ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2.44 ಟಿಎಂಸಿ ನೀರು ಬಿಡಿ

Last Updated 7 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ನವದೆಹಲಿ: ತಮಿಳುನಾಡು ಆಕ್ಷೇಪಕ್ಕೆ ಕಿವಿಗೊಡದ ಸುಪ್ರೀಂಕೋರ್ಟ್, ಕಾವೇರಿ ನದಿಯಿಂದ ಕೇವಲ 2.44 ಟಿಎಂಸಿ ಅಡಿ ನೀರನ್ನು ತಕ್ಷಣ ಬಿಡುಗಡೆ ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಗುರುವಾರ ಆದೇಶ ನೀಡಿತು.

ಕಾವೇರಿ ಜಲ ವಿವಾದದ ವಿಚಾರಣೆ ನಡೆಸುತ್ತಿರುವ ನ್ಯಾ. ಆರ್.ಎಂ. ಲೋಧ ನೇತೃತ್ವದ ತ್ರಿಸದಸ್ಯ ಸುಪ್ರೀಂ ಕೋರ್ಟ್‌ಪೀಠ, ಈಚೆಗೆ ತಮಿಳುನಾಡಿಗೆ ತೆರಳಿದ್ದ `ಕೇಂದ್ರ ಜಲ ಆಯೋಗ'ದ ಮುಖ್ಯ ಎಂಜಿನಿಯರ್ ಕೆ.ಎಸ್.ಜೇಕಬ್ ನೇತೃತ್ವದ ಪರಿಣತರ ತಂಡ `ಸಾಂಬಾ ಬೆಳೆ ಪರಿಸ್ಥಿತಿ ಹಾಗೂ ನೀರಿನ ಅಗತ್ಯ' ಕುರಿತು ನೀಡಿದ ವರದಿ ಪರಿಶೀಲಿಸಿತು. ಸಮಿತಿ ಶಿಫಾರಸಿನಂತೆ 2.44 ಟಿಎಂಸಿ ಅಡಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸೂಚಿಸಿತು.

ನ್ಯಾ. ಚಲಮೇಶ್ವರ್ ಹಾಗೂ ನ್ಯಾ. ಮದನ್ ಬಿ. ಲೋಕೂರ್ ಸದಸ್ಯರಾಗಿರುವ ಸುಪ್ರೀಂಕೋರ್ಟ್ ಪೀಠ, ಸೋಮವಾರ ಮೆಟ್ಟೂರು ಜಲಾಶಯದಿಂದ ಸಾಂಬಾ ಬೆಳೆಗೆ ತಕ್ಷಣ 2 ಟಿಎಂಸಿ ಅಡಿ ನೀರು ಬಿಡುವಂತೆ ತಮಿಳುನಾಡಿಗೆ ಹೇಳಿತ್ತು. ಕೇಂದ್ರ ಪರಿಣತರ ತಂಡದ ವರದಿ ಏನೇ ಇದ್ದರೂ ಈ 2ಟಿಎಂಸಿ ಅಡಿ ನೀರನ್ನು ಕರ್ನಾಟಕದಿಂದ ಕೊಡಿಸುವ ಬದ್ಧತೆಯನ್ನು ಸೋಮವಾರ ನೀಡಿತ್ತು. ಅಂತಿಮವಾಗಿ ಗುರುವಾರ ಕೋರ್ಟ್ 2.44ಟಿಎಂಸಿ ಅಡಿ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶಿಸಿತು.

ಸುಪ್ರೀಂ ಕೋರ್ಟ್‌ಗೆ ಬುಧವಾರ ವರದಿ ಸಲ್ಲಿಸಿದ ಕೇಂದ್ರ ಜಲ ಆಯೋಗದ ಅಧಿಕಾರಿಗಳು ತಮಿಳುನಾಡಿನಲ್ಲಿ ಈಗಾಗಲೇ ಶೇ 50ರಷ್ಟು ಸಾಂಬಾ ಬೆಳೆ ಕಟಾವಾಗಿದೆ. ಶೇ 40ರಷ್ಟು ಬೆಳೆ ಕಟಾವಿಗೆ ಸಿದ್ಧವಾಗಿದೆ. ಮಿಕ್ಕ ಶೇ 10ರಷ್ಟು ಬೆಳೆಗೆ ಮಾತ್ರ ನೀರಿನ ಅಗತ್ಯವಿದೆ ಎಂದು ಹೇಳಿತ್ತು. ಪರಿಣತ ಸಮಿತಿ ವರದಿ ಪರಿಶೀಲಿಸಿದ ಬಳಿಕ ಕರ್ನಾಟಕ ಹಾಗೂ ತಮಿಳುನಾಡಿನ ವಾದ- ಪ್ರತಿವಾದ ಕೇಳಿದ ಕೋರ್ಟ್, ತಕ್ಷಣ 2.44ಟಿಎಂಸಿ ಅಡಿ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚನೆ ನೀಡಿತು.

ತಮಿಳುನಾಡು ಅಪಸ್ವರ: ಆದರೆ, ತಮಿಳುನಾಡು ಪರಿಣತ ಸಮಿತಿ ವರದಿ ಬಗ್ಗೆ ಅಪಸ್ವರ ತೆಗೆಯಿತು. ವರದಿ ವಸ್ತುಸ್ಥಿತಿ ಆಧರಿಸಿಲ್ಲ ಎಂದು ಆರೋಪಿಸಿತು. ತಮಿಳುನಾಡು ಆಕ್ಷೇಪವನ್ನು ತಳ್ಳಿಹಾಕಿದ ನ್ಯಾಯಪೀಠ, `ನೀವು ಹೇಳುವುದೆಲ್ಲ ಪರಮ ಸತ್ಯವೆಂದು ನಾವು ನಂಬಬೇಕು. ಅದಕ್ಕೆ ಅನುಗುಣವಾಗಿ ಆದೇಶ ಕೊಡಬೇಕು ಎನ್ನುವುದು ನಿಮ್ಮ ಭಾವನೆ' ಎಂದು ತರಾಟೆಗೆ ತೆಗೆದುಕೊಂಡಿತು. ಅತಿ  ಕಡಿಮೆ ಸಮಯದಲ್ಲಿ ಸಮಿತಿ ವರದಿ ಕೊಟ್ಟಿದೆ ಎಂದೂ ಪೀಠ ಮೆಚ್ಚುಗೆ ವ್ಯಕ್ತಪಡಿಸಿತು.

`ಕರ್ನಾಟಕ ಕಾವೇರಿ ನದಿಯಿಂದ ತಮಿಳುನಾಡಿಗೆ 2.44ಟಿಎಂಸಿ ಅಡಿ ನೀರು ಹರಿಸುವುದರಿಂದ ಬೆಂಗಳೂರಿನ ಕುಡಿಯುವ ನೀರಿಗೆ ತೊಂದರೆ ಆಗದು' ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿತು. ತಮಿಳುನಾಡು ಪರ ವಕೀಲ ಸಿ.ಎಸ್.ವೈದ್ಯನಾಥನ್, ಜಲ ಆಯೋಗದ ಸಮಿತಿ ಶಿಫಾರಸು ಕುರಿತು ಅಸಮಾಧಾನ ವ್ಯಕ್ತಪಡಿಸಿದರು. `ಸಮಿತಿ ಶೇ 10ರಷ್ಟು ಬೆಳೆ ಪ್ರದೇಶಕ್ಕೂ ಭೇಟಿ ನೀಡಿ ಪರಿಶೀಲಿಸಿಲ್ಲ' ಎಂದು ಆರೋಪಿಸಿದರು.

`ಜೇಕಬ್ ಸಮಿತಿ ಶಿಫಾರಸು ವಸ್ತುನಿಷ್ಠವಾಗಿಲ್ಲ. ಅವರು ಶೇ 10ರಷ್ಟು ಪ್ರದೇಶಕ್ಕೂ ಭೇಟಿ ಕೊಟ್ಟಿಲ್ಲ. ಅವರ ಭೇಟಿ ಕಾರ್ಯಕ್ರಮವನ್ನು ನಾವು ವಿಡಿಯೊ ರೆಕಾರ್ಡ್ ಮಾಡಿದ್ದೇವೆ' ಎಂದು ವೈದ್ಯನಾಥನ್ ಪ್ರತಿಪಾದಿಸಿದರು. ತಮಿಳುನಾಡು ವಾದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದ ನ್ಯಾಯಪೀಠ, `ಈ ಬಗ್ಗೆ ಗೊಂದಲ ಸೃಷ್ಟಿಸಬೇಡಿ. ಅತಿ  ಕಡಿಮೆ ಸಮಯವನ್ನು ಸಮಿತಿಗೆ ನೀಡಲಾಗಿತ್ತು. ಸಿಕ್ಕ ಸಮಯದಲ್ಲೇ ಒಳ್ಳೆ ಕೆಲಸ ಮಾಡಿದ್ದಾರೆ' ಎಂದು ಹೇಳಿತು.

`ಸಮಿತಿಗೆ ಸಿಕ್ಕ ಸಮಯದಲ್ಲಿ ಬೆಳೆ ಪ್ರದೇಶ ಹಾಗೂ ನೀರಿನ ಅಗತ್ಯ ಕುರಿತು ನಿಖರವಾದ ಮಾಹಿತಿ ಕೊಡಲು ಸಾಧ್ಯವಿಲ್ಲದೆ ಇರಬಹುದು. ಹಾಗೆಂದ ಮಾತ್ರಕ್ಕೆ ಇಡೀ ವರದಿ ವಾಸ್ತವದಿಂದ ಕೂಡಿಲ್ಲ ಎಂದು ಹೇಳಲಾಗದು' ಎಂದು ನ್ಯಾಯಾಲಯ ತಿಳಿಸಿತು.

`ಸಾಂಬಾ ಬೆಳೆ ರಕ್ಷಣೆಗೆ 12 ಟಿಎಂಸಿ ಅಡಿ ನೀರಿನ ಅಗತ್ಯವಿದೆ ಎಂದು ತಮಿಳುನಾಡು ಪ್ರತಿಪಾದಿಸಿತು. ಇದಕ್ಕೆ ಕರ್ನಾಟಕ ತಗಾದೆ ತೆಗೆದ ಹಿನ್ನೆಲೆಯಲ್ಲಿ ಪರಿಣತರ ಸಮಿತಿ ಕಳುಹಿಸಲು ನಿರ್ಧರಿಸಲಾಯಿತು' ಎಂದು ನ್ಯಾಯಪೀಠ ಮನವರಿಕೆ ಮಾಡಿತು.

ಅಷ್ಟಕ್ಕೆ ಸುಮ್ಮನಾಗದ ತಮಿಳುನಾಡು ವಕೀಲರು ಪರಿಣತ ಸಮಿತಿ ವರದಿ ಸಾಚಾತನ ಪ್ರಶ್ನಿಸಿದರು. `ವರದಿ ಮುದ್ರಣದ ರೂಪದಲ್ಲಿ ಇಲ್ಲ'ವೆಂದು ಕ್ಯಾತೆ ತೆಗೆದರು. ಇದನ್ನು ರಾಜ್ಯದ ವಕೀಲ ಅನಿಲ್ ದಿವಾನ್ ವಿರೋಧಿಸಿದರು. ವೈದ್ಯನಾಥನ್ ಆಕ್ಷೇಪ ತಳ್ಳಿಹಾಕಿದ ನ್ಯಾ. ಲೋಧ `ನನ್ನ 20 ವರ್ಷದ ಅನುಭವದಲ್ಲಿ ಪರಿಣತ ವರದಿ ಕುರಿತು ಟೀಕೆ ಮಾಡಿದ್ದನ್ನು ಕಂಡಿಲ್ಲ'  ಎಂದು ಅಭಿಪ್ರಾಯಪಟ್ಟರು.

`ನೀರಿಗೆ ಕಾವನ್ನು ಶಮನ ಮಾಡುವ ಶಕ್ತಿಯಿದೆ. ಆದರೆ, ಕಾವೇರಿ ವಿವಾದ ಕಾವನ್ನು ಹೆಚ್ಚಿಸುತ್ತಿದೆ' ಎಂದು ನ್ಯಾಯಪೀಠ ನವಿರಾದ ದಾಟಿಯಲ್ಲಿ ಹೇಳಿತು. ತಮಿಳುನಾಡು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ 12 ಟಿಎಂಸಿ ಅಡಿ ನೀರಿಗೆ ಬೇಡಿಕೆ ಮಂಡಿಸಿತ್ತು. ಸೋಮವಾರ ವಿಚಾರಣೆ ಸಮಯದಲ್ಲಿ 9ಟಿಎಂಸಿ ಅಡಿ ನೀರು ಅಗತ್ಯವಿದೆ ಎಂದು ಪ್ರತಿಪಾದಿಸಿತ್ತು.

ಜೇಕಬ್ ಸಮಿತಿ ತನ್ನ ವರದಿಯಲ್ಲಿ 45 ಸಾವಿರ ಎಕರೆ ಪ್ರದೇಶದಲ್ಲಿ ಸಾಂಬಾ ಬೆಳೆಗೆ ಒಂದು ಸಲ ನೀರು ಹಾಯಿಸುವ ಅಗತ್ಯವಿದೆ. ಅದಕ್ಕೆ 0.71ಟಿಎಂಸಿ ಅಡಿ ನೀರು ಅಗತ್ಯವಿದೆ. ಉಳಿದ 55ಸಾವಿರ ಎಕರೆ ಪ್ರದೇಶದಲ್ಲಿರುವ ಬೆಳೆಗೆ ಎರಡು ಸಲ ನೀರು ಕೊಡಬೇಕಿದೆ. ಈ ಉದ್ದೇಶಕ್ಕೆ 1.73ಟಿಎಂಸಿ ಅಡಿ ನೀರು ಬೇಕಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಬುಧವಾರ ಸಲ್ಲಿಸಿರುವ ವರದಿಯಲ್ಲಿ ವಿವರಿಸಿತ್ತು.

ಕೆಆರ್‌ಎಸ್: 81.35 ಅಡಿ ನೀರು
ಮಂಡ್ಯ: ಕೆಆರ್‌ಎಸ್ (ಕೃಷ್ಣರಾಜಸಾಗರ) ಅಣೆಕಟ್ಟಿನ ಗರಿಷ್ಠ ಮಟ್ಟ 124.80 ಅಡಿಯಿದ್ದು, ಸದ್ಯಕ್ಕೆ 81.35 ಅಡಿಯಷ್ಟು ನೀರಿದೆ.
ಅಣೆಕಟ್ಟಿನ ಒಳಹರಿವು 357 ಕ್ಯೂಸೆಕ್ ಇದ್ದರೆ, ಹೊರಹರಿವು 295 ಕ್ಯೂಸೆಕ್ ಇದೆ. ಒಟ್ಟು 11.39 ಟಿಎಂಸಿ ಅಡಿಯಷ್ಟು ಮಾತ್ರ ನೀರಿದೆ. ಅದರಲ್ಲಿ 4.45 ಟಿಎಂಸಿ ಅಡಿ ಡೆಡ್ ಸ್ಟೋರೇಜ್ ಆಗಿದ್ದು, 4 ಟಿಎಂಸಿ ಅಡಿ ಕುಡಿಯಲು, 2 ಟಿಎಂಸಿ ಅಡಿ ನೀರನ್ನು ನಾಲೆಗೂ ಹರಿಸಬಹುದಾಗಿದೆ ಎನ್ನುತ್ತವೆ ನೀರಾವರಿ ಇಲಾಖೆಯ ಮೂಲಗಳು.

ಆತುರ ಇಲ್ಲ: ರಾಜ್ಯದ ಸ್ಪಷ್ಟನೆ
ಬೆಂಗಳೂರು: `ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಆತುರದ ತೀರ್ಮಾನ ತೆಗೆದುಕೊಳ್ಳುವುದಿಲ್ಲ. ರಾಜ್ಯದ ಹಿತಾಸಕ್ತಿ ಕಾಪಾಡಲು ಕಠಿಣ ನಿಲುವು ತೆಗೆದುಕೊಳ್ಳುವುದಕ್ಕೆ ಹಿಂಜರಿಯುವುದಿಲ್ಲ. ಕಾನೂನು ಹೋರಾಟವನ್ನೂ ಮುಂದುವರಿಸುತ್ತೇವೆ' ಎಂದು ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಗುರುವಾರ ವಿಧಾನಸಭೆಯಲ್ಲಿ ತಿಳಿಸಿದರು.

ಕೆಆರ್‌ಎಸ್ ಸುತ್ತ ನಿಷೇಧಾಜ್ಞೆ
ಮಂಡ್ಯ: ಕೆಆರ್‌ಎಸ್‌ನಿಂದ ನೀರು ಬಿಡಲು ಸುಪ್ರೀಂ ಕೋರ್ಟ್ ಸೂಚಿಸಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತವು ಕೆಆರ್‌ಎಸ್ ಸುತ್ತ ಫೆ. 8ರ ಬೆಳಿಗ್ಗೆ 6 ಗಂಟೆಯಿಂದ ಎರಡು ದಿನಗಳ ಕಾಲ ನಿಷೇಧಾಜ್ಞೆ ವಿಧಿಸಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT