ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24 ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ

Last Updated 21 ಸೆಪ್ಟೆಂಬರ್ 2011, 10:25 IST
ಅಕ್ಷರ ಗಾತ್ರ

ಕೋಲಾರ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮ ಎಸಗಿದ್ದರ ಹಿನ್ನೆಲೆಯಲ್ಲಿ 24 ಮಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಶಿಫಾರಸು ಮಾಡಲಾಗಿದೆ. ಅವರಲ್ಲಿ 19 ಅಧಿಕಾರಿಗಳು, ಮೂವರು ಜನಪ್ರತಿನಿಧಿಗಳು, ಇಬ್ಬರು ಸಾರ್ವಜನಿಕರಿದ್ದಾರೆ ಎಂದು ಯೋಜನೆಯ ಜಿಲ್ಲಾ ಓಂಬುಡ್ಸ್‌ಮನ್ ಪಿ.ಮುನಿಸ್ವಾಮಿ ತಿಳಿಸಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರೊಡನೆ ಮಾತನಾಡಿದ ಅವರು, ಕಳೆದ ಫೆಬ್ರುವರಿಯಲ್ಲಿ ಅಧಿಕಾರ ಸ್ವೀಕರಿಸಿದ ಬಳಿಕ 75 ದೂರುಗಳನ್ನು ಸ್ವೀಕರಿಸಲಾಗಿದೆ. ಅವುಗಳಲ್ಲಿ 45 ದೂರು ಗಳನ್ನು ಇತ್ಯರ್ಥಪಡಿಸಲಾಗಿದೆ.14 ಪ್ರಕರಣ ಗಳಲ್ಲಿ ಆದೇಶ ನೀಡಲಾಗಿದೆ ಎಂದು ಹೇಳಿದರು.

ಕ್ರಿಮಿನಲ್ ಮೊಕದ್ದಮೆ ಹೂಡುವುದರ ಜೊತೆಗೆ, ಒಬ್ಬ ಜನಪ್ರತಿನಿಧಿ, ನಾಲ್ವರು ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲು ಮತ್ತು ಮೂವರಿಂದ ಹಣ ವಸೂಲು ಮಾಡುವಂತೆ ಶಿಫಾರಸು ಮಾಡಲಾಗಿದೆ ಎಂದರು.

ಉಳಿತಾಯ ಕಾರ್ಯಾಚರಣೆಯ ಪರಿಣಾಮ ವಾಗಿ, ಯೋಜನೆ ಅಡಿ ಮನಬಂದಂತೆ ಹಣ ಬಳಸುವ ಪರಿಪಾಠಕ್ಕೆ ತಡೆಯುಂಟಾಗಿದೆ. ಅದರಿಂದ ಜಿಲ್ಲೆಯಲ್ಲಿ 100 ಕೋಟಿ ರೂಪಾಯಿ ಉಳಿತಾಯವಾಗಿದೆ. ಕೂಲಿ ಕಾರ್ಮಿಕರ ಹೆಸರಲ್ಲಿ ಹಣ ಪಡೆಯುತ್ತಿದ್ದ ಗುತ್ತಿಗೆದಾರರಿಗೆ ಕಡಿವಾಣ ಹಾಕಿದಂತಾಗಿದೆ ಎಂದರು.

2009-10ನೇ ಸಾಲಿನಲ್ಲಿ ರೂ 157 ಕೋಟಿ ರೂಪಾಯಿ ಖರ್ಚಾಗಿದೆ. 2010-11ನೇ ಸಾಲಿನಲ್ಲಿ ಕೇವಲ ರೂ 92.75 ಕೋಟಿ ಮಾತ್ರ ಖರ್ಚಾಗಿದೆ. ಅದರಲ್ಲಿ 2009-10ನೇ ಸಾಲಿನಲ್ಲಿ ಕೈಗೊಂಡ ಕಾಮಗಾರಿಗೆ ನೀಡಬೇಕಾದ ಸುಮಾರು 35-40 ಕೋಟಿ ಹಣವೂ ಸೇರಿದೆ. ಹೀಗಾಗಿ ಈ ಸಾಲಿನಲ್ಲಿ ಒಟ್ಟಾರೆ ಕಾಮಗಾರಿಗಳ ಸಂಖ್ಯೆ ಕಡಿಮೆಯಾಗಿದೆ. ಓಂಬುಡ್ಸ್‌ಮನ್ ಕಾರ್ಯಾ ಚರಣೆ ಶುರುವಾದ ಬಳಿಕ ಅಕ್ರಮವಾಗಿ ಕಾಮಗಾರಿ ನಡೆಸುವವರಲ್ಲಿ ಮೂಡಿದ ಭಯವೇ ಅದಕ್ಕೆ ಮೂಲ ಕಾರಣ ಎಂದರು.

6 ತಿಂಗಳ ಅವಧಿಯಲ್ಲಿ ಹಲವು ಅವ್ಯವಹಾರಗಳ ಅಧ್ಯಯನ ಮಾಡಲಾಗಿದೆ. ಕೂಲಿಕಾರ್ಮಿಕರನ್ನು ನೇರವಾಗಿ ಸಂದರ್ಶಿಸ ಲಾಗಿದೆ. ವಿವಿಧ ಹಂತಗಳಲ್ಲಿ ನಡೆದಿರುವ ಅವ್ಯವಹಾರ, ನಿಯಮಾವಳಿ ಉಲ್ಲಂಘನೆ ಮತ್ತು ಬೋಗಸ್ ದಾಖಲಾತಿಗಳನ್ನು ಪತ್ತೆ ಮಾಡಲಾಗಿದೆ. ಕಾಯ್ದೆಯನ್ನು ದುರು ಪಯೋಗಪಡಿಸಿಕೊಂಡು ಮಧ್ಯ ವರ್ತಿಗಳು, ಬೇನಾಮಿ ಗುತ್ತಿಗೆದಾರರು ಸರ್ಕಾರದ ಬೊಕ್ಕಸಕ್ಕೆ ಉಂಟಾಗಬಹುದಾದ ನಷ್ಟವನ್ನು ದೃಷ್ಟಿಯಲ್ಲಿರಿಸಿಕೊಂಡು ನಿಷ್ಪಕ್ಷಪಾತವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ಎಚ್ಚೆತ್ತರು: ಯೋಜನೆಯ ಅಡಿ ನಡೆದಿರುವ ಅಕ್ರಮಗಳನ್ನು ಪರಿಶೀಲಿಸಲು ಜಿಲ್ಲಾ ಪಂಚಾ ಯಿತಿಯಿಂದ ನಿಯೋಜಿಸಲಾಗಿರುವ ಅಧಿಕಾರಿ ಗಳ ತಂಡದ ಜೊತೆಗೆ ಕಾರ್ಯಾಚರಣೆ ನಡೆಸಲಾಗಿದೆ. ಕೋಲಾರ ತಾಲ್ಲೂಕಿನ ಐತ ರಾಸನಹಳ್ಳಿಯಲ್ಲಿ ತನಿಖೆಯನ್ನು ಆರಂಭಿ ಸುತ್ತಿದ್ದಂತೆಯೇ, ಜಿಲ್ಲೆಯ ಎಲ್ಲೆಡೆ, ಯೋಜನೆ ಯ ದುರ್ಲಾಭ ಪಡೆಯುತ್ತಿದ್ದವರು ಎಚ್ಚೆತ್ತರು.  ಹೀಗಾಗಿ ಕಾಮಗಾರಿಗಳ ಸಂಖ್ಯೆಯೂ ಕ್ರಮೇಣ ಕಡಿಮೆಯಾಯಿತು ಎಂದರು.

ಜಿಲ್ಲೆಯಲ್ಲಿ ಕೋಲಾರ, ಮುಳಬಾಗಲು ಮತ್ತು ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಯೋಜನೆಯನುನ ಅತಿ ಹೆಚ್ಚು ದುರ್ಬಳಕೆ ಮಾಡಲಾಗಿದೆ. ಬಂಗಾರಪೇಟೆ ಮತ್ತು ಮಾಲೂರು ತಾಲ್ಲೂಕಿನಲ್ಲಿ ಸಮಾಧಾನಕರ ವಾತಾವರಣವಿದೆ ಎಂದರು.

ಸಿಬ್ಬಂದಿ ಕೊರತೆ:
ಇದುವರೆಗೆ ಮೂರು ತಾಲ್ಲೂಕುಗಳಲ್ಲಿ ಮಾತ್ರ ಕಾರ್ಯಾಚರಣೆ ನಡೆಸಲು ಸಾಧ್ಯವಾಗಿದೆ. ದೂರುಗಳನ್ನು ಆಧರಿಸುವುದರ ಜೊತೆಗೆ ಸ್ವಯಂ ಸ್ಫೂರ್ತಿ ಯಿಂದಲೂ ಕಾರ್ಯಾಚರಣೆ ನಡೆಸುವ ಅವಕಾಶವಿದೆ.

