ಶುಕ್ರವಾರ, ನವೆಂಬರ್ 15, 2019
23 °C

26ರಂದು ವಿಶಿಷ್ಟ `ಹವೇಲಿ' ಹವಾ...

Published:
Updated:

ರಾಮನವಮಿ ಸಂಗೀತೋತ್ಸವಗಳಿಂದ ನಾದಮಯವಾಗಿರುವ ಸಿಲಿಕಾನ್ ಸಿಟಿಗೆ ಮತ್ತೊಂದು ಗಾನ, ನೃತ್ಯದ ಸವಿಯುಣ್ಣುವ ಸದವಕಾಶ ಏ. 26ರಂದು ಸಿಗಲಿದೆ. ಒಂದೇ ವೇದಿಕೆಯಲ್ಲಿ ಏಕಕಾಲಕ್ಕೆ ದೇಶದ ವಿವಿಧೆಡೆಯ 13 ಮಂದಿ ಪ್ರಖ್ಯಾತ ಕಲಾವಿದರು `ಹವೇಲಿ' ಎಂಬ ಈ ಕಾರ್ಯಕ್ರಮದಲ್ಲಿ ಸಂಗೀತ ಮತ್ತು ನೃತ್ಯವನ್ನು ಪ್ರಸ್ತುತಪಡಿಸಲಿದ್ದಾರೆ.ಹೋಮ್‌ಟೌನ್ ಪ್ರೊಡಕ್ಷನ್ಸ್ ಆಯೋಜಿಸಿರುವ `ಹವೇಲಿ'ಗೆ ಬಾಲಿವುಡ್ ಸಂಗೀತ ನಿರ್ದೇಶಕ ಮತ್ತು ಖ್ಯಾತ ಪಿಟೀಲು ವಾದಕ ದೀಪಕ್ ಪಂಡಿತ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಉಳಿದಂತೆ ಒಡಿಸ್ಸಿ ನೃತ್ಯ ಕಲಾವಿದೆ ಆರುಷಿ ಮುದ್ಗಲ್, ಕಥಕ್ ಕಲಾವಿದ ರಾಜೇಂದ್ರ ಗಂಗಾನಿ, ಗಾಯಕ ಮತ್ತು ಸಾರಂಗಿ ವಾದಕ ಉಸ್ತಾದ್ ಫಯಾಜ್ ಖಾನ್, ಸಿತಾರ್ ವಾದಕ ಸಹೋದರರಾದ ರಫೀಕ್ ಮತ್ತು ಶಫೀಕ್ ಖಾನ್, ಸ್ಯಾಕ್ಸೋಫೋನ್ ವಾದಕ ರಮಣ, ಫ್ರೆಂಚ್ ಪಿಯಾನೋ ವಾದಕ ಮಿಷಿಕೊ ಮಾಂಬಾ, ಮಂಗ್ನಾನಿಯಾರ್ ಸೆಡಕ್ಷನ್ ಖ್ಯಾತಿಯ ರಾಜಸ್ತಾನದ ದೇವೋ ಖಾನ್, ಕಮೈಚಾ ವಾದಕರಾದ ಘೆನ್ವಾರ್ ಖಾನ್ ಮತ್ತು ದಾರೇ ಖಾನ್ ಹವೇಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ.ರಾಜಸ್ತಾನದ ಭವ್ಯ ಹವೇಲಿಗಳಲ್ಲಿ ಹಿಂದಿನ ಕಾಲದಲ್ಲಿ ನಡೆಯುತ್ತಿದ್ದ ಸಂಗೀತ ಮತ್ತು ನೃತ್ಯ ಸಂಸ್ಕೃತಿಯನ್ನು ನೆನಪಿಸುವ ಪ್ರಯತ್ನ ಇದಾಗಿದೆ. ಹಿಂದಿನ ಕಾಲದ ಹವೇಲಿಗಳು ಸೌಂದರ್ಯ ಮತ್ತು ಕಲೆಯ ಪ್ರತೀಕವಾಗಿದ್ದವು. ಅದರಿಂದ ಸ್ಫೂರ್ತಿ ಪಡೆದು ನಾವು ನಮ್ಮ ಕಾರ್ಯಕ್ರಮವನ್ನು ರೂಪಿಸಿರುವುದಾಗಿ ಹೋಮ್‌ಟೌನ್ ಪ್ರೊಡಕ್ಷನ್ಸ್‌ನ ಕ್ರಿಯೇಟಿವ್ ಹೆಡ್ ಆಗಿರುವ ನಟಿ ಭಾವನಾ ಹೇಳಿದ್ದಾರೆ. ಅಂದಿನ ಶ್ರಿಮಂತ ಜಮೀನುದಾರರು ಸಂಗೀತ ಮತ್ತು ನೃತ್ಯ ಕಲೆಯನ್ನು ಪೋಷಿಸುತ್ತಿದ್ದರು. ಕಲಾವಿದರನ್ನು ಎಲ್ಲಾ ವಿಧದಲ್ಲೂ ಬೆಂಬಲಿಸುತ್ತಿದ್ದರು. ಮುಜುರಾ ಮತ್ತು ಶಾಯರಿಗಳು ಜನಪ್ರಿಯವಾಗಿದ್ದವು. ಈಗಲೂ ಉತ್ತರ ಭಾರತದಲ್ಲಿ ಅಲ್ಲಲ್ಲಿ ಹವೇಲಿಗಳು ಜೀವಂತವಾಗಿವೆ.ಕಾರ್ಯಕ್ರಮಕ್ಕೆ ಉಚಿತ ಪಾಸ್‌ಗಳ ಮೂಲಕ ಪ್ರವೇಶ. ವಿವರ ಮತ್ತು ಪಾಸ್‌ಗಳಿಗೆ 080 23413987/ 98455 03987 ಸಂಪರ್ಕಿಸಬಹುದು.ಸ್ಥಳ: ಚೌಡಯ್ಯ ಸ್ಮಾರಕ ಭವನ. ಸಮಯ: ಸಂಜೆ 6.30.

 

ಪ್ರತಿಕ್ರಿಯಿಸಿ (+)