ಮಂಗಳವಾರ, ನವೆಂಬರ್ 12, 2019
24 °C

242 ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತ

Published:
Updated:

ಬೆಂಗಳೂರು: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಒಟ್ಟು 3,957 ಅಭ್ಯರ್ಥಿಗಳ ಪೈಕಿ 242 ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡಿವೆ. ಹತ್ತು ಕ್ಷೇತ್ರಗಳಲ್ಲಿ ನಾಮಪತ್ರಗಳ ಪರಿಶೀಲನೆ ವಿವರ ಇನ್ನೂ ಲಭ್ಯವಾಗಿಲ್ಲ.ಹತ್ತು ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ನಾಮಪತ್ರಗಳ ಪರಿಶೀಲನೆ ಕಾರ್ಯ ಗುರುವಾರವೇ ಪೂರ್ಣಗೊಂಡಿತ್ತು. ಆದರೆ, ಸಂಬಂಧಪಟ್ಟಚುನಾವಣಾಧಿಕಾರಿಗಳಿಂದ ಮಾಹಿತಿ ಬರುವುದು ತಡವಾದ ಕಾರಣ ಆ ದಿನವೇ ವಿವರಗಳು ಲಭ್ಯವಾಗಲಿಲ್ಲ ಎಂದು ಜಂಟಿ ಚುನಾವಣಾಧಿಕಾರಿ ಟಿ.ಶಾಮಯ್ಯ `ಪ್ರಜಾವಾಣಿ'ಗೆ ತಿಳಿಸಿದರು.ತಿರಸ್ಕೃತವಾಗಿರುವ ಬಹುತೇಕ ನಾಮಪತ್ರಗಳು ಪಕ್ಷೇತರ ಅಭ್ಯರ್ಥಿಗಳದ್ದಾಗಿವೆ. ಕೆಲವರು ಶುಕ್ರವಾರವೇ ನಾಮಪತ್ರಗಳನ್ನು ವಾಪಸ್ ಪಡೆದಿದ್ದಾರೆ. ಆದರೆ, ಪೂರ್ಣ ವಿವರಗಳು ಲಭ್ಯವಾಗಿಲ್ಲ. ಶನಿವಾರ ಮಧ್ಯಾಹ್ನ 3 ಗಂಟೆವರೆಗೂ ನಾಮಪತ್ರಗಳನ್ನು ವಾಪಸ್ ಪಡೆಯಲು ಅವಕಾಶ ಇದೆ ಎಂದು ಅವರು ಹೇಳಿದರು.ಸಾಮಾನ್ಯ ವೀಕ್ಷಕರು, ವೆಚ್ಚ ವೀಕ್ಷಕರು ಹಾಗೂ ಪೊಲೀಸ್ ವೀಕ್ಷಕರು ಈಗಾಗಲೇ ಕ್ಷೇತ್ರಗಳಿಗೆ ಬಂದಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಡೆಯುವ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಚುನಾವಣಾ ಆಯೋಗ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ನಾಮಪತ್ರ ಸಲ್ಲಿಸಿದ ನಂತರ ಅಭ್ಯರ್ಥಿಗಳು ಮಾಡುವ ವೆಚ್ಚವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತಿದೆ.ಒಬ್ಬ ಅಭ್ಯರ್ಥಿ ಗರಿಷ್ಠ 16 ಲಕ್ಷ ರೂಪಾಯಿ ವೆಚ್ಚ ಮಾಡಬಹುದು. ಪ್ರತಿದಿನ ಅಥವಾ ಮೂರು ದಿನಕ್ಕೊಮ್ಮೆ ವೀಕ್ಷಕರಿಗೆ ವೆಚ್ಚದ ಮಾಹಿತಿ ನೀಡಬೇಕು. ಚುನಾವಣೆ ಮುಗಿದ 30 ದಿನಗಳ ಒಳಗೆ ವೆಚ್ಚದ ಪೂರ್ಣ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ವೆಚ್ಚ ಕುರಿತ ಮಾಹಿತಿ ನೀಡದ ಅಭ್ಯರ್ಥಿಗಳನ್ನು ಮುಂದಿನ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸುವ ಅಧಿಕಾರ ಆಯೋಗಕ್ಕೆ ಇದೆ.ಸಮೀಕ್ಷೆ ನಿಷೇಧ: ಮತದಾನ ಅಂತ್ಯವಾಗುವ 48 ಗಂಟೆಗಳ ಪೂರ್ವದಲ್ಲಿ ಚುನಾವಣಾ ಸಮೀಕ್ಷೆಗಳ ಪ್ರಕಟ, ಪ್ರಸಾರ ಮಾಡುವುದನ್ನು ಚುನಾವಣಾ ಆಯೋಗ ನಿಷೇಧಿಸಿದೆ.ಮೇ 5ರಂದು ಬೆಳಿಗ್ಗೆ 7ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ. ಮತದಾನ ಅಂತ್ಯವಾಗುವ ಅಂದರೆ ಸಂಜೆ 5 ಗಂಟೆಗೂ ಹಿಂದಿನ 48 ಗಂಟೆಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ವಿದ್ಯುಮಾನ ಮಾಧ್ಯಮಗಳಲ್ಲಿ ಯಾವುದೇ ರೀತಿಯ ಅಭಿಪ್ರಾಯ, ಮತ ಸಮೀಕ್ಷೆ ಬಿತ್ತರಿಸುವುದನ್ನು ನಿಷೇಧಿಸಲಾಗಿದೆ. ಮುದ್ರಣ ಮಾಧ್ಯಮಗಳಲ್ಲೂ ಸಮೀಕ್ಷೆಗಳನ್ನು ಪ್ರಕಟಿಸುವಂತಿಲ್ಲ ಎಂದು ಆಯೋಗ ತಿಳಿಸಿದೆ.

ಪ್ರತಿಕ್ರಿಯಿಸಿ (+)