ಬುಧವಾರ, ಆಗಸ್ಟ್ 12, 2020
27 °C

26/11 ಮುಂಬೈ ದಾಳಿ: ಪಾಟೀ ಸವಾಲಿಗೆ ಪಾಕಿಸ್ತಾನ ಮನವಿ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

26/11 ಮುಂಬೈ ದಾಳಿ: ಪಾಟೀ ಸವಾಲಿಗೆ ಪಾಕಿಸ್ತಾನ ಮನವಿ?

ಇಸ್ಲಾಮಾಬಾದ್ (ಪಿಟಿಐ): ಮುಂಬೈ ದಾಳಿಯ ಪ್ರಮುಖ ಸಾಕ್ಷಿಗಳ ವಿಚಾರಣೆಗೆ ಸಂಬಂಧಿಸಿದಂತೆ ಪಾಟೀ ಸವಾಲಿಗೆ ಅವಕಾಶ ನೀಡುವಂತೆ ಪಾಕಿಸ್ತಾನ ಸರ್ಕಾರ ಭಾರತಕ್ಕೆ ಮನವಿ ಮಾಡುವ ಸಾಧ್ಯತೆಯಿದೆ.ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನದ ನ್ಯಾಯಾಂಗ ಆಯೋಗ ಮುಂಬೈಗೆ ತೆರಳಿ ಸಂಗ್ರಹಿಸಿರುವ ವರದಿ ಅಕ್ರಮ ಎಂದು ರಾವಲ್ಪಿಂಡಿಯ ಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ ಪಾಕ್ ಇದೀಗ ಈ ಕ್ರಮಕ್ಕೆ ಮುಂದಾಗಿದ್ದು, ಈ ಸಂಬಂಧ ಭಾರತಕ್ಕೆ ಪತ್ರ ಬರೆಯಲಾಗುವುದು ಎಂದು ಆಯೋಗದ ವಿಶೇಷ ಪ್ರಾಸಿಕ್ಯೂಟರ್ ಮಹಮ್ಮದ್ ಅಜರ್ ಚೌಧರಿ ತಿಳಿಸಿದ್ದಾರೆ.ಪಾಕ್‌ನ ಈ ಕ್ರಮಕ್ಕೆ ಪೂರಕ ಎನ್ನುವಂತೆ ಮುಂಬೈಗೆ ಮತ್ತೊಂದು ಆಯೋಗ ಕಳುಹಿಸುವ ಕುರಿತು ಉಭಯ ದೇಶಗಳು ಒಪ್ಪಂದವೊಂದಕ್ಕೆ ಬರುವ ಅಗತ್ಯವನ್ನು ಭಯೋತ್ಪಾದನಾ ನಿಗ್ರಹ ನ್ಯಾಯಾಲಯದ ನ್ಯಾಯಾಧೀಶ ಚೌಧರಿ ಹಬೀಬ್ ಉರ್ ರೆಹಮಾನ್ ಮಂಗಳವಾರವೇ ಪ್ರತಿಪಾದಿಸಿದ್ದರು.ಈ ನಡುವೆ `ಡಾನ್~ ಪತ್ರಿಕೆಗೆ ಹೇಳಿಕೆ ನೀಡಿರುವ ಚೌಧರಿ, ಆಯೋಗದ 800 ಪುಟಗಳ ವರದಿಯನ್ನು ಕೋರ್ಟ್ ತಳ್ಳಿಹಾಕಿರುವ ಕ್ರಮ ಆರೋಪಿಗಳಿಗೆ ಅನುಕೂಲವಾಗಲಿದೆ ಎಂದಿದ್ದಾರೆ.ಪಾಟೀ ಸವಾಲಿಗೆ ನಿರಾಕರಿಸಿರುವ ಭಾರತದ ನ್ಯಾಯಾಧೀಶ ಎಸ್.ಎಸ್. ಶಿಂಧೆ ವಿರುದ್ಧ ಕಿಡಿಕಾರಿರುವ ಚೌಧರಿ, `ಘಟನೆಯ ಏಳು ಜನ ಆರೋಪಿಗಳು ಖುಲಾಸೆಗೊಂಡಲ್ಲಿ ಅದಕ್ಕೆ ಶಿಂಧೆ ಅವರೇ ಹೊಣೆಗಾರರರಾಗುತ್ತಾರೆ~ ಎಂದಿದ್ದಾರೆ.ದಾಳಿಕೋರರಲ್ಲಿ ಬದುಕುಳಿದ ಏಕೈಕ ಉಗ್ರ ಅಜ್ಮಲ್ ಕಸಾಬ್ ನೀಡಿದ ತಪ್ಪೊಪ್ಪಿಗೆ ಹೇಳಿಕೆ ಪಡೆದ ಮ್ಯಾಜಿಸ್ಟ್ರೇಟ್ ಆರ್.ವಿ. ಸಾವಂತ್ ವಾಗ್ಳೆ, ಮುಖ್ಯ ತನಿಖಾಧಿಕಾರಿ ರಮೇಶ್ ಮಹಾಲೆ ಹಾಗೂ ಘಟನೆಯಲ್ಲಿ ಮೃತ ಉಗ್ರರ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರಾದ ಗಣೇಶ್ ಧನರಾಜ್, ಚಿಂತಾಮಣ ಮೋಹಿತೆ ಅವರ ಹೇಳಿಕೆಗಳನ್ನು ಪಾಕ್‌ನ ನ್ಯಾಯಾಂಗ ಆಯೋಗ ಮುಂಬೈಗೆ ಭೇಟಿ ನೀಡಿದ ಸಂದರ್ಭದಲ್ಲಿ ಧ್ವನಿಮುದ್ರಿಸಿಕೊಂಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.