲಾ ಕೇಂದ್ರಕ್ಕೆ ಈಚೆಗೆ ಆಗಮಿಸಿದ್ದ ಸಚಿವ ಸುರೇಶ್‌ಕುಮಾರ್ 24 x 7 ನೀರು ಪೂರೈಕೆ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ನೀರು ಸರಬರಾಜು ಯೋಜನೆಯನ್ನು ಖಾಸಗೀಕರಣ ಮಾಡುವುದಿಲ್ಲವೆಂದು ತಿಳಿಸಿದ್ದಾರೆ. ಇದು ಶುದ್ಧ ಸುಳ್ಳಿನ ಆಶ್ವಾಸನೆಯಾಗಿದೆ. ಸಾರ್ವಜನಿಕರ ಕಣ್ಣೊರೆಸುವ ತಂತ್ರ ರೂಪಿಸುತ್ತಿದ್ದಾರೆ. ಇದಕ್ಕೆ ಜನರು ಬಲಿಯಾಗಬಾರದು~ ಎಂದು ಸಂಘಟನೆಯ ಸಂಚಾಲಕ ಪ್ರೊ.ಪಿ.ವಿ. ನಂಜರಾಜೇಅರಸ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಈಗಾಗಲೇ ಹುಬ್ಬಳ್ಳಿ, ಧಾರಾವಾಡ, ಮೈಸೂರು ಸೇರಿದಂತೆ ಹಲವು ನಗರಗಳಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆಯು ಖಾಸಗಿ ಕಂಪೆನಿಗಳ ಹಿಡಿತದಲ್ಲಿದೆ. ಅಲ್ಲಿನ ಮನೆಗಳ ನೀರಿನ ಪೈಪ್‌ಗಳಲ್ಲಿ ಗಾಳಿ ಬಂದರೂ ಮೀಟರ್ ಓಡುವಂತಹ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ, ನಿವಾಸಿಗಳು ಹೆಚ್ಚು ನೀರಿನ ದರ ಪಾವತಿ ಮಾಡುತ್ತಿದ್ದಾರೆ. ಇದಕ್ಕೆ ಕಂಪೆನಿಗಳ ತಂತ್ರವೇ ಕಾರಣ ಎಂದು ದೂರಿದರು.ದರ ಪಾವತಿ ಮಾಡದ ಹೋಟೆಲ್‌ಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತದೆ. ಹಣ ಪಾವತಿ ಮಾಡಿದರೂ ಮನೆಗಳಿಗೆ ನೀರು ಪೂರೈಕೆಯಾಗುವುದಿಲ್ಲ. ನೀರಿನ ದರ ಹೆಚ್ಚಳದ ಪರಿಣಾಮ ದೀನದಲಿತರು ಮತ್ತು ಸಾಮಾನ್ಯ ಕುಟುಂಬಗಳಿಗೆ ಹೆಚ್ಚಿನ ಹೊರೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.ನೀರಿನ ಉತ್ಪಾದನೆ ಇಲ್ಲದಿರುವ ವೇಳೆ ದಿನದ 24ಗಂಟೆ ಕಾಲವೂ ಕುಡಿಯುವ ನೀರು ಪೂರೈಕೆಯಾಗುವುದಿಲ್ಲ. ಸರ್ಕಾರದ ಸುಳ್ಳಿನ ಸಿಹಿ ಮಾತಿಗೆ ಜನರು ಮರುಳಾಗಬಾರದು. ಖಾಸಗಿ ಕಂಪೆನಿಗಳಿಂದ ಹಣ ಪಡೆದಿರುವ ಸರ್ಕಾರ ಕುಡಿಯುವ ನೀರಿನ ಖಾಸಗೀಕರಣಕ್ಕೆ ಹುನ್ನಾರ ನಡೆಸುತ್ತಿದೆ ಎಂದು ದೂರಿದರು.ಪ್ರಸ್ತುತ ಈ ಯೋಜನೆ ಜಿಲ್ಲಾ ಕೇಂದ್ರಕ್ಕೂ ವಿಸ್ತರಣೆಯಾಗಲಿದೆ. ಇದರಿಂದ ನಗರದ ವ್ಯಾಪ್ತಿ ನೀರಿನ ದರ ಹೆಚ್ಚಳವಾಗುತ್ತದೆ. ಈ ಮೂಲಕ ನಮ್ಮ ಸ್ವಾತಂತ್ರ್ಯದ ಹಕ್ಕನ್ನು ಖಾಸಗಿ ಕಂಪೆನಿಗಳಿಗೆ ನೀಡಿದಂತಾಗುತ್ತದೆ. ನಗರಸಭೆ ಸದಸ್ಯರು ಹಾಗೂ ಸಾರ್ವಜನಿಕರು ಇದಕ್ಕೆ ಒಪ್ಪಿಗೆ ನೀಡಬಾರದು ಎಂದು ಕೋರಿದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಿ.ಎನ್. ಗೋವಿಂದರಾಜು, ಸಿ.ಎಂ. ಕೃಷ್ಣಮೂರ್ತಿ, ಎಂ. ಬಸವರಾಜು, ಅಬ್ರಾರ್ ಅಹಮ್ಮದ್, ಆರ್. ನಾರಾಯಣ್ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry