ಸೋಮವಾರ, ನವೆಂಬರ್ 18, 2019
23 °C
ವಿಧಾನಸಭಾ ಚುನಾವಣೆ: ಇಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ

25 ಹುರಿಯಾಳುಗಳ 28 ನಾಮಪತ್ರ ಸಲ್ಲಿಕೆ

Published:
Updated:

ದಾವಣಗೆರೆ: ವಿಧಾನಸಭೆ ಚುನಾವಣೆಗೆ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ ಬಯಸಿ ಮಂಗಳವಾರ 25 ಅಭ್ಯರ್ಥಿಗಳು 28 ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಇದರೊಂದಿಗೆ ಒಟ್ಟು 80 ಮಂದಿಯಿಂದ 102 ನಾಮಪತ್ರಗಳು ಸಲ್ಲಿಕೆಯಾದಂತಾಗಿದೆ.ಏ. 10ರಂದು 1, 12ರಂದು 5, 13ರಂದು 5, ಸೋಮವಾರ 44 ಮಂದಿಯಿಂದ ಒಟ್ಟು 63 ನಾಮಪತ್ರ ಸಲ್ಲಿಕೆಯಾಗಿದ್ದವು.ಮಂಗಳವಾರ, ದಾವಣಗೆರೆ ಉತ್ತರ ಕ್ಷೇತ್ರಕ್ಕೆ ಸರ್ವ ಜನತಾ ಪಕ್ಷದ ಜಿ.ಸಿ. ಪಾಟೀಲ್ ನಾಮಪತ್ರ ಸಲ್ಲಿಸಿದರು. ಬೆಂಬಲಿಗರಾದ ರುದ್ರೇಶ್, ಚಂದ್ರು, ಕುಮಾರಸ್ವಾಮಿ, ವೀರೇಂದ್ರಪ್ರಸಾದ್, ಕುಮಾರ್ ಜತೆಗಿದ್ದರು. ಪಕ್ಷೇತರರಾಗಿ ಸವಿತಾ ಪ್ರಕಾಶ್ ಹಾಗೂ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಎಪಿಎಂಸಿ ಮಾಜಿ ಅಧ್ಯಕ್ಷ ಎಂ. ಬಸವರಾಜಯ್ಯ ನಾಮಪತ್ರ ಸಲ್ಲಿಸಿದರು.ಮಾಯಕೊಂಡ ಕ್ಷೇತ್ರದಿಂದ ಕೆಜೆಪಿಯ ಮಲ್ಲಿಕಾರ್ಜುನಸ್ವಾಮಿ ಉಮೇದುವಾರಿಕೆ ಸಲ್ಲಿಸಿದರು. ಇದರೊಂದಿಗೆ ಈ ಕ್ಷೇತ್ರದಲ್ಲಿ ಕೆಜೆಪಿಯ ಮೂವರು ಸ್ಪರ್ಧೆ ಬಯಸಿದಂತಾಗಿದೆ. ಸೋಮವಾರ ಎಲ್. ಕೊಟ್ರೇಶ್‌ನಾಯ್ಕ ಹಾಗೂ ಲಿಂಗಣ್ಣ ನಾಮಪತ್ರ ಸಲ್ಲಿಸಿದ್ದರು.ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಪಕ್ಷೇತರರಾಗಿ ಟಿ.ಆರ್. ಇಂದ್ರಮ್ಮ, ಹೈದರ್ ಅಲಿ, ಇನಾಯತ್ ಅಲಿ ಖಾನ್ ಹಾಗೂ ಎಂ. ಅಬ್ದುಲ್ ರೆಹಮಾನ್ ಉಮೇದುವಾರಿಕೆ ಸಲ್ಲಿಸಿದರು.ಜಗಳೂರು ಕ್ಷೇತ್ರದಿಂದ ಬಿಎಸ್‌ಪಿಯಿಂದ ಕೆ.ಎಸ್. ಪ್ರಭು, ಹರಪನಹಳ್ಳಿಯಲ್ಲಿ ಪಕ್ಷೇತರರಾಗಿ ಎಚ್.ಎಂ. ಆಯಿಸಾನುಲ್ಲಾ, ಹನುಮಂತಪ್ಪ, ಸಿಪಿಐ(ಎಂಎಲ್)ನಿಂದ ಇಡ್ಲಿ ರಾಮಪ್ಪ, ಕೆ.ಎಂ, ಚನ್ನಬಸವಯ್ಯ, ಎಚ್.ಎಂ. ಚನ್ನಪ್ಪ ಹಾಗೂ ಜೆಡಿಯುನಿಂದ ಎಸ್.ಟಿ. ರುದ್ರಮುನಿ ಬೆಂಬಲಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.ಹರಿಹರದಿಂದ ಬಿಜೆಪಿಯಿಂದ ಎಸ್.ಎಂ. ವೀರೇಶ್ ಹನಗವಾಡಿ, ಪಕ್ಷೇತರರಾಗಿ ಎಂ.ಜಿ. ವೀರನಗೌಡ, ಟಿ.ವಿ. ಗಜೇಂದ್ರಗೌಡ, ಬಿಪಿಪಿಯಿಂದ ನಾಗರಾಜ, ಚನ್ನಗಿರಿಯಿಂದ ಜೆಡಿಎಸ್‌ನಿಂದ ಹೊದಿಗೆರೆ ರಮೇಶ್, ರೈತ ಸಂಘದಿಂದ ಸಿ.ಆರ್. ತಿಪ್ಪೇಶಪ್ಪ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಎಂ.ಎಚ್. ಮುಜೀಬ್ ಪಾಟೀಲ್, ಹೊನ್ನಾಳಿಯಿಂದ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಕೆ. ರೇಣುಕಾಚಾರಿ, ಪಕ್ಷೇತರರಾಗಿ ಡಿ.ವಿ. ಪ್ರಕಾಶ್, ಅಬ್ದುಲ್ ನಜೀರ್‌ಸಾಬ್ ನಾಮಪತ್ರ ಸಲ್ಲಿಸಿದ್ದಾರೆ.ನಗರದಲ್ಲಿ ಕಂಡಿದ್ದು...

ಮಾಯಕೊಂಡ, ದಾವಣಗೆರೆ ದಕ್ಷಿಣ ಹಾಗೂ ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಲು ಮಂಗಳವಾರ ಅಭ್ಯರ್ಥಿಗಳಿಂದ ಹೆಚ್ಚಿನ ಪ್ರತಿಕ್ರಿಯೆ ಕಂಡುಬರಲಿಲ್ಲ.ದಾವಣಗೆರೆ ದಕ್ಷಿಣ ಹಾಗೂ ಉತ್ತರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ಪಾಲಿಕೆಯಲ್ಲಿ ಹಾಗೂ ಮಾಯಕೊಂಡ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಲು ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಕೇಂದ್ರ ತೆರೆಯಲಾಗಿದೆ. ಇಲ್ಲಿ ಮಧ್ಯಾಹ್ನ 3ರವರೆಗೆ ನಾಮಪತ್ರ ಸಲ್ಲಿಸಲು ಸಮಯಾವಕಾಶವಿತ್ತು. ಆದರೆ, ಕೆಲವರಷ್ಟೇ ಉಮೇದುವಾರಿಕೆ ಸಲ್ಲಿಸಿದರು.`ಮಂಗಳವಾರ' ಎಂಬ ಕಾರಣಕ್ಕೆ ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ಮುಂದಾಗಲಿಲ್ಲ. ಕೆಲ ಪಕ್ಷೇತರ ಹಾಗೂ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ನಗರಪಾಲಿಕೆ ಮತ್ತು ಉಪ ವಿಭಾಗಾಧಿಕಾರಿ ಕಚೇರಿಗೆ ಆಗಮಿಸಿ, ನಾಮಪತ್ರ ಸಲ್ಲಿಸುವ ಸಂಬಂಧ ಅರ್ಜಿನಮೂನೆ ಪಡೆದುಕೊಂಡು ಹೋಗುತ್ತಿದ್ದುದು ಸಾಮಾನ್ಯವಾಗಿತ್ತು. ಯಾವ ರೀತಿಯಲ್ಲಿ ನಮೂನೆ ಭರ್ತಿ ಮಾಡಬೇಕು ಎಂದು ಕಚೇರಿಯ ಸಿಬ್ಬಂದಿಯನ್ನು ಕೇಳುತ್ತಿದ್ದುದು ಕಂಡುಬಂದಿತು.ಬುಧವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಈಗಾಗಲೇ ನಾಮಪತ್ರ ಸಲ್ಲಿಸಿರುವವರು ಮತ್ತೊಂದು `ಸೆಟ್' ನಾಮಪತ್ರ ಸಲ್ಲಿಸಲು ಬಯಸಿದ್ದಾರೆ. ಕೆಲವರು, ಕಾರ್ಯಕರ್ತರೊಂದಿಗೆ ಮೆರವಣಿಗೆಯಲ್ಲಿ ತೆರಳಿ ಉಮೇದುವಾರಿಕೆ ಸಲ್ಲಿಸುವುದಾಗಿ ತಿಳಿಸಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಲಿದ್ದು, ಚುನಾವಣಾ ಕಣ ಮತ್ತಷ್ಟು ರಂಗೇರಲಿದೆ.ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದಿಂದ ಯಾರುಯಾರು ನಾಮಪತ್ರ ಸಲ್ಲಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಸೈಯದ್ ಸೈಫುಲ್ಲಾ ಜೆಡಿಎಸ್ ತೆಕ್ಕೆಗೆ ಬಿದ್ದಿದ್ದು, ಅವರು ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ನಿರೀಕ್ಷೆ ಇದೆ.ಮಾಜಿ ಶಾಸಕ ಮಹಿಮ ಪಟೇಲ್ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿವೆ. ಕಣದಲ್ಲಿ ಯಾರರು ಯಾರು ಇರುತ್ತಾರೆ ಎಂಬುದು ಬುಧವಾರ ಸಂಜೆ ವೇಳೆಗೆ ಸ್ಪಷ್ಟವಾಗಲಿದೆ.ಏ. 18ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂತೆಗೆದುಕೊಳ್ಳಲು ಏ. 20 ಕೊನೆಯ ದಿನವಾಗಿದೆ.

ಪ್ರತಿಕ್ರಿಯಿಸಿ (+)