ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

24ರಿಂದ ಕನ್ನಡ ನುಡಿ ತೇರು ಜಾಥಾ

Last Updated 12 ಜನವರಿ 2012, 10:25 IST
ಅಕ್ಷರ ಗಾತ್ರ

ಕೋಲಾರ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾ ಆಡಳಿತದ ಸಹಯೋಗದಲ್ಲಿ ಜ.24ರಿಂದ 26ರವರೆಗೆ ಸಂಭ್ರಮದ ಕನ್ನಡ ನುಡಿ ತೇರು ಅಭಿಯಾನ-ಜಾಗೃತಿ ಜಾಥಾ ಜಿಲ್ಲಾದ್ಯಂತ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ತಿಳಿಸಿದರು.

ಕಾರ್ಯಕ್ರಮದ ಪೂರ್ವಭಾವಿ ಸಿದ್ಧತೆ ಕುರಿತು ಚರ್ಚಿಸುವ ಸಲುವಾಗಿ ನಗರದ ತಮ್ಮ ಕಚೇರಿಯಲ್ಲಿ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದ ಅವರು, ಮೂರು ದಿನ  ನಡೆಯುವ ಕಾರ್ಯಕ್ರಮದ ಜೊತೆ ಪ್ರಾಚೀನ ಕಾವ್ಯ ರಸಗ್ರಹಣ ಶಿಬಿರ, ನುಡಿ ಸೊಗಡು, ಕಾಲೇಜು ವಿದ್ಯಾರ್ಥಿಗಳಿಗೆ ಕನ್ನಡ ಚಿಂತನೆ ಕಾರ್ಯಕ್ರಮ ಏರ್ಪಡಿಸಲಾಗುವುದು ಎಂದು ತಿಳಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಘಟನೆಗಳ ಪ್ರಮುಖರು, ಕಾರ್ಯಕರ್ತರು, ಸಂಸದರು, ಶಾಸಕರು, ಸ್ಥಳೀಯ ಜನಪ್ರತಿನಿಧಿಗಳು, ಸಾಹಿತಿಗಳು, ಕಲಾವಿದರು, ರಂಗಕರ್ಮಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಅಭಿಯಾನವನ್ನು ಜ.24 ರಂದು ಬೆಳಿಗ್ಗೆ 11ಕ್ಕೆ ಕೆ.ಜಿ.ಎಫ್‌ನಲ್ಲಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಉದ್ಘಾಟಿಸಲಿದ್ದಾರೆ. ನಂತರ ಬಂಗಾರಪೇಟೆ, ಮಾಲೂರು ತಾಲ್ಲೂಕಿನಲ್ಲಿ  ನುಡಿತೇರು ಸಂಚರಿಸಿ ಮಾಲೂರಿನಲ್ಲಿ ವಾಸ್ತವ್ಯ ಹೂಡಲಿದೆ. 25ರಂದು ಮುಳಬಾಗಲು-ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಮೆರವಣಿಗೆ ನಡೆಯಲಿದೆ. 26ರಂದು ನಗರದ ಟಿ.ಚೆನ್ನಯ್ಯ ರಂಗಮಂದಿರದಲ್ಲಿ ಸಂಜೆ 5ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಹೇಳಿದರು. 

ನುಡಿ ತೇರು ಜೊತೆಯಲ್ಲಿ ಇನ್ನೂರು ಕಲಾವಿದರು ಭಾಗವಹಿಸಲಿದ್ದಾರೆ. ತೇರು ಸಂಚರಿಸುವ ಮಾರ್ಗಗಳಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ವ್ಯವಸ್ಥೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕನ್ನಡಿಗರಲ್ಲಿ ನಾಡು-ನುಡಿ, ಸಂಸ್ಕೃತಿ ಉಳಿಸಿ ಬೆಳೆಸುವ ಜೊತೆಗೆ ಅನ್ಯಭಾಷಿಕರಲ್ಲಿ ಕನ್ನಡ ಪ್ರೀತಿ-ಅಭಿಮಾನ ಮೂಡಿಸುವುದು ಅಭಿಯಾನದ ಉದ್ದೇಶ. ಅದಕ್ಕಾಗಿ ಎಲ್ಲರೂ ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎನ್. ಬಾಬಣ್ಣ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಪ್ರಹ್ಲಾದರಾವ್, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿ ಮುರಳೀಧರ್, ಸಾಹಿತಿ ಡಾ.ರಂಗಾರೆಡ್ಡಿ  ಕೋಡಿರಾಂಪುರ, ಕೆಜಿಎಫ್ ಕನ್ನಡ ಸಂಘದ ಅಧ್ಯಕ್ಷ ಶೇಖರಪ್ಪ, ತಹಶೀಲ್ದಾರ್ ಎಸ್. ಎಂ.ಮಂಗಳಾ, ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಚನ್ನಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟಾಚಲಪತಿ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸಿ.ಎಂ.ರಂಗಾರೆಡ್ಡಿ ಸಭೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT