26/11: ಪಾಕ್-ಐಎಸ್‌ಐಗೆ ವಿಶೇಷ ರಿಯಾಯ್ತಿ

7

26/11: ಪಾಕ್-ಐಎಸ್‌ಐಗೆ ವಿಶೇಷ ರಿಯಾಯ್ತಿ

Published:
Updated:

ನ್ಯೂಯಾರ್ಕ್ (ಪಿಟಿಐ): ಭಾರತದ ವಾಣಿಜ್ಯ ನಗರಿ ಮುಂಬೈ ಮೇಲಿನ 26/11 ಭಯೋತ್ಪಾದಕ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ   ಐಎಸ್‌ಐ ಹಾಗೂ ಅದರ ಮಾಜಿ ಮುಖ್ಯಸ್ಥ ಅಹ್ಮದ್ ಶುಜಾ ಪಾಶಾ ಮತ್ತು ನದೀಮ್ ತಾಜ್ `ವಿಶೇಷ ರಾಜತಾಂತ್ರಿಕ ರಿಯಾಯ್ತಿ' ಹೊಂದಿದ್ದಾರೆ ಎಂದು ಅಮೆರಿಕ ಸರ್ಕಾರ ಇಲ್ಲಿನ ನ್ಯಾಯಾಲಯಕ್ಕೆ ಸ್ಪಷ್ಟಪಡಿಸಿದೆ.ಮುಂಬೈ ಮೇಲಿನ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟವರ ಸಂಬಂಧಿಕರು ಮತ್ತು ಬದುಕುಳಿದವರು ಪಾಕಿಸ್ತಾನ, ಐಎಸ್‌ಐ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು. ಏಪ್ರಿಲ್‌ನಲ್ಲಿ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ವಾದವನ್ನು ಮಂಡಿಸಲು ಸರ್ಕಾರಕ್ಕೆ ಇದೇ ಡಿಸೆಂಬರ್ 17ರ ಗಡುವು ನೀಡಿತ್ತು.ಆ ಹಿನ್ನೆಲೆಯಲ್ಲಿ ಸೋಮವಾರ ನ್ಯಾಯಾಲಯಕ್ಕೆ 12 ಪುಟಗಳ ಪ್ರಮಾಣ ಪತ್ರ ಸಲ್ಲಿಸಿರುವ ಸರ್ಕಾರ, ಆಪ್ತ ರಾಷ್ಟ್ರಗಳಿಗೆ ನೀಡಲಾದ ವಿಶೇಷ ರಾಜತಾಂತ್ರಿಕ ರಿಯಾಯ್ತಿ ಸೌಲಭ್ಯ ಪಾಕಿಸ್ತಾನಕ್ಕೂ ಅನ್ವಯವಾಗುತ್ತವೆ ಎಂದು ಹೇಳಿದೆ. ಸರ್ಕಾರದ ಭಾಗವಾದ ಐಎಸ್‌ಐ ಮತ್ತು ಅದರ ಮುಖ್ಯಸ್ಥರಾಗಿದ್ದ ಪಾಶಾ ಮತ್ತು ನದೀಮ್ ತಾಜ್ ಅವರಿಗೂ ಈ ಕಾನೂನು ಅನ್ವಯಿಸುತ್ತದೆ ಎಂದು ಅಟಾರ್ನಿ ಜನರಲ್ ಪ್ರಧಾನ ಉಪ ಸಹಾಯಕ ಸ್ಟುವರ್ಟ್ ಡೆಲೆರಿ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ವಾದಿಸಿದ್ದಾರೆ.ಇದೇ ವೇಳೆ ಮುಂಬೈ ಮೇಲಿನ ಭಯೋತ್ಪಾದಕ ದಾಳಿಯನ್ನು ತೀವ್ರ ಶಬ್ದಗಳಲ್ಲಿ ಖಂಡಿಸಿರುವ ಅಮೆರಿಕ, ಭಯೋತ್ಪಾದನೆಯ ವಿರುದ್ಧ ಭಾರತ ಸಾರಿರುವ ಹೋರಾಟಕ್ಕೆ ಪಾಕಿಸ್ತಾನ ಕೈಜೋಡಿಸಬೇಕು ಎಂದು ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry