2.5 ಎಕರೆಯಲ್ಲಿ 32 ಬಗೆ ಬೆಳೆ!

ಬುಧವಾರ, ಜೂಲೈ 17, 2019
24 °C

2.5 ಎಕರೆಯಲ್ಲಿ 32 ಬಗೆ ಬೆಳೆ!

Published:
Updated:

ಶ್ರೀರಂಗಪಟ್ಟಣ: ತಾಲ್ಲೂಕಿನ ಪಾಲಹಳ್ಳಿಯ ರೈತ ಶ್ರೀನಿವಾಸ್ ತಮ್ಮ ಎರಡೂವರೆ ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಬರೋಬ್ಬರಿ 32 ಬಗೆಯ ಬೆಳೆ ಬೆಳೆಯುತ್ತಿದ್ದು, ಪ್ರಗತಿಪರ ಚಿಂತನೆಯನ್ನು ಹೊಂದಿದ್ದಾರೆ.ಸೇಬು, ಕಾಫಿ, ಅಡಿಕೆ, ಪನ್ನೇರಳೆ, ಚಕ್ಕೆ, ಲವಂಗ, ಇಂಗು, ಜಾಯಿಕಾಯಿ, ಏಲಕ್ಕಿ ಬೆಳೆಗಳು ಅವರ ತೋಟದಲ್ಲಿವೆ. ಕಿತ್ತಳೆ, ಮೆಣಸು, ಮೂಸಂಬಿ, ಚೆರ‌್ರಿ, ಲಚ್ಛಿ, ಗಂಜಾಂ ಅಂಜೂರದ ಸಸಿಗಳು ಆಳೆತ್ತರ ಬೆಳೆದಿವೆ. ತೋಟದಲ್ಲಿ ಕಾಫಿ ಪ್ರಧಾನ ಬೆಳೆ.ಬಯಲು ಸೀಮೆಯ ವಾತಾವರಣದಲ್ಲಿ ಬೆಳೆಯಲಾಗದು ಎನ್ನುವ `ಸೇಬಿನ ಗಿಡ~ ಶ್ರೀನಿವಾಸ್ ಅವರ ತೋಟದಲ್ಲಿ ನೋಡುಗರ ಗಮನ ಸೆಳೆಯುತ್ತಿದೆ. ವಾಣಿಜ್ಯ ಬೆಳೆಗಳಲ್ಲಿ ಸಾಂಬಾರ ಬೆಳೆಗಳೇ ಹೆಚ್ಚಾಗಿ ಕಂಡು ಬರುತ್ತವೆ.  ತೋಟದಲ್ಲಿ 2700 ಕಾಫಿ (ರೊಬಸ್ಟಾ, ಕಾವೇರಿ, ಕಟವಾಯಿ), 200 ಏಲಕ್ಕಿ, 40 ಕಿತ್ತಳೆ ಹಾಗೂ ಅಂಗಾಂಶ ಬಾಳೆಗಳು ಕಣ್ಣು ಕುಕ್ಕುತ್ತವೆ. ಕೇವಲ ಎರಡೂವರೆ ಎಕರೆ ಪ್ರದೇಶದಲ್ಲಿ ಇಷ್ಟೆಲ್ಲಾ ಬೆಳೆ ಬೆಳೆದಿದ್ದು, ಸುತ್ತ ಮುತ್ತಲ ಗ್ರಾಮಗಳ ರೈತರೂ ತೋಟಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ ಬಳಸದೆ ಜೀವಾಣು (ಜೀವಾಮೃತ) ಗೊಬ್ಬರವನ್ನು ಗಿಡಗಳಿಗೆ ಹಾಕಲಾಗುತ್ತಿದೆ. ಬೇವಿನ ಹಿಂಡಿಯನ್ನು ಮಾತ್ರ ಕ್ರಿಮಿನಾಶಕವಾಗಿ ಬಳಸುತ್ತಿದ್ದು, ಇಡೀ ತೋಟ ರೋಗ ಮುಕ್ತವಾಗಿದೆ. ಊರಿನ ಶೌಚಾಲಯಗಳ ತ್ಯಾಜ್ಯವನ್ನು ಶ್ರೀನಿವಾಸ್ ಕಳೆದ ಎರಡು ವರ್ಷಗಳಿಂದ ತಮ್ಮ ತೋಟಕ್ಕೆ ಗೊಬ್ಬರವಾಗಿ ಬಳಸುತ್ತಿದ್ದಾರೆ. ಸದ್ಯ ಮಾವು, ತೆಂಗು ಫಲ ತುಂಬಿಕೊಂಡಿದ್ದು ತೋಟದ ಮೂಲೆ ಮೂಲೆಯಲ್ಲಿ ಹಸಿರು ಮುಕ್ಕಳಿಸುತ್ತಿದೆ.  `ಬತ್ತ, ಕಬ್ಬು ಬೆಳೆಯುತ್ತಿದ್ದೆ. ಕಬ್ಬಿನ ದರ ಕುಸಿದು ಕೈ ಸುಟ್ಟುಕೊಂಡ ಮೇಲೆ ಕಾಫಿ ಬೆಳೆಯಲು ನಿರ್ಧರಿಸಿದೆ. ಜತೆಗೆ ಅಡಿಕೆ, ಮೆಣಸು ಸಸಿ ಹಾಕಿದ್ದು, ಹಂತ ಹಂತವಾಗಿ ಹಣ್ಣಿನ ಗಿಡಗಳು, ಸಾಂಬಾರ ಬೆಳೆಗಳನ್ನು ಬೆಳೆಸುತ್ತಿದ್ದೇನೆ. ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸುತ್ತಿದ್ದೇನೆ ಎನ್ನುತ್ತಾರೆ.ಮೆಣಸು, ಅಡಿಕೆ, ತೆಂಗು, ಮಾವು, ನಿಂಬೆ, ಹಲಸುಗಳು ಫಲ ಕೊಡುತ್ತಿವೆ. ಬಾಳೆ ಹಣ ತಂದಿದೆ. ಇನ್ನೆರಡು ವರ್ಷದಲ್ಲಿ ಎಲ್ಲ ಬೆಳೆಗಳು ಫಲ ಕೊಡಲಿವೆ. ತೋಟದಲ್ಲಿಲ್ಲದ ಮತ್ತಷ್ಟು ಗಿಡ ಬೆಳೆಸುವ ಆಸಕ್ತಿ ಇದ್ದು, ತೋಟಗಾರಿಕೆ ಇಲಾಖೆ ಸಹಕಾರ ಕೋರಿದ್ದೇನೆ~ ಎಂದು ಶ್ರೀನಿವಾಸ್ `ಪ್ರಜಾವಾಣಿ~ಗೆ ತಮ್ಮ ಪ್ರಯೋಗವನ್ನು ಹಂಚಿಕೊಂಡಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry