ಮಂಗಳವಾರ, ಮೇ 11, 2021
24 °C
`ನಮ್ಮ ಮೆಟ್ರೊ' ಎರಡನೇ ಹಂತದ ಯೋಜನೆ

25ರಂದು ಅಂತಿಮ ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಮ್ಮ ಮೆಟ್ರೊ' ಎರಡನೇ ಹಂತದ ಯೋಜನೆಗೆ ಒಪ್ಪಿಗೆ ನೀಡಲು ಕೇಂದ್ರ ಸರ್ಕಾರದ ಸಾರ್ವಜನಿಕ ಹೂಡಿಕೆ ಮಂಡಳಿಯು (ಪಿಐಬಿ) ಇದೇ 25 ರಂದು ಸಭೆ ಸೇರಲಿದ್ದು, ಸಭೆಯಲ್ಲಿ ಯೋಜನೆಯ ವೆಚ್ಚದ ಬಗ್ಗೆಯೇ ವಿಸ್ತೃತ ಚರ್ಚೆ ನಡೆಯುವ ಸಂಭವ ಇದೆ.ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಹಿತದೃಷ್ಟಿಯಿಂದ `ನಮ್ಮ ಮೆಟ್ರೊ' ಎರಡನೇ ಹಂತದ `ಆರ್.ವಿ ರಸ್ತೆ- ಬೊಮ್ಮಸಂದ್ರ' ಹಾಗೂ `ಗೊಟ್ಟಿಗೆರೆ- ನಾಗವಾರ' ಮಾರ್ಗಗಳ ಪಥವನ್ನು ಬದಲಾಯಿಸಲು ಮತ್ತು ಸಂಸ್ಥೆಯ ಒಳ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ನಿಲ್ದಾಣವನ್ನು ಹೊರಭಾಗಕ್ಕೆ ಸ್ಥಳಾಂತರಿಸಲು ಉನ್ನತಾಧಿಕಾರ ಸಮಿತಿ (ಎಚ್‌ಪಿಸಿ) ಸಭೆಯಲ್ಲಿ ತೀರ್ಮಾನಿಸಲಾಗಿದೆ.ಆಸ್ಪತ್ರೆಯ ಹೊರ ಭಾಗದಲ್ಲಿ ನಿಲ್ದಾಣ ನಿರ್ಮಾಣ ಮತ್ತು ಪಥ ಬದಲಾವಣೆ ಮಾಡಿದರೆ ರೂ145 ಕೋಟಿಯಷ್ಟು ಹೆಚ್ಚುವರಿಯಾಗಿ ವೆಚ್ಚವಾಗುತ್ತದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮವು ಅಂದಾಜಿಸಿದೆ. ಈ ಬಗ್ಗೆಯೂ ಸಭೆಯಲ್ಲಿ ವ್ಯಾಪಕ ಚರ್ಚೆ ನಡೆಯಲಿದೆ. ಈ ಅಂಶವೇ ನಿಗಮಕ್ಕೆ ಹಿನ್ನಡೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.ದೆಹಲಿ ಮೆಟ್ರೊ ರೈಲು ನಿಗಮ (ಡಿಎಂಆರ್‌ಸಿ)ದ ಸಲಹೆಗಾರ ವೆಂಕಟ್ ರಾವ್ ಪ್ರತಿಕ್ರಿಯಿಸಿ, `ಯೋಜನೆಯ ಮೂಲ ವೆಚ್ಚಕ್ಕೆ ಹೋಲಿಸಿದರೆ ಪಥ ಬದಲಾವಣೆಯಿಂದ ಬಿಎಂಆರ್‌ಸಿಎಲ್‌ಗೆ ಹೆಚ್ಚುವರಿ ಹೊರೆ ಆಗಲಿದೆ. ಯೋಜನೆ ಪೂರ್ಣಗೊಂಡು ಕಾರ್ಯನಿರ್ವಹಣೆ ಆರಂಭಿಸಿದಾಗ ದೊರಕುವ ಲಾಭಾಂಶದ ಮೇಲೂ ಪರಿಣಾಮ ಬೀರಲಿದೆ.

ದಾವೆ ಮತ್ತಿತರ ಕಾರಣಗಳಿಂದಾಗಿ ಯೋಜನೆ ಅನುಷ್ಠಾನದಲ್ಲೂ ತುಂಬ ವಿಳಂಬವಾಗುವ ಸಾಧ್ಯತೆ ಇದೆ' ಎಂದರು. ನಮ್ಮ ಮೆಟ್ರೊ ಬಗ್ಗೆ ಡಿಎಂಆರ್‌ಸಿ ಪ್ರಾಥಮಿಕ ಅಧ್ಯಯನ ನಡೆಸಿತ್ತು ಹಾಗೂ ವಿವರವಾದ ಯೋಜನಾ ವರದಿಯನ್ನು ಸಿದ್ಧಪಡಿಸಿತ್ತು.  `ಎರಡನೇ ಹಂತಕ್ಕೆ ಈಗಾಗಲೇ ಪ್ರಾಥಮಿಕ ಅನುಮೋದನೆ ನೀಡಲಾಗಿದೆ. ಸಭೆಯಲ್ಲಿ ಯೋಜನೆಯ ವೆಚ್ಚದ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಯಲಿದೆ. ಎರಡನೇ ಹಂತಕ್ಕೆ ಅನುಮೋದನೆ ಸಿಗುವುದು ಖಚಿತ' ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸಿದರು.ಎರಡನೇ ಹಂತದ ಯೋಜನೆ ಬಗ್ಗೆ ಒಂದು ವರ್ಷದ ಹಿಂದೆಯೇ ವಿವರವಾದ ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪ್ರಾಥಮಿಕ ಅನುಮೋದನೆಯೂ ಈಗಾಗಲೇ ದೊರಕಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತಾವಿತ ಯೋಜನೆಯ ವಿವಿಧ ಭಾಗಗಳಲ್ಲಿ ನಿಗಮವು ಸಿದ್ಧತಾ ಕಾರ್ಯಗಳನ್ನು ಆರಂಭಿಸಿದೆ.  ರಾಜ್ಯ ಸರ್ಕಾರ ಎರಡನೇ ಹಂತಕ್ಕೆ 2011ರ ಜನವರಿಯಲ್ಲೇ ಅನುಮೋದನೆ ನೀಡಿತ್ತು. ಕೇಂದ್ರದ ನಗರಾಭಿವೃದ್ಧಿ ಇಲಾಖೆಯಿಂದ ಬಹುತೇಕ ಮಂಜೂರಾತಿ ಸಿಕ್ಕಿದೆ. ಹಣಕಾಸು ಇಲಾಖೆ ಹಾಗೂ ಯೋಜನಾ ಆಯೋಗದ ಅನುಮೋದನೆ ದೊರಕಲು ಬಾಕಿ ಇದೆ. 27,000 ಕೋಟಿ ವೆಚ್ಚದ ಈ ಯೋಜನೆಯ ಬಗ್ಗೆ ಯೋಜನಾ ಆಯೋಗವು ಸ್ಪಷ್ಟನೆ ಕೇಳಿದೆ.ಎರಡನೇ ಹಂತದ ಯೋಜನೆಯ ವಿಸ್ತಾರ 72.095 ಕಿ.ಮೀ. 12 ಸುರಂಗ ಮಾರ್ಗದ ನಿಲ್ದಾಣಗಳು ಸೇರಿದಂತೆ 61 ನಿಲ್ದಾಣಗಳು ಇರಲಿವೆ. ನಿಗಮದ ಅಧ್ಯಕ್ಷರೂ ಆದ ಕೇಂದ್ರ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಸುಧೀರ್ ಕೃಷ್ಣ `ಪ್ರಜಾವಾಣಿ'ಯೊಂದಿಗೆ ಮಾತನಾಡಿ, `ಎರಡನೇ ಹಂತಕ್ಕೆ ಅನುಮೋದನೆ ದೊರಕುವ ಬಗ್ಗೆ ನಿಗಮಕ್ಕೆ ವಿಶ್ವಾಸ ಇದೆ' ಎಂದರು.`ಕಡಿಮೆ ವೆಚ್ಚ ಆಗಬೇಕು ಎಂದು ಕೇಂದ್ರ ಹಣಕಾಸು ಇಲಾಖೆ ಹಾಗೂ ಯೋಜನಾ ಆಯೋಗ ಯೋಚಿಸುವುದು ಸಹಜ. ಅದು ಮುಖ್ಯ ಸಂಗತಿಯೂ ಹೌದು. ವೆಚ್ಚ ಸ್ವಲ್ಪ ಜಾಸ್ತಿಯಾದರೂ ಅತ್ಯುತ್ತಮ ತಂತ್ರಜ್ಞಾನಗಳನ್ನು ಬಳಸಬೇಕು ಎಂಬುದು ನಮ್ಮ ಆಶಯ. ಉತ್ತಮ ತಂತ್ರಜ್ಞಾನ ಬಳಸಿಕೊಂಡು ಯೋಜನೆಯಲ್ಲಿ ಸಂಪೂರ್ಣ ಯಶಸ್ಸು ಪಡೆಯುವ ವಿಶ್ವಾಸ ಇದೆ' ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.