ಶುಕ್ರವಾರ, ಆಗಸ್ಟ್ 12, 2022
25 °C
ಅಂದು ಸಿವಿಲ್‌ ಎಂಜಿನಿಯರ್‌; ಇಂದು ಪಾಲಿಕೆ ಮೇಯರ್‌: ಇದು ‘ಪ್ರಥಮ ಪ್ರಜೆ’ಯ ಸಾಧನೆ

24x7 ಸೇವೆಗೆ ಲಭ್ಯ: ಭೀಮರೆಡ್ಡಿ

ಸುಭಾಸ ಎಸ್‌.ಮಂಗಳೂರ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ನಗರದ ಎಲ್ಲ ವಾರ್ಡ್‌ಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ, ಸ್ವಚ್ಛ ನಗರ, ಸೌಂದರ್ಯೀಕರಣ, ಸಾರ್ವಜನಿಕ ಶೌಚಾಲಯ ನಿರ್ಮಾಣ, ವಾಹನ ನಿಲುಗಡೆಗೆ ನಗರದ ಮೂರು ಸ್ಥಳಗಳಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣ ಮತ್ತು 24X7 ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದು..–ಇವು ನಗರದ ‘ಪ್ರಥಮ ಪ್ರಜೆ’ ಭೀಮರೆಡ್ಡಿ ಪಾಟೀಲ ಕುರಕುಂದಾ ಅವರ ಅಭಿವೃದ್ಧಿಪರ ಕನಸುಗಳು. ಪಾಲಿಕೆ ಇತಿಹಾಸದಲ್ಲೇ ಅತಿ ಹೆಚ್ಚು ಮತ ಪಡೆದ ಮೇಯರ್ ಎಂಬ ಹೆಗ್ಗಳಿಕೆ ಇವರದ್ದು. ತಮಗೆ ಸಿಕ್ಕಿರುವ ಒಂದು ವರ್ಷದ ಅವಧಿಯಲ್ಲಿ ಕೈಗೊಳ್ಳಬಹುದಾದ ಅಭಿವೃದ್ಧಿ ಕಾಮಗಾರಿಗಳ ಕುರಿತು ತಮ್ಮ ಮನದಾಳದ ಮಾತುಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.ಕಲಬುರ್ಗಿಯಲ್ಲಿ ಮಹಾನಗರ ಪಾಲಿಕೆ ಇದೆ ಅಂತ ಜನರಿಗೆ ಅನಿಸುತ್ತಿಲ್ಲವಲ್ಲಾ?

ನಿಮ್ಮ ಪ್ರಶ್ನೆ ಸರಿಯಾಗಿದೆ. ಸತ್ಯವೂ ಹೌದು. ಎಲ್ಲ ಇದ್ದು, ಏನೂ ಇಲ್ಲದಂತಹ ಪರಿಸ್ಥಿತಿ ಇಲ್ಲಿದೆ. ಪಾಲಿಕೆ ಆಡಳಿತ ಸಂಪೂರ್ಣ ಹಳಿ ತಪ್ಪಿದೆ. ಮುಖ್ಯವಾಗಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ಕಂಪ್ಯೂಟರ್ ಆಪರೇಟರ್‌ಗಳಾಗಿ ನೇಮಕಗೊಂಡವರು ನೈರ್ಮಲ್ಯ ಅಧಿಕಾರಿಯ ಕೆಲಸ ಮಾಡುತ್ತಿದ್ದಾರೆ. ಇನ್ನೊಂದೆಡೆ ಆರೋಗ್ಯಾಧಿಕಾರಿ ಕಂದಾಯ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಹೀಗಾಗಿ, ಸಾರ್ವಜನಿಕರು ನಮ್ಮ ಬಳಿ ಬಂದರೂ ಕೆಲಸಗಳು ಆಗುತ್ತಿಲ್ಲ.ಶುದ್ಧ ನೀರು, ಸ್ವಚ್ಛ ನಗರ ಎಂದು ಹೇಳಿದಿರಿ, ಅದು ಸಾಧ್ಯವೇ?

ಭೀಮಾ ನದಿ ನೀರು ಶುದ್ಧೀಕರಣದ ಬಳಿಕವೂ ಕೆಂಪಾಗಿರುತ್ತದೆ. ಹೀಗಾಗಿ, ಕುಡಿಯಲು ರುಚಿಯಾಗಿಲ್ಲ. ಅವೈಜ್ಞಾನಿಕ ನಿರ್ವಹಣೆಯೇ ಇದಕ್ಕೆ ಕಾರಣ. ಈ ಕಾರಣಕ್ಕಾಗಿಯೇ ನಂದಿಕೂರನಲ್ಲಿ ₨ 27 ಕೋಟಿ ಹಾಗೂ ಕಪನೂರನಲ್ಲಿ ₨ 127 ಕೋಟಿ ವೆಚ್ಚದಲ್ಲಿ ನೀರು ಸಂಸ್ಕರಣಾ ಘಟಕ (ಎಸ್‌ಟಿಪಿ) ನಿರ್ಮಿಸಲಾಗುತ್ತಿದೆ. 24X7 ನೀರು ಸರಬರಾಜಿಗೆ ಸಂಬಂಧಿಸಿದಂತೆ ₨ 400 ಕೋಟಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, ಎಲ್ಲ ಪೈಪ್‌ಲೈನ್‌ಗಳನ್ನು ಬದಲಾಯಿಸಲಾಗುತ್ತದೆ. ಆಗ ಶುದ್ಧ ನೀರು ಕೊಡಲು ಖಂಡಿತ ಸಾಧ್ಯ. ಸ್ವಚ್ಛ ನಗರ ಯೋಜನೆಯಡಿ ಈಗಾಗಲೇ ಮನೆ ಮನೆ ಕಸ ಸಂಗ್ರಹಿಸಲಾಗುತ್ತಿದೆ. ಇದನ್ನು ಇನ್ನಷ್ಟು ಚುರುಕುಗೊಳಿಸಲಾಗುವುದು.ಒಂದು ವರ್ಷದ ಅವಧಿಯಲ್ಲಿ ನಿರೀಕ್ಷಿತ ಅಭಿವೃದ್ಧಿ ಸಾಧ್ಯವೇ?

ಪಾಲಿಕೆ ಸದಸ್ಯರು, ಸಂಬಂಧಿಸಿದ ಇಲಾಖೆಯ ಎಂಜಿನಿಯರ್‌ಗಳನ್ನು ಒಳಗೊಂಡಂತೆ ವಾರ್ಡ್ ದರ್ಶನ ಮಾಡುತ್ತೇನೆ. 4–5 ವಾರ್ಡ್‌ಗಳ ಜನರ ಸಭೆ ಕರೆದು ಕುಂದು–ಕೊರತೆ ಆಲಿಸಿ, ತಕ್ಷಣದಲ್ಲೇ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಗರದ ಸಮಗ್ರ ಅಭಿವೃದ್ಧಿಯ ಬಗ್ಗೆ ಗಮನಹರಿಸುತ್ತೇನೆ. ಇದಕ್ಕಾಗಿ ನಾನು 24X7 ಸೇವೆಗೆ ಲಭ್ಯ ಇರುತ್ತೇನೆ.ನಗರದಲ್ಲಿರುವ ಖಾಲಿ ನಿವೇಶನಗಳು ಕಸದ ತೊಟ್ಟಿಗಳಾಗಿವೆಯಲ್ಲ?

ಹೌದು. ಪಾಲಿಕೆ ಎಂಜಿನಿಯರುಗಳ ಸಭೆ ಕರೆದು ಖಾಲಿ ನಿವೇಶನ ಹಾಗೂ ಮಾಲೀಕರ ವಿಳಾಸ ಸಂಗ್ರಹಿಸುವಂತೆ ಸೂಚಿಸಲಾಗುವುದು. ನಿವೇಶನದ ಸ್ವಚ್ಛತೆ ಕಾಪಾಡುವಂತೆ ಎಚ್ಚರಿಕೆ ನೀಡಲಾಗುವುದು. ಆದಾಗ್ಯೂ, ಅವರು ಗಮನಹರಿಸದಿದ್ದರೆ ದಂಡ ವಿಧಿಸಲಾಗುವುದು. ಕೆಲವರು ನಿವೇಶನ ಖರೀದಿಸಿ 20 ವರ್ಷಗಳಾದರೂ ಮನೆ ಕಟ್ಟಿಸಿಲ್ಲ. ಅಂತಹವರ ಪಟ್ಟಿ ತಯಾರಿಸಿ, ದಂಡ ವಸೂಲಿ ಮಾಡಲಾಗುವುದು.ಮತ್ತೆ ಇನ್ಯಾವ ಗುರಿ, ಯೋಜನೆ...

ನಗರದ ಪ್ರಮುಖ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ, ಜಾಹೀರಾತು ಮಾಫಿಯಾಗೆ ಕಡಿವಾಣ, ಕರ ವಸೂಲಿ ಬಿಗಿಗೊಳಿಸುವುದು, ಮೂರು ವಲಯ ಕಚೇರಿಗಳನ್ನು ಮೇಲ್ದರ್ಜೆಗೇರಿಸುವುದು, ಸಿಬ್ಬಂದಿ ನೇಮಕಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸುವುದು, ಸೂಪರ್ ಮಾರ್ಕೆಟ್, ರೈಲು ನಿಲ್ದಾಣ ಸೇರಿದಂತೆ ಮೂರು ಕಡೆ ವಾಹನ ನಿಲುಗಡೆಗೆ ಬಹುಮಹಡಿ ಕಟ್ಟಡ ನಿರ್ಮಾಣ, 20 ಕಾರ್ಮಿಕರು, ಇಬ್ಬರು ನೈರ್ಮಲ್ಯ ಅಧಿಕಾರಿಗಳನ್ನು ಒಳಗೊಂಡ ಎರಡು ತುರ್ತು ಕಾರ್ಯಪಡೆ ರಚನೆ, ನಗರಗಳಲ್ಲಿ ಸೂಚನಾ ಫಲಕ ಅಳವಡಿಸುವುದು, ಹಳಿ ತಪ್ಪಿದ ಆಡಳಿತ ಯಂತ್ರವನ್ನು ಹತೋಟಿಗೆ ತರುವ ಕನಸು ಹೊಂದಿದ್ದೇನೆ.ಬೆಳೆದು ಬಂದ ದಾರಿ..

ಅವಿಭಜಿತ ಕಲಬುರ್ಗಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಕುರಕುಂದಾ ಭೀಮರೆಡ್ಡಿ ಪಾಟೀಲರ ಸ್ವಂತ ಊರು. ತಂದೆ ಮಹಾದೇವಪ್ಪ ಪಾಟೀಲ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕರಾಗಿದ್ದರು. ತಾಯಿ ಸರಸ್ವತಿ. ನಗರದ ಕೆಸಿಟಿ ಕಾಲೇಜಿನಲ್ಲಿ ಸಿವಿಲ್ ವಿಷಯದಲ್ಲಿ ಡಿಪ್ಲೊಮಾ ಪದವಿ ಪಡೆದ ಇವರು, ರಾಯಚೂರು ಜಿಲ್ಲೆ ಶಕ್ತಿ ನಗರದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ನೋಡಿಕೊಳ್ಳುತ್ತಿದ್ದರು. ಆ ಬಳಿಕ ಆಳಂದನಲ್ಲಿ ಸೈಟ್ ಎಂಜಿನಿಯರ್ ಆಗಿ ಕೆಲ ತಿಂಗಳು ಕೆಲಸ ಮಾಡಿದರು.ಶಕ್ತಿನಗರದಲ್ಲಿದ್ದಾಗ ಅಂದಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಪರಿಚಯವಾಗಿ, ರಾಜಕೀಯ ಪದಾರ್ಪಣೆ ಮಾಡಿದರು.

ನಂತರದ ದಿನಗಳಲ್ಲಿ ಖಮರುಲ್ ಇಸ್ಲಾಂ ಅವರ ವಿಶ್ವಾಸಕ್ಕೆ ಪಾತ್ರರಾಗಿ ಈಗ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಅಂದು ಎಂಜಿನಿಯರ್ ಆಗಿದ್ದ ಭೀಮರೆಡ್ಡಿ ಈಗ ಪಾಲಿಕೆಯ 17ನೇ ಮೇಯರ್ ಆಗಿ ಕಾರ್ಯಭಾರ ವಹಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.