ಭಾನುವಾರ, ಮೇ 16, 2021
22 °C

250 ಎಕರೆಗೂ ಹೆಚ್ಚು ಭೂಮಿ ಖರೀದಿಸಿದ್ದ ರೆಡ್ಡಿ!

ವಿ.ಎಸ್.ಸುಬ್ರಹ್ಮಣ್ಯ/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ, ಓಬಳಾಪುರಂ ಮೈನಿಂಗ್ ಕಂಪೆನಿಯ (ಓಎಂಸಿ ) ಅಕ್ರಮ ವ್ಯವಹಾರಗಳಿಂದ ಬಂದ ಹಣದಲ್ಲಿ ಬಳ್ಳಾರಿ ನಗರದಲ್ಲಿ 250 ಎಕರೆಗೂ ಹೆಚ್ಚು ಭೂಮಿ ಖರೀದಿಸಿದ್ದಾರೆ ಎಂಬುದನ್ನು ಸಿಬಿಐ ತನಿಖಾ ತಂಡ ಪತ್ತೆಹಚ್ಚಿದೆ. ಬೆಂಗಳೂರು, ಹೈದರಾಬಾದ್‌ನಲ್ಲೂ ರೆಡ್ಡಿ ಕುಟುಂಬ ಹೊಂದಿರುವ ಸ್ಥಿರಾಸ್ತಿಗಳ ಪತ್ತೆಗೆ ಈಗ ಸಿಬಿಐ ಮುಂದಾಗಿದೆ.ಓಎಂಸಿ ನಡೆಸಿರುವ ಅಕ್ರಮ ಗಣಿಗಾರಿಕೆಯ ಬಗ್ಗೆ ಸುದೀರ್ಘ ಕಾಲ ತನಿಖೆ ನಡೆಸಿದ್ದ ಸಿಬಿಐ, ಈಗ ಅದರಿಂದ ಬಂದ ಹಣವನ್ನು ಜನಾರ್ದನ ರೆಡ್ಡಿ ಮತ್ತು ಅವರ ಸಹಚರರು ಹೇಗೆ ಬಳಸಿಕೊಂಡಿದ್ದಾರೆ ಎಂಬುದರ ಪತ್ತೆಗೆ ಕೈಹಾಕಿದೆ.

ಭಾನುವಾರವೂ ಸೇರಿದಂತೆ ಇತ್ತೀಚೆಗೆ ಬಳ್ಳಾರಿಯಲ್ಲಿ ಎರಡು ಬಾರಿ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳು, ರೆಡ್ಡಿ ಕುಟುಂಬ ಭಾರಿ ಪ್ರಮಾಣದ ಭೂಮಿ ಖರೀದಿ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದೆ.2009ರ ಡಿಸೆಂಬರ್‌ನಲ್ಲಿ ಜನಾರ್ದನ ರೆಡ್ಡಿ ಒಡೆತನದ ಓಎಂಸಿ ವಿರುದ್ಧ ಆಂಧ್ರಪ್ರದೇಶ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿತ್ತು. 2010ರ ಜೂನ್‌ನಲ್ಲಿ ಆಂಧ್ರಪ್ರದೇಶ ಹೈಕೋರ್ಟ್ ತನಿಖೆಗೆ ತಡೆಯಾಜ್ಞೆ ನೀಡಿತ್ತು. 2010ರ ಡಿಸೆಂಬರ್‌ನಲ್ಲಿ ತಡೆ ತೆರವಾಗಿತ್ತು. ಬಳಿಕ ಎಂಟು ತಿಂಗಳ ಕಾಲ ನಿರಂತರವಾಗಿ ತನಿಖೆ ನಡೆಸಿದ್ದ ಸಿಬಿಐ ಪೊಲೀಸರು, ಇದೇ 5ರಂದು ಜನಾರ್ದನ ರೆಡ್ಡಿ ಮತ್ತು ಓಎಂಸಿ ವ್ಯವಸ್ಥಾಕ ನಿರ್ದೇಶಕ ಬಿ.ವಿ.ಶ್ರೀನಿವಾಸ ರೆಡ್ಡಿ ಅವರನ್ನು ಬಂಧಿಸಿದರು.ಭೂಮಿ ಮೇಲೆ ಹೂಡಿಕೆ: ಓಎಂಸಿ ಕಂಪೆನಿಯ ಗುತ್ತಿಗೆ ಬಳಸಿಕೊಂಡು ಭಾರಿ ಪ್ರಮಾಣದ ಅಕ್ರಮ ವ್ಯವಹಾರ ನಡೆಸಿರುವ ಆರೋಪ ಎದುರಿಸುತ್ತಿರುವ ರೆಡ್ಡಿ, ಕಂಪೆನಿಯ ಹಣವನ್ನು ಬಳ್ಳಾರಿಯ ವಿವಿಧೆಡೆ ಭೂಮಿ ಖರೀದಿಗೆ ಬಳಸಿದ್ದಾರೆ.

ಬಳ್ಳಾರಿ ನಗರ ಒಂದರಲ್ಲೇ ರೆಡ್ಡಿ ಕುಟುಂಬದ ಸದಸ್ಯರು ತಮ್ಮ ಹೆಸರಿನಲ್ಲಿ ಹಾಗೂ ನಂಬಿಕಸ್ಥ ಬೇನಾಮಿದಾರರ ಹೆಸರಿನಲ್ಲಿ 250 ಎಕರೆ ಭೂಮಿ ಖರೀದಿಸಿದ್ದಾರೆ. ಈ ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಿಬಿಐ ವಶಪಡಿಸಿಕೊಂಡಿದೆ ಎಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.ಬಳ್ಳಾರಿ ನಗರದ ಪ್ರಮುಖ ಪ್ರದೇಶಗಳು, ಉದ್ದೇಶಿತ ವಿಮಾನ ನಿಲ್ದಾಣ ಯೋಜನಾ ಪ್ರದೇಶ, ಸಂಡೂರು, ಹೊಸಪೇಟೆ ಮತ್ತಿತರ ಕಡೆಗಳಲ್ಲಿ ಜನಾರ್ದನ ರೆಡ್ಡಿ ಸ್ಥಿರಾಸ್ತಿ ಖರೀದಿಸಿದ್ದಾರೆ.

ಸಹೋದರರಾದ ಕರುಣಾಕರ ರೆಡ್ಡಿ. ಸೋಮಶೇಖರ ರೆಡ್ಡಿ, ಗೆಳೆಯ ಬಿ.ಶ್ರೀರಾಮುಲು ಹೆಸರಿನಲ್ಲಿ ಆಸ್ತಿ ಖರೀದಿ ನಡೆದಿದೆ. ಬಹುತೇಕ ಆಸ್ತಿ ಬೇನಾಮಿ ಹೆಸರಿನಲ್ಲಿದೆ. ಓಎಂಸಿ ಖಾತೆಗಳಿಂದ ಹಣದ ಹರಿವಿನ ಜಾಡು ಹಿಡಿದ ತನಿಖಾ ತಂಡಕ್ಕೆ ಈ ಎಲ್ಲ ವಿವರಗಳೂ ಗೊತ್ತಾಗಿತ್ತು. ದಾಖಲೆಗಳ ಬಗ್ಗೆ ಖಚಿತ ಮಾಹಿತಿ ಪಡೆದ ಬಳಿಕ ಅವುಗಳನ್ನು ವಶಪಡಿಸಿಕೊಂಡಿದ್ದು, ಪರಿಶೀಲನೆ ನಡೆಸುತ್ತಿದೆ ಎಂದು ಮೂಲಗಳು ಹೇಳಿವೆ.ಬೆಂಗಳೂರು ಮತ್ತು ಹೈದರಾಬಾದ್ ನಗರಗಳ ಆಯಕಟ್ಟಿನ ಸ್ಥಳಗಳಲ್ಲಿ ರೆಡ್ಡಿ ಕುಟುಂಬ ಸ್ಥಿರಾಸ್ತಿ ಖರೀದಿಸಿರುವ ಬಗ್ಗೆಯೂ ಸಿಬಿಐ ಬಳಿ ಮಾಹಿತಿ ಇದೆ. ಈ ಬಗ್ಗೆಯೂ ತನಿಖೆ ಆರಂಭಿಸಿದ್ದು, ಈ ಎಲ್ಲ ವ್ಯವಹಾರಗಳ ಅರಿವಿರುವ ಜನಾರ್ದನ ರೆಡ್ಡಿಯ ಆಪ್ತ ಬಂಟರಿಗಾಗಿ ಹುಡುಕಾಟ ನಡೆದಿದೆ. ಎರಡೂ ನಗರಗಳಲ್ಲಿ ಕೆಲವು ಬೇನಾಮಿದಾರರ ಹೆಸರಿನಲ್ಲೂ ಆಸ್ತಿ ಖರೀದಿ ನಡೆಸಿರುವ ಬಗ್ಗೆ ಸಿಬಿಐಗೆ ಸುಳಿವು ಲಭ್ಯವಾಗಿದ್ದು, ಆದಾಯ ತೆರಿಗೆ ಇಲಾಖೆಯ ಸಹಕಾರದಲ್ಲಿ ಅದನ್ನು ಪತ್ತೆಹಚ್ಚಲು ಮುಂದಾಗಿದೆ.ಜನಾರ್ದನ ರೆಡ್ಡಿ ಅವರ ಸಹೋದರ ಜಿ.ಕರುಣಾಕರ ರೆಡ್ಡಿ ಎರಡೂವರೆ ವರ್ಷಗಳ ಅವಧಿಗೆ ರಾಜ್ಯದ ಕಂದಾಯ ಸಚಿವರಾಗಿದ್ದರು. ಈ ಅವಧಿಯಲ್ಲೇ ಅವರ ಕುಟುಂಬ ದೊಡ್ಡ ಪ್ರಮಾಣದ ಭೂಮಿ ಖರೀದಿ ಮಾಡಿದೆ.

ಆದರೆ, ಈ ವ್ಯವಹಾರಗಳು ಬಯಲಿಗೆ ಬರದಂತೆ ಕಂದಾಯ ಸಚಿವರ ಕಚೇರಿಯ ಮೂಲಕ ನಿಯಂತ್ರಿಸಲಾಗಿತ್ತು. ಈ ಎಲ್ಲ ವಿವರಗಳನ್ನೂ ಸಿಬಿಐ, ಮುಂದಿನ ದಿನಗಳಲ್ಲಿ ನ್ಯಾಯಾಲಯದ ಮುಂದಿಡಲು ಸಿದ್ಧತೆ ನಡೆಸಿದೆ.ಕಂಪೆನಿಗಳ ಮೇಲೂ ಕಣ್ಣು: ಓಎಂಸಿ ವ್ಯವಹಾರದಲ್ಲಿ ಬಂದ ಹಣವನ್ನು `ಸಕ್ರಮ~ಗೊಳಿಸಲೆಂದೇ ಜನಾರ್ದನ ರೆಡ್ಡಿ ಹದಿನೈದಕ್ಕೂ ಹೆಚ್ಚು ಕಂಪೆನಿಗಳನ್ನು ಅಸ್ತಿತ್ವಕ್ಕೆ ತಂದಿದ್ದರು ಎಂಬ ಮಾಹಿತಿಯೂ ಸಿಬಿಐಗೆ ಲಭ್ಯವಾಗಿದೆ.

ಈ ಪೈಕಿ ಎಂಟು ಕಂಪೆನಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು 2007ರಲ್ಲಿ ಲೋಕಾಯುಕ್ತರಿಗೆ ಸಲ್ಲಿಸಿದ್ದ ಆಸ್ತಿ ವಿವರದಲ್ಲಿ ಘೋಷಿಸಿಕೊಂಡಿದ್ದರು. ಅವುಗಳ ಹೊರತಾಗಿ ಏಳಕ್ಕೂ ಹೆಚ್ಚು ಕಂಪೆನಿಗಳನ್ನು ಸ್ಥಾಪಿಸಿರುವ ಬಗ್ಗೆ ಸಿಬಿಐ ತಂಡ ಖಚಿತ ಮಾಹಿತಿ ಸಂಗ್ರಹಿಸಿದೆ.ಬಹುತೇಕ ಕಂಪೆನಿಗಳು ಬಳ್ಳಾರಿ ಮತ್ತು ಬೆಂಗಳೂರಿನಲ್ಲಿ ಕಚೇರಿಗಳನ್ನು ಹೊಂದಿವೆ. ಕೆಲ ತಿಂಗಳುಗಳಿಂದ ಕೆಲವು ಕಂಪೆನಿಗಳ ಕಚೇರಿಗಳನ್ನು ಹುಬ್ಬಳ್ಳಿ, ಧಾರವಾಡ ನಗರಗಳಿಗೆ ಸ್ಥಳಾಂತರಿಸಿರುವ ಬಗ್ಗೆಯೂ ತನಿಖಾ ತಂಡ ಮಾಹಿತಿ ಕಲೆಹಾಕಿದೆ. ಈ ಎಲ್ಲ ಕಂಪೆನಿಗಳ ವಹಿವಾಟು, ಬ್ಯಾಂಕ್ ಖಾತೆಗಳ ನಿರ್ವಹಣೆಯ ಬಗ್ಗೆಯೂ ತನಿಖೆ ನಡೆಯಲಿದೆ ಎಂದು ಮೂಲಗಳು ದೃಢಪಡಿಸಿವೆ.ಮೂವರು ಶಾಸಕರಿಗೆ ಬಲೆ?

ಓಎಂಸಿ ಜೊತೆಗೆ ವ್ಯಾವಹಾರಿಕ ನಂಟು ಹೊಂದಿರುವ ಹಲವು ಪ್ರಮುಖರು ಬಂಧನ ಭೀತಿಯಲ್ಲಿದ್ದಾರೆ. ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ಅವರ ಬಂಧನ ಸಾಧ್ಯತೆ ಬಹುತೇಕ ನಿಚ್ಚಳವಾಗಿದೆ.

ಅದಕ್ಕಿಂತಲೂ ಮುಖ್ಯವಾಗಿ ಮಾಜಿ ಸಚಿವ ಬಿ.ಶ್ರೀರಾಮುಲು, ಶಾಸಕರಾದ ಬಿ.ನಾಗೇಂದ್ರ ಮತ್ತು ಟಿ.ಎಚ್.ಸುರೇಶ್‌ಬಾಬು ಅವರ ಮೇಲೆ ಸಿಬಿಐ ನಿಗಾ ಇರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.ಶ್ರೀರಾಮುಲು ಸ್ವತಃ ಓಎಂಸಿ ನಿರ್ದೇಶಕರಾಗಿದ್ದು ಕಂಪೆನಿಯ ವ್ಯವಹಾರಗಳಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ನಾಗೇಂದ್ರ ನೂರಾರು ಕೋಟಿ ರೂಪಾಯಿ ಕಬ್ಬಿಣದ ಅದಿರನ್ನು ಕರ್ನಾಟಕದಿಂದ ಅಕ್ರಮವಾಗಿ ರಫ್ತು ಮಾಡಿದ ಆರೋಪ ಎದುರಿಸುತ್ತಿದ್ದಾರೆ.

ಅವರು ಓಎಂಸಿ ನಡೆಸಿದ ಅಕ್ರಮ ಅದಿರು ಸಾಗಣೆ ಮತ್ತು ರಫ್ತಿನಲ್ಲಿ ನೇರವಾಗಿ ಕೈಜೋಡಿಸಿರುವ ಬಗ್ಗೆ ಸಿಬಿಐ ಪ್ರಬಲ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಸುರೇಶ್‌ಬಾಬು ಕೂಡ ಇಂತಹುದೇ ಕೃತ್ಯದಲ್ಲಿ ಭಾಗಿಯಾಗಿರುವ ಬಗ್ಗೆ ತನಿಖಾ ತಂಡದ ಬಳಿ ಸಾಕ್ಷ್ಯಾಧಾರವಿದೆ ಎಂದು ಗೊತ್ತಾಗಿದೆ.

 

  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.