ಆದರೆ ತಕ್ಕ ಸಿಬ್ಬಂದಿ ಇಲ್ಲ. ಏಕವ್ಯಕ್ತಿ ಸೈನ್ಯದಂತಿರುವ ನನಗೆ ಒಬ್ಬ ಆಪ್ತ ಸಹಾಯಕರನ್ನು ಮಾತ್ರ ನೀಡಲಾಗಿದೆ. ಈ ಸಂಗತಿಯನ್ನು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು.

ದುರ್ಬಳಕೆ ಹೇಗೆ?
ಮುನಿಸ್ವಾಮಿಯವರು ಹೇಳುವ ಪ್ರಕಾರ, `ಯೋಜನೆಯ ಅಡಿ ಶೇ 10ರಷ್ಟು ಖರ್ಚು ಮಾಡಿದ ಗುತ್ತಿಗೆದಾರರು ಶೇ 90ರಷ್ಟು ಲಾಭ ಪಡೆದಿದ್ದಾರೆ. ಉದಾಹರಣೆಗೆ, ಗೋಕುಂಟೆ ನಿರ್ಮಾಣ ಕ್ಕೆಂದು ಯಂತ್ರ ಬಳಸಿ ಮಣ್ಣಿನ ಕೆಲಸ ಮಾಡಿದವರು ಕೇವಲ 10 ಸಾವಿರ ರೂಪಾಯಿ ಖರ್ಚು ಮಾಡುತ್ತಾರೆ. ಆದರೆ 1 ಲಕ್ಷ ರೂಪಾಯಿಯ ಬಿಲ್ ನೀಡುತ್ತಾರೆ. ಹಣವೂ ಮಂಜೂರಾಗುತ್ತದೆ.

ಅದಕ್ಕಾಗಿ, ಕೂಲಿ ಕಾರ್ಮಿಕರಿಗೆ ಹಣ ನೀಡಿದಂತೆ ಬೋಗಸ್ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಕಾರ್ಯಾಚರಣೆ ನಡೆಸಿದ ಬಹುತೇಕ ಸ್ಥಳಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳೇ ಬೇನಾಮಿ ಹೆಸರಿನಲ್ಲಿ ಗುತ್ತಿಗೆ ಪಡೆದಿರುವುದು ಕಂಡು ಬಂದಿದೆ.~
 

`ನಿಯಮ ಮೀರಿಲ್ಲ~
`ಅಕ್ರಮ ಎಸಗಿದವರಿಗೆ ಓಂಬುಡ್ಸ್‌ಮನ್ ರಕ್ಷಣೆ ನೀಡಿದ್ದಾರೆ. ಅಮಾಯಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತು ವಾರಿ ಸಚಿವರು ಹೇಳಿರುವುದು ಸರಿಯಲ್ಲ ಎಂದು ಮುನಿಸ್ವಾಮಿ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಬಳಿಗೆ ಬಂದ ಮಾಹಿತಿ/ದೂರುಗಳ ಸತ್ಯಾಸತ್ಯತೆಯನ್ನು ಮೊದಲು ಸಚಿವರು ಪರಿಶೀಲಿಸಬೇಕಿತ್ತು. ಏಕೆಂದರೆ, ಇದುವರೆಗೂ ಓಂಬುಡ್ಸ್‌ಮನ್ ಆಗಿ ಕೈಗೊಂಡಿರುವ ತೀರ್ಮಾನಗಳು ಯೋಜನೆಯ ಕಾಯ್ದೆ ಮತ್ತು ದಾಖಲೆಗಳನ್ನು ಆಧರಿಸಿವೆ.

 ಯಾವುದೇ ಜಾತಿ, ಪಕ್ಷ ಮತ್ತು ವೈಯಕ್ತಿಕ ನಿಲುವುಗಳ ಹಿನ್ನೆಲೆಯಲ್ಲಿ ತೀರ್ಮಾನಿಸಿಲ್ಲ. ಎಂಜಿನಿಯರ್‌ಗಳು ಸಲ್ಲಿಸಿರುವ ತಾಂತ್ರಿಕ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಬೇಕು ಎಂಬ ಸರ್ಕಾರದ ಸೂಚನೆಯನ್ನು ಪಾಲಿಸಿರುವೆ ಅಷ್ಟೆ~ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT