25 ಟಿಎಂಸಿ ನೀರು ಬಿಡಲು ಸಾಧ್ಯವೇ?

7

25 ಟಿಎಂಸಿ ನೀರು ಬಿಡಲು ಸಾಧ್ಯವೇ?

Published:
Updated:
25 ಟಿಎಂಸಿ ನೀರು ಬಿಡಲು ಸಾಧ್ಯವೇ?

ನವದೆಹಲಿ: ಕಾವೇರಿ ನದಿಯಿಂದ ತಮಿಳುನಾಡಿಗೆ 20ರಿಂದ 25 ಟಿಎಂಸಿ ಅಡಿ ನೀರು ಬಿಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕರ್ನಾಟಕಕ್ಕೆ ಸೂಚಿಸಿದೆ.

ಈ ಹಿಂದೆ ಕೂಡ ಎರಡು ಸಂದರ್ಭದಲ್ಲಿ (1995 ಮತ್ತು 2001ರಲ್ಲಿ) ನೀರಿನ ತೀವ್ರ ಕೊರತೆ ಇದ್ದಾಗ ಇದೇ ಬಗೆಯ ಆದೇಶಗಳನ್ನು ನೀಡಲಾಗಿತ್ತು. ಇದನ್ನೇ ಪುನರಾವರ್ತನೆ ಮಾಡುವ ಬಗ್ಗೆ ಆಲೋಚಿಸುತ್ತಿರುವುದಾಗಿ ನ್ಯಾಯಮೂರ್ತಿ ಡಿ. ಕೆ. ಜೈನ್ ಮತ್ತು ಮದನ್ ಬಿ. ಲೋಕೂರ್ ಅವರನ್ನೊಳಗೊಂಡ ಪೀಠ ಹೇಳಿದೆ.

ಪೀಠದ ಈ ಆಲೋಚನೆಯನ್ನು ಬಲವಾಗಿ ಆಕ್ಷೇಪಿಸಿದ ಕರ್ನಾಟಕದ ಪರ ವಕೀಲ ಫಾಲಿ ಎಸ್. ನಾರಿಮನ್ ಅವರು, ಕಾವೇರಿ ನದಿ ನೀರು ಬಿಡುಗಡೆಗೆ ಆದೇಶಿಸುವ ಉದ್ದೇಶವೇ ಕೋರ್ಟ್‌ಗೆ ಇದ್ದರೆ `ಕಾವೇರಿ ನದಿ ಪ್ರಾಧಿಕಾರ (ಸಿಆರ್‌ಎ) ಮತ್ತು ಕಾವೇರಿ ಮೇಲ್ವಿಚಾರಣಾ ಸಮಿತಿಗಳನ್ನು (ಸಿಎಂಸಿ) ರದ್ದುಗೊಳಿಸಬೇಕು' ಎಂದು ಪ್ರತಿಪಾದಿಸಿದರು.

`ಕಾವೇರಿ ನೀರು ಹಂಚಿಕೆ ಕುರಿತು ಅಧಿಕಾರ ಹೊಂದಿದ ಯಾವುದೇ ಪ್ರಾಧಿಕಾರದ ಆದೇಶವನ್ನು ನಾವು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ' ಎಂದೂ  ಅವರು ಹೇಳಿದರು. ಸಿಎಂಸಿ ನೀಡಿದ ನಿರ್ದೇಶನಗಳನ್ನು ನಾವು ಸದಾ ಪಾಲಿಸಿದ್ದೇವೆ. ಇದರೊಂದಿಗೆ `ಸಿಆರ್‌ಸಿ'ಯ ಸೂಚನೆಗಳನ್ನೂ ಪಾಲಿಸಬೇಕಿದೆ.

ಆದರೆ `ಸಿಆರ್‌ಸಿ' ಕೂಡ `ಸಿಎಂಸಿ'ಯ ಸಹಾಯವನ್ನು ಅವಲಂಬಿಸಿದೆ. ಇವೆರಡೂ ಪ್ರಾಧಿಕಾರಗಳು ನೀಡುವ ಸೂಚನೆಯನ್ನು ನಾವು ಉಲ್ಲಂಘಿಸಿದರೆ ಆಗ ವಿಷಯವೇ ಬೇರೆ ರೂಪ ಪಡೆಯುತ್ತದೆ' ಎಂದು ನಾರಿಮನ್ ಅವರು ನ್ಯಾಯಪೀಠದ ಗಮನಕ್ಕೆ ತಂದರು.

ರದ್ದು ಮಾಡಲು ಸಲಹೆ: `ಸಿಎಂಸಿ ಪಕ್ಷಪಾತದಿಂದ ವರ್ತಿಸಿದೆ ಎಂದು ಯಾರೂ ಹೇಳಲಾರರು. ಆದರೆ, ಕೋರ್ಟ್ ದೃಷ್ಟಿಯಲ್ಲಿ ಅದು ಪಕ್ಷಪಾತಿ ಎನಿಸಿದರೆ ಅದನ್ನು ರದ್ದು ಮಾಡಿ' ಎಂದು ಅವರು ಹೇಳಿದರು. 2 ಟಿಎಂಸಿ ಅಡಿಗಳಷ್ಟು ನೀರು ಬಿಡುಗಡೆ ಮಾಡಬೇಕೆಂಬ ಆದೇಶದ ಹೊರತಾಗಿ ಉಳಿದ ಎಲ್ಲಾ ಆದೇಶಗಳನ್ನು ಕರ್ನಾಟಕ ಪಾಲಿಸಿದೆ ಎಂದೂ ನಾರಿಮನ್ ಸ್ಪಷ್ಟಪಡಿಸಿದರು.

ಕರ್ನಾಟಕದ ಅಗತ್ಯ: ತಮಿಳುನಾಡಿಗೆ 20ರಿಂದ 25 ಟಿಎಂಸಿ ಅಡಿಗಳಷ್ಟು ನಡುವಿನ ಪ್ರಮಾಣದಲ್ಲಿ ನೀರನ್ನು ಬಿಡಲು ಸಾಧ್ಯವಾಗಬಹುದೇ ಎಂದು ವಿಚಾರಣೆಯ ಆರಂಭದಲ್ಲಿ ಪೀಠ ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಅವರು, ರಾಜ್ಯಕ್ಕೆ ಅಕ್ಟೋಬರ್‌ನಿಂದ ಜನವರಿವರೆಗೆ ನೀರಾವರಿಗಾಗಿ 86.41 ಟಿಎಂಸಿ ಅಡಿ ಹಾಗೂ ಕುಡಿಯುವ ಅಗತ್ಯಗಳಿಗಾಗಿ 23 ಟಿಎಂಸಿ ನೀರಿನ ಅಗತ್ಯವಿದೆ ಎಂದು ತಿಳಿಸಿದರು.

1995 ಮತ್ತು 2001ರಲ್ಲಿ ಇಂಥದ್ದೇ ಸಂಕಷ್ಟದ ಪರಿಸ್ಥಿತಿ ಎದುರಾದಾಗಲೂ  ಕ್ರಮವಾಗಿ 10.37 ಟಿಎಂಸಿ ಮತ್ತು 11 ಟಿಎಂಸಿ ಅಡಿ ನೀರನ್ನು ಬಿಡುಗಡೆ ಮಾಡಲು ಆದೇಶ ನೀಡಲಾಗಿತ್ತು ಎಂಬುದನ್ನು ನ್ಯಾಯಪೀಠ ಕರ್ನಾಟಕದ ವಕೀಲರಿಗೆ ನೆನಪಿಸಿತು.

ತಮಿಳುನಾಡು ವಾದ: `ಸಿಎಂಸಿ' ಕರ್ನಾಟಕಕ್ಕೆ ನಿರ್ದೇಶನಗಳನ್ನು ನೀಡುವ ವೇಳೆ ಸೂಕ್ತ ರೀತಿಯಲ್ಲಿ ನೀರಿನ ಪ್ರಮಾಣವನ್ನು  ನಿಗದಿ ಮಾಡದೆ ತನ್ನ ಜವಾಬ್ದಾರಿಯಿಂದ ಸಂಪೂರ್ಣವಾಗಿ ನುಣುಚಿಕೊಂಡಿದೆ ಎಂದು ತಮಿಳುನಾಡು ಪರ ವಕೀಲ ಸಿ. ಎಸ್. ವೈದ್ಯನಾಥನ್ ಟೀಕಿಸಿದರು. ನೀರು ಹಂಚಿಕೆಯ ಸಂಕಷ್ಟ ಸೂತ್ರದನ್ವಯ ನೀರು ಬಿಡುಗಡೆ ಮಾಡಬೇಕಾಗಿತ್ತು ಎಂದು ಅವರು ಹೇಳಿದರು.

ನವೆಂಬರ್ 15ರಂದು ನಡೆದ `ಸಿಎಂಸಿ'ಯ 30 ನೇ ಸಭೆಯ ಬಳಿಕ ತಮಿಳುನಾಡಿಗೆ ಕರ್ನಾಟಕ 100.85 ಟಿಎಂಸಿ ಅಡಿಗಳಷ್ಟು ನೀರು ಬಿಡಗಡೆ ಮಾಡಬೇಕಾಗಿತ್ತು. ಆದರೆ,ಈ ಅವಧಿಯಲ್ಲಿ ಕೇವಲ 63.72 ಟಿಎಂಸಿ ಅಡಿಯಷ್ಟು ನೀರು ಮಾತ್ರ ಬಿಟ್ಟಿದ್ದು, ಇನ್ನೂ  37.13 ಟಿಎಂಸಿ ಅಡಿ ನೀರು ಬಾಕಿ ಇದೆ ಎಂದು ಅವರು ಹೇಳಿದರು.ತಮಿಳುನಾಡಿನ ಬೇಡಿಕೆಗೆ ಸಂಬಂಧಿಸಿದಂತೆ ವಾದ ಇನ್ನೂ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಮಂಗಳವಾರ ವಿಚಾರಣೆ ಮುಂದುವರಿಯಲಿದೆ.ಹಗೆತನ ಬೇಡ: ಕರುಣಾನಿಧಿ ಚೆನ್ನೈ(ಪಿಟಿಐ):
ಕಾವೇರಿ ನೀರು ಹಂಚಿಕೆ ವಿವಾದದಿಂದ ಉಭಯ ರಾಜ್ಯಗಳ ಜನರಲ್ಲಿ ಕಹಿ ಭಾವನೆ ಉಂಟಾಗದಂತೆ ನೋಡಿಕೊಳ್ಳಬೇಕು, ಪರಸ್ಪರ ಹಗೆತನ ಮೂಡದಂತೆ ಕ್ರಮ ಕೈಗೊಳ್ಳಬೇಕು ಎಂದು ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂ.ಕರುಣಾನಿಧಿ ಉಭಯ ಸರ್ಕಾರಗಳಿಗೆ ಸಲಹೆ ನೀಡಿದ್ದಾರೆ.`ಬಿಜೆಪಿ ಮತ್ತು ಎಐಎಡಿಎಂಕೆ ಸರ್ಕಾರಗಳು ಈ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕಿದೆ' ಎಂದು ಅವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry