ಶುಕ್ರವಾರ, ನವೆಂಬರ್ 22, 2019
20 °C
ಬಾಂಗ್ಲಾ ಬಹುಮಹಡಿ ಕಟ್ಟಡ ಕುಸಿತ

250 ಗಡಿ ದಾಟಿದ ಸಾವಿನ ಸಂಖ್ಯೆ

Published:
Updated:
250 ಗಡಿ ದಾಟಿದ ಸಾವಿನ ಸಂಖ್ಯೆ

ಢಾಕಾ (ಪಿಟಿಐ): ನಗರ ಹೊರವಲಯದಲ್ಲಿ ಸಂಭವಿಸಿದ ಬಹುಮಹಡಿ ವಾಣಿಜ್ಯ ಸಮುಚ್ಚಯದ ಕುಸಿತದಿಂದ ಸಾವಿಗೀಡಾದವರ ಸಂಖ್ಯೆ 250 ಮೀರಿದೆ. ಕಟ್ಟಡದ ಅವಶೇಷಗಳಡಿ ಇನ್ನೂ 1,500ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆ ಇದ್ದು, ಸಾವುನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.ತುರ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವ ಸಿಬ್ಬಂದಿ ಕಟ್ಟಡದ ಅವಶೇಷಗಳ ಅಡಿಯಿಂದ ಶವಗಳನ್ನು ಹೊರತೆಗೆಯುತ್ತಿದ್ದಾರೆ. ಸರ್ಕಾರವು ಜನರ ಅನುಕೂಲಕ್ಕಾಗಿ ನಿಯಂತ್ರಣ ಕೊಠಡಿಗಳನ್ನು ತೆರೆದಿದ್ದು, ಶವಗಳನ್ನು ಗುರುತಿಸಿ, ಸಂಬಂಧಿಕರಿಗೆ ಹಸ್ತಾಂತರಿಸುವ ಕೆಲಸ ಭರದಿಂದ ಸಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ದುರಂತ ನಡೆದ ಸ್ಥಳದ ಪಕ್ಕದಲ್ಲಿರುವ ಶಾಲೆಯ ಮೈದಾನದಲ್ಲಿ ಶವಗಳನ್ನು ಇರಿಸಲಾಗಿದ್ದು ಸಂಬಂಧಿಕರು ತಮ್ಮವರ ಶವಗಳನ್ನು ಗುರುತಿಸಿ ಸಂಸ್ಕಾರಕ್ಕಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ. ಇನ್ನೂ ಕೆಲವು ಶವಗಳ ಗುರುತು ಪತ್ತೆಯಾಗಿಲ್ಲ. ಇದುವರೆಗೂ ಕಟ್ಟಡಗಳ ಅವಶೇಷಗಳ ಅಡಿ ಸಿಲುಕಿದ್ದ 2,013 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಈ ದುರಂತ ನಡೆದಾಗ 3,500ಕ್ಕೂ ಹೆಚ್ಚು ಜನರು ಕಟ್ಟಡದ ಒಳಗಿದ್ದರು. ಮೃತರಲ್ಲಿ ಬಹುತೇಕರು ಸಿದ್ಧ ಉಡುಪು ಕಾರ್ಖಾನೆಯ ಮಹಿಳಾ ಉದ್ಯೋಗಿಗಳು ಮತ್ತು ಕಾರ್ಮಿಕರಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.ಕಟ್ಟಡಗಳಲ್ಲಿ ಕಾಣಿಸಿಕೊಂಡಿದ್ದ ಬಿರುಕುಗಳ ಬಗ್ಗೆ ಮಾಹಿತಿ ಕಲೆ ಹಾಕಲು ಹೋಗಿದ್ದ ಇಲಾಖೆಯ ಇಬ್ಬರು ಪತ್ತೆದಾರರು, ಅವಶೇಷಗಳಡಿ ಮೃತಪಟ್ಟಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.ಶೋಕಾಚರಣೆ: ಬಾಂಗ್ಲಾದಲ್ಲಿ ಗುರುವಾರ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗಿದ್ದು, ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ. ಸವರ್ ಪ್ರದೇಶದ ರಾಣಾ ಪ್ಲಾಜಾ ಮಾಲೀಕರು ಮತ್ತು ಸಿದ್ಧ ಉಡುಪು ಕಾರ್ಖಾನೆಗಳ ಮಾಲೀಕರು ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ಪೊಲೀಸರು ಕಟ್ಟಡದ ಮಾಲೀಕನ ವಿರುದ್ಧ ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮತ್ತೆ 3 ಕಟ್ಟಡ ಬಿರುಕು: ದುರಂತದ ಬೆನ್ನಲ್ಲೇ ನಗರ ಸುತ್ತಮುತ್ತಲಿನ ಮೂರು ಬಹುಮಹಡಿ ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಅಧಿಕಾರಿಗಳು ಕಟ್ಟಡಗಳಲ್ಲಿರುವ ಜನರನ್ನು ತೆರವುಗೊಳಿಸಿದ್ದಾರೆ.

ಪ್ರತಿಕ್ರಿಯಿಸಿ (+)