251 ಲಕ್ಷ ಹೆಕ್ಟೇರ್ನಲ್ಲಿ ಬಿತ್ತನೆ
ನವದೆಹಲಿ (ಪಿಟಿಐ): ದೇಶದ ಬಹಳಷ್ಟು ಕಡೆ ಮಳೆ ಅವಧಿಗೆ ಸರಿಯಾಗಿ ಕಾಲಿಟ್ಟಿರುವುದರಿಂದ ಮುಂಗಾರು ಕೃಷಿ ಚಟುವಟಿಕೆ ಚುರುಕುಗೊಂಡಿದೆ. ವಿವಿಧ ಬೆಳೆಗಳ ನಾಟಿ, ಭಿತ್ತನೆ ಉತ್ತಮ ರೀತಿಯಲ್ಲಿ ಸಾಗಿದೆ. ಭತ್ತ ಸೇರಿದಂತೆ ಪ್ರಮುಖ ಧಾನ್ಯಗಳ ಪೈರು ನಾಟಿ ಕೆಲಸ ಶೇ 85ರಷ್ಟು ಆಗಿದೆ. ಈವರೆಗೆ ಒಟ್ಟು 251 ಲಕ್ಷ ಹೆಕ್ಟೇರ್ಗಳಲ್ಲಿ ನಾಟಿ ಪೂರ್ಣಗೊಂಡಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ಹೇಳಿದೆ.
ಜೂನ್ ಮಾಸದ ಆರಂಭದಲ್ಲಿಯೇ ನೈಋತ್ಯ ಮುಂಗಾರು ಮಾರುತಗಳು ದೇಶದ ಪಶ್ಚಿಮ ಕರಾವಳಿ ತೀರ ಪ್ರವೇಶಿಸುವುದರೊಂದಿಗೆ ಕೃಷಿ ಭೂಮಿಯಲ್ಲಿ ಉಳುಮೆ, ಬಿತ್ತನೆ, ನಾಟಿ ಚಟುವಟಿಕೆಯೂ ಆರಂಭಗೊಂಡಿತು. ದೇಶದ ವಿವಿಧೆಡೆ ಈವರೆಗೆ ವಾಡಿಕೆಗಿಂತಲೂ ಶೇ 37ರಷ್ಟು ಅಧಿಕ ಪ್ರಮಾಣದಲ್ಲಿ ಮಳೆಯಾಗಿದೆ ಎಂದ ಸಚಿವಾಲಯ ತಿಳಿಸಿದೆ.
ಭತ್ತ ಶೇ 32ರಷ್ಟು ನಾಟಿ
ಉತ್ತಮ ಮುಂಗಾರಿನ ಕಾರಣ ಜೂನ್ 28ರವರೆಗೆ 251 ಹೆಕ್ಟೇರ್ಗಳಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷ ಇದೇ ವೇಳೆಗೆ 136 ಹೆಕ್ಟೇರ್ಗಳಲ್ಲಿ ಮಾತ್ರ ಬಿತ್ತನೆ ಆಗಿತ್ತು. ಮುಂಗಾರು ಹಂಗಾಮಿನಲ್ಲಿನ ಪ್ರಮುಖ ಬೆಳೆ ಭತ್ತ. ಇದರ ನಾಟಿ ಈವರೆಗೆ 39.12 ಲಕ್ಷ ಹೆಕ್ಟೇರ್ಗಳಲ್ಲಿ ಆಗಿದೆ. ಅಂದರೆ, ವಾಡಿಕೆಯ ಶೇ 32ರಷ್ಟು ಭತ್ತ ನಾಟಿ ಆಗಿದೆ ಎಂದು ಸಚಿವಾಲಯದ ಪ್ರಕಟಣೆ ವಿವರ ನೀಡಿದೆ.
ಮೊದಲ ಮಳೆಹನಿ ಬೀಳುತ್ತಿದ್ದಂತೆಯೇ ಗದ್ದೆಗಳನ್ನು ಬಿತ್ತನೆಗೆ ಸಿದ್ಧಪಡಿಸಿಕೊಂಡ ಪಂಜಾಬ್ ಮತ್ತು ಹರಿಯಾಣದ ಬಹಳಷ್ಟು ರೈತರು, ಈಗಾಗಲೇ ನಾಟಿ ಪೂರ್ಣಗೊಳಿಸಿದ್ದಾರೆ. ಕೆಲವೆಡೆ ಇನ್ನಷ್ಟೇ ಪೈರು ನೆಡಬೇಕಿದೆ.
4 ಪಟ್ಟು ದ್ವಿದಳ ಧಾನ್ಯ
ನಿರೀಕ್ಷೆ ಮೀರಿದ ಮುಂಗಾರಿನ ಮಳೆ ಕಂಡು ಹರ್ಷಚಿತ್ತರಾದ ಕೃಷಿಕರಿಂದ ಎಣ್ಣೆಕಾಳು ಮತ್ತು ದ್ವಿದಳ ಧಾನ್ಯಗಳ ಬಿತ್ತನೆ ಕಾರ್ಯ ಜೋರಾಗಿಯೇ ಸಾಗಿದೆ. ಈವರೆಗೆ 60.69 ಲಕ್ಷ ಹೆಕ್ಟೇರ್ಗಳಲ್ಲಿ ಕಾಳು-ಧಾನ್ಯಗಳ ಬಿತ್ತನೆ ಆಗಿದೆ. ಇದರ ಪ್ರಮಾಣ, ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ನಾಲ್ಕು ಪಟ್ಟು ಅಧಿಕವಾಗಿದೆ. 2012ರಲ್ಲಿ ಇದೇ ವೇಳೆಗೆ 11.82 ಲಕ್ಷ ಹೆಕ್ಟೇರ್ಗಳಲ್ಲಿ ಮಾತ್ರ ಬಿತ್ತನೆ ಆಗಿತ್ತು.
ಸಿರಿಧಾನ್ಯ 5 ಪಟ್ಟು ಅಧಿಕ
ಇದೇ ವೇಳೆ, ಸಿರಿಧಾನ್ಯಗಳ ಬಿತ್ತನೆ ಕಳೆದ ವರ್ಷ ಕೇವಲ 5.59 ಲಕ್ಷ ಹೆಕ್ಟೇರ್ನಲ್ಲಿದ್ದರೆ, ಈ ಬಾರಿ 29.33 ಲಕ್ಷ ಹೆಕ್ಟೇರ್ಗಳಷ್ಟು ವಿಶಾಲ ಪ್ರದೇಶದಲ್ಲಿ ಆಗಲೇ ಸಿರಿಧಾನ್ಯಗಳು ಮೊಳಕೆಯೊಡೆದಿವೆ. ಆದರೆ, ಕಬ್ಬು ನೆಡುವುದರ ಪ್ರಮಾಣ ಮಾತ್ರ ಈವರೆಗೆ 49.35 ಲಕ್ಷ(2012ರಲ್ಲಿ) ಹೆಕ್ಟೇರ್ನಿಂದ 47.43 ಲಕ್ಷ ಹೆಕ್ಟೇರ್ಗೆ ಇಳಿದಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.