24/7 ನೀರು: ಸಂಶೋಧನೆಯಲ್ಲಿ ಏನಿದೆ?

ಶುಕ್ರವಾರ, ಜೂಲೈ 19, 2019
22 °C

24/7 ನೀರು: ಸಂಶೋಧನೆಯಲ್ಲಿ ಏನಿದೆ?

Published:
Updated:

ಧಾರವಾಡ: ಅಮೆರಿಕದ ಬರ್ಕ್‌ಲಿಯ ಕ್ಯಾಲಿಫೋರ್ನಿಯಾ ವಿ.ವಿ. ಪ್ರಾಧ್ಯಾಪಕಿ ಪ್ರೊ.ಕಾರಾ ನೆಲ್ಸನ್ ಅವರ ನೇತೃತ್ವದಲ್ಲಿ ಸಂಶೋಧನಾ ವಿದ್ಯಾರ್ಥಿಗಳಾದ ಎಮಿಲಿ ಕುಂಪೆಲ್, ಆಯ್ಸೆ ಎರ್ಕುಮನ್, ಝಾಚರಿ ಬರ್ಟ್ ಹಾಗೂ ಜಾಕ್ ಅವರನ್ನೊಳಗೊಂಡ ತಂಡ ಹುಬ್ಬಳ್ಳಿ-ಧಾರವಾಡದಲ್ಲಿ ಕಾರ್ಯಗತಗೊಳ್ಳುತ್ತಿರುವ ನಿರಂತರ ನೀರು ಯೋಜನೆಯ ಬಗ್ಗೆ ಹಲವು ಕುತೂಹಲಕರ ಸಂಗತಿಗಳನ್ನು ಹೊರಹಾಕಿದೆ.ಅವಳಿ ನಗರದ ಜನತೆ ಯೋಜನೆಯ ಬಗೆಗೆ ಒಲವುಳ್ಳವರಾಗಿದ್ದರೂ ನೀರು ಪೂರೈಕೆ ಯೋಜನೆಯನ್ನು ಖಾಸಗೀಕರಣ ಮಾಡಲಾಗುತ್ತದೆ ಎಂಬ ಸಂಶಯವನ್ನು ಹೊಂದಿದ್ದಾರೆ ಎಂಬ ಸಂಗತಿಯನ್ನು ಬಹಿರಂಗಪಡಿಸಿದೆ. ಯೋಜನೆಯ ವ್ಯಾಪ್ತಿಗೊಳಪಡುವ ಶೇ 13ರಷ್ಟು ಜನರು ನಿರಂತರ ನೀರಿನ ಬದಲು ಈಗ ಇರುವ ಪದ್ಧತಿಯೇ ಇರಲಿ (2-3 ದಿನಕ್ಕೊಮ್ಮೆ ನೀರು) ಎಂದು ಬಯಸಿದ್ದಾರೆ.ಯೋಜನೆ ಜಾರಿಯಾದ ಎಂಟು ವಾರ್ಡ್‌ಗಳಲ್ಲಿನ ಶೇ 49ರಷ್ಟು ಹಾಗೂ ಯೋಜನೆ ಜಾರಿಯಾಗದ ಶೇ 52ರಷ್ಟು ಜನರು 2011ರ ಮೊದಲ ತಿಂಗಳ ನೀರಿನ ಶುಲ್ಕವನ್ನು ಇನ್ನೂ ಪಾವತಿ ಮಾಡಿಲ್ಲ. ಶೇ 50ರಷ್ಟು ನಿರಂತರ ನೀರ ಯೋಜನೆ ಫಲಾನುಭವಿಗಳು ಹಾಗೂ ಶೇ 23ರಷ್ಟು ಯೋಜನೆಯಿಂದ ಹೊರಗುಳಿದ ಜನರು ತಮ್ಮ ಶುಲ್ಕ ಬಾಕಿಯನ್ನು ಇನ್ನೂ ಉಳಿಸಿಕೊಂಡಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.ಎಲ್ಲ ವಾರ್ಡ್‌ಗಳಿಗೆ `ನಿರಂತರ ನೀರು' ಯೋಜನೆ ಜಾರಿಯಾದರೂ ಮಾಸಿಕ ಶುಲ್ಕ 100

ರೂಪಾಯಿ ಮಾತ್ರ ಇರಬೇಕು ಎಂದು ಶೇ 86 ರಷ್ಟು ಜನರು ಬಯಸಿದ್ದಾರೆ.ಅಲ್ಲದೇ, ಕಾರಾ ನೆಲ್ಸನ್ ನೇತೃತ್ವದ ಈ ತಂಡವು ಯೋಜನೆ ಜಾರಿಯಿಂದ ಜನರಿಗೆ ನೀರು ತುಂಬುವಲ್ಲಿ ಬೇಕಾಗುವ ಸಮಯ ಎಷ್ಟು ಉಳಿತಾಯವಾಗಲಿದೆ ಎಂಬುದನ್ನು ಲೆಕ್ಕ ಹಾಕಿದ್ದು, ಸರಾಸರಿ ಮಾಸಿಕ 21 ಗಂಟೆ ಉಳಿತಾಯವಾಗಲಿದೆ. ಪ್ರಸ್ತುತ ಜಲಮಂಡಳಿ ಎರಡು ದಿನಕ್ಕೊಮ್ಮೆ ನೀರು ಪೂರೈಸುವ ವ್ಯವಸ್ಥೆಯಿಂದಾಗಿ ನೀರನ್ನು ಸಂಗ್ರಹಿಸಲು ಟ್ಯಾಂಕರ್, ಖಾಸಗಿ ಬೋರ್‌ವೆಲ್ ಕೊರೆಸುವುದು ಸೇರಿದಂತೆ ಮಾಸಿಕ 119 ರೂಪಾಯಿ ಖರ್ಚಾಗುತ್ತದೆ.ಜಲಮಂಡಳಿಯೂ ಸರಾಸರಿ 120 ರೂಪಾಯಿ ನೀರಿನ ಶುಲ್ಕವನ್ನು ಸಂಗ್ರಹಿಸಲಿದೆ. 24/7 ಯೋಜನೆ ಜಾರಿಯಿಂದ ಈ ಹಣ ಉಳಿತಾಯವಾಗಲಿದ್ದು, ಸರಾಸರಿ ಜಲಮಂಡಳಿ ಶುಲ್ಕವೇ ಇದಕ್ಕೂ ಅನ್ವಯವಾಗಲಿದೆ. ಆದರೆ ನೀರು ಸಂಗ್ರಹಿಸುವ ಸಮಸ್ಯೆ ಬಗೆಹರಿಯಲಿದೆ.ಎರಡು ದಿನಕ್ಕೊಮ್ಮೆ ನೀರು ಬಿಡುವುದಕ್ಕೂ ನಿರಂತರವಾಗಿ ಪೂರೈಕೆಯಾಗುವುದಕ್ಕೂ ಹಲವು ಗುಣಾತ್ಮಕ ವ್ಯತ್ಯಾಸಗಳಿದ್ದು, ನಿರಂತರ ನೀರು ಪೂರೈಕೆ ಸಂದರ್ಭದಲ್ಲಿ ಬ್ಯಾಕ್ಟೀರಿಯಾ ತಡೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಂತೆ. ಪ್ರಸ್ತುತ ನೀರು ಪೂರೈಕೆ ವಿಧಾನಕ್ಕಿಂತ ನಿರಂತರ ನೀರು ಪೂರೈಕೆಯಿಂದ ಶೇ 7ರಷ್ಟು ಡೈರಿಯಾ (ಮಕ್ಕಳಲ್ಲಿ ಕಾಣಿಸಿಕೊಳ್ಳುವ ಜಲಸಂಬಂಧಿ ಕಾಯಿಲೆ) ಪ್ರಮಾಣ ಕಡಿಮೆಯಾಗುತ್ತದೆ ಎಂದು ಸಂಶೋಧನೆ ತಿಳಿಸಿದೆ. ಯೋಜನೆ ಅನುಷ್ಠಾನಕ್ಕೆ ಹಣಕಾಸು ನೆರವು ನೀಡಿದ ವಿಶ್ವಬ್ಯಾಂಕ್ ಈ ಸಂಶೋಧನೆಗೂ ಆರ್ಥಿಕ ಸಹಾಯ ನೀಡಿದೆ.ನೀರಿನ ಸದ್ಬಳಕೆ ಅಗತ್ಯ: ಸಮೀರ್ ಶುಕ್ಲಾ

ಧಾರವಾಡ:
`ವಿಶ್ವದಲ್ಲಿ ನೀರು ಹಾಗೂ ಭೂಮಿ ಮಾತ್ರ ಇದ್ದ ಪ್ರಮಾಣದಲ್ಲಿಯೇ ಇರುತ್ತದೆ. ಆದರೆ ಜನಸಂಖ್ಯೆ ಮಾತ್ರ ಏರುತ್ತಲೇ ಇದೆ. ಭೂಮಿಯ ಶೇ 75ರಷ್ಟು ನೀರಿದ್ದರೂ ಅದು ಕುಡಿಯಲು ಯೋಗ್ಯವಲ್ಲ. ಕುಡಿಯಬಹುದಾದ ನೀರನ್ನು ಮಿತವಾಗಿ ಬಳಸುವ ಅಗತ್ಯವಿದೆ' ಎಂದು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಅಭಿಪ್ರಾಯಪಟ್ಟರು.ಇಲ್ಲಿಯ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನಲ್ಲಿ `ಸೆಂಟರ್ ಫಾರ್ ಮಲ್ಟಿ ಡಿಸಿಪ್ಲಿನರಿ ರಿಸರ್ಚ್' (ಐಎಂಡಿಆರ್) ಹಾಗೂ ಅಮೆರಿಕದ ಬರ್ಕ್‌ಲಿ ಕ್ಯಾಲಿಫೋರ್ನಿಯಾ ವಿ.ವಿ.ಯ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ 24/7 ನಿರಂತರ ನೀರು ಯೋಜನೆಯ ಮೌಲ್ಯಮಾಪನ ವಿಷಯ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, `ಅವಳಿ ನಗರದಲ್ಲಿ ವಾಸಿಸುವ ಎಲ್ಲ ಜನರಿಗೂ ಒಂದೇ ಗುಣಮಟ್ಟದ ನೀರು ಪೂರೈಕೆಯಾಗುವ ವ್ಯವಸ್ಥೆ ಜಾರಿಗೆ ಬರಬೇಕು. ಅದು ಈ ಯೋಜನೆಯ ಮೂಲ ಉದ್ದೇಶವಾಗಬೇಕು' ಎಂದು ಹೇಳಿದರು.`ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಮುಖವಾಗಿ ಜಲ ನಿರ್ವಹಣೆ ಹಾಗೂ ಘನ ತ್ಯಾಜ್ಯ ನಿರ್ವಹಣೆ ಪ್ರಮುಖ ಸಮಸ್ಯೆಗಳಾಗಿವೆ. ಇವುಗಳ ಯಶಸ್ವಿ ನಿರ್ವಹಣೆಯಿಂದ ನಗರದ ವಾತಾವರಣ ಸುಧಾರಿಸುತ್ತದೆ' ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿ.ಎಂ.ಆರ್.ಡಿ ಅಧ್ಯಕ್ಷ ಪ್ರೊ.ಪಿ.ಆರ್. ಪಂಚಮುಖಿ, `ಈ ಸಂಶೋಧನೆ ಯೋಜನೆಯ ಮಧ್ಯಾವಧಿಯಲ್ಲಿ ಕೊರತೆಗಳನ್ನು ಹಾಗೂ ಅವ್ಯವಸ್ಥೆಗಳನ್ನು ತಿದ್ದಿಕೊಳ್ಳಲು ಅವಕಾಶ ಮಾಡಿಕೊಳ್ಳುವುದಾಗಿದೆ. ವಿಶ್ವಬ್ಯಾಂಕ್‌ನಿಂದ ನಡೆಯುವ ಈ ಯೋಜನೆಯ ಅಡಿಯಲ್ಲಿ ಬೆಳಗಾವಿ ಮತ್ತು ಗುಲ್ಬರ್ಗ ನಗರಗಳನ್ನು ಸಹ ಇದೇ ರೀತಿ ಸಂಶೋಧನೆ ಮಾಡಲು ಅವಶ್ಯಕತೆ ಇದೆ' ಎಂದು ನುಡಿದರು.ಎಸ್.ಡಿ.ಎಂ ಶಿಕ್ಷಣ ಸೊಸೈಟಿ ಕಾರ್ಯದರ್ಶಿ ಕೆ.ಜಿನೇಂದ್ರ ಪ್ರಸಾದ, ಜಲಮಂಡಳಿಯ ಧಾರವಾಡ ಉತ್ತರ ಉಪವಿಭಾಗದ ಮುಖ್ಯ ಎಂಜಿನಿಯರ್ ಜಿ.ಎಂ.ಮಾದೇಗೌಡ ಮಾತನಾಡಿದರು. ನಂತರ ನಡೆದ ಸಂವಾದದಲ್ಲಿ ಪರಿಸರವಾದಿ ಸುರೇಶ ಹೆಬ್ಳೀಕರ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ವಿಜ್ಞಾನಿ ಪ್ರೊ.ಟಿ.ವಿ.ರಾಮಚಂದ್ರ, ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ ಪ್ರಾಧ್ಯಾಪಕ ಪ್ರೊ.ಕೆ.ವಿ.ರಾಜು, ಪ್ರೊ.ಗೋಪಾಲ ಕೆ.ಕಡೆಕೋಡಿ ಪಾಲ್ಗೊಂಡಿದ್ದರು. ಡಾ.ವಿ.ಎಸ್.ಹೆಗಡೆ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